ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ 3ನೇ ಅಲೆ ಎದುರಿಸಲು ಸಿದ್ಧತೆ: 1,500 ಆಮ್ಲಜನಕ ಉತ್ಪಾದನಾ ಘಟಕ ಶೀಘ್ರ ಆರಂಭ

Last Updated 9 ಜುಲೈ 2021, 19:34 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19ರ ಎರಡನೇ ಅಲೆ ಸಂದರ್ಭದಲ್ಲಿ ವೈದ್ಯಕೀಯ ಆಮ್ಲಜನಕ, ಆಸ್ಪತ್ರೆಯಲ್ಲಿ ಹಾಸಿಗೆ, ವೆಂಟಿ
ಲೇಟರ್‌ನಂತಹ ಸೌಕರ್ಯಗಳ ಭಾರಿ ಕೊರತೆಯು ದೊಡ್ಡ ಬಿಕ್ಕಟ್ಟು ಸೃಷ್ಟಿಸಿತ್ತು. ಹಾಗಾಗಿ, ಇಂತಹ ಸೌಲಭ್ಯಗಳ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.

ದೇಶದಾದ್ಯಂತ ವೈದ್ಯಕೀಯ ಆಮ್ಲಜನಕ ಪೂರೈಕೆ ಹೆಚ್ಚಳದ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ನಡೆಸಿದ್ದಾರೆ. 1500ಕ್ಕೂ ಹೆಚ್ಚು ಪಿಎಸ್‌ಎ ಮಾದರಿಯ ಆಮ್ಲಜನಕ ಉತ್ಪಾದನೆ ಘಟಕಗಳು ಶೀಘ್ರವೇ ಕಾರ್ಯಾರಂಭ ಮಾಡಲಿವೆ ಎಂಬ ಮಾಹಿತಿಯನ್ನು ಪ್ರಧಾನಿಗೆ ಅಧಿಕಾರಿಗಳು ನೀಡಿದ್ದಾರೆ. ಈ ಘಟಕಗಳ ಮೂಲಕ, ನಾಲ್ಕು ಲಕ್ಷ ಹಾಸಿಗೆಗಳಿಗೆ ಆಮ್ಲಜನಕ ಒದಗಿಸಬಹುದು ಎಂದು ಹೇಳಲಾಗಿದೆ.

ದೇಶದಾದ್ಯಂತ ವಿವಿಧ ಆಸ್ಪತ್ರೆಗಳಲ್ಲಿ ಈ ಘಟಕಗಳು ತಲೆ ಎತ್ತಲಿವೆ. ಪಿಎಂ–ಕೇರ್ಸ್‌ ನಿಧಿ, ವಿವಿಧ ಸಚಿವಾಲಯಗಳು ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳ ಮೂಲಕಈ ಘಟಕಗಳ ವೆಚ್ಚವನ್ನು ಭರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾ ಮಟ್ಟದ ಸರ್ಕಾರಿ ಆಸ್ಪತ್ರೆಗಳಲ್ಲಿ ಪಿಎಸ್‌ಎ ಮಾದರಿಯ ಆಮ್ಲಜನಕ ಉತ್ಪಾದನೆ ಘಟಕಗಳನ್ನು ಆರಂಭಿಸಬೇಕು. ರಾಜ್ಯ ಸರ್ಕಾರಗಳ ಜತೆಗಿನ ಸಮನ್ವಯದಲ್ಲಿ ಆದಷ್ಟು ಬೇಗನೆ ಇವುಗಳ ಕೆಲಸ ಆರಂಭ ಆಗಬೇಕು ಎಂದು ಪ್ರಧಾನಿ ಮೋದಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಆಮ್ಲಜನಕ ಘಟಕಗಳ ನಿರ್ವಹಣೆಗೆ ಆಸ್ಪತ್ರೆ ಸಿಬ್ಬಂದಿಗೆ ತರಬೇತಿ ನೀಡಬೇಕು. ಪ್ರತಿ ಜಿಲ್ಲೆಯಲ್ಲಿಯೂ ತರಬೇತಿ ಪಡೆದ ಸಿಬ್ಬಂದಿ ಇರಬೇಕು ಎಂದು ಮೋದಿ ಸೂಚಿಸಿದ್ದರು.

ಮೈಮರೆತರೆ ಅಪಾಯ: ದಿನವೂ ವರದಿಯಾಗುವ ಕೋವಿಡ್‌–19ರ ಹೊಸ ಪ್ರಕರಣಗಳ ಸಂಖ್ಯೆ ಹತ್ತು ಪಟ್ಟು ಕಡಿಮೆಯಾಗಿದ್ದರೂ ಭಾರತವು ಸಾಂಕ್ರಾಮಿಕದ ಅಪಾಯದಿಂದ ಹೊರಗೆ ಬಂದಿದೆ ಎಂದು ಹೇಳಲಾಗದು. ಹೊಸ ಪ್ರಕರಣಗಳು ಸಂಖ್ಯೆಯು ಎರಡು ವಾರಗಳಿಂದ ಕಡಿಮೆ ಆಗುತ್ತಿಲ್ಲ ಮತ್ತು ಅವು ಮಹಾರಾಷ್ಟ್ರ ಮತ್ತು ಕೇರಳದಿಂದಲೇ ವರದಿ ಆಗುತ್ತಿವೆ.

ಹೊಸ ಪ್ರಕರಣಗಳ ಸಂಖ್ಯೆಯು ಸತತ ಮೂರು ವಾರ 10 ಸಾವಿರದ ಒಳಗೆ ಬರಬೇಕು ಎಂದು ನೀತಿ ಆಯೋಗದ ಸದಸ್ಯ ವಿ.ಕೆ. ಪಾಲ್‌ ಹೇಳಿದ್ದಾರೆ. ಆದರೆ, ಜೂನ್‌ ಕೊನೆಯ ವಾರದಿಂದಲೇ ಪ್ರತಿ ದಿನ ದೃಢಪಡುವ ಹೊಸ ಪ್ರಕರಣಗಳ ಸಂಖ್ಯೆಯು 35,000ದಿಂದ 48,000ದ ನಡುವೆ ಇದೆ. ಇದು ಮೊದಲ ಅಲೆಯಲ್ಲಿ ಒಂದು ದಿನ ಪತ್ತೆಯಾದ ಪ್ರಕರಣಗಳ ಗರಿಷ್ಠ ಸಂಖ್ಯೆ 97,894ರ ಮೂರನೇ ಒಂದಕ್ಕಿಂತ ಹೆಚ್ಚು.ಎರಡನೇ ಅಲೆಯಲ್ಲಿ ಒಂದು ದಿನ ದೃಢಪಟ್ಟ ಹೊಸ ಪ್ರಕರಣಗಳ ಗರಿಷ್ಠ ಸಂಖ್ಯೆ 4,14,188ಕ್ಕೆ ಹೋಲಿಸಿದರೆ ಈ ಸಂಖ್ಯೆ ಕಡಿಮೆ ಅನಿಸುತ್ತದೆ. ಆದರೆ, ಪ್ರತ್ಯೇಕವಾಗಿ ನೋಡಿದಾಗ ಈಗ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ ದೊಡ್ಡದೇ ಆಗಿದೆ.

ಕಳೆದ ವಾರ ಶೇ 53ರಷ್ಟು ಪ್ರಕರಣಗಳು ಕೇರಳ (ಶೇ 32) ಮತ್ತು ಮಹಾರಾಷ್ಟ್ರದಿಂದ (ಶೇ 21) ವರದಿ ಆಗಿದ್ದವು. 66 ಜಿಲ್ಲೆಗಳಲ್ಲಿ ಕೋವಿಡ್‌ ದೃಢಪಡುವಿಕೆ ಪ್ರಮಾಣವು ಶೇ 10ಕ್ಕಿಂತಲೂ ಹೆಚ್ಚು ಇದೆ. ರಾಜಸ್ಥಾನದ 10, ಕೇರಳದ ಎಂಟು, ಮಹಾರಾಷ್ಟ್ರ ಮತ್ತು ಒಡಿಶಾದ ತಲಾ ಎರಡು ಜಿಲ್ಲೆಗಳು ಇವುಗಳಲ್ಲಿ ಸೇರಿವೆ. ಅದಲ್ಲದೆ, ಈಶಾನ್ಯ ಭಾರತದ ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಕೂಡ ಕಳವಳಕ್ಕೆ ಕಾರಣವಾಗಿದೆ.

ಕೋವಿಡ್‌ ಪ್ರಸರಣ ತಡೆ ಮಾರ್ಗಸೂಚಿಯನ್ನು ಜನರು ಪಾಲಿಸಬೇಕು, ಈ ವಿಚಾರದಲ್ಲಿ ಮೈಮರೆಯುವಂತಿಲ್ಲ ಎಂದು ಪಾಲ್‌ ಹೇಳಿದ್ದಾರೆ.

**
ನಿರ್ಬಂಧಗಳಿಗೆ ವಿನಾಯಿತಿ ಕೊಡಲಾಗಿದೆ ಎಂದರೆ ಎರಡನೇ ಅಲೆ ಮುಗಿಯಿತು ಎಂದಲ್ಲ. ಅ‍‍‍ಪಾಯ ಇನ್ನೂ ಇದೆ. ಪ್ರವಾಸಿ ತಾಣಗಳಲ್ಲಿ ಅಪಾಯ ಹೆಚ್ಚು.
-ಲವ ಅಗರ್‌ವಾಲ್‌, ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT