ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ಶೇ 5ಕ್ಕೆ ಇಳಿದ ಸೋಂಕಿನ ಪ್ರಮಾಣ, ಸಕ್ರಿಯ ಪ್ರಕರಣಗಳು ಈಗ ಕೇವಲ 40,214

Last Updated 20 ಮೇ 2021, 12:12 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕು ಹರಡುವಿಕೆಯ ಪ್ರಮಾಣದಲ್ಲಿ ಒಂದು ವಾರದಿಂದ ತೀವ್ರ ಸ್ವರೂಪದ ಇಳಿಕೆ ಕಂಡುಬಂದಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಗಿದೆ.

ಏಪ್ರಿಲ್ ಮೊದಲ ವಾರದಿಂದಲೇ ನಗರದ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದ, ಆಮ್ಲಜನಕವೂ ದೊರೆಯದ ಸ್ಥಿತಿ ನಿರ್ಮಾಣವಾಗಿತ್ತಲ್ಲದೆ, ಸ್ಮಶಾನಗಳಲ್ಲಿ ಅಂತ್ಯಕ್ರಿಯೆಗೂ ಪರದಾಡುವಂತಿದ್ದ ಸ್ಥಿತಿ ಸೃಷ್ಟಿಯಾಗಿತ್ತು. ಆದರೆ, ಕಳೆದ ಒಂದು ವಾರದಿಂದ ಆ ಸ್ಥಿತಿ ದೂರವಾಗಿದ್ದು ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಗುರುವಾರ ಸಂಜೆಗೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದ 58,744 ಜನರ ಪೈಕಿ, 3,231 ಜನರಲ್ಲಿ (ಶೇ 5.50) ಮಾತ್ರ ಸೋಂಕು ದೃಢಪಟ್ಟಿದೆ. 7,831 ಜನ ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 40,214ಕ್ಕೆ ಇಳಿದಿದೆ.

ಇದೇ ಅವಧಿಯಲ್ಲಿ ಒಟ್ಟು 233 ಜನ ಚಿಕಿತ್ಸೆಗೆ ಸ್ಪಂದಿಸದೆ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿನ ಪ್ರಮಾಣವೂ ಗಣನೀಯವಾಗಿ ಕಡಿಮೆಯಾಗುತ್ತ ಸಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ನಿತ್ಯವೂ 10,000ರ ಗಡಿ ದಾಟುತ್ತಿದ್ದ ಸೋಂಕಿತರ ಸಂಖ್ಯೆಯು ಮೇ 15ರಿಂದ ನಾಲ್ಕಂಕಿಗಿಂತ ಕಡಿಮೆ ಪ್ರಮಾಣದಲ್ಲಿ ದಾಖಲಾಗುತ್ತಿದೆ.

ಮೇ 16ರಂದು 6,456, ಮೇ 17ರಂದು 4,524, ಮೇ 18ರಂದು 4,482, ಮೇ 19ರಂದು 3,846 ಜನರಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿತ್ತು. ಈ ಅವಧಿಯಲ್ಲಿ ಕ್ರಮವಾಗಿ 262, 340, 265, 235 ಜನ ಸಾವಿಗೀಡಾಗಿದ್ದರು.

2020ರ ಮಾರ್ಚ್‌ನಿಂದ ಇದುವರೆಗೆ ದೆಹಲಿಯಲ್ಲಿ 14,09,950 ಜನ ಸೋಂಕಿತರಾಗಿದ್ದು, ಅವರ ಪೈಕಿ 13,47,157 ಜನ ಗುಣಮುಖರಾಗಿದ್ದಾರೆ. 22,579 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಕೊರೊನಾ ನಿಯಂತ್ರಣದ ನಿಟ್ಟಿನಲ್ಲಿ ಏಪ್ರಿಲ್‌ 19ರಿಂದಲೇ ನಗರದಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್‌ ಘೋಷಿಸಲಾಗಿದ್ದು, ಕಿರಾಣಿ, ತರಕಾರಿ, ಔಷಧಿ, ಹಣ್ಣು, ಹಾಲಿನ ಅಂಗಡಿ ಮತ್ತು ಪೆಟ್ರೋಲ್‌ ಬಂಕ್‌ಗಳಲ್ಲಿ ಮಾತ್ರ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರ ಮುಕ್ತ ಓಡಾಟಕ್ಕೆ ಕಡಿವಾಣ ಬಿದ್ದಿದ್ದರಿಂದ ಸೋಂಕಿನ ಸರಪಳಿ ಕಡಿತಗೊಳ್ಳುತ್ತ ಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT