ಮಂಗಳವಾರ, ಮೇ 17, 2022
25 °C

ವಿವಾಹಕ್ಕೆ ಏಕರೂಪದ ವಯಸ್ಸು: ಎಲ್ಲ ಅರ್ಜಿಗಳನ್ನು ‘ಸುಪ್ರೀಂ’ಗೆ ವರ್ಗಾಯಿಸಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪುರುಷ, ಮಹಿಳೆ ಇಬ್ಬರಿಗೂ ವಿವಾಹಕ್ಕೆ ಏಕರೂಪದ ವಯಸ್ಸು ನಿಗದಿಪಡಿಸಲು ಕೋರಿ ವಿವಿಧ ಹೈಕೋರ್ಟ್‌ಗಳಲ್ಲಿ ಇದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸುಪ್ರಿಂ ಕೋರ್ಟ್‌ಗೇ ವರ್ಗಾಯಿಸಬೇಕು ಎಂದು ಕೋರಿದ್ದ ಅರ್ಜಿಗೆ ಸಂಬಂಧಿಸಿ ಮಂಗಳವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಯಾಗಿದೆ.

ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ನೇತೃತ್ವದ, ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ, ಬಾಲಸುಬ್ರಹ್ಮಣಿಯನ್ ಅವರಿದ್ದ ಪೀಠವು, ನಾಲ್ಕು ವಾರಗಳಲ್ಲಿ ಪ್ರತಿಕ್ರಿಯಿಸಲು ಸೂಚಿಸಿದೆ. ಬಿಜೆಪಿ ಮುಖಂಡ ಮತ್ತು ವಕೀಲರಾದ ಅಶ್ವಿನಿ ಕುಮಾರ್ ಉಪಾಧ್ಯಾಯ ಈ ಸಂಬಂಧ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲರಾದ ಗೀತಾ ಲೂಥ್ರ ಮತ್ತು ಪ್ರಿಯಾ ಹಿಂಗೊರಾಣಿ ಅವರು, ದೆಹಲಿ ಮತ್ತು ರಾಜಸ್ಥಾನ ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ಅರ್ಜಿಗಳನ್ನು ವರ್ಗಾಯಿಸಬೇಕು. ಇದರಿಂದ ಭಿನ್ನ ಅಭಿಪ್ರಾಯ ಬರುವುದು ತಪ್ಪಲಿದೆ. ವಯಸ್ಸು ಆಧರಿಸಿ ನ್ಯಾಯ, ಸಮಾನತೆ ಒದಗಿಸಬಹುದು ಎಂದರು.

‘ಸದ್ಯ, ಮದುವೆಯಾಗಲು ಪುರುಷರಿಗೆ 21, ಮಹಿಳೆಯರಿಗೆ 18 ವರ್ಷವಾಗಿರಬೇಕು. ಇದಕ್ಕೆ ವೈಜ್ಞಾನಿಕ ಹಿನ್ನೆಲೆಯಿಲ್ಲ. ಮಹಿಳೆಯರ ದೃಷ್ಟಿಯಿಂದ ಅಸಮಾನತೆಗೆ ಆಸ್ಪದವಾಗಲಿದೆ. ಇದು, ಜಾಗತಿಕ ವಿದ್ಯಮಾನಕ್ಕೂ ವಿರುದ್ಧವಾಗಿದೆ’ ಎಂದು ಪ್ರತಿಪಾದಿಸಿದರು. ‘125 ದೇಶಗಳಲ್ಲಿ ಏಕರೂಪದ ವಯೋಮಿತಿ ನಿಗದಿಪಡಿಸಲಾಗಿದೆ. ಭಾರತದಲ್ಲಿಯೂ ಇಬ್ಬರಿಗೂ ಕನಿಷ್ಠ 21 ವಯಸ್ಸು ನಿಗದಿಪಡಿಸಬೇಕು’ ಎಂದು ಅರ್ಜಿಯಲ್ಲಿ ಕೋರಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು