ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಗಡಿಯಲ್ಲಿ ಮೂರು ಮಾದರಿ ಗ್ರಾಮ ನಿರ್ಮಾಣ: ಅರುಣಾಚಲ ಪ್ರದೇಶ ಸರ್ಕಾರದ ಯೋಜನೆ

Last Updated 4 ಮಾರ್ಚ್ 2021, 10:56 IST
ಅಕ್ಷರ ಗಾತ್ರ

ಗುವಾಹಟಿ: ಚೀನಾ ಗಡಿ ಸಮೀಪ ಮೂರು ಮಾದರಿ ಗ್ರಾಮಗಳನ್ನು ನಿರ್ಮಿಸುವುದಾಗಿ ಅರುಣಾಚಲ ಪ್ರದೇಶ ಸರ್ಕಾರ ಘೋಷಿಸಿದೆ.

‘ವಿದೇಶಿ ದುಸ್ಸಾಹಸ’ ತಡೆಗಟ್ಟುವ ನಿಟ್ಟಿನಲ್ಲಿ ಈ ಯೋಜನೆ ರೂಪಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಬುಧವಾರ ಮಂಡಿಸಲಾದ ರಾಜ್ಯ ಬಜೆಟ್‌ನಲ್ಲಿ ಹಣಕಾಸು ಸಚಿವ ಚೊವ್ನಾ ಮೈನ್‌ ಗ್ರಾಮಗಳ ನಿರ್ಮಾಣ ಯೋಜನೆಯನ್ನು ಪ್ರಕಟಿಸಿದರು.

‘ಅಂತರರಾಷ್ಟ್ರೀಯ ಗಡಿಯಲ್ಲಿನ ಪ್ರದೇಶಗಳನ್ನು ಅಭಿವೃದ್ಧಿಪಡಿಸುವುದು ಅತಿ ಮುಖ್ಯವಾಗಿದೆ. ಇದರಿಂದ, ಯಾವುದೇ ರೀತಿಯ ವಿದೇಶಿ ದುಸ್ಸಾಹಸವನ್ನು ತಡೆಯಲು ಶಾಶ್ವತವಾದ ಪರಿಹಾರ ಸೂತ್ರವನ್ನು ರೂಪಿಸಿದಂತಾಗುತ್ತದೆ. ಹೀಗಾಗಿ, ಗಡಿ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಮೂರು ಗ್ರಾಮಗಳನ್ನು ನಿರ್ಮಿಸಲಾಗುವುದು. ರಾಜ್ಯದ ಪೂರ್ವ, ಕೇಂದ್ರೀಯ ಮತ್ತು ಪಶ್ಚಿಮ ಭಾಗಗಳಲ್ಲಿ ಈ ಗ್ರಾಮಗಳನ್ನು ನಿರ್ಮಿಸಲಾಗುವುದು’ ಎಂದು ಚೊವ್ನಾ ಮೈನ್‌ ತಿಳಿಸಿದ್ದಾರೆ.

‘ಮೂರು ಗ್ರಾಮಗಳ ನಿರ್ಮಾಣಕ್ಕಾಗಿ ₹30 ಕೋಟಿ ನಿಗದಿಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ಮತ್ತಷ್ಟು ಗ್ರಾಮಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು. ಗಡಿಯಲ್ಲಿರುವ ಗ್ರಾಮಗಳಿಗೆ ಉತ್ತಮ ರಸ್ತೆ ಸಂಪರ್ಕ, ವಿದ್ಯುತ್‌ ಸೌಲಭ್ಯ, ನೀರು, ಆರೋಗ್ಯ ಮತ್ತು ಶಿಕ್ಷಣದ ಸೌಲಭ್ಯಗಳನ್ನು ಆದ್ಯತೆಯ ಮೇರೆಗೆ ಕಲ್ಪಿಸಲಾಗುವುದು’ ಎಂದು ಅವರು ತಿಳಿಸಿದ್ದಾರೆ.

‘ಸಂಪೂರ್ಣವಾಗಿ ಮಹಿಳೆಯರಿಗಾಗಿಯೇ ಮೀಸಲಾದ ಮೊದಲ ಸೈನಿಕ ಶಾಲೆಯನ್ನು ತವಾಂಗ್‌ನಲ್ಲಿ ಸ್ಥಾಪಿಸಲಾಗುವುದು’ ಎಂದು ಮೈನ್‌ ಇದೇ ಸಂದರ್ಭದಲ್ಲಿ ಘೋಷಿಸಿದರು. ತವಾಂಗ್‌ ಚೀನಾ ಗಡಿಗೆ ಹೊಂದಿಕೊಂಡಿರುವ ನಗರವಾಗಿದೆ.

ಅರುಣಾಚಲ ಪ್ರದೇಶದ ಉಪರಿ ಸುಬನಸಿರಿ ಜಿಲ್ಲೆಯಲ್ಲಿ ಚೀನಾ ಗ್ರಾಮವೊಂದನ್ನು ನಿರ್ಮಿಸಿದೆ ಎನ್ನುವುದು ಇತ್ತೀಚೆಗೆ ವರದಿಯಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಕೇಂದ್ರ ಸರ್ಕಾರ ಈ ಪ್ರದೇಶವನ್ನು 1960ರಿಂದ ಚೀನಾ ಅತಿಕ್ರಮಿಸಿಕೊಂಡಿದೆ. ಅರುಣಾಚಲ ಪ್ರದೇಶವು ಚೀನಾ ಜತೆ ಸುಮಾರು 1,100 ಕಿಲೋ ಮೀಟರ್‌ ಗಡಿ ಪ್ರದೇಶವನ್ನು ಹೊಂದಿದೆ. ಆದರೆ, ಭಾರತದಲ್ಲಿ ಪ್ರದೇಶಗಳು ಸಂಪರ್ಕ ಮತ್ತು ಮೂಲಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT