ಶನಿವಾರ, ಸೆಪ್ಟೆಂಬರ್ 18, 2021
30 °C

ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರದಿಂದ ₹800 ಕೋಟಿ ಭರವಸೆ: ಸಿಎಂ ಕಚೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ಮೂರನೇ ಅಲೆ ಹಿನ್ನೆಲೆಯಲ್ಲಿ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಗಾಗಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ₹800 ಕೋಟಿ ನೆರವು ನೀಡುವುದಾಗಿ ಆರೋಗ್ಯ ಸಚಿವ ಮನ್ಸುಖ್‌ ಮಾಂಡವಿಯ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಭರವಸೆ ನೀಡಿದ್ದಾರೆ ಎಂದು ಮುಖ್ಯಮಂತ್ರಿಗಳ ಕಚೇರಿ ಟ್ವೀಟ್‌ ಮೂಲಕ ತಿಳಿಸಿದೆ. 

ಸಚಿವ ಸಂಪುಟ ರಚನೆಗಾಗಿ ಹೈಕಮಾಂಡ್‌ ಜೊತೆ ಚರ್ಚಿಸಲು ರಾಜ್ಯದ ಹೊಸ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ, ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಿದ್ದ ಬೊಮ್ಮಾಯಿ ಅವರು ಶನಿವಾರ ಆರೋಗ್ಯ ಸಚಿವರನ್ನು ಭೇಟಿಯಾಗಿದ್ದಾರೆ. 

ಆರೋಗ್ಯ ಸಚಿವರೊಂದಿಗಿನ ಇಂದಿನ ಭೇಟಿಯ ಕುರಿತು ಟ್ವೀಟ್‌ ಮೂಲಕ ಮಾಹಿತಿ ನೀಡಿರುವ ಮುಖ್ಯಮಂತ್ರಿಗಳ ಕಚೇರಿ,  ‘ಕೋವಿಡ್‌ ಮೂರನೇ ಅಲೆ ಹಿನ್ನೆಲೆಯಲ್ಲಿ ಐಸಿಯು, ವೈದ್ಯಕೀಯ ಆಮ್ಲಜನಕ ಮತ್ತು ಔಷಧಿಗಳನ್ನು ಒಳಗೊಂಡಂತೆ ಆರೋಗ್ಯ ಮೂಲಸೌಕರ್ಯ ವೃದ್ಧಿಗಾಗಿ ಕೇಂದ್ರ ಸರ್ಕಾರವು ರಾಜ್ಯಕ್ಕೆ ₹800 ಕೋಟಿ ನೆರವು ನೀಡಲಿರುವುದಾಗಿ ಆರೋಗ್ಯ ಸಚಿವ  ಮನ್ಸುಖ್‌ ಮಾಂಡಿವಿಯಾ ಅವರು ಭರವಸೆ ನೀಡಿದ್ದಾರೆ,‘ ಎಂದು ತಿಳಿಸಲಾಗಿದೆ. 

ರಾಜ್ಯಕ್ಕೆ ಹೆಚ್ಚುವರಿ ಲಸಿಕೆ ಪೂರೈಕೆ ಪೂರೈಸುವಂತೆ ಸಿಎಂ ಬೊಮ್ಮಾಯಿ ಅವರು ಕೇಂದ್ರ ಆರೋಗ್ಯ ಸಚಿವರನ್ನು ವಿನಂತಿಸಿದರು. 1 ಕೋಟಿ ಲಸಿಕೆಗಳನ್ನು ಪೂರೈಸುವ ಭರವಸೆಯನ್ನು ಕೇಂದ್ರ ಸಚಿವರು ನೀಡಿದ್ದಾರೆ. ರಾಜ್ಯವು ಪ್ರತಿ ದಿನ 2-3 ಲಕ್ಷ ಡೋಸ್ ಲಸಿಕೆಗಳನ್ನು ವಿತರಿಸಲು ಇದು ನೆರವಾಗಲಿದೆ ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ. 

ಮೂರನೇ ಅಲೆ ತಡೆಗಟ್ಟುವ ಸಲುವಾಗಿ ಕೇಂದ್ರ ಸರ್ಕಾರವೂ ಹೊಸ ಮಾರ್ಗಸೂಚಿಗಳನ್ನು ಶೀಘ್ರವೇ ಪ್ರಕಟಿಸುವುದಾಗಿ ಆರೋಗ್ಯ ಸಚಿವರು ತಿಳಿಸಿದ್ದಾರೆ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು