ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ.16ರಂದು ತ್ರಿಪುರ, ಫೆ 27ರಂದು ನಾಗಾಲ್ಯಾಂಡ್‌–ಮೇಘಾಲಯ ವಿಧಾನಸಭೆ ಚುನಾವಣೆ

Last Updated 18 ಜನವರಿ 2023, 23:41 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ 2023ರಲ್ಲಿ ಮೊದಲ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಈಶಾನ್ಯ ರಾಜ್ಯಗಳಾದ ತ್ರಿಪುರ, ಮೇಘಾಲಯ ಹಾಗೂ ನಾಗಾಲ್ಯಾಂಡ್‌ ವಿಧಾನಸಭೆಗಳ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಬುಧವಾರ ವೇಳಾಪಟ್ಟಿ ಪ್ರಕಟಿಸಿದೆ.

ತ್ರಿಪುರ ವಿಧಾನಸಭೆಗೆ ಫೆಬ್ರುವರಿ 16 ರಂದು, ನಾಗಾಲ್ಯಾಂಡ್‌ ಹಾಗೂ ಮೇಘಾಲಯ ವಿಧಾನಸಭೆಗಳಿಗೆ ಫೆಬ್ರುವರಿ 27ರಂದು ಮತದಾನ ನಡೆಯಲಿದೆ. ಮೂರು ರಾಜ್ಯಗಳ ಮತ ಎಣಿಕೆಯನ್ನು ಮಾರ್ಚ್‌ 2ರಂದು ನಡೆಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2024ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಈ ವರ್ಷ 9 ವಿಧಾನ ಸಭೆಗಳಿಗೆ ನಡೆಯುವ ಚುನಾವಣೆ ರಾಜಕೀಯ ಪಕ್ಷಗಳಿಗೆ ನಿರ್ಣಾಯಕ. ತ್ರಿಪುರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಉಳಿದ ಎರಡು ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂಬ ಹವಣಿಕೆಯಲ್ಲಿ ಆ ಪಕ್ಷ ಇದೆ. ಈ ರಾಜ್ಯಗಳಲ್ಲಿ ಕಳೆದುಕೊಂಡ ತಮ್ಮ ಪ್ರಭಾವವನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ ಕಾಂಗ್ರೆಸ್‌ ಹಾಗೂ ಎಡ ಪಕ್ಷಗಳು ಇವೆ. ಈ ಮೂರು ರಾಜ್ಯಗಳಲ್ಲಿ ಅಭ್ಯರ್ಥಿ ಗಳನ್ನು ಕಣಕ್ಕೆ ಇಳಿಸುವ ಮೂಲಕ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಶ್ಚಿಮ ಬಂಗಾಳದ ಆಚೆಗೆ ನೆಲೆ ವಿಸ್ತರಿ ಸುವ ಯತ್ನದಲ್ಲಿದೆ. ನಾಗಾಲ್ಯಾಂಡ್‌ ನಲ್ಲಿ ನ್ಯಾಷನಲಿಸ್ಟ್‌ ಡೆಮೊಕ್ರಾಟಿಕ್‌ ಪ್ರೊಗ್ರೆಸಿವ್‌ ಪಾರ್ಟಿ (ಎನ್‌ಡಿಪಿಪಿ), ಮೇಘಾಲಯದಲ್ಲಿ ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ (ಎನ್‌ಪಿಪಿ) ಅಧಿಕಾರದಲ್ಲಿವೆ.

ಮೂರು ರಾಜ್ಯಗಳು ತಲಾ 60 ಸದಸ್ಯ ಬಲವನ್ನು ಹೊಂದಿವೆ. ನಾಗಾಲ್ಯಾಂಡ್‌ ವಿಧಾನಸಭೆಯ ಅವಧಿ ಮಾರ್ಚ್‌ 12, ಮೇಘಾಲಯ ಹಾಗೂ ತ್ರಿಪುರ ವಿಧಾನಸಭೆಗಳ ಅವಧಿ ಕ್ರಮವಾಗಿ ಮಾರ್ಚ್‌ 15 ಹಾಗೂ 22ರಂದು ಕೊನೆ ಗೊಳ್ಳಲಿವೆ. ಮಾರ್ಚ್‌ನಲ್ಲಿ ಪರೀಕ್ಷೆಗಳು ನಡೆಯಲಿರುವ ಕಾರಣ ಫೆಬ್ರುವರಿಯಲ್ಲಿ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತರು ತಿಳಿಸಿದರು.

ಎಲೆಕ್ಟ್ರಾನಿಕ್‌ ಮತ ಯಂತ್ರಗಳ (ಇವಿಎಂ) ಸಮಗ್ರತೆಯನ್ನು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಇತ್ತೀಚೆಗೆ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ‘ಈ ಯಂತ್ರಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಹಲವು ರಾಜಕೀಯ ಪಕ್ಷಗಳು, ಈ ಹಿಂದೆ ಅದೇ ಸಾಧನ ಬಳಕೆಯಲ್ಲಿದ್ದಾಗ ಗೆಲುವು ಸಾಧಿಸಿದ್ದವು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು’ ಎಂದರು.

ಲೋಕಸಭಾ, ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ
ಲಕ್ಷದ್ವೀಪ ಲೋಕಸಭೆ ಹಾಗೂ ಐದು ರಾಜ್ಯಗಳ ಆರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ವೇಳಾಪಟ್ಟಿಯನ್ನೂ ಪ್ರಕಟಿಸಲಾಗಿದೆ.

ಕ್ರಿಮಿನಲ್‌ ಪ್ರಕರಣದಲ್ಲಿ ಭಾಗಿಯಾದ ಕಾರಣಕ್ಕೆ ಲಕ್ಷದ್ವೀಪ ಸಂಸದ ಎನ್‌ಸಿಪಿಯ ಮೊಹಮ್ಮದ್‌ ಫೈಜಲ್‌ ಅವರನ್ನು ಇತ್ತೀಚೆಗೆ ಅನರ್ಹಗೊಳಿಸಲಾಗಿತ್ತು.

ಮಹಾರಾಷ್ಟ್ರದ ಎರಡು, ಅರುಣಾಚಲ ಪ್ರದೇಶ, ಜಾರ್ಖಂಡ್‌, ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನ ತಲಾ ಒಂದು ಕ್ಷೇತ್ರಗಳ ಉಪಚುನಾವಣೆ ನಡೆಯಲಿದೆ. ಈ ಎಲ್ಲ ಕ್ಷೇತ್ರಗಳಿಗೆ ಫೆಬ್ರುವರಿ 27ರಂದು ಮತದಾನ ಹಾಗೂ ಮತ ಎಣಿಕೆ ಮಾರ್ಚ್‌ 2ರಂದು ಜರುಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT