ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು–ಕಾಶ್ಮೀರದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ಚುರುಕು: ನಾಲ್ವರು ಉಗ್ರರ ಹತ್ಯೆ

ಅಕ್ಷರ ಗಾತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ ಚುರುಕುಗೊಂಡಿದೆ. ಗುರುವಾರ ರಾತ್ರಿ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಲಷ್ಕರ್‌ ಎ ತಯಬಾದ (ಎಲ್‌ಇಟಿ) ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ಶ್ರೀನಗರದ ಸೌರ್ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಒಂದು ಎಕೆ–47 ಬಂದೂಕು ಹಾಗೂ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ಅವಂತಿಪೊರಾದಲ್ಲಿ ನಡೆದ ಮತ್ತೊಂದು ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಈ ಉಗ್ರರು ಕಲಾವಿದೆ ಅಮ್ರೀನ್‌ ಭಟ್‌ ಹತ್ಯೆ ಪ್ರಕರಣದಲ್ಲಿ ನಂಟು ಹೊಂದಿದ್ದರು ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.

ಕಲಾವಿದೆ ಅಮ್ರೀನ್‌ ಭಟ್‌ ಅವರನ್ನು ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್‌ ಜಿಲ್ಲೆಯಲ್ಲಿ ಮೇ 25ರಂದು ಉಗ್ರರು ಹತ್ಯೆ ಮಾಡಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದ ಅಮ್ರೀನ್‌ ಭಟ್‌, ಅವರ ಗಾಯನ, ಕಿರುಚಿತ್ರ ಸೇರಿದಂತೆ ಹಲವು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರು.

ಒಟ್ಟಾರೆಯಾಗಿ ಕಳೆದ ಮೂರು ದಿನಗಳಲ್ಲಿ 10 ಮಂದಿ ಭಯೋತ್ಪಾಕರನ್ನು ಹತ್ಯೆ ಮಾಡಲಾಗಿದೆ ಎಂದು ಐಜಿಪಿ ವಿಜಯ್ ಕುಮಾರ್ ಮಾಹಿತಿ ನೀಡಿರುವುದಾಗಿ ‘ಎಎನ್‌ಐ’ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯನ್ನು ಸಮನ್ವಯದಿಂದ ಹಾಗೂ ಸಕ್ರಿಯವಾಗಿ ಆರಂಭಿಸುವಂತೆ ಭದ್ರತಾ ಪಡೆಗಳಿಗೆ ಹಾಗೂ ಪೊಲೀಸರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಸೂಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT