ಮಂಗಳವಾರ, ಆಗಸ್ಟ್ 3, 2021
21 °C
ನಿಯಮ ಬದಲಾವಣೆಗೆ ಬೇಡಿಕೆ

ಸರ್ಕಾರದ ಜತೆ ಟ್ವಿಟರ್‌ ಜಟಾಪಟಿ; ನೆಲದ ಕಾನೂನು ಪಾಲಿಸಲು ಕೇಂದ್ರದ ಖಡಕ್ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಭಾರತದಲ್ಲಿ ನಮ್ಮ ಸೇವೆಯನ್ನು ಮುಂದುವರಿಸಲು, ಇಲ್ಲಿನ ಕಾನೂನುಗಳನ್ನು ಪಾಲಿಸಲು ಬದ್ಧರಾಗಿದ್ದೇವೆ. ಆದರೆ, ಭಾರತದ ನೂತನ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಜಾರಿಗೆ ತರಲು ಪೊಲೀಸರು ಬೆದರಿಕೆ ತಂತ್ರದ ಮೊರೆ ಹೋಗುವುದು ಕಳವಳಕಾರಿ ಸಂಗತಿ’ ಎಂದು ಟ್ವಿಟರ್ ಆತಂಕ ವ್ಯಕ್ತಪಡಿಸಿದೆ.

‘ಸಂಸ್ಥೆಯು ನೇಮಕ ಮಾಡುವ ನೋಡಲ್ ಅಧಿಕಾರಿಯನ್ನೇ, ಡಿಜಿಟಲ್ ವೇದಿಕೆಯಲ್ಲಿ ಪ್ರಕಟವಾಗುವ ಎಲ್ಲಾ ವಿಷಯಕ್ಕೂ ಹೊಣೆಗಾರರನ್ನಾಗಿ ಮಾಡುವುದು ಅತ್ಯಂತ ಕಳವಳಕಾರಿ ಸಂಗತಿ. ನೂತನ ನಿಯಮಗಳ ಪ್ರಕಾರ ಎಲ್ಲಾ ವಿಷಯಗಳನ್ನು ಪೂರ್ವಭಾವಿಯಾಗಿ ಪರಿಶೀಲನೆಗೆ ಒಳಪಡಿಸಬೇಕು, ಅವುಗಳ ಮೇಲೆ ಕಣ್ಗಾವಲು ಇಡಬೇಕು. ಅಲ್ಲದೆ ನಮ್ಮ ಗ್ರಾಹಕರ ಸಂಪೂರ್ಣ ವಿವರವನ್ನು ಪಡೆದುಕೊಳ್ಳುವ ಅಧಿಕಾರವು, ಈ ನಿಯಮಗಳ ಮೂಲಕ ಸರ್ಕಾರಕ್ಕೆ ದೊರೆಯುವುದು ಆತಂಕದ ವಿಚಾರ. ಈ ಎಲ್ಲಾ ಅಪಾಯಕಾರಿ ಅಂಶಗಳು ಮುಕ್ತ ಮತ್ತು ಪ್ರಜಾಸತ್ತಾತ್ಮಕ ನೀತಿಗಳಿಗೆ ವ್ಯತಿರಿಕ್ತವಾಗಿವೆ’ ಎಂದು ಟ್ವಿಟರ್ ಹೇಳಿದೆ.

‘ಭಾರತದಲ್ಲಿನ ನಮ್ಮ ನೌಕರರ ಬಗ್ಗೆ ಆತಂಕ ಸೃಷ್ಟಿಯಾಗಿದೆ. ನಾವು ಸೇವೆ ನೀಡುತ್ತಿರುವ ಜನರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬರಲಿರುವ ಅಪಾಯವು ಕಳವಳಕ್ಕೆ ಕಾರಣವಾಗಿದೆ. ಭಾರತದಲ್ಲಿನ ನೂತನ ಮಾಹಿತಿ ತಂತ್ರಜ್ಞಾನ ನಿಯಮಗಳು ಆಕ್ರಮಣಕಾರಿಯಾಗಿವೆ’ ಎಂದು ಟ್ವಿಟರ್ ಹೇಳಿದೆ.

ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರವನ್ನು ಅವಹೇಳನ ಮಾಡಲು ಕಾಂಗ್ರೆಸ್ ಟೂಲ್‌ಕಿಟ್ ಸಿದ್ಧಪಡಿಸಿದೆ ಎಂದು ಬಿಜೆಪಿಯ ಸಂಬಿತ್ ಪಾತ್ರಾ ಅವರು ಟ್ವೀಟ್ ಮಾಡಿದ್ದ ದಾಖಲೆಗಳನ್ನು ಟ್ವಿಟರ್, ‘ತಿರುಚಿದ ಮಾಹಿತಿ’ ಎಂದು ಟ್ಯಾಗ್ ಮಾಡಿತ್ತು. ಈ ನಿರ್ಧಾರಕ್ಕೆ ಬರಲು ಆಧಾರಗಳೇನು ಎಂದು ದೆಹಲಿ ಪೊಲೀಸರು ಟ್ವಿಟರ್‌ ಸಿಬ್ಬಂದಿಗೆ ನೋಟಿಸ್ ನೀಡಿದ್ದರು. ನೋಟಿಸ್ ನೀಡಲು ಟ್ವಿಟರ್‌ನ ದೆಹಲಿಯಲ್ಲಿನ ಕಚೇರಿಗೆ ಭೇಟಿ ನೀಡಿದ್ದರು. ಇದರ ಬೆನ್ನಲ್ಲೇ ಟ್ವಿಟರ್‌ ಈ ಹೇಳಿಕೆ ನೀಡಿದೆ.

ಇದನ್ನೂ ಓದಿ: 

ಟ್ವಿಟರ್‌ಗೆ ಸರ್ಕಾರ ತಾಕೀತು
‘ಟ್ವಿಟರ್‌ ಗುರುವಾರ ನೀಡಿರುವ ಹೇಳಿಕೆಯನ್ನು ಭಾರತ ಸರ್ಕಾರವು ಖಂಡಿಸುತ್ತದೆ. ದೇಶದ ಜನರ ಅಭಿಪ್ರಾಯ ಪಡೆದು, ಕರಡು ನಿಯಮಗಳಿಗೆ ಬಂದ ಆಕ್ಷೇಪಗಳನ್ನು ಪರಿಗಣಿಸಿಯೇ ಈ ನಿಯಮಗಳನ್ನು ರೂಪಿಸಲಾಗಿದೆ. ಇಲ್ಲಿನ ಕಾನೂನುಗಳು ಹೇಗಿರಬೇಕು ಎಂಬುದನ್ನು ಇಲ್ಲಿನ ಸಾರ್ವಭೌಮ ಸರ್ಕಾರಕ್ಕೆ, ಕೇವಲ ಒಂದು ಖಾಸಗಿ ಕಂಪನಿ ಹೇಳುವುದರಲ್ಲಿ ಅರ್ಥವಿಲ್ಲ. ಸುಮ್ಮನೆ ಇಲ್ಲಿನ ಕಾನೂನನ್ನು ಪಾಲಿಸಿ’ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯವು ತಾಕೀತು ಮಾಡಿದೆ.

ಟ್ವಿಟರ್ ನೀಡಿರುವ ಹೇಳಿಕೆಗೆ ಪ್ರತಿಯಾಗಿ ಸಚಿವಾಲಯವು ಗುರುವಾರ ಸಂಜೆ ಹೇಳಿಕೆ ಬಿಡುಗಡೆ ಮಾಡಿದೆ. ‘ಭಾರತದಲ್ಲಿನ ನಿಯಮಗಳನ್ನು ಪಾಲಿಸುತ್ತೇವೆ ಎಂದು ಟ್ವಿಟರ್ ಹೇಳುತ್ತದೆ. ಆದರೆ ಇಲ್ಲಿನ ಕಾನೂನಿನ ಅನ್ವಯ ಸ್ಥಳೀಯ ನೋಡಲ್ ಅಧಿಕಾರಿಯನ್ನು ನೇಮಿಸಲು ನಿರಾಕರಿಸುತ್ತದೆ. ಭಾರತದಲ್ಲಿನ ಟ್ವಿಟರ್‌ ಬಳಕೆದಾರರ ಪ್ರತಿ ಕುಂದುಕೊರತೆಯನ್ನೂ ಅಮೆರಿಕದಲ್ಲಿ ಕೂತ ಅಧಿಕಾರಿ ಪರಿಶೀಲಿಸಬೇಕಿದೆ. ಇದರಲ್ಲಿ ಟ್ವಿಟರ್‌ನ ಸ್ವಹಿತಾಸಕ್ತಿ ಮಾತ್ರ ಇದೆ’ ಎಂದು ಸಚಿವಾಲಯವು ಆರೋಪಿಸಿದೆ.

‘ಟ್ವಿಟರ್ ಇಲ್ಲಿನ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದೆ. ಭಾರತ-ಚೀನಾ ಗಡಿ ಸಂಘರ್ಷದ ವೇಳೆ ಲಡಾಖ್‌ ಅನ್ನು ಚೀನಾದ್ದು ಎಂದು ಟ್ವಿಟರ್ ತೋರಿಸಿತ್ತು. ಜನವರಿ 26ರ ಹಿಂಸಾಚಾರ ನಡೆಯುವ ಮುನ್ನ, ಹಿಂಸಾಚಾರವನ್ನು ಉದ್ದೀಪಿಸುವ ಟ್ವೀಟ್‌ಗಳನ್ನು ಅಳಿಸಿ ಎಂಬ ಮನವಿಯನ್ನು ತಿರಸ್ಕರಿಸಿತ್ತು. ಹಿಂಸಾಚಾರದ ನಂತರ ಆ ಟ್ವೀಟ್‌ಗಳನ್ನು ಅಳಿಸಿತು. ಕೋವಿಡ್ ಲಸಿಕೆಯ ವಿರುದ್ಧ ಅಭಿಯಾನ ನಡೆಸಲು ಟ್ವಿಟರ್ ಬಳಕೆಯಾಯಿತು. ಇದನ್ನು ಟ್ವಿಟರ್‌ ತಡೆಯಲಿಲ್ಲ’ ಎಂದು ಸಚಿವಾಲಯವು ಆರೋಪಿಸಿದೆ.

‘ಮಾಹಿತಿ ಪಡೆಯುವ ವ್ಯವಸ್ಥೆ ಬೇಕು’
ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳ ಮೂಲ ಪತ್ತೆ ಮಾಡುವ ನಿಯಮಗಳ ವಿರುದ್ಧ ವಾಟ್ಸ್‌ಆ್ಯಪ್‌, ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದೆ. ಆದರೆ, ‘ದ್ವೇಷ-ಹಿಂಸಾಚಾರ ಉತ್ತೇಜಿಸುವ, ನೀಲಿಚಿತ್ರ, ಮಾದಕವಸ್ತು ಮತ್ತು ಅಕ್ರಮ ಶಸ್ತ್ರಾಸ್ತ್ರ ಖರೀದಿಯನ್ನು ಉತ್ತೇಜಿಸುವ ಸಂದೇಶಗಳ ಮೂಲ ಪತ್ತೆ ಮಾಡುವ ವ್ಯವಸ್ಥೆ ಇರಬೇಕು’ ಎಂದು ಸುಪ್ರೀಂ ಕೋರ್ಟ್‌ 2019ರಲ್ಲೇ ಹೇಳಿತ್ತು.

ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಮತ್ತು ಅನಿರುದ್ಧ ಬೋಸ್ ಅವರಿದ್ದ ಪೀಠವು ಫೇಸ್‌ಬುಕ್ ಮತ್ತು ಭಾರತ ಸರ್ಕಾರದ ನಡುವಣ ಪ್ರಕರಣವೊಂದರಲ್ಲಿ 2019ರ ಸೆಪ್ಟೆಂಬರ್ 24ರಂದು ಹೀಗೆ ಹೇಳಿತ್ತು.

‘ಆದರೆ ಇಂತಹ ಮಾಹಿತಿ ಪಡೆಯುವ ವ್ಯವಸ್ಥೆಯು ಸುಲಭವಾಗಿ ಲಭ್ಯವಿದ್ದರೆ, ಅದು ನಾಗರಿಕರ ಖಾಸಗಿತನದ ಮೂಲಭೂತ ಹಕ್ಕಿಗೆ ಧಕ್ಕೆಯಾಗುತ್ತದೆ. ಮಾಹಿತಿ ಪಡೆಯುವ ಇಂತಹ ಪ್ರಕ್ರಿಯೆಯನ್ನು ವಿಶೇಷ ಸಂದರ್ಭದಲ್ಲಷ್ಟೇ ನಡೆಸಬಹುದು. ಆದರೆ, ಯಾವ ವ್ಯಕ್ತಿಯ ಖಾಸಗಿತನಕ್ಕೂ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕಾದುದು ಅತ್ಯಗತ್ಯ’ ಎಂದೂ ಸುಪ್ರೀಂ ಕೋರ್ಟ್ ಪೀಠವು ಹೇಳಿತ್ತು.

‘ಅಗತ್ಯವಿದ್ದರೆ ಹಿಂದೆಸರಿಯುತ್ತೇವೆ’
‘ಮುಕ್ತ ಮತ್ತು ಸ್ವತಂತ್ರ ಅಂತರ್ಜಾಲ ಎಂಬುದು ಮೂಲಭೂತವಾದುದು. ಭಾರತವು ಇದನ್ನು ಪಾಲಿಸಿಕೊಂಡೇ ಬಂದಿದೆ. ಕಾನೂನಾತ್ಮಕ ಪ್ರಕ್ರಿಯೆಗಳನ್ನು ಗೂಗಲ್ ಗೌರವಿಸುತ್ತದೆ. ಆದರೆ ಇವುಗಳಿಂದ ಹಿಂದೆ ಸರಿಯುವ ಪ್ರಸಂಗ ಬಂದರೆ, ಹಿಂದೆ ಸರಿಯುತ್ತದೆ. ನಾವು ಜಗತ್ತಿನ ಎಲ್ಲೆಡೆ ಇಂತಹ ಸಮತೋಲನವನ್ನು ಕಾಪಾಡಿಕೊಂಡು ಬಂದಿದ್ದೇವೆ’ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.

ಇದನ್ನೂ ಓದಿ: ಕಚೇರಿಗೆ ಪೊಲೀಸರ ಭೇಟಿ; ಭಾರತದ ಸಿಬ್ಬಂದಿ ಸುರಕ್ಷತೆಯ ಬಗ್ಗೆ ಟ್ವಿಟರ್‌ ಕಳವಳ

ಸಾರ್ವಜನಿಕ ಸಂವಾದವನ್ನು ಮುಕ್ತ ಮತ್ತು ಸ್ವತಂತ್ರವಾಗಿ ಇರಿಸುವ ಸಲುವಾಗಿ ಈ ನಿಯಮಗಳಲ್ಲಿ ಕೆಲವು ಬದಲಾವಣೆ ಮಾಡುವುದನ್ನು ನಾವು ಬಯಸುತ್ತೇವೆ.
-ಟ್ವಿಟರ್

***

ಟ್ವಿಟರ್‌ ಒಂದು ಖಾಸಗಿ ಸಂಸ್ಥೆಯಷ್ಟೆ. ಸಾರ್ವಭೌಮ ಭಾರತದ ಸರ್ಕಾರವು ರಚಿಸುವ ಕಾನೂನು ಹೇಗಿರಬೇಕು ಎಂದು ಹೇಳುವ ಅಧಿಕಾರ ಟ್ವಿಟರ್‌ಗೆ ಇಲ್ಲ.
-ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು