ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾವುತ್‌ಗೆ ಮತ್ತಷ್ಟು ಸಂಕಷ್ಟ: ಮಹಿಳೆಯೊಂದಿಗಿನ ಸಂಭಾಷಣೆ ಆಡಿಯೊ ವೈರಲ್, ಎಫ್‌ಐಆರ್

Last Updated 1 ಆಗಸ್ಟ್ 2022, 6:36 IST
ಅಕ್ಷರ ಗಾತ್ರ

ಮುಂಬೈ: ಪತ್ರಾ ಚಾಲ್‌ ಭೂ ಹಗರಣದಲ್ಲಿ ಸಾಕ್ಷಿಯಾಗಿರುವ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಮುಂಬೈ ಪೊಲೀಸರು ಶಿವಸೇನಾ ನಾಯಕ ಸಂಜಯ್ ರಾವತ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಹೀಗಾಗಿ ಪ್ರಕರಣದಲ್ಲಿ ರಾವುತ್‌ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

ವಕೋಲಾ ಠಾಣೆ ಪೊಲೀಸರು ಭಾನುವಾರ ರಾತ್ರಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 504 (ಶಾಂತಿ ಭಂಗ ತರುವ ಉದ್ದೇಶಿದಂದ ಪ್ರಚೋದಿಸುವುದು, ಅವಮಾನಿಸುವುದು), 506 (ಕ್ರಿಮಿನಲ್ ಬೆದರಿಕೆಗೆ), ಮತ್ತು 509 (ಮಹಿಳೆಯನ್ನು ಅವಮಾನ ಮಾಡುವ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ದೂರು ನೀಡಿರುವ ಮಹಿಳೆಯು ಪತ್ರಾ ಚಾಲ್‌ ಪ್ರಕರಣದಲ್ಲಿ ಸಾಕ್ಷಿಯಾಗಿದ್ದಾರೆ. ಇದೇ ಪತ್ರಾ ಚಾಲ್‌ ಪ್ರಕರಣದಲ್ಲಿ ರಾವುತ್‌ ಅವರನ್ನು ಸದ್ಯ ಜಾರಿನಿರ್ದೇಶನಾಲಯವು ಬಂಧಿಸಿದೆ.

ರಾವುತ್ ಮತ್ತು ಮಹಿಳೆಯ ನಡುವಿನ ಸಂಭಾಷಣೆಯ ಆಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮಗಳಲ್ಲಿ ಶನಿವಾರ ಸಂಜೆಯಿಂದ ವೈರಲ್ ಆಗಿತ್ತು. ಇದಕ್ಕೆ ಸಂಬಂಧಿಸಿದಂತೆ ವಕೋಲಾ ಠಾಣೆ ಪೊಲೀಸರು ಅದೇ ದಿನ ಎನ್‌ಸಿ (ನಾನ್ ಕಾಗ್ನಿಸಬಲ್ – ಗಂಭೀರ ಸ್ವರೂಪವಲ್ಲದ ಅಪರಾಧ) ಅನ್ನು ದಾಖಲಿಸಿದ್ದರು. ಅದನ್ನು ಭಾನುವಾರ ರಾತ್ರಿ ಎಫ್‌ಐಆರ್ (ಪ್ರಥಮ ಮಾಹಿತಿ ವರದಿ) ಆಗಿ ಪರಿವರ್ತಿಸಲಾಗಿದೆ.

ಆಡಿಯೊ ಬಗ್ಗೆ ಮುಂಬೈ ಪೊಲೀಸರಿಗೆ ತಿಳಿಸಿದ್ದ ಬಿಜೆಪಿ ನಾಯಕ ಡಾ. ಕಿರಿಟ್‌ ಸೋಮೈಯ ಅವರು ರಾವತ್ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದ್ದರು.

ಜುಲೈ 15 ರಂದು ತನಗೆ ಸಂದೇಶವೊಂದು ಬಂದಿದ್ದು, ಪ್ರಕರಣದ ಬಗ್ಗೆ ಮಾತನಾಡಿದರೆ ಅತ್ಯಾಚಾರ ಮತ್ತು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ಮಹಿಳೆ ಹೇಳಿದ್ದರು.

ನಂತರ, ಆಡಿಯೊ ಕ್ಲಿಪ್‌ವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಪುರುಷನೊಬ್ಬ ಮಹಿಳೆಯೊಬ್ಬರ ವಿರುದ್ಧ ಆಕ್ಷೇಪಾರ್ಹ ಮಾತುಗಳನ್ನಾಡಿರುವುದು ಬಹಿರಂಗವಾಗಿತ್ತು.

ಸಂಭಾಷಣೆಯಲ್ಲಿರುವ ಇಬ್ಬರು ವ್ಯಕ್ತಿಗಳು ರಾವತ್ ಮತ್ತು ದೂರುದಾರ ಮಹಿಳೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಪರಿಶೀಲನೆ ಕೈಗೊಂಡಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT