ಶನಿವಾರ, ಜನವರಿ 22, 2022
16 °C
ಸಂಸದರ ಅಮಾನತು ವಾಪಸ್‌ಗೆ ಸಭಾಪತಿ ನಕಾರ: ವಿರೋಧ ಪಕ್ಷಗಳ ಖಂಡನೆ

ಅಧಿವೇಶನ ಪೂರ್ತಿ ಧರಣಿಗೆ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತಾಗಿರುವ ವಿರೋಧ ಪಕ್ಷಗಳ 12 ರಾಜ್ಯಸಭಾ ಸದಸ್ಯರ, ಅಮಾನತು ಆದೇಶ ವಾಪಸ್‌ ಪಡೆಯಬೇಕೆಂದರೆ ಅವರು ಕ್ಷಮೆ ಯಾಚಿಸಬೇಕು ಎಂದು ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಹೇಳಿರುವುದನ್ನು ವಿರೋಧ ಪಕ್ಷಗಳು ಖಂಡಿಸಿವೆ. ಬದಲಿಗೆ ಅಮಾನತು ರದ್ದಾಗುವವರೆಗೆ ಅಥವಾ ಅಧಿವೇಶನ ಮುಗಿಯುವವರೆಗೆ ಧರಣಿ ನಡೆಸಲು ನಿರ್ಧರಿಸಿವೆ.

ಮಂಗಳವಾರ ಬೆಳಿಗ್ಗೆ ಕಲಾಪ ಆರಂಭವಾಗುವುದಕ್ಕೂ ಮುನ್ನ ಸಭಾಪತಿ ವೆಂಕಯ್ಯ ನಾಯ್ಡು ಅವರನ್ನು ವಿರೋಧ ಪಕ್ಷಗಳ ನಿಯೋಗವು ಭೇಟಿ ಮಾಡಿತು. ಸದಸ್ಯರ ಅಮಾನತು ಆದೇಶವನ್ನು ವಾಪಸ್‌ ಪಡೆಯಿರಿ ಎಂದು ಕೋರಿತು. ಆದರೆ ಈ ಕೋರಿಕೆಯನ್ನು ಸಭಾಪತಿ ತಿರಸ್ಕರಿಸಿದರು. ಅಮಾನತಾದ ಸದಸ್ಯರು ಪಶ್ಚಾತ್ತಾಪ ತೋರದೇ ಇದ್ದರೆ ಆದೇಶ ವಾಪಸ್ ಪಡೆಯಲು ಸಾಧ್ಯವಿಲ್ಲ ಎಂದು ಸಭಾಪತಿ ಹೇಳಿದರು ಎಂದು ಮೂಲಗಳು ಹೇಳಿವೆ. ನಂತರ ವಿರೋಧ ಪಕ್ಷಗಳು ಇದರ ವಿರುದ್ಧ ಪ್ರತಿಭಟನೆ ನಡೆಸಿವೆ.

ಕ್ಷುಲ್ಲಕ ಕಾರಣಗಳನ್ನು ತೋರಿಸಿ ವಿರೋಧ ಪಕ್ಷಗಳ ಸದಸ್ಯರನ್ನು ಅಮಾನತು ಮಾಡಲಾಗಿದೆ. ಅಮಾನತು ಪ್ರಕ್ರಿಯೆಯಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಹೀಗಿರುವಾಗ ಕ್ಷಮೆ ಕೇಳುವ ಅನಿವಾರ್ಯ ಇರುವುದಿಲ್ಲ. ಬದಲಿಗೆ ಅಮಾನತಾಗಿರುವ 12 ಸದಸ್ಯರು ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ವಿರೋಧ ಪಕ್ಷಗಳು ಹೇಳಿವೆ.

ಕಲಾಪ ಬಹಿಷ್ಕರಿಸದಿರಲು ನಿರ್ಧಾರ: 12 ಸದಸ್ಯರ ಅಮಾನತನ್ನು ವಿರೋಧಿಸಿ ಅಧಿವೇಶನದ ಉಳಿದ ಅವಧಿಯನ್ನು ಬಹಿಷ್ಕರಿಸಲು, ಈ ಮೊದಲು ವಿರೋಧ ಪಕ್ಷಗಳು ನಿರ್ಧರಿಸಿದ್ದವು.

ಆದರೆ ಮಂಗಳವಾರ ಈ ನಿರ್ಧಾರವನ್ನು ಬದಲಿಸಿವೆ. ದಿನದಮಟ್ಟಿಗಷ್ಟೇ ಸದನದಿಂದ ಹೊರನಡೆದಿವೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ವಿರೋಧ ಪಕ್ಷಗಳು ನಡೆಸಿದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

‘ಸಭೆ ಆರಂಭವಾದಾಗ ಅಧಿವೇಶನವನ್ನು ಸಂಪೂರ್ಣವಾಗಿ ಬಹಿಷ್ಕರಿಸಬೇಕು ಎಂದು ಕಾಂಗ್ರೆಸ್‌ ಮತ್ತು ಡಿಎಂಕೆ ಸೇರಿದಂತೆ ಹಲವು ಪಕ್ಷಗಳ ನಾಯಕರು ಹೇಳಿದರು. ಆದರೆ, ‘ಅಧಿವೇಶನವನ್ನು ಬಹಿಷ್ಕರಿಸಿದರೆ ಸದನದಲ್ಲಿ ಸರ್ಕಾರದ ಮೇಲುಗೈ ಆಗುತ್ತದೆ. ಬದಲಿಗೆ ನಾವು ಸದನದಲ್ಲಿ ಪ್ರತಿದಿನ ಒಂದಿಲ್ಲೊಂದು ವಿಷಯಗಳನ್ನು ಪ್ರಸ್ತಾಪಿಸಿ ಚರ್ಚಿಸಬೇಕು’ ಎಂದು ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರು ಹೇಳಿದರು.

ಆನಂತರ ದಿನದಮಟ್ಟಿಗಷ್ಟೇ ಕಲಾಪವನ್ನು ಬಹಿಷ್ಕರಿಸಿ, ಪ್ರತಿಭಟನೆ ನಡೆಸಲಾಯಿತು’ ಎಂದು ಮೂಲಗಳು ಹೇಳಿವೆ.

ದೂರ ಉಳಿದ ಟಿಎಂಸಿ

ಟಿಎಂಸಿ, ಸಂಸತ್ತಿನ ಅಧಿವೇಶ ನದಲ್ಲಿ ಬೇರೆಲ್ಲಾ ವಿರೋಧ ಪಕ್ಷಗಳಿಂದ ಅಂತರ ಕಾಯ್ದುಕೊಂಡಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ನಡೆದಿದ್ದ ವಿರೋಧ ಪಕ್ಷಗಳ ಸಭೆಗೆ ಟಿಎಂಸಿ ಸೋಮವಾರ ಹಾಜರಾಗಿರಲಿಲ್ಲ. ಎಎಪಿ ಮತ್ತು ಸಮಾಜವಾದಿ ಪಕ್ಷ ಸಹ ಸಭೆಯಿಂದ ದೂರ ಉಳಿದಿದ್ದವು. ಆದರೆ ಮಂಗಳವಾರ ನಡೆದ ಸಭೆಗೆ ಎಎಪಿ ಹಾಜರಾಗಿತ್ತು.‌

ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಅವರು ಕರೆದಿದ್ದ ಸಭೆಯಲ್ಲಿ ಡಿಎಂಕೆ, ಆರ್‌ಜೆಡಿ, ಶಿವಸೇನಾ, ಎನ್‌ಸಿಪಿ, ಸಿಪಿಐ, ಮುಸ್ಲಿಂ ಲೀಗ್, ಎಲ್‌ಜೆಡಿ, ಎಂಡಿಎಂಕೆ, ಎನ್‌ಸಿ, ಆರ್‌ಎಸ್‌ಪಿ, ಟಿಆರ್‌ಎಸ್‌, ಕೇರಳ ಕಾಂಗ್ರೆಸ್‌ ಮತ್ತು ವಿಸಿಕೆ ಪಕ್ಷಗಳು ಹಾಜರಾಗಿದ್ದವು. ಈ ಸಭೆಯಿಂದಲೂ ಟಿಎಂಸಿ ದೂರ ಉಳಿದಿತ್ತು.

‘ಸಭೆಯಲ್ಲಿ ಭಾಗಿಯಾಗಿದ್ದ ರಾಹುಲ್ ಗಾಂಧಿ ಅವರು, ‘ವಿರೋಧ ಪಕ್ಷಗಳ ಮಧ್ಯೆ ಭಿನ್ನಾಭಿಪ್ರಾಯ ಇರಬಹುದು. ಆದರೆ, ನಾವು ನಮ್ಮ ಸಮಾನ ಆಸಕ್ತಿಯ ವಿಚಾರದಲ್ಲಿ ಒಗ್ಗಟ್ಟಾಗಬೇಕು’ ಎಂದು ಹೇಳಿದರು’ ಎಂದು ಮೂಲಗಳು ಹೇಳಿವೆ.

ವಿರೋಧ ಪಕ್ಷಗಳ ಸಭೆಯಿಂದ ದೂರವಿದ್ದರೂ, ಸಂಸದರ ಅಮಾನತು ಆದೇಶದ ವಿರುದ್ಧ ವಿರೋಧ ಪಕ್ಷಗಳು ನಡೆಸಿದ ಪ್ರತಿಭಟನೆಯಲ್ಲಿ ಟಿಎಂಸಿಯ ಇಬ್ಬರು ಸಂಸದರು ಭಾಗಿಯಾಗಿದ್ದರು. ಅಮಾನತಾದ 12 ಸಂಸದರಲ್ಲಿ ಆ ಇಬ್ಬರೂ ಸೇರಿದ್ದಾರೆ.

ಎಂಎಸ್‌ಪಿ ಕಾನೂನುಬದ್ಧಗೊಳಿಸಲು ಆಗ್ರಹ

‘ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸಬೇಕು. ಪ್ರತಿಭಟನೆ ವೇಳೆ ಮೃತಪಟ್ಟ ರೈತರ ಕುಟುಂಬಗಳಿಗೆ ಪರಿಹಾರ ನೀಡಬೇಕು’ ಎಂದು ವಿರೋಧ ಪಕ್ಷಗಳು ಲೋಕಸಭೆಯಲ್ಲಿ ಆಗ್ರಹಿಸಿದವು. ಈ ವಿಚಾರವಾಗಿ ಚರ್ಚಿಸಲು ಸರ್ಕಾರವು ಮುಂದೆ ಬರದೇ ಇದ್ದಾಗ, ವಿಪಕ್ಷಗಳ ಸಂಸದರು ಸದನದಲ್ಲಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಕಲಾಪವನ್ನು ಹಲವು ಬಾರಿ ಮುಂದೂಡಲಾಯಿತು.

ಮೊದಲಿಗೆ ಟಿಆರ್‌ಎಸ್‌ ಪಕ್ಷದ ಸಂಸದರು ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು ಎಂದು ಒತ್ತಾಯಿಸಿದರು. ಸ್ಪೀಕರ್ ಓಂ ಪ್ರಕಾಶ ಬಿರ್ಲಾ ಅವರು, ಪ್ರಶ್ನೋತ್ತರ ವೇಳೆಯಲ್ಲಿ ಚರ್ಚಿಸಲು ಅವಕಾಶ ನೀಡಲಾಗುತ್ತದೆ ಎಂದರು. ಇದರಿಂದ ಸಮಾಧಾನವಾಗದ ಟಿಆರ್‌ಎಸ್‌ ಸಂಸದರು, ಸ್ಪೀಕರ್ ಕುರ್ಚಿಯ ಎದುರು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್‌, ಎನ್‌ಸಿಪಿ, ಡಿಎಂಕೆ ಮತ್ತು ಎಡಪಕ್ಷಗಳ ಸಂಸದರೂ ಪ್ರತಿಭಟನೆಗೆ ಧುಮುಕಿದರು. ಆಗ ಸ್ಪೀಕರ್ ಕಲಾಪವನ್ನು ಮಧ್ಯಾಹ್ನ 3ರವರೆಗೆ ಮುಂದೂಡಿದರು.

ಮಧ್ಯಾಹ್ನ ಕಲಾಪ ಆರಂಭವಾದಾಗಲೂ ಪ್ರತಿಭಟನೆ ಮುಂದುವರಿಯಿತು. ಹೀಗಾಗಿ ಕಲಾಪವನ್ನು ದಿನದಮಟ್ಟಿಗೆ ಮುಂದೂಡಲಾಯಿತು.

ಎಂಎಸ್‌ಪಿ ಕಾನೂನುಬದ್ಧಗೊಳಿಸಲು ಆಗ್ರಹ

‘ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸಬೇಕು. ಪ್ರತಿಭಟನೆ ವೇಳೆ ಮೃತಪಟ್ಟ ರೈತರ ಕುಟುಂಬಗಳಿಗೆ ಪರಿಹಾರ ನೀಡಬೇಕು’ ಎಂದು ವಿರೋಧ ಪಕ್ಷಗಳು ಲೋಕಸಭೆಯಲ್ಲಿ ಆಗ್ರಹಿಸಿದವು. ಈ ವಿಚಾರವಾಗಿ ಚರ್ಚಿಸಲು ಸರ್ಕಾರವು ಮುಂದೆ ಬರದೇ ಇದ್ದಾಗ, ವಿಪಕ್ಷಗಳ ಸಂಸದರು ಸದನದಲ್ಲಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಕಲಾಪವನ್ನು ಹಲವು ಬಾರಿ ಮುಂದೂಡಲಾಯಿತು.

ಮೊದಲಿಗೆ ಟಿಆರ್‌ಎಸ್‌ ಪಕ್ಷದ ಸಂಸದರು ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು ಎಂದು ಒತ್ತಾಯಿಸಿದರು. ಸ್ಪೀಕರ್ ಓಂ ಪ್ರಕಾಶ ಬಿರ್ಲಾ ಅವರು, ಪ್ರಶ್ನೋತ್ತರ ವೇಳೆಯಲ್ಲಿ ಚರ್ಚಿಸಲು ಅವಕಾಶ ನೀಡಲಾಗುತ್ತದೆ ಎಂದರು. ಇದರಿಂದ ಸಮಾಧಾನವಾಗದ ಟಿಆರ್‌ಎಸ್‌ ಸಂಸದರು, ಸ್ಪೀಕರ್ ಕುರ್ಚಿಯ ಎದುರು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್‌, ಎನ್‌ಸಿಪಿ, ಡಿಎಂಕೆ ಮತ್ತು ಎಡಪಕ್ಷಗಳ ಸಂಸದರೂ ಪ್ರತಿಭಟನೆಗೆ ಧುಮುಕಿದರು. ಆಗ ಸ್ಪೀಕರ್ ಕಲಾಪವನ್ನು ಮಧ್ಯಾಹ್ನ 3ರವರೆಗೆ ಮುಂದೂಡಿದರು.

* ಅಮಾನತು ಆದೇಶವನ್ನು ವಾಪಸ್‌ ಪಡೆಯುವಂತೆ ಬುಧವಾರವೂ ಕೇಳುತ್ತೇವೆ. ಅದು ಈಡೇರದಿದ್ದರೆ, ಆ ಕ್ರಮವನ್ನು ದೊಡ್ಡ ದನಿಯಲ್ಲಿ ಪ್ರಶ್ನಿಸುತ್ತೇವೆ

-ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ

* ಅಧಿವೇಶನದ ಉಳಿದ ಅವಧಿಗೆ ಅಮಾನತಾಗಿರುವ ಸದಸ್ಯರು ತಮ್ಮ ನಡೆಗೆ ಪಶ್ಚಾತ್ತಾಪ ಸೂಚಿಸದೇ ಇದ್ದರೆ, ಆದೇಶ ವಾಪಸ್‌ ಪಡೆಯುವುದು ಸಾಧ್ಯವಿಲ್ಲ

-ಪೀಯೂಷ್ ಗೋಯಲ್, ಕೇಂದ್ರ ಸಚಿವ

* ಯಾವುದಕ್ಕಾಗಿ ಕ್ಷಮೆ ಕೇಳಬೇಕು? ಸಂಸತ್ತಿನಲ್ಲಿ ಜನರ ಸಮಸ್ಯೆಗಳ ಕುರಿತು ಪ್ರಶ್ನೆ ಎತ್ತಿದ್ದಕ್ಕಾಗಿ ಕ್ಷಮೆ ಕೇಳಬೇಕೆ? ಇದಕ್ಕಾಗಿ ಕ್ಷಮೆ ಕೇಳುವುದು ಎಂದಿಗೂ ಸಾಧ್ಯವಿಲ್ಲ

-ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದ

* ಕ್ಷಮೆ ಕೇಳಲು ಪರೋಕ್ಷವಾಗಿ ಒತ್ತಡ ಹೇರಲಾಗುತ್ತಿದೆ. ನಾವು ಸದನದಲ್ಲಿ ಯಾವುದೇ ತಪ್ಪೆಸಗಿಲ್ಲ. ಪ್ರಜಾಸತ್ತಾತ್ಮಕ ಹಕ್ಕುಗಳ ದಮನದ ವಿರುದ್ಧ ಪ್ರತಿಭಟಿಸಿದ್ದೇವಷ್ಟೆ

- ಎಳಮರಂ ಕರೀಂ, ಸಿಪಿಐನ ಸಂಸದ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.