ಗುರುವಾರ , ಡಿಸೆಂಬರ್ 3, 2020
23 °C

ಮಹಾ ಗಠಬಂಧನದ ಚುಕ್ಕಾಣಿ ಹಿಡಿದ ಯುವ ನಾಯಕ ತೇಜಸ್ವಿ ಯಾದವ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಪಟನಾ: ಬಿಹಾರದ ರಾಜಕೀಯ ವಲಯದಲ್ಲಿ ಜೆಡಿಯು, ಬಿಜೆಪಿ ಹೊರತು ಪಡಿಸಿ ಇತರ ರಾಜಕೀಯ ಪಕ್ಷಗಳಲ್ಲಿ ಯುವ ನಾಯಕರು ಜನರ ಗಮನ ಸೆಳೆಯುತ್ತಿದ್ದಾರೆ. ಈ ಪೈಕಿ ಲಾಲು ಪ್ರಸಾದ್ ಯಾದವ್  ಪುತ್ರ ತೇಜಸ್ವಿ ಯಾದವ್ ಈಗಾಗಲೇ ತಮ್ಮ ವರ್ಚಸ್ಸು ಹೆಚ್ಚಿಸಿಕೊಂಡಿದ್ದಾರೆ.

ಮಹಾ ಗಠಬಂಧನದ ಚುಕ್ಕಾಣಿ ಹಿಡಿದಿರುವ ತೇಜಸ್ವಿ ಯಾದವ್ ವಯಸ್ಸು 31. 2015ರಿಂದ 2017ರವರೆಗೆ ಮೈತ್ರಿ ಸರ್ಕಾರದ ಉಪ ಮುಖ್ಯಮಂತ್ರಿ ಸ್ಥಾನದಲ್ಲಿದ್ದ ತೇಜಸ್ವಿ ಈ ಬಾರಿಯ  ಚುನಾವಣೆಯ ತಾರಾ ಪ್ರಚಾರಕರಾಗಿದ್ದರು. ಶೈಕ್ಷಣಿಕ ಅರ್ಹತೆ, ಅನುಭವದ ಕೊರತೆಯನ್ನು ವಿಪಕ್ಷಗಳು ಟೀಕಿಸಿದರೂ ಜನರ ನಡುವೆ ಬೆರೆಯುವ ಮೂಲಕವೇ ತೇಜಸ್ವಿ ಜನಪ್ರಿಯತೆಯನ್ನು ಕಂಡುಕೊಂಡಿದ್ದಾರೆ.

ತೇಜಸ್ವಿಯ ರ‍್ಯಾಲಿಗಳಿಗೆ  ಜನಸಮೂಹವೇ  ಹರಿದು ಬರುತ್ತಿರುವ ಕಾರಣವೂ ಇದೇ ಆಗಿದೆ. ಬಿಹಾರದಲ್ಲಿನ ಸಮಸ್ಯೆಗಳಿಗೆ ಪರಿಹಾರ ನೀಡುವ  ಭರವಸೆಯೊಂದಿಗೆ ತೇಜಸ್ವಿ ಈ ಬಾರಿ ಕಣಕ್ಕಿಳಿದಿದ್ದರು. ಲಾಲು ಪ್ರಸಾದ್ ಅವರ ಭಾಷಣ ಶೈಲಿಗಿಂತ ಭಿನ್ನವಾಗಿ ಜನರನ್ನು ಸೆಳೆಯುವ  ಮಾತುಗಾರಿಕೆ ಈ ಯುವ  ನಾಯಕನದ್ದು. 

ನಿರುದ್ಯೋಗ ಸಮಸ್ಯೆ, ರಾಜ್ಯದ ಅಭಿವೃದ್ಧಿ,ಶಿಕ್ಷಣ ಮೊದಲಾದ ವಿಷಯಗಳನ್ನೇ ತೇಜಸ್ವಿ ಚುನಾವಣಾ ಅಸ್ತ್ರಗಳನ್ನಾಗಿ ಮಾಡಿಕೊಂಡಿದ್ದಾರೆ. ಬಿಹಾರದಲ್ಲಿ ನಿರುದ್ಯೋಗ ದರ ಶೇ. 46 ಆಗಿದೆ. ಹೀಗಿರುವಾಗ ತಾವು ಅಧಿಕಾರಕ್ಕೇರಿದರೆ 10 ಲಕ್ಷ ಜನರಿಗೆ ಸರ್ಕಾರಿ ನೌಕರಿ ಭರವಸೆ ನೀಡಿದ್ದಾರೆ ತೇಜಸ್ವಿ.

ಇದನ್ನೂ ಓದಿ: ಬಿಹಾರ ಚುನಾವಣಾ ಫಲಿತಾಂಶ: ತೇಜಸ್ವಿ, ತೇಜ್‌ಪ್ರತಾಪ್, ಚಿರಾಗ್ ಒಡ್ಡಿದ ಸವಾಲು

ಆರ್‌ಜೆಡಿ ಅಧಿಕಾರಕ್ಕೇರಿದರೆ ಕಾಶ್ಮೀರಿ ಉಗ್ರರು ಬಿಹಾರಕ್ಕೆ ಭೇಟಿ ನೀಡುತ್ತಾರೆ ಎಂದು  ಕೇಂದ್ರ ಸಚಿವ ನಿತ್ಯಾನಂದ ರೈ ಅವರು ಹೇಳಿದ್ದಕ್ಕೆ ತೇಜಸ್ವಿ ಪ್ರತಿಕ್ರಿಯಿಸಲಿಲ್ಲ. ನಿರುದ್ಯೋಗ,  ಭ್ರಷ್ಟಾಚಾರ ಮತ್ತು ದುರಾಡಳಿತ ವಿರುದ್ಧವೇ  ನನ್ನ ದನಿ ಎಂದು ಹೇಳುವ ಮೂಲಕ ತೇಜಸ್ವಿ ಇಲ್ಲಿ ಪ್ರಬುದ್ಧತೆ ಮೆರೆದಿದ್ದರು.

ಇದನ್ನೂ ಓದಿ: ಬಿಹಾರ: ತೇಜಸ್ವಿ ರ‍್ಯಾಲಿಗೆ ಜನ ಸಮೂಹವೇ ಹರಿದುಬರುತ್ತಿದ್ದುದೇಕೆ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು