ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌: ವಿಧಾನಸಭೆ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ

ಚುನಾವಣಾ ಕಣಕ್ಕೆ ಎಎಪಿ ಪ್ರವೇಶ: ಕೇಜ್ರಿವಾಲ್‌ ಅಬ್ಬರದ ಪ್ರಚಾರ
Last Updated 3 ನವೆಂಬರ್ 2022, 19:42 IST
ಅಕ್ಷರ ಗಾತ್ರ

ಗುಜರಾತ್‌ ವಿಧಾನಸಭಾ ಚುನಾವಣಾ ಕಣ ಎಂದರೆ ಅದು ಈವರೆಗೆ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಣ ಹೋರಾಟ ಮಾತ್ರ ಎನ್ನುವಂತಿತ್ತು. ಅಂತಹ ಕಣಕ್ಕೆ ಈ ಬಾರಿ ಎಎಪಿ ಇಳಿದಿದೆ. ಕಳೆದ ಐದು ಚುನಾವಣೆಗಳಲ್ಲಿ ಬಿಜೆಪಿಯ ನೆಲೆ ಸಡಿಲವಾಗುತ್ತಿದ್ದರೆ, ಕಾಂಗ್ರೆಸ್‌ನ ನೆಲೆ ಗಟ್ಟಿಯಾಗುತ್ತಿದೆ. ಅಂತಹ ಸಂದರ್ಭದಲ್ಲೇ ಎಎಪಿ ಚುನಾವಣೆಗೆ ಇಳಿದಿದೆ. ಎಎಪಿ ಪ್ರವೇಶದಿಂದ ಬಿಜೆಪಿಗೆ ಅನನಕೂಲ, ಕಾಂಗ್ರೆಸ್‌ಗೆ ಅನುಕೂಲವಾಗಲಿದೆ
ಎಂದು ವಿಶ್ಲೇಷಿಸಲಾಗಿದೆ.

ನೆಲೆ ಕಳೆದುಕೊಳ್ಳದ ಕಾಂಗ್ರೆಸ್‌

ಸತತ ಆರು ಬಾರಿ ಬಿಜೆಪಿ ಎದುರು ಸೋತಿದ್ದರೂ, ಗುಜರಾತ್‌ನಲ್ಲಿ ಕಾಂಗ್ರೆಸ್‌ ತನ್ನ ನೆಲೆಯನ್ನು ಕಳೆದುಕೊಂಡಿಲ್ಲ. 1995ರಿಂದಲೂ ಬಿಜೆಪಿಯೇ ಸರ್ಕಾರ ರಚಿಸುತ್ತಿದ್ದರೂ, ಪ್ರತಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಶೇ 40ರ ಆಸುಪಾಸಿನಷ್ಟು ಮತಗಳನ್ನು ಪಡೆದುಕೊಳ್ಳುತ್ತಲೇ ಇದೆ. 2002ರಿಂದ ನಡೆದ ಪ್ರತಿ ಚುನಾವಣೆಯಲ್ಲೂ ಪಕ್ಷದ ಮತ ಪ್ರಮಾಣ ಮತ್ತು ಗೆದ್ದ ಸ್ಥಾನಗಳ ಸಂಖ್ಯೆ ಏರಿಕೆಯಾಗುತ್ತಲೇ ಬಂದಿದೆ.

ಗುಜರಾತ್‌ನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮುಸ್ಲಿಂ ಮತ್ತು ಠಾಕೂರ್ ಮತದಾರರೇ ಕಾಂಗ್ರೆಸ್‌ನ ಬಲ. ಈ ಬಾರಿಯೂ ಈ ಜಾತಿ ಸಮುದಾಯಗಳು ಹೆಚ್ಚು ಇರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ತನ್ನ ಪ್ರಚಾರಕ್ಕೆ ಒತ್ತು ನೀಡಿದೆ. ಬಿಜೆಪಿ ನೆಲೆ ಗಟ್ಟಿಯಾಗಿರುವ ನಗರ ಕ್ಷೇತ್ರಗಳಲ್ಲಿ, ಎಎಪಿಯು ಬಿಜೆಪಿಯ ಮತಗಳನ್ನು ಕಸಿಯಬಹುದು. ಅದು ಕಾಂಗ್ರೆಸ್‌ಗೆ ಅನುಕೂಲವಾಗಬಹುದು ಎಂದು ಅಂದಾಜಿಸಲಾಗಿದೆ.

ಕಾಂಗ್ರೆಸ್‌ ಪರವಾಗಿ ಕೆಲಸಮಾಡುವ ಹಲವಾರು ಅಂಶಗಳಿದ್ದರೂ, ರಾಜ್ಯದಲ್ಲಿ ಪ್ರಬಲ ನಾಯಕರು ಇಲ್ಲದೇ ಇರುವುದು ದೊಡ್ಡ ಕೊರತೆ. ಅಲ್ಲದೆ, 2017ರಿಂದ ಈವರೆಗೆ 17 ಶಾಸಕರೂ ಸೇರಿ ಹಲವು ಮುಖಂಡರು ಬಿಜೆಪಿ ಸೇರಿದ್ದಾರೆ. ಪಕ್ಷದ ರಾಷ್ಟ್ರಮಟ್ಟದ ನಾಯಕರು ‘ಭಾರತ್‌ ಜೋಡೊ’ ಯಾತ್ರೆಯಲ್ಲಿದ್ದಾರೆ. ಇವೆಲ್ಲಾ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.


ಮೋದಿಯನ್ನೇ ನೆಚ್ಚಿಕೊಂಡ ಬಿಜೆಪಿ

ಸತತ ಆರು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರದಲ್ಲಿರುವ ಬಿಜೆಪಿಯು ಈ ಬಾರಿಯೂ ಗೆಲ್ಲುವ ನೆಚ್ಚಿನ ಪಕ್ಷ ಎನಿಸಿದೆ. ಕೇಂದ್ರದಲ್ಲೂ ಬಿಜೆಪಿ ಸರ್ಕಾರವಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತವರು ರಾಜ್ಯದಲ್ಲಿ ಪಕ್ಷದ ಪರವಾಗಿ ಪ್ರಚಾರಕ್ಕೆ ಇಳಿದಿದ್ದಾರೆ. ಬಿಜೆಪಿ ಪ್ರಚಾರವನ್ನು ದೊಡ್ಡ ಮಟ್ಟದಲ್ಲಿಯೇ ನಡೆಸುತ್ತಿದೆ. ಕೇಂದ್ರ ಸರ್ಕಾರವು ಈಚಿನ ತಿಂಗಳಲ್ಲಿ ಒಟ್ಟು ₹2.25 ಲಕ್ಷ ಕೋಟಿಯಷ್ಟು ಹೂಡಿಕೆಯನ್ನು ಗುಜರಾತ್‌ಗೆ ಒದಗಿಸಿಕೊಟ್ಟಿದೆ. ಇವೆಲ್ಲವೂ ಪಕ್ಷದ ಪರವಾಗಿ ಕೆಲಸ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಕಾಂಗ್ರೆಸ್‌ ಅತ್ಯಂತ ಸಂಘಟಿತವಾಗಿ, ಸದ್ದುಗದ್ದಲವಿಲ್ಲದೆ ಪ್ರಚಾರ ನಡೆಸುತ್ತಿರುವುದು ಬಿಜೆಪಿಗೆ ಮುಳುವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಸ್ವತಃ ಮೋದಿ ಅವರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಗರ ಪ್ರದೇಶದಲ್ಲಿ ಪ್ರಚಾರಕ್ಕೆ ಒತ್ತು ನೀಡಿದ್ದರೆ, ಕಾಂಗ್ರೆಸ್‌ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಸಕ್ರಿಯವಾಗಿದೆ. ಚುನಾವಣಾ ಕಣಕ್ಕೆ ಎಎಪಿ ಪ್ರವೇಶಿಸಿರುವುದು ಬಿಜೆಪಿಗೇ ಹೊಡೆತ ನೀಡಲಿದೆ ಎಂದು ಅಂದಾಜಿಸಲಾಗಿದೆ. ಪ್ರಚಾರಕ್ಕೆ ಬಿಜೆಪಿ ಮೋದಿಯನ್ನೇ ನೆಚ್ಚಿಕೊಂಡಿದೆ.

ಇನ್ನು ಮೊರ್ಬಿ ತೂಗು ಸೇತುವೆ ದುರಂತ, ವಂದೇ ಭಾರತ್ ರೈಲುಗಳು ಪದೇ ಪದೇ ಅಪಘಾತಕ್ಕೆ ಒಳಗಾಗುತ್ತಿರುವುದು ಗುಜರಾತ್ ಸರ್ಕಾರ ಮತ್ತು ಮೋದಿ ಅವರ ಆತ್ಮವಿಶ್ವಾಸವನ್ನು ಕುಗ್ಗಿಸಿದೆ. ಅತಿಪ್ರಶಂಸೆಗೆ ಪಾತ್ರವಾದ ‘ಗುಜರಾತ್ ಮಾದರಿ’ ಎಂಬ ಪರಿಕಲ್ಪನೆಯನ್ನು ಈ ದುರಂತಗಳು ಮುಕ್ಕಾಗಿಸಿವೆ.

ಎಎಪಿ ಪರ್ಯಾಯ ಆಯ್ಕೆ ಆಗುತ್ತಾ?

ಇದುವರೆಗೆ ಎರಡು ರಾಜಕೀಯ ಪಕ್ಷಗಳ ನಡುವೆ ಮಾತ್ರ ನಡೆಯುತ್ತಿದ್ದ ಗುಜರಾತ್‌ ಕದನ ಕಣಕ್ಕೆ ಆಮ್ ಆದ್ಮಿ ಪಕ್ಷ (ಎಎಪಿ) ಪ್ರವೇಶಿಸಿದೆ. ವಿವಿಧ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಮಧ್ಯಮ ವರ್ಗದವರನ್ನು ತಲುಪಲು ಎಎಪಿ ಮುಂದಾಗಿದೆ. ಮತದಾರರಿಗೆ ನೀಡಿರುವ ಆಕರ್ಷಕ ಭರವಸೆಗಳೇ ಅದರ ಶಕ್ತಿ ಎಂದು ಪರಿಗಣಿಸಲಾಗಿದೆ. ಎಲ್ಲ ಮನೆಗಳಿಗೆ ಉಚಿತ ವಿದ್ಯುತ್, ನಿರುದ್ಯೋಗ ಭತ್ಯೆ, ಮಹಿಳೆಯರಿಗೆ ತಲಾ ಒಂದು ಸಾವಿರ ರೂಪಾಯಿ ನೆರವು ಘೋಷಣೆಗಳಿಂದಾಗಿ ಮತದಾರರು ಎಎಪಿಯನ್ನು ಪರ್ಯಾಯ ಆಯ್ಕೆ ಎಂದು ಪರಿಗಣಿಸಲೂಬಹುದು.

ಆದರೆ ಎಎಪಿಗೆ ತೊಡಕಾಗಬಹುದಾದ ಕೆಲ ಅಂಶಗಳಿವೆ. ಜನಸಮುದಾಯಗಳನ್ನು ಸೆಳೆಯಬಲ್ಲ ಸ್ಥಳೀಯ ನಾಯಕನ ಕೊರತೆ ಪಕ್ಷಕ್ಕಿದೆ. ಮೇಲಾಗಿ ಗುಜರಾತ್ ರಾಜಕಾರಣದಲ್ಲಿ ಪಕ್ಷ ಅಷ್ಟಾಗಿ ಪಳಗಿಲ್ಲ. ಪಕ್ಷಕ್ಕೆಂದೇ ಪ್ರತ್ಯೇಕ ಮತಬ್ಯಾಂಕ್‌ ಇಲ್ಲ. 2021ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಎಪಿ ಕೆಲವು ವಾರ್ಡ್‌ಗಳಲ್ಲಿ ಜಯ ಗಳಿಸಿದ್ದರೂ, ಅದು ವಿಧಾನಸಭಾ ಚುನಾವಣೆಯ ಗೆಲುವಿಗೆ ಕಾರಣವಾಗುತ್ತದೆ ಎಂದು ಹೇಳಲಾಗದು.

ಈ ಚುನಾವಣೆಯ ಮೂಲಕ ಗುಜರಾತ್‌ ಅನ್ನು ತನ್ನ ನೆಲೆಯನ್ನಾಗಿ ಪರಿವರ್ತಿಸಿಕೊಳ್ಳುವ ಅವಕಾಶ ಪಕ್ಷಕ್ಕೆ ಇದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪ್ರಾಬಲ್ಯದ ಗುಜರಾತ್‌ನಲ್ಲಿ ಈ ಬಾರಿ ಎಎಪಿ ಗೆಲ್ಲುವ ಕೆಲವೇ ಸೀಟುಗಳು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ನೆರವಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT