ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ವಿವಾದ: ಗುಂಪು ಹತ್ಯೆಗೆ ಉತ್ತರ ಪ್ರದೇಶದ ಮಾಜಿ ಶಾಸಕ ಬಲಿ

ಮೂರು ಬಾರಿ ಶಾಸಕರಾಗಿದ್ದ ನಿರ್ವೇಂದ್ರಕುಮಾರ್ ಮಿಶ್ರಾ
Last Updated 6 ಸೆಪ್ಟೆಂಬರ್ 2020, 19:45 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದ ನಿಘಾಸನ್ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿದ್ದ ಮಾಜಿ ಶಾಸಕ ನಿರ್ವೇಂದ್ರ ಕುಮಾರ್ ಮಿಶ್ರಾ ಅವರನ್ನು ಆಸ್ತಿ ವಿವಾದದ ಕಾರಣಕ್ಕಾಗಿ ಗುಂಪೊಂದು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಭಾನುವಾರ ನಡೆದಿದೆ.

ಲಖನೌದಿಂದ 150 ಕಿ.ಮೀ ದೂರದಲ್ಲಿರುವ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಹತ್ಯೆ ನಡೆದಿದ್ದು, ಘಟನೆಯಲ್ಲಿ ನಿರ್ವೇಂದ್ರಕುಮಾರ್ ಅವರ ಪುತ್ರನಿಗೂ ಗಂಭೀರವಾದ ಗಾಯಗಳಾಗಿವೆ.

ಮೂರು ದಿನಗಳ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಎರಡನೇ ಗುಂಪು ಹತ್ಯೆ ಪ್ರಕರಣ ಇದಾಗಿದೆ.

ಲಖಿಂಪುರ್ ಖೇರಿ ಜಿಲ್ಲೆಯ ತ್ರಿಕೋಲಿಯಾ ಬಸ್ ನಿಲ್ದಾಣದ ಬಳಿಯ ಜಮೀನಿಗೆ ಸಂಬಂಧಪಟ್ಟಂತೆ ನಿರ್ವೇಂದ್ರಕುಮಾರ್ ಮತ್ತು ಸಮೀರ್ ಗುಪ್ತಾ ನಡುವೆ ವಿವಾದವಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ.

ಈ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಗುಪ್ತಾ ಕಡೆಯವರು ಯತ್ನಿಸುತ್ತಿದ್ದಾಗ ಅದನ್ನು ತಡೆಯಲು ನಿರ್ವೇಂದ್ರ ಕುಮಾರ್ ಯತ್ನಿಸಿದ್ದಾರೆ. ಆಗ ದುಷ್ಕರ್ಮಿಗಳ ಗುಂಪೊಂದು ನಿರ್ವೇಂದ್ರ ಅವರ ಮೇಲೆ ಕಬ್ಬಿಣದ ರಾಡ್ ಮತ್ತು ಕೋಲುಗಳಿಂದ ಹಲ್ಲೆ ಮಾಡಿದೆ. ತಂದೆಯನ್ನು ಬಿಡಿಸಲು ಮಧ್ಯೆ ಹೋದ ನಿರ್ವೇಂದ್ರ ಅವರ ಪುತ್ರನ ಮೇಲೂ ಗಂಭೀರವಾಗಿ ಹಲ್ಲೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಗಂಭೀರವಾಗಿ ಗಾಯಗೊಂಡಿದ್ದ ನಿರ್ವೇಂದ್ರಕುಮಾರ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರೊಳಗೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದರು. ಆದರೆ, ಗಲಭೆ ಸಂದರ್ಭದಲ್ಲಿ ಹೃದಯಾಘಾತದಿಂದ ಮಿಶ್ರಾ ನಿಧನ ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಹೇಳಿಕೆಯನ್ನು ಮಿಶ್ರಾ ಅವರ ಪುತ್ರ ತಿರಸ್ಕರಿಸಿದ್ದು, ನನ್ನ ತಂದೆಯನ್ನು ಹೊಡೆದು ಸಾಯಿಸಲಾಗಿದೆ ಎಂದಿದ್ದಾರೆ.

ಹತ್ಯೆ ಖಂಡಿಸಿ ಮಿಶ್ರಾ ಅವರ ಬೆಂಬಲಿಗರುಉ ಹೆದ್ದಾರಿಯಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿ, ಅಪರಾಧಿಗಳ ಬಂಧನಕ್ಕೆ ಆಗ್ರಹಿಸಿದರು.

‘ಬಿಜೆಪಿ ಆಡಳಿತದ ಉತ್ತರ ಪ್ರದೇಶದಲ್ಲಿ ಯಾರೂ ಸುರಕ್ಷಿತವಾಗಿಲ್ಲ’ ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಹೇಳಿದ್ದಾರೆ. ‘ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಂಬುದೇ ಇಲ್ಲ’ ಎಂದು ಉತ್ತರ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕುಮಾರ್ ಲಾಲೂ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT