ಶನಿವಾರ, ಜನವರಿ 16, 2021
24 °C

ಟಿಸಿಎಸ್‌ ಸಂಸ್ಥಾಪಕ ಎಫ್‌ಸಿ ಕೊಹ್ಲಿ ನಿಧನ

ಎಎನ್‌ಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತೀಯ ಸಾಫ್ಟ್‌ವೇರ್ ಉದ್ಯಮದ ಪಿತಾಮಹ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನ (ಟಿಸಿಎಸ್‌) ಮೊದಲ ಸಿಇಒ ಫಕೀರ್ ಚಂದ್ ಕೊಹ್ಲಿ ಗುರುವಾರ ನಿಧನರಾಗಿದ್ದಾರೆ. ಅವರಿಗೆ 96 ವರ್ಷ ವಯಸ್ಸಾಗಿತ್ತು.

ಭಾರತೀಯ ಸಾಫ್ಟ್‌ವೇರ್ ಉದ್ಯಮಕ್ಕೆ ನೀಡಿದ ಕೊಡುಗೆಗಾಗಿ 2002 ರಲ್ಲಿ ಕೊಹ್ಲಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಫಕೀರ್‌ ಚಂದ್‌ ಕೊಹ್ಲಿ ಅವರು ದೇಶದ 'ತಂತ್ರಜ್ಞಾನ ಕ್ರಾಂತಿಯ' ಪ್ರವರ್ತಕರಾಗಿದ್ದವರು. ಭಾರತ 100 ಶತಕೋಟಿ ಡಾಲರ್‌ ಮೊತ್ತದ ಐಟಿ ಉದ್ಯಮ ಸೃಷ್ಟಿಸಿಕೊಳ್ಳಲು ನೆರವಾದವರು.

ಮಾರ್ಚ್ 19, 1924 ರಂದು ಪೇಶಾವರದಲ್ಲಿ ಜನಿಸಿದ ಅವರು ಪಂಜಾಬ್ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಲಾಹೋರ್‌ನ ಪುರುಷರ ಸರ್ಕಾರಿ ಕಾಲೇಜಿನಿಂದ ಬಿ.ಎ ಮತ್ತು ಬಿ.ಎಸ್.ಸಿ. ಪದವಿ ಪಡೆದಿದ್ದಾರೆ. ಕೆನಡಾದ ಕ್ವೀನ್ಸ್ ವಿಶ್ವವಿದ್ಯಾಲಯದಿಂದ 1948ರಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಎಸ್ಸಿ (ಹಾನ್ಸ್) ಪಡೆದಿದ್ದಾರೆ. 1950 ರಲ್ಲಿ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಎಂ.ಎಸ್ ಮಾಡಿದ್ದಾರೆ.

1951 ರಲ್ಲಿ ಭಾರತಕ್ಕೆ ಮರಳಿದ ಅವರು ಕೊಹ್ಲಿ ಟಾಟಾ ಎಲೆಕ್ಟ್ರಿಕ್ ಕಂಪನಿ ಸೇರಿಕೊಂಡರು. 1970 ರಲ್ಲಿ ಅದರ ನಿರ್ದೇಶಕರಾದರು. ಈ ಅವಧಿಯಲ್ಲಿ ವಿದ್ಯುತ್ ವ್ಯವಸ್ಥೆ ವಿನ್ಯಾಸ ಮತ್ತು ನಿಯಂತ್ರಣಕ್ಕಾಗಿ ಡಿಜಿಟಲ್ ಕಂಪ್ಯೂಟರ್‌ಗಳ ಬಳಕೆಯನ್ನು ಅವರು ಆರಂಭಿಸಿದರು.

1969ರಲ್ಲಿ ಕೊಹ್ಲಿ ಅವರು ಟಿಸಿಎಸ್‌ ಜನರಲ್ ಮ್ಯಾನೇಜರ್ ಆದರು. 1994 ರಲ್ಲಿ ಅವರು ಕಂಪನಿಯ ಉಪಾಧ್ಯಕ್ಷರಾದರು. ನಂತರ ಅವರು ಸೃಷ್ಟಿ ಮಾಡಿದ್ದೆಲ್ಲವೂ ಇತಿಹಾಸವಾದವು. ಟಾಟಾ-ಐಬಿಎಂನ ಭಾಗವಾಗಿ 1991 ರಲ್ಲಿ ಐಬಿಎಂ ಅನ್ನು ಭಾರತಕ್ಕೆ ತರಲು ಅವರು ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದರು.

1999ರಲ್ಲಿ ತಮ್ಮ 75ರ ವಯಸ್ಸಿನಲ್ಲಿ ಅವರು ಸೇವೆಯಿಂದ ನಿವೃತ್ತರಾದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು