ಸೋಮವಾರ, ಅಕ್ಟೋಬರ್ 26, 2020
25 °C
ರಿಯಾಗೆ ಇನ್ನೂ ತಲುಪಿಲ್ಲ ಸಮನ್ಸ್

ಸುಶಾಂತ್ ಸಿಂಗ್ ಪ್ರಕರಣ: ಮುಂಬೈ ರೆಸಾರ್ಟ್‌ನಲ್ಲಿ ಸಿಬಿಐ ತನಿಖೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನಟ ಸುಶಾಂತ್‌ ಸಿಂಗ್ ರಜಪೂತ್‌

ಮುಂಬೈ: ನಟ ಸುಶಾಂತ್‌ ಸಿಂಗ್ ರಜಪೂತ್‌ (34) ಸಾವಿನ ಪ್ರಕರಣದ ಸಂಬಂಧ ಸಿಬಿಐ ಅಧಿಕಾರಿಗಳು ಮುಂಬೈನ ರೆಸಾರ್ಟ್‌ವೊಂದರಲ್ಲಿ ತನಿಖೆ ನಡೆಸಿದ್ದಾರೆ. ಸುಶಾಂತ್‌ ಕೆಲವು ತಿಂಗಳು ಅದೇ ರೆಸಾರ್ಟ್‌ನಲ್ಲಿ ಕಳೆದಿದ್ದರು ಎನ್ನಲಾಗಿದೆ.

ಸುಶಾಂತ್‌ ಅಕೌಂಟಂಟ್‌ ರಜತ್‌ ಮೇವಾತಿ, ಸ್ನೇಹಿತ ಸಿದ್ಧಾರ್ಥ್ ಪಿಠಾಣಿ  ಹಾಗೂ ಬಾಣಸಿಗ ಸೇರಿದಂತೆ ಮೂವರನ್ನೂ ಸೋಮವಾರ ಸಿಬಿಐ ಸಾಂತಾಕ್ರೂಸ್‌ನಲ್ಲಿನ ಡಿಆರ್‌ಡಿಒ ಅತಿಥಿ ಗೃಹಕ್ಕೆ ವಿಚಾರಣೆಗಾಗಿ ಕರೆಸಿಕೊಂಡಿದೆ.

ಸಿಬಿಐ ತಂಡ ಅಂಧೇರಿಯಲ್ಲಿರುವ 'ವಾಟರ್‌ಸ್ಟೋನ್‌ ರೆಸಾರ್ಟ್‌'ನಲ್ಲಿ ಅಲ್ಲಿನ ಸಿಬ್ಬಂದಿಯನ್ನು ಪ್ರಶ್ನಿಸಿದೆ. ಸುಶಾಂತ್‌ ಸುಮಾರು 2 ತಿಂಗಳು ಅದೇ ರೆಸಾರ್ಟ್‌ನಲ್ಲಿ ಉಳಿದಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಿಬಿಐ ಅಧಿಕಾರಿಗಳು ಭಾನುವಾರ ಸಹ ರೆಸಾರ್ಟ್‌ಗೆ ತೆರಳಿದ್ದರು. ಆದರೆ, ಅಲ್ಲಿ ರೆಸಾರ್ಟ್‌ ಸಿಬ್ಬಂದಿ ವಿಚಾರಣೆಗೆ ಸಿಕ್ಕಿರಲಿಲ್ಲ.

ಸುಶಾಂತ್‌ ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್‌ ನಿವಾಸದಲ್ಲಿ ಅಡುಗೆ ಮಾಡುತ್ತಿದ್ದ ನೀರಜ್‌ ಸಿಂಗ್‌, ಅದೇ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದ ಸಿದ್ಧಾರ್ಥ್‌ ಪಿಠಾಣಿ ಹಾಗೂ ಅಕೌಂಟಂಟ್‌ ರಜತ್‌ ಮೇವಾತಿ ಅವರ ವಿಚಾರಣೆ ಮುಂದುವರಿದಿದೆ. ಶನಿವಾರ ಮತ್ತು ಭಾನುವಾರ ಸಹ ವಿಚಾರಣೆ ನಡೆಸಲಾಗಿತ್ತು. ಜೂನ್‌ 14ರಂದು ಸುಶಾಂತ್‌ ತಮ್ಮ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದಾಗ ಈ ಮೂವರೂ ಅಪಾರ್ಟ್‌ಮೆಂಟ್‌ನಲ್ಲಿದ್ದರು.

ಭಾನುವಾರ ಪಿಠಾಣಿ, ನೀರಜ್‌ ಹಾಗೂ ಸಾವಂತ್‌ ಅವರನ್ನು ಸಿಬಿಐ ಅಧಿಕಾರಿಗಳು ಡಿಆರ್‌ಡಿಒ ಅತಿಥಿ ಗೃಹದಲ್ಲಿ ವಿಚಾರಣೆ ನಡೆಸಿ ನಂತರ ಸುಶಾಂತ್‌ ನಿವಾಸಕ್ಕೆ ಕರೆದೊಯ್ದರು. ಅಲ್ಲಿ ಮೂರು ಗಂಟೆಗಳ ತನಿಖೆ ನಡೆಸಿ, ಮತ್ತೆ ಅತಿಥಿ ಗೃಹದಲ್ಲಿ ಅವರ ವಿಚಾರಣೆ ಮುಂದುವರಿಸಿದ್ದರು. ವಿಧಿವಿಜ್ಞಾನ ತಜ್ಞರನ್ನು ಒಳಗೊಂಡ ಸಿಬಿಐ ತಂಡ ಸುಶಾಂತ್‌ ನಿವಾಸದಲ್ಲಿ ತನಿಖೆ ನಡೆಸಿದೆ.

ಸುಶಾಂತ್‌ ಅಸಹಜ ಸಾವಿಗೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಆಧರಿಸಿ ನಡೆಸಲಾಗುತ್ತಿರುವ ಸಿಬಿಐ ತನಿಖೆಗೆ, ಸುಪ್ರೀಂ ಕೋರ್ಟ್‌ ಕಳೆದ  ವಾರ ಸಮ್ಮತಿ ಸೂಚಿಸಿದೆ. ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಅನ್ನು ಪಟ್ನಾದಿಂದ ಮುಂಬೈಗೆ ವರ್ಗಾಯಿಸುವಂತೆ ಕೋರಿ ರಿಯಾ ಮನವಿ ಸಲ್ಲಿಸಿದ್ದರು.

ರಿಯಾ ಚಕ್ರವರ್ತಿ ಮತ್ತು ಅವರ ಕುಟುಂಬದವರಿಗೆ ಸಿಬಿಐನಿಂದ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಬಂದಿಲ್ಲ ಎಂದು ರಿಯಾ ಪರ ವಕೀಲರು ಹೇಳಿದ್ದಾರೆ. ಸಿಬಿಐ ವಿಚಾರಣೆಗೆ ಕರೆದರೆ ಹಾಜರಾಗುವುದಾಗಿ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು