ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15 ಮಂದಿ ಶಂಕಿತ ಓಮೈಕ್ರಾನ್ ಸೋಂಕಿತರು ದೆಹಲಿ ಆಸ್ಪತ್ರೆಗೆ ದಾಖಲು

Last Updated 5 ಡಿಸೆಂಬರ್ 2021, 1:57 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್‌ನ ರೂಪಾಂತರ ತಳಿ ‘ಓಮೈಕ್ರಾನ್’ ಪ್ರಕರಣಗಳಿರುವ ದೇಶಗಳಿಂದ ಬಂದಿರುವ 15 ಮಂದಿಯನ್ನು ದೆಹಲಿಯ ಎಲ್‌ಎನ್‌ಜೆಪಿ (ಲೋಕ ನಾಯಕ್ ಜಯಪ್ರಕಾಶ್ ನಾರಾಯಣ್) ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಿಗೆ ಓಮೈಕ್ರಾನ್ ತಗುಲಿರುವ ಶಂಕೆ ವ್ಯಕ್ತವಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಪೈಕಿ 9 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಇತರ ಆರು ಮಂದಿಯಲ್ಲಿ ಗಂಟಲು ನೋವು, ಜ್ವರದಂಥ ಲಕ್ಷಣಗಳು ಕಂಡುಬಂದಿವೆ. ಇವರೆಲ್ಲ ಸೋಂಕಿತರ ಸಂಪರ್ಕಕ್ಕೆ ಬಂದಿದ್ದವರು. ಎಲ್ಲರ ಮಾದರಿಯನ್ನು ವಂಶವಾಹಿ ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು, ನಾಲ್ಕೈದು ದಿನಗಳಲ್ಲಿ ವರದಿ ಬರಲಿದೆ ಎಂದು ಅಧಿಕಾರಿ ಹೇಳಿದ್ದಾರೆ.

‘ಹೊಸದಾಗಿ ಸೋಂಕಿತರಾದವರ ಪೈಕಿ ಮೂವರು ಬ್ರಿಟನ್‌ನಿಂದ ಬಂದವರು’ ಎಂದು ಎಲ್‌ಎನ್‌ಜೆಪಿ ಆಸ್ಪತ್ರೆಯ ವೈದ್ಯ ಡಾ. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ ಓಮೈಕ್ರಾನ್‌ ಸೋಂಕಿತರ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ವಾರದ ಹಿಂದೆ ದೆಹಲಿ ಸರ್ಕಾರ ಘೋಷಿಸಿತ್ತು.

ಕೇಂದ್ರ ಸರ್ಕಾರದ ಪ್ರಕಾರ, ಓಮೈಕ್ರಾನ್ ಪ್ರಕರಣಗಳು ದೃಢಪಟ್ಟಿರುವ ಬ್ರಿಟನ್, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬೋಟ್ಸ್‌ವಾನ, ಚೀನಾ, ಮಾರಿಷಸ್, ನ್ಯೂಜಿಲೆಂಡ್, ಜಿಂಬಾಬ್ವೆ, ಸಿಂಗಪುರ, ಹಾಂಗ್‌ಕಾಂಗ್ ಹಾಗೂ ಇಸ್ರೇಲ್ ಅನ್ನು ‘ಅಪಾಯದಲ್ಲಿರುವ’ ದೇಶಗಳು ಎಂದು ಪರಿಗಣಿಸಲಾಗಿದೆ.

ಈ ದೇಶಗಳಿಂದ ಬಂದವರು ಭಾರತಕ್ಕೆ ಬಂದ ಕೂಡಲೇ ಹೆಚ್ಚುವರಿ ತಪಾಸಣೆ, ಕ್ವಾರಂಟೈನ್ ನಿಯಮಗಳನ್ನು ಪಾಲಿಸಬೇಕಿದೆ. ಓಮೈಕ್ರಾನ್‌ ಹಿನ್ನೆಲೆಯಲ್ಲಿ ವಿದೇಶಗಳಿಂದ ಬರುವ ಪ್ರಯಾಣಿಕರಿಗಾಗಿ ಹೊಸ ಮಾರ್ಗಸೂಚಿಯನ್ನುಕೇಂದ್ರ ಸರ್ಕಾರ ಇತ್ತೀಚೆಗೆ ಪ್ರಕಟಿಸಿದೆ.

ದೇಶದಲ್ಲಿ ಓಮೈಕ್ರಾನ್‌ನ ಮೂರನೇ ಪ್ರಕರಣ ಶನಿವಾರ ಗುಜರಾತ್‌ನಲ್ಲಿ ದೃಢಪಟ್ಟಿತ್ತು. ಅದಕ್ಕೂ ಮೊದಲು ಎರಡು ಪ್ರಕರಣಗಳು ಬೆಂಗಳೂರಿನಲ್ಲಿ ಖಚಿತವಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT