ಗುರುವಾರ , ಜುಲೈ 7, 2022
23 °C

ಬಜೆಟ್‌ ಅಧಿವೇಶನ: 'ಪೆಗಾಸಸ್' ಖರೀದಿ, ಎಂಎಸ್‌ಪಿ ಬಗ್ಗೆ ಚರ್ಚೆಗೆ ಎಎಪಿ ಬೇಡಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಸೋಮವಾರ (ಜನವರಿ 31 ರಂದು) ನಡೆದ ಸರ್ವಪಕ್ಷಗಳ ಸಭೆಯಲ್ಲಿ ಪೆಗಾಸಸ್‌ ಬೇಹುಗಾರಿಕಾ ತಂತ್ರಾಂಶ ವಿಚಾರ ಪ್ರಸ್ತಾಪಿಸಿದ ಆಮ್‌ ಆದ್ಮಿ ಪಕ್ಷ (ಎಎಪಿ), ಸಂಸತ್‌ನಲ್ಲಿ ನಡೆಯುತ್ತಿರುವ ಕೇಂದ್ರ ಬಜೆಟ್‌ ಅಧಿವೇಶನದ ವೇಳೆ ಈ ಬಗ್ಗೆ ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿದೆ.

ಬಜೆಟ್‌ ಅಧಿವೇಶನದ ಕಾರ್ಯಸೂಚಿ ಕುರಿತು ಚರ್ಚಿಸಲು ರಾಜ್ಯಸಭೆ ಮುಖ್ಯಸ್ಥ ಎಂ. ವೆಂಕಯ್ಯ ನಾಯ್ಡು ಅವರು ವರ್ಚುವಲ್‌ ಆಗಿ ಸಭೆ ಕರೆದಿದ್ದರು.

2017ರಲ್ಲಿ ಇಸ್ರೇಲ್‌ ಜೊತೆ ಮಾಡಿಕೊಂಡ ರಕ್ಷಣಾ ಒಪ್ಪಂದದ ಭಾಗವಾಗಿ ಭಾರತವು ಪೆಗಾಸಸ್‌ ತಂತ್ರಾಂಶ ಖರೀದಿಸಿದೆ ಎಂದು 'ನ್ಯೂ ಯಾರ್ಕ್‌ ಟೈಮ್ಸ್‌' ವರದಿ ಪ್ರಕಟಿಸಿತ್ತು.ಅದಾದ ಬಳಿಕ ಪೆಗಾಸಸ್‌ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ.

'ಪೆಗಾಸಸ್‌' ಮಾತ್ರವಲ್ಲದೆ, ದೇಶದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಅವಮಾನಿಸುವ ಪ್ರಕರಣಗಳಿಗೆ ಕಡಿವಾಣ ಹಾಕಬೇಕು ಮತ್ತು ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿ ಪಡಿಸುವ ಕಾನೂನು ಜಾರಿಗೊಳಿಸಬೇಕು ಎಂದೂ ಎಎಪಿ ಆಗ್ರಹಿಸಿದೆ.

ಎಎಪಿಯ ರಾಜ್ಯಸಭೆ ಸದಸ್ಯ ಸಂಜಯ್‌ ಸಿಂಗ್‌ ಅವರು, ಜಿಎಸ್‌ಟಿ ಸಂಗ್ರಹದಲ್ಲಿ ದೆಹಲಿ ಸರ್ಕಾರಕ್ಕೆ ಬರಬೇಕಿರುವ ಪಾಲು ₹ 12,000 ಕೋಟಿ ಅನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಬಗ್ಗೆ ಟ್ವಿಟರ್‌ ಮೂಲಕ ಮಾಹಿತಿ ನೀಡಿರುವ ಸಂಜಯ್‌ ಸಿಂಗ್‌, 'ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸಮ್ಮುಖದಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಎಂಎಸ್‌ಪಿ ಖಾತರಿ ಕಾನೂನು, ಮಹಾತ್ಮ ಗಾಂಧೀಜಿ ಅವರನ್ನು ಅವಮಾನಿಸುವುದಕ್ಕೆ ತಡೆ, ಜಿಎಸ್‌ಟಿ ಹಂಚಿಕೆಯಲ್ಲಿ ದೆಹಲಿ ಸರ್ಕಾರಕ್ಕೆ ನೀಡಬೇಕಿರುವ ₹ 12,000 ಕೋಟಿ ಪಾವತಿಸುವುದು ಮತ್ತು ಪೆಗಾಸಸ್‌ ಕುರಿತು ಚರ್ಚೆ ನಡೆಸುವಂತೆ ಒತ್ತಾಯಿಸಲಾಗಿದೆ' ಎಂದು ತಿಳಿಸಿದ್ದಾರೆ.

ಇಂದಿನಿಂದ (ಜನವರಿ 31ರಿಂದ) ಆರಂಭವಾಗಿರುವ ಕೇಂದ್ರ ಬಜೆಟ್‌ ಅಧಿವೇಶನವು, ಏಪ್ರಿಲ್‌ 8ರ ವರೆಗೆ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತ ಮುಕ್ತಾಯದ ಬಳಿಕ ಫೆಬ್ರುವರಿ 12 ರಿಂದ ಮಾರ್ಚ್‌ 13ರ ವರೆಗೆ ವಿರಾಮವಿರಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು