ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಹೋರಾಟದಲ್ಲಿ ಮಡಿದ 700 ರೈತರ ಕುಟುಂಬಗಳಿಗೆ ತೆಲಂಗಾಣದಿಂದ ₹3 ಲಕ್ಷ ಪರಿಹಾರ

Last Updated 21 ನವೆಂಬರ್ 2021, 3:13 IST
ಅಕ್ಷರ ಗಾತ್ರ

ಹೈದರಾಬಾದ್: ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆ ವೇಳೆ ಮೃತಪಟ್ಟ ಸುಮಾರು 700 ರೈತರ ಕುಟುಂಬದವರಿಗೆ ತಲಾ ₹3 ಲಕ್ಷ ಪರಿಹಾರ ನೀಡಲಾಗುವುದು ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಘೋಷಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೃತ ರೈತರ ಕುಟುಂಬದವರಿಗೆ ಕೇಂದ್ರ ಸರ್ಕಾರವು ತಲಾ ₹25 ಲಕ್ಷದಂತೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಸರ್ಕಾರದ ತಪ್ಪು ನೀತಿಯ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಬೇಕಾದ್ದು ಸರ್ಕಾರದ ಕರ್ತವ್ಯ ಎಂದು ಅವರು ಹೇಳಿದ್ದಾರೆ.

ಕೃಷಿ ಕಾಯ್ದೆಗಳ ರದ್ದತಿ ನಿರ್ಧಾರವು ರೈತರ ಹೋರಾಟಕ್ಕೆ ಸಂದ ಜಯ ಎಂದು ಬಣ್ಣಿಸಿರುವ ರಾವ್, ರೈತರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಪ್ರತಿಭಟನಾನಿರತ ರೈತರ ಮೇಲೆ ಹಾಗೂ ಅವರನ್ನು ಬೆಂಬಲಿಸಿದವರ ಮೇಲೆ ದೇಶದ್ರೋಹವೂ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅವರು ದೂರಿದ್ದಾರೆ.

ಪ್ರಧಾನಿಯವರು ಕ್ಷಮೆ ಕೇಳಿದರಷ್ಟೇ ಸಾಲದು. ಅದರಿಂದ ರೈತರಿಗೆ ಸಹಾಯವಾಗದು. ರೈತರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಲಿ. ಕನಿಷ್ಠ ಬೆಂಬಲ ಬೆಲೆ ಖಾತರಿಗೆ (ಎಂಎಸ್‌ಪಿ) ಕಾನೂನು ರೂಪಿಸಲಿ ಎಂದು ಚಂದ್ರಶೇಖರ ರಾವ್ ಹೇಳಿದ್ದಾರೆ.

ರೈತರನ್ನು ಬೆಂಬಲಿಸಿ ಟ್ವೀಟ್‌ ಮಾಡಿದ್ದಕ್ಕಾಗಿ ಬೆಂಗಳೂರಿನ ದಿಶಾ ರವಿ ಎಂಬವರನ್ನು ಬಂಧಿಸಿದ್ದೂ ಸೇರಿದಂತೆ ಈ ರೀತಿಯ ಕೆಲವು ಸಂದರ್ಭಗಳನ್ನು ಅವರು ಉದಾಹರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT