ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಪ್ರತಿಭಟನೆ: ‘ಸುಪ್ರೀಂ’ನತ್ತ ಕಣ್ಣು

ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿರುವ ಎಂಟು ಅರ್ಜಿಗಳ ವಿಚಾರಣೆ ಇಂದು
Last Updated 4 ಜನವರಿ 2021, 22:12 IST
ಅಕ್ಷರ ಗಾತ್ರ

ನವದೆಹಲಿ:ಇತ್ತೀಚಿನ ಮೂರು ಕಾಯ್ದೆಗಳಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ಮತ್ತು ರೈತರ ಪ್ರತಿನಿಧಿಗಳ ನಡುವಣ ಏಳನೇ ಸುತ್ತಿನ ಮಾತುಕತೆಯೂ ವಿಫಲವಾಗಿದೆ. ಹಾಗಾಗಿ, ಈಗ ಎಲ್ಲರ ಕಣ್ಣು ಸುಪ್ರೀಂ ಕೋರ್ಟ್‌ನತ್ತ ನೆಟ್ಟಿದೆ. ‘ಕೃಷಿ ಕ್ಷೇತ್ರದ ಸುಧಾರಣೆ’ಗಾಗಿ ಕೇಂದ್ರವು ಜಾರಿಗೆ ತಂದಿರುವ ಮೂರು ಕಾಯ್ದೆಗಳನ್ನು ಪ್ರಶ್ನಿಸಿ ಮತ್ತು ಕಾಯ್ದೆಗಳಿಗೆ ಸಂಬಂಧಿಸಿ ಸಲ್ಲಿಕೆಯಾಗಿರುವ ಎಂಟು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ನಡೆಸಲಿದೆ.

ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾದ ಅರ್ಜಿಗಳಲ್ಲಿ ರೈತರ ಸಂಘಟನೆಗಳನ್ನು ಕೂಡ ಕಕ್ಷಿದಾರರನ್ನಾಗಿ ಸೇರಿಸಬೇಕು ಎಂದು ನ್ಯಾಯಾಲಯವು ಹೇಳಿತ್ತು. ಆದರೆ, ತಮಗೆ ಕಾನೂನು ಪರಿಹಾರ ಬೇಕಾಗಿಲ್ಲ, ಸರ್ಕಾರದಿಂದ ಪರಿಹಾರ ಬಯಸಿದ್ದೇವೆ ಎಂದು ರೈತರು ಹೇಳಿದ್ದಾರೆ.

ರೈತರು ಮತ್ತು ಸಚಿವರ ನಡುವೆ ಸೋಮವಾರ ನಡೆದ ಮಾತುಕತೆ ಸಂದರ್ಭದಲ್ಲಿ ಕೇಂದ್ರವು ರೈತರ ಪ್ರತಿಭಟನೆಗೆ ಸಂಬಂಧಿಸಿ ತನ್ನ ನಿಲುವನ್ನು ಇನ್ನಷ್ಟು ಮೃದುವಾಗಿಸಿದೆ. ಪ್ರತಿಭಟನೆಯ ಸಂದರ್ಭದಲ್ಲಿ ಮೃತಪಟ್ಟ 50ಕ್ಕೂ ಹೆಚ್ಚು ರೈತರಿಗೆ ಸಭೆಯ ಆರಂಭ
ದಲ್ಲಿಯೇ ಶ್ರದ್ಧಾಂಜಲಿ ಸಲ್ಲಿಸಬೇಕು ಎಂದು ರೈತ ಮುಖಂಡರು ಮುಂದಿಟ್ಟ ಬೇಡಿಕೆಯನ್ನು ಸರ್ಕಾರ ಮನ್ನಿಸಿದೆ.

‘ಮೂರು ಕಾಯ್ದೆಗಳಿಗೆ ಸಂಬಂಧಿಸಿ ವಿವರವಾದ ಚರ್ಚೆಯನ್ನು ರೈತರ ಜತೆ ನಡೆಸಲು ನಾವು ಬಯಸಿದ್ದೇವೆ. ಆದರೆ, ಕಾಯ್ದೆಗಳನ್ನು ಹಿಂತೆಗೆದುಕೊಳ್ಳಲೇಬೇಕು ಎಂದು ರೈತರು ಪಟ್ಟು ಹಿಡಿದ ಕಾರಣ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವುದು ಸಾಧ್ಯವಾಗಿಲ್ಲ’ ಎಂದು ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಹೇಳಿದ್ದಾರೆ.

ಸರ್ಕಾರದ ‘ಪ್ರತಿಷ್ಠೆ’ಯೇ ಯಾವುದೇ ಪರಿಹಾರ ಸಾಧ್ಯವಾಗದಿರಲು ಕಾರಣ ಎಂದು ರೈತರು ಆರೋಪಿಸಿದ್ದಾರೆ. ಮೂರು ಕಾಯ್ದೆಗಳ ರದ್ದತಿ ಮತ್ತು ಕನಿಷ್ಠ ಬೆಂಬಲ ಬೆಲೆ ಖಾತರಿಯ ಭರವಸೆಯ ಬೇಡಿಕೆಗಳಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೆ, ಕಾಯ್ದೆಗಳಿಗೆ ತಿದ್ದುಪಡಿ ಮಾಡಲು ಸಿದ್ಧ. ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸರ್ಕಾರವು ಹೇಳಿದೆ.

ಪಂಜಾಬ್‌, ಹರಿಯಾಣ ಮತ್ತು ಉತ್ತರ ಪ್ರದೇಶದ ಸಾವಿರಾರು ರೈತರು 40 ದಿನಗಳಿಂದ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ತೀವ್ರ ಚಳಿ ಮತ್ತು ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಿಂದಾಗಿ ಪ್ರತಿಭಟನೆಯ ಸ್ಥಳದಲ್ಲಿ ನೀರು ನಿಂತಿದ್ದರೂ ಅವರು ಎದೆಗುಂದಿಲ್ಲ.

ಗಣರಾಜ್ಯೋತ್ಸವ ದಿನವಾದ ಜನವರಿ 26ರ ಮೊದಲು ಸಮಸ್ಯೆ ಪರಿಹಾರ ಆಗದಿದ್ದರೆ ದೆಹಲಿಯಲ್ಲಿ ಟ್ರ್ಯಾಕ್ಟರ್‌ ಜಾಥಾ ನಡೆಸುವುದಾಗಿ ರೈತರು ಈಗಾಗಲೇ ಹೇಳಿದ್ದಾರೆ.

ವಿದ್ಯಾರ್ಥಿಗಳ ಪತ್ರಕ್ಕೆ ಮನ್ನಣೆ

ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿ ಪಂಜಾಬ್‌ ವಿಶ್ವವಿದ್ಯಾಲಯದ 35 ವಿದ್ಯಾರ್ಥಿಗಳು ಮುಖ್ಯ ನ್ಯಾಯಮೂರ್ತಿಗೆ ಬರೆದ ಪತ್ರದ ಆಧಾರದಲ್ಲಿ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ.

ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಹರಿಯಾಣ ಪೊಲೀಸರು ಜಲ ಫಿರಂಗಿ ಪ್ರಯೋಗಿಸಿದ್ದಾರೆ, ಅಶ್ರುವಾಯು ಷೆಲ್‌ ಸಿಡಿಸಿದ್ದಾರೆ ಮತ್ತು ಲಾಠಿ ಪ್ರಹಾರ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ನ್ಯಾಯಾಲಯವು ಆದೇಶಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿತ್ತು. ರೈತರು ಶಾಂತಿಯುತವಾಗಿಯೇ ಪ್ರತಿಭಟಿಸುತ್ತಿದ್ದಾರೆ. ಆದರೆ, ರೈತರ ಸಮಸ್ಯೆಗಳ ಬಗ್ಗೆ ಸರ್ಕಾರವು ಸಂವೇದನಾಶೀಲವಾಗಿ ಇಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.

ಮುಗ್ಧ ರೈತರ ಮೇಲೆ ರಾಜಕೀಯ ದ್ವೇಷದಿಂದ ದಾಖಲಿಸಲಾಗಿರುವ ಎಲ್ಲ ಪ್ರಕರಣಗಳನ್ನು ರದ್ದುಪಡಿಸಲು ಆದೇಶಿಸಬೇಕು ಎಂದೂ ವಿದ್ಯಾರ್ಥಿಗಳು ಪತ್ರದಲ್ಲಿ ಆಗ್ರಹಿಸಿದ್ದಾರೆ.

‘ರೈತರ ಬೇಡಿಕೆ ಸ್ವೀಕರಿಸಿ’

ನವದೆಹಲಿ: ಪ್ರತಿಭಟನಾ ನಿರತ ರೈತ ಸಂಘಟನೆಗಳ ಎಲ್ಲ ಬೇಡಿಕೆಗಳನ್ನು ಸ್ವೀಕರಿಸಿ, ಮೂರು ಕೃಷಿ ಮಸೂದೆಗಳನ್ನು ರದ್ದುಗೊಳಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕೇಂದ್ರ ಸರ್ಕಾರ ಮತ್ತು ರೈತ ಸಂಘಟನೆಗಳ ನಡುವೆ ಮಾತುಕತೆ ಆರಂಭವಾಗುವ ಮುನ್ನ ಟ್ವೀಟ್ ಮಾಡಿರುವ ಕೇಜ್ರಿವಾಲ್‌, ಮಳೆ ಮತ್ತು ತೀವ್ರ ಚಳಿಯಲ್ಲೂ ಪ್ರತಿಭಟನೆ ಮುಂದವರಿಸಿರುವ ರೈತರ ಸಂಕಲ್ಪವನ್ನು ಶ್ಲಾಘಿಸಿದ್ದಾರೆ.

‘ಮಳೆ ಮತ್ತು ತೀವ್ರ ಶೀತದ ನಡುವೆಯೂ ರಸ್ತೆಗಳಲ್ಲಿ ದೃಢವಾಗಿ ಉಳಿದುಕೊಂಡಿರುವ ರೈತರ ಸಂಕಲ್ಪಕ್ಕೆ ನಮಸ್ಕಾರ ಎಂದ ಹೇಳಿರುವ ಅವರು, ‘ರೈತರ ಎಲ್ಲಾ ಬೇಡಿಕೆಗಳನ್ನು ಅಂಗೀಕರಿಸಿ ಮತ್ತು ಮೂರು ವಿವಾದಿತ ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇನೆ’ ಎಂದು ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

* ಕಾಯ್ದೆಯ ಬಗ್ಗೆ ಚರ್ಚಿಸಲು ಸಚಿವರು ಬಯಸಿದ್ದರು. ಆದರೆ, ಅದನ್ನು ನಾವು ತಿರಸ್ಕರಿಸಿದ್ದೇವೆ. ಕಾಯ್ದೆಗಳನ್ನು ಸಂಪೂರ್ಣವಾಗಿ ವಾಪಸ್‌ ಪಡೆಯಬೇಕು ಎಂಬುದು ನಮ್ಮ ಬೇಡಿಕೆ.

- ಯುಧ್‌ವೀರ್‌ ಸಿಂಗ್‌, ಭಾರತೀಯ ಕಿಸಾನ್‌ ಯೂನಿಯನ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT