ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಹೆಣ್ಣಿನ ಮೇಲಿನ ದೌರ್ಜನ್ಯ ತಡೆಗೆ ಕ್ರಿಯಾಶೀಲರಾಗಿ...

Last Updated 24 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ಹಿಂಸೆಯು ಅತ್ಯಂತ ವ್ಯಾಪಕವಾಗಿದೆ. ಇದು ಮಾನವ ಹಕ್ಕು ಉಲ್ಲಂಘನೆಗಳಲ್ಲಿ ಅತ್ಯಂತ ಗಂಭೀರವಾದುದು. ಜಗತ್ತಿನಾದ್ಯಂತ ಮೂವರು ಮಹಿಳೆಯರಲ್ಲಿ ಒಬ್ಬ ಮಹಿಳೆಯು ಹಿಂಸೆಗೆ ಒಳಗಾಗುತ್ತಾಳೆ. ಕಳೆದ ಒಂದು ದಶಕದಲ್ಲಿ ಈ ಪ್ರಮಾಣವು ಬದಲಾಗಿದ್ದೇ ಇಲ್ಲ. ಪ್ರತಿ ಒಂದು ತಾಸಿನಲ್ಲಿ ಐವರು ಮಹಿಳೆಯರು ಅಥವಾ ಹೆಣ್ಣು ಮಕ್ಕಳು ತಮ್ಮ ಕುಟುಂಬದವರಿಂದಲೇ ಕೊಲೆಯಾಗುತ್ತಾರೆ ಎಂಬುದು ತೀರಾ ಇತ್ತೀನ ಅಂದಾಜು ಎಂದು ವಿಶ್ವ ಸಂಸ್ಥೆಯು ಹೇಳಿದೆ.

ಹೀಗಾಗಿಯೇ, ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲೆ ನಡೆಯುವ ಹಿಂಸೆ ತಡೆಗೆ ಜಾಗೃತಿ ಮೂಡಿಸುವುದಕ್ಕಾಗಿ ವಿಶ್ವ ಸಂಸ್ಥೆಯು ಅಭಿಯಾನವೊಂದನ್ನು ನಡೆಸಲಿದೆ. ಇದೇ ಶುಕ್ರವಾರದಿಂದ (ನವೆಂಬರ್‌ 25) ಆರಂಭವಾಗುವ ಅಭಿಯಾನವು ಡಿಸೆಂಬರ್‌ 10ರವರೆಗೆ ನಡೆಯಲಿದೆ. ‘ಒಟ್ಟಾಗಿ!ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲಿನ ಹಿಂಸೆ ತಡೆಗೆ ಕ್ರಿಯಾಶೀಲರಾಗಿ!’ ಎಂಬುದು ಈ ಅಭಿಯಾನದ ಘೋಷವಾಕ್ಯ. ಮಹಿಳಾಪರ ಹೋರಾಟಗಾರರು ಅಥವಾ ಮಾನವ ಹಕ್ಕುಗಳ ಕಾರ್ಯಕರ್ತರು ಮಾತ್ರವಲ್ಲ, ಜಗತ್ತಿನ ಎಲ್ಲರೂ ತಮ್ಮ ಸುತ್ತಲಿನ ಮಹಿಳೆಯರು, ಹೆಣ್ಣು ಮಕ್ಕಳ ಮೇಲೆ ನಡೆಯುವ ಹಿಂಸೆಯನ್ನು ತಡೆಯಲು ಕ್ರಿಯಾಶೀಲರಾಗಬೇಕು ಎಂಬುದು ಈ ಘೋಷ ವಾಕ್ಯದ ಅರ್ಥ.

‘ಐದು ವರ್ಷಗಳ ಹಿಂದೆ ಜಗತ್ತಿನಾದ್ಯಂತ ಆರಂಭವಾದ ‘ಮೀಟೂ’ ಅಭಿಯಾನವು ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಕುರಿತ ಕಿಡಿ ಹೊತ್ತಿಸಿತ್ತು. ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಕ್ರಮ ಕೈಗೊಳ್ಳಬೇಕಾದ ತುರ್ತು ಎಷ್ಟಿದೆ ಎಂಬುದರತ್ತ ಬೆಳಕು ಚೆಲ್ಲಿತ್ತು. ಜಗತ್ತಿನ ವಿವಿಧ ಭಾಗಗಳಲ್ಲಿ ಇದೇ ರೀತಿಯ ಹಲವು ಅಭಿಯಾನಗಳೂ ನಡೆದಿವೆ. ಹೆಣ್ಣಿನ ಮೇಲಿನ ದೌರ್ಜನ್ಯವನ್ನು ತಡೆಯಬೇಕು ಎಂಬುದು ಹಿಂದೆಂದಿಗಿಂತಲೂ ಈಗ ಮುಖ್ಯ ರಾಜಕೀಯ ಕಾರ್ಯಸೂಚಿಯೂ ಆಗಿದೆ. ಜಗತ್ತಿನ ವಿವಿಧ ಭಾಗಗಳಲ್ಲಿ ಕಾನೂನು, ನೀತಿ, ಅಗತ್ಯ ಸೇವೆಗಳು, ತಡೆ ಕಾರ್ಯತಂತ್ರಗಳು ಬಲಗೊಳ್ಳುತ್ತಿವೆ ಎಂಬುದು ಆಶಾದಾಯಕ ಬೆಳವಣಿಗೆ’ ಎಂಬ ಅಭಿಮತವನ್ನೂ ವಿಶ್ವ ಸಂಸ್ಥೆಯ ಈ ಅಭಿಯಾನವು ಹೊಂದಿದೆ.

ಮಹಿಳಾ ಸುರಕ್ಷತೆಯ ವಿಚಾರದಲ್ಲಿ ಕಳವಳಕಾರಿ ಅಂಶಗಳೂ ಕಂಡು ಬರುತ್ತಿವೆ. ಮಾನವ ಹಕ್ಕು ವಿರೋಧಿ ಚಳವಳಿಗಳು ನಡೆಯುತ್ತಿವೆ. ಮಹಿಳಾ ಹಕ್ಕುಗಳ ಸಂಘಟನೆಗಳು ಹಾಗೂ ಪ್ರತಿಪಾದಕರು, ಕಾರ್ಯಕರ್ತರನ್ನು ದಮನ ಮಾಡುವ ಪ್ರವೃತ್ತಿಯೂ ವರದಿಯಾಗಿವೆ. ‘ಮಹಿಳಾ ಹಕ್ಕುಗಳ ರಕ್ಷಕರು ದಮನಕ್ಕೆ ಒಳಗಾಗುತ್ತಿದ್ದಾರೆ. ಮಾನವ ಹಕ್ಕುಗಳನ್ನು ಯಾವುದೇ ತಾರತಮ್ಯ ಇಲ್ಲದೆ ಸಂರಕ್ಷಿಸಲಾಗುವುದು ಎಂದು ಸರ್ಕಾರಗಳು ಭರವಸೆ ಕೊಟ್ಟಿದ್ದರೂ ದೌರ್ಜನ್ಯ ನಡೆಯುತ್ತಿದೆ’ ಎಂದು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ರಕ್ಷಣೆ ವಿಶೇಷ ಪ್ರತಿನಿಧಿ ಹೇಳಿದ್ದಾರೆ.

‘ಮಹಿಳೆಯರ ಹತ್ಯೆಯನ್ನು ಮುಚ್ಚಿಡಲು ಹಲವು ದೇಶಗಳ ಸರ್ಕಾರಗಳು ಬಲವನ್ನು ಕೂಡ ಉಪಯೋಗಿಸಿವೆ. ಕೆಲವೆಡೆ ಮಹಿಳಾ ಹಕ್ಕುಗಳ ಸಂಘಟನೆಗಳ ಕಾನೂನುಬದ್ಧ ಸ್ಥಾನವನ್ನೇ ರದ್ದುಪಡಿಸಲಾಗಿದೆ. ಮಹಿಳಾ ಹಕ್ಕುಗಳ ಮುಂಚೂಣಿ ಕಾರ್ಯಕರ್ತರ ಹತ್ಯೆ ಪ್ರಕರಣಗಳು ಹೆಚ್ಚಾಗಿರುವ ಆತಂಕಕಾರಿ ಸನ್ನಿವೇಶವೂ ಇದೆ. ಸಾಮಾಜಿಕ ಜಾಲ ತಾಣಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ದಮನಿಸಲು ಆನ್‌ಲೈನ್‌ ದೌರ್ಜನ್ಯವು ಎಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಈಗ ನಡೆಯುತ್ತಿದೆ’ ಎಂಬ ಅಭಿಪ್ರಾಯವನ್ನೂ ಅಭಿಯಾನವು ಹೊಂದಿದೆ.

ಸಮಸ್ಯೆಯ ಮೂಲ ಸರಿಪಡಿಸಬೇಕು

ಇಂತಹ ದೌರ್ಜನ್ಯಗಳ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಅದು ಶಿಕ್ಷಣದ ಮೂಲಕ ಮತ್ತು ಸಮಾಜದ ವಿವಿಧ ಸ್ತರಗಳನ್ನು ತಲುಪುವ ಕಾರ್ಯಕ್ರಮಗಳ ಮೂಲಕ ಆಗುಮಾಡಬೇಕು. ಮತ್ತೆ, ಈ ರೀತಿಯ ದೌರ್ಜನ್ಯ ಎಸಗುವವರಿಗೆ ದೊಡ್ಡಮಟ್ಟದ ಶಿಕ್ಷೆಯಾಗಬೇಕು. ಏಕೆಂದರೆ, ಏನು ಮಾಡಿದರೂ ಶಿಕ್ಷೆ ಆಗುವುದಿಲ್ಲ ಎಂಬ ನಿರಾಳ ಭಾವ ದೌರ್ಜನ್ಯ ಎಸಗಿದವರಲ್ಲಿ ಬಹುತೇಕ ಇರುತ್ತದೆ. ಇಂತಹ ದೌರ್ಜನ್ಯಗಳು ನಡೆದಾಗ, ಆ ದೌರ್ಜನ್ಯದ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತೇವೆ. ಆದರೆ, ಆ ದೌರ್ಜನ್ಯಕ್ಕೆ ಕಾರಣವಾಗುವ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಲು ಯತ್ನಿಸುವುದಿಲ್ಲ. ಹೆಣ್ಣುಮಕ್ಕಳನ್ನು ಅರಿಯುವ ದಾರಿಗಳನ್ನು ವಿರೂಪಗೊಳಿಸಿದ್ದೇವೆ. ಧಾರ್ಮಿಕ ಪರಿಸರ ಮತ್ತು ರಾಜಕೀಯ ಪರಿಸರದಲ್ಲಿರುವ ವಾತಾವರಣವೂ ಇಂತಹ ಕೃತ್ಯಗಳಿಗೆ ಕಾರಣವಾಗುತ್ತವೆ. ಧರ್ಮದ ಬಗ್ಗೆ ಅಪಾರವಾದ ಗೌರವ ಬೆಳೆಸಿಕೊಂಡಾಗ, ಆ ಧರ್ಮದ ಮುಸುಕಿನಲ್ಲಿ ನಡೆಯುವ ಅನ್ಯಾಯದ ಬಗ್ಗೆ ಗಮನ ನೀಡುವುದಿಲ್ಲ. ಯಾವುದೇ ವ್ಯವಸ್ಥೆಯನ್ನು ಪರೀಕ್ಷೆಗೊಳಪಡಿಸದೆ ಒಪ್ಪಿಕೊಂಡಾಗ ಅದರ ರೋಗಗಳು ಉಲ್ಬಣಗೊಳ್ಳುತ್ತವೆ. ಅದರ ಮುಸುಕಿನಲ್ಲಿ ನಡೆಯುವ ಅನ್ಯಾಯದ ಕಡೆ ಗಮನ ಕೊಡುವುದಿಲ್ಲ. ಹಾಗಾಗಿ ಇಂತಹ ಕೃತ್ಯಗಳು ನಡೆದಾಗ, ಆ ಕೃತ್ಯಗಳ ಹಿನ್ನೆಲೆಯಲ್ಲಿ ಇರುವ ರೋಗಗ್ರಸ್ತ ಮನಸ್ಥಿತಿಯನ್ನು ಪತ್ತೆ ಮಾಡಬೇಕು. ನಿರಂತರವಾಗಿ ಎಚ್ಚರಗೊಳ್ಳದೆ ಬೇರೆ ದಾರಿಯಿಲ್ಲ. ಇಲ್ಲವಾದರೆ ಇನ್ನಷ್ಟು ಹೆಣ್ಣು ಮಕ್ಕಳು ಬಲಿಯಾಗುವರು. ಅವರಿಗೆ ಸೂಕ್ತ ರಕ್ಷಣೆ ಒದಗಿಸಿ ಲೈಂಗಿಕ ಹಿಂಸೆಗಳನ್ನು ಕೊನೆಗಾಣಿಸಬೇಕಿದೆ. ಅವರಿಗೆ ಸಂಪೂರ್ಣ ಘನತೆಯ ಬದುಕನ್ನು ಒದಗಿಸುವುದು ಮಾನವ ಜನಾಂಗದ ಕರ್ತವ್ಯ

ವಿಕ್ರಮ ವಿಸಾಜಿ,ಕವಿ, ಉಪನ್ಯಾಸಕ

***

ಸಣ್ಣ ದೌರ್ಜನ್ಯವನ್ನೂ ಗಂಭೀರವಾಗಿ ಪರಿಗಣಿಸಬೇಕು

ಇಂತಹ ಸನ್ನಿವೇಶ ಎದುರಿಸುವಲ್ಲಿ ಹಲವು ಸ್ತರದ ಬದಲಾವಣೆ ಅಗತ್ಯ. ಮಕ್ಕಳಲ್ಲಿ ಸಮಾನ ಮನಃಸ್ಥಿತಿ, ಅಂದರೆ ಹೆಣ್ಣು ಮತ್ತು ಗಂಡು ಒಂದೇ ಹಾಗೂ ಇಬ್ಬರೂ ಸಮಾನರು ಎಂಬ ಅರಿವು ಮೂಡಿಸಿದರೆ, ಆ ಹಂತದಲ್ಲಿ ಹಲ್ಲೆ–ದೌರ್ಜನ್ಯಗಳು ನಡೆಯುವುದನ್ನು ತಡೆಯಬಹುದು. ಇದರ ಜತೆಯಲ್ಲಿ ಸಣ್ಣಮಟ್ಟದ ದೌರ್ಜನ್ಯವನ್ನೂ ಗಂಭೀರವಾಗಿ ಪರಿಗಣಿಸುವ ಮನಃಸ್ಥಿತಿ ಮೂಡಿಸಬೇಕು. ಬಹುತೇಕ ಸಂದರ್ಭದಲ್ಲಿ ಸಾರ್ವಜನಿಕವಾಗಿ, ಕೆಲಸದ ಸ್ಥಳಗಳಲ್ಲಿ ನಡೆಯುವ ಸಣ್ಣಮಟ್ಟದ ದೌರ್ಜನ್ಯಗಳು ವರದಿಯಾಗುವುದೇ ಇಲ್ಲ. ಏಕೆಂದರೆ ಅಂತಹ ದೌರ್ಜನ್ಯಗಳ ಬಗ್ಗೆ ಅಧಿಕಾರಿಗಳಿಗೆ ಅಥವಾ ಸಂಬಂಧಪಟ್ಟವರಿಗೆ ದೂರು ನೀಡಿದಾಗ ಅದನ್ನು ಅವರು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಹೀಗಾಗಿ ನಮಗೆ ಯಾವುದೇ ನೆರವು ಸಿಗುವುದಿಲ್ಲ ಎಂಬ ಕಾರಣಕ್ಕೆ ಹಲವರು ದೂರು ನೀಡುವುದೇ ಇಲ್ಲ. ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರು ಮಾತ್ರವಲ್ಲ, ಪುರುಷರು ಸಹ ತಾವು ದುರ್ಬಲವಾಗಿದ್ದಾಗ ಇಂತಹ ಅಸಹಾಯಕತೆಯಲ್ಲಿ ಸಿಲುಕುತ್ತಾರೆ.ಇಂತಹ ಸ್ಥಿತಿಯಲ್ಲಿ ಬದಲಾವಣೆ ತರಬೇಕು. ಅತ್ಯಂತ ಸಣ್ಣ ಪ್ರಮಾಣದ ದೌರ್ಜನ್ಯವೂ ಗಂಭೀರವಾದುದು ಎಂದು ಅಧಿಕಾರದಲ್ಲಿ ಇರುವವರು ಪರಿಗಣಿಸುವಂತಾಗಬೇಕು. ಆಗ ಇಂತಹ ದೌರ್ಜನ್ಯಗಳನ್ನು ತಡೆಯಬಹುದು.

ಎಂ.ಡಿ.ಪಲ್ಲವಿ,ಗಾಯಕಿ ಮತ್ತು ನಟಿ

***

ಶ್ರೇಷ್ಠತೆಯ ವ್ಯಸನವನ್ನು ಚಿವುಟಬೇಕು

ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ವಿರುದ್ಧದ ಶೋಷಣೆಗೆ ತಡೆಯೊಡ್ಡುವ ಕೆಲಸ ಮಕ್ಕಳ ಬಾಲ್ಯದಿಂದಲೇ ಆರಂಭವಾಗಬೇಕು. ಮನೆ ಹಾಗೂ ಶಾಲೆಗಳು ಇದರಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ.ಪುರುಷ ಪ್ರಧಾನ ಗುಣವು ಆರಂಭದಿಂದಲೇ ಮನಸ್ಸಿನಲ್ಲಿ ಅಡಿಯಿಟ್ಟಿರುತ್ತದೆ. ಲಿಂಗ ಶ್ರೇಷ್ಠತೆಯ ಈ ವ್ಯಸನವನ್ನು ಮಕ್ಕಳ ಬಾಲ್ಯದಲ್ಲಿಯೇ ಚಿವುಟುವ ಕೆಲಸ ಆಗಬೇಕು.ಲಿಂಗ ತಾರತಮ್ಯ ನಿವಾರಣೆಯ ಕುರಿತಂತೆ ಮಕ್ಕಳ ಮನಸ್ಸಿನಲ್ಲಿ ಪರಿವರ್ತನೆ ತರಬೇಕು. ಗಂಡು–ಹೆಣ್ಣು ಸಮಾನರು ಎಂಬ ಅಂಶವನ್ನು ಅತ್ಯಂತ ಪ್ರಜ್ಞಾಪೂರ್ವಕವಾಗಿ ಮಕ್ಕಳಲ್ಲಿ ಬೆಳೆಸಬೇಕು. ಯಾವ ಹೆಣ್ಣುಮಗುವನ್ನೂ ಅಪಮಾನಿಸುವ ಹಕ್ಕು ತನಗಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಶಿಕ್ಷಣ ಮತ್ತು ಕಲಿಕೆಯ ಭಾಗವಾಗಿ ಇವೆಲ್ಲವೂ ಆಗಬೇಕು.

ಆರ್ಥಿಕವಾಗಿ ದುರ್ಬಲರಾಗಿರುವವರು ಹಾಗೂ ಜಾತಿ ಪದ್ಧತಿಯಲ್ಲಿ ತಳಭಾಗದಲ್ಲಿರುವ ಜನರೇ ಸಾಮಾನ್ಯವಾಗಿ ಹೆಚ್ಚಾಗಿ ಶೋಷಣೆಗೆ ಒಳಗಾಗುತ್ತಿದ್ದಾರೆ. ‘ನಾವು ನಿಮ್ಮ ಜೊತೆಗಿದ್ದೇವೆ’ ಎಂಬ ಆತ್ಮಸ್ಥೈರ್ಯವನ್ನು ಅವರಲ್ಲಿ ತುಂಬಬೇಕಿದೆ. ಅವರ ಹಕ್ಕುಗಳ ರಕ್ಷಣೆಗೆ ಗಟ್ಟಿ ದನಿಯಲ್ಲಿ ಮಾತನಾಡಬೇಕಿದೆ. ಅನ್ಯಾಯವನ್ನು ಮುಲಾಜಿಲ್ಲದೆ ಖಂಡಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು.

ಹೆಣ್ಣು ಮಕ್ಕಳಿಗೆ ವೈಯಕ್ತಿಕ ಹಕ್ಕುಗಳಿವೆ ಎಂಬುದರ ಅರಿವು ಎಲ್ಲರಿಗೂ ಇರಬೇಕಾಗಿದೆ. ಅವರ ಎಳೆಯ ಬಾಲ್ಯವನ್ನು ಗೌರವಿಸಬೇಕು. ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆಗ್ರಾಮಪಂಚಾಯಿತಿ ಮಟ್ಟದಲ್ಲಿ ನಡೆಯುವ ಗ್ರಾಮಸಭೆಗಳಿಗೆ ಕಾನೂನಿನ ಮಾನ್ಯತೆ ದೊರಕಿಸಿಕೊಡುವ ಅಗತ್ಯವಿದೆ. ಈ ಸಭೆಗಳು ಬಹುತೇಕ ಯಾಂತ್ರಿಕವಾಗಿ ಮುಕ್ತಾಯವಾಗುತ್ತವೆ. ಈ ಸಭೆಯಲ್ಲಿ ಜಿಲ್ಲಾ, ತಾಲ್ಲೂಕು ಮಟ್ಟದ ಮಕ್ಕಳ ಹಕ್ಕುಗಳ ರಕ್ಷಣೆ ಅಧಿಕಾರಿಗಳು, ನ್ಯಾಯಾಧೀಶರು,ಪೊಲೀಸ್ ಅಧಿಕಾರಿಗಳು ಇರುವಂತೆ ನೋಡಿಕೊಂಡರೆ ಅರ್ಥಪೂರ್ಣವಾಗುತ್ತದೆ. ಮಕ್ಕಳ ರಕ್ಷಣೆಗೆ ಬಲ ಬರುತ್ತದೆ.

ಜಿ.ಟಿ. ಸತ್ಯನಾರಾಯಣ,ಸಾಮಾಜಿಕ ಹೋರಾಟಗಾರರು, ತುಮರಿ

***

ಅರಿವು ಮನೆಯಿಂದಲೇ ಮೂಡಬೇಕು

ನಾವು ಹೆಣ್ಣುಮಕ್ಕಳನ್ನು ಹೇಗೆ ನಡೆಸಿಕೊಳ್ಳಬೇಕು ಎಂದು ಮಕ್ಕಳಿಗೆ ಹೇಳಿಕೊಡುವ ಮೂಲಕ ಇಂತಹ ದೌರ್ಜನ್ಯಗಳನ್ನು ತಡೆಯಬಹುದು. ಏಕೆಂದರೆ, ನಾನು ನನ್ನ ಪತ್ನಿಯನ್ನು ಹೇಗೆ ನಡೆಸಿಕೊಳ್ಳುತ್ತೇನೆ ಎಂಬುದನ್ನು ನನ್ನ ಮಗ ನೋಡುತ್ತಾನೆ ಮತ್ತು ಅದೇ ರೀತಿ ಹೆಣ್ಣುಮಕ್ಕಳನ್ನು ನಡೆಸಿಕೊಳ್ಳುತ್ತಾನೆ. ಹೀಗಾಗಿ ನಮ್ಮ ವರ್ತನೆ ಸರಿಯಾಗಿದ್ದರೆ, ಮುಂದಿನ ಪೀಳಿಗೆಯು ಸರಿಯಾಗುತ್ತದೆ. ಶಾಲಾ–ಕಾಲೇಜಿನಲ್ಲಿ ಈ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳಿರಬೇಕು. ಆದರೆ, ಅದಕ್ಕಿಂತಲೂ ಮೊದಲೇ ಮನೆಯಿಂದಲೇ ಪೋಷಕರ ನಡವಳಿಕೆಯ ಮೂಲಕ ಇಂತಹ ಅರಿವು ಮಕ್ಕಳಿಗೆ ಮೂಡಬೇಕು. ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳನ್ನು ನಡೆಸಿಕೊಳ್ಳುವ ನಮ್ಮ ಮನಸ್ಥಿತಿಯು ಬದಲಾಗಬೇಕು. ಉದಾಹರಣೆಗೆ, ಗಂಡು ಮಕ್ಕಳು ಪ್ರವಾಸಕ್ಕೆ ಹೋಗುವಾಗ ನಾವು ನೀಡುವ ಎಚ್ಚರಿಕೆಯ ವಿಧಾನವೇ ಬೇರೆ. ಹೆಣ್ಣುಮಕ್ಕಳಿಗೆ ನೀಡುವ ಎಚ್ಚರಿಕೆಯ ವಿಧಾನವೇ ಬೇರೆ. ಇಂಥ ಪೂರ್ವಾಗ್ರಹದ ದೃಷ್ಟಿಕೋನ ಮೊದಲು ಬದಲಾಗಬೇಕು. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮಹಿಳೆಯ ಮೇಲಿನ ಹಿಂಸಾತ್ಮಕ ಕೃತ್ಯ ನಡೆದಾಗ, ಸಂಜೆ ಆರು ಗಂಟೆಯ ನಂತರ ಅಲ್ಲಿಗೆ ಹೋಗಬೇಡಿ ಎಂದು ಸರ್ಕಾರ ಹೇಳಿತು. ಆದರೆ, ಸರ್ಕಾರವು ಅಭಯ ಮೂಡಿಸುವ ಕೆಲಸ ಮಾಡಬೇಕಿತ್ತು, ಬದಲಿಗೆ ಈ ರೀತಿ ನಿರ್ಬಂಧ ಹೇರುವ ಕ್ರಮವನ್ನಲ್ಲ. ಇಂತಹ ಕೃತ್ಯಗಳು ನಡೆದಾಗಲೆಲ್ಲಾ ಸಂತ್ರಸ್ತೆಯ ಉಡುಗೆ ಮತ್ತು ವರ್ತನೆಯ ಬಗ್ಗೆಯೇ ಪ್ರಶ್ನೆ ಎತ್ತಲಾಗುತ್ತದೆ. ಆ ರೀತಿ ಉಡುಗೆ ತೊಡಬಾರದಿತ್ತು, ಅಷ್ಟು ಹೊತ್ತಿನಲ್ಲಿ ಅಲ್ಲಿಗೆ ಏಕೆ ಹೋಗಬೇಕಿತ್ತು ಎಂಬ ಬೀಸು ಹೇಳಿಕೆಗಳು ಬರುತ್ತವೆ. ಸಚಿವರೇ ಅಂತಹ ಹೇಳಿಕೆ ನೀಡುತ್ತಾರೆ. ಇದರ ಬದಲಿಗೆ, ಹೆಣ್ಣು ಮಕ್ಕಳನ್ನು ಹೇಗೆ ನಡೆಸಿಕೊಳ್ಳಬೇಕು ಎಂದು ಗಂಡುಮಕ್ಕಳಿಗೆ ಹೇಳಿಕೊಡಬೇಕು. ಹೀಗೆ ಮನೆಯೊಳಗೆ, ಸಾಮಾಜಿಕವಾಗಿ ನೈತಿಕ ಪ್ರಜ್ಞೆ ಮೂಡಿಸುವ ಕೆಲಸವಾಗಬೇಕು. ಸರ್ಕಾರವೂ ಕಠಿಣ ಕಾನೂನಿನ ಕ್ರಮದ ಅಭಯ ನೀಡಬೇಕು.

ಶಿವಕುಮಾರ್ ಮಾವಲಿ,ಸಾಹಿತಿ, ಉಪನ್ಯಾಸಕ

***

ಸ್ವಯಂರಕ್ಷಣೆ ತರಬೇತಿ ಕಡ್ಡಾಯವಾಗಲಿ

ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ನಿಗ್ರಹ ಪ್ರತಿಯೊಂದು ಮನೆಯಿಂದಲೂ ಆರಂಭವಾಗಬೇಕಿದೆ. ಎಲ್ಲ ಕುಟುಂಬದಲ್ಲಿ ಹೆಣ್ಣುಮಕ್ಕಳನ್ನು ಗೌರವದಿಂದ, ಸಮಾನವಾಗಿ ನಡೆಸಿಕೊಳ್ಳುವ ಆರೋಗ್ಯಕರ ವಾತಾವರಣ ಏರ್ಪಡಬೇಕಿರುವುದು ಎಲ್ಲಕ್ಕಿಂತ ಮುಖ್ಯ. ಕಡ್ಡಾಯ ಶಿಕ್ಷಣದ ಜೊತೆಗೆ ಸ್ವಯಂರಕ್ಷಣೆ ತರಬೇತಿಯನ್ನೂ ಕಡ್ಡಾಯಗೊಳಿಸಬೇಕಿದೆ. ಇದು ಶಾಲಾ, ಕಾಲೇಜು ಹಂತದಿಂದಲೇ ಆರಂಭವಾಗಬೇಕು

l→ಸ್ವಯಂರಕ್ಷಣೆ ಕುರಿತಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮತ್ತು ಪಾಠಗಳನ್ನು ಕಡ್ಡಾಯವಾಗಿ ಅಳವಡಿಸುವುದು

l→ಲಿಂಗಾಧಾರಿತ ದೌರ್ಜನ್ಯಗಳು, ಪುರುಷ ಪ್ರಧಾನ ಸಮಾಜದಿಂದ ಉಂಟಾಗಿರುವ ಸಮಸ್ಯೆಗಳು, ಲಿಂಗ ಸಮಾನತೆಯ ಅವಶ್ಯಕತೆ ಕುರಿತ ವಿಶೇಷಪಾಠಗಳನ್ನು ಹೆಣ್ಣುಮಕ್ಕಳ ಜೊತೆಜೊತೆಗೆ ಗಂಡುಮಕ್ಕಳೂ ಕಲಿಯುವಂತೆ ಕಡ್ಡಾಯಗೊಳಿಸುವುದು

l→ಕೌಟುಂಬಿಕ ಅಥವಾ ಸಾರ್ವಜನಿಕ ವಲಯಗಳಲ್ಲಿ ಯಾವುದೇ ಲೈಂಗಿಕ ಕಿರುಕುಳವಾದಲ್ಲಿ, ಅಹವಾಲು ಸಲ್ಲಿಸಲು ದಿನದ ಯಾವುದೇ ಸಮಯದಲ್ಲೂ ಲಭ್ಯವಿರುವಂತೆ ಮಹಿಳಾ ಸಹಾಯವಾಣಿ, ಮಕ್ಕಳ ಸಹಾಯವಾಣಿ ಮತ್ತು ಪೊಲೀಸ್ ಸೇವೆ ಕ್ರಿಯಾಶೀಲವಾಗಿರುವಂತೆ ನೋಡಿಕೊಳ್ಳುವುದು ಮತ್ತು ಹೆಣ್ಣುಮಕ್ಕಳಿಗೆ ಈ ಸೌಲಭ್ಯವನ್ನು ಬಳಸಿಕೊಳ್ಳುವ ಕುರಿತು ತರಬೇತಿ ಕೊಡುವುದು

l→ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಹೆಣ್ಣುಮಕ್ಕಳು ತಮಗಾದ ಯಾವುದೇ ಲೈಂಗಿಕ ಕಿರುಕುಳವನ್ನು ಮುಜುಗರವಿಲ್ಲದೆ ಹೇಳಿಕೊಳ್ಳಬಹುದಾದ ವಿಶ್ವಾಸಾರ್ಹ ಸಮಾಲೋಚನಾ ಸಮಿತಿಯೊಂದನ್ನು ರಚಿಸಿಕೊಳ್ಳುವುದು

l→ಲೈಂಗಿಕ ದೌರ್ಜನ್ಯ/ಕಿರುಕುಳ ಎಸಗಿದ ಅಪರಾಧಿಗಳಿಗೆ ಕಠಿಣ ಶಿಕ್ಷೆ ಮತ್ತು ಅವಶ್ಯಕ ಸಮಾಲೋಚನೆ ಸಿಗುವಂಥ ವ್ಯವಸ್ಥೆ ರೂಪಿಸುವುದು

l→ಪ್ರತೀ ಕುಟುಂಬದಲ್ಲೂ, ಶಾಲಾ ಕಾಲೇಜುಗಳಲ್ಲೂ ಗಂಡುಮಕ್ಕಳಿಗೆ ಲಿಂಗ ಸಮಾನತೆ ಕುರಿತ ವಿಶೇಷ ಶಿಕ್ಷಣ ಕೊಡಬೇಕಾದದ್ದು ಅತ್ಯಗತ್ಯ. ಸಣ್ಣ ವಯಸ್ಸಿನಿಂದಲೇ ಮೌಲಿಕ, ನೈತಿಕ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಮಕ್ಕಳಿಗೆ ಕಲಿಸಿಕೊಡಬೇಕಾದದ್ದು ಪ್ರತಿಯೊಂದು ಸರ್ಕಾರದ ಮತ್ತು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಬೇಕು

ಡಾ.ಚರಿತಾ ಮೈಸೂರು,ಕಲಾವಿದೆ, ಉಪನ್ಯಾಸಕಿ

***

ಠಾಣೆಗಳಲ್ಲಿ ಆಗಬೇಕಿದೆ ಪರಿವರ್ತನೆ

‘ಒಂದು ಸಮಾಜದಲ್ಲಿರುವ ಸ್ತ್ರೀ ಪುರುಷ ಸಂಬಂಧ ಎಷ್ಟು ಆರೋಗ್ಯಕರವಾಗಿದೆ ಎನ್ನುವುದು, ಮಾನವನು ತನ್ನ ಪಶು ಮನಃಸ್ಥಿತಿಯಿಂದ ಮನುಷ್ಯನಾಗುವತ್ತ ಎಷ್ಟು ಸಾಗಿದ್ದಾನೆ ಎನ್ನುವುದರ ಅಳತೆಗೋಲಾಗಿದೆ’ ಎಂದು ಕಾರ್ಲ್‌ಮಾರ್ಕ್ಸ್ ಹೇಳುತ್ತಾರೆ.ಬಹಳಷ್ಟು ಮನೆಗಳಲ್ಲಿ ಇಂದಿಗೂ ಕೌಟುಂಬಿಕ ದೌರ್ಜನ್ಯ ಎನ್ನುವುದು ನಿರಂತರವಾಗಿ ನಡೆಯುತ್ತಲೇ ಇದೆ.

ಕಳೆದ ವಾರವಷ್ಟೇ, ಕೌಟುಂಬಿಕ ದೌರ್ಜನ್ಯ ಅನುಭವಿಸಿದ ಹೆಣ್ಣೊಬ್ಬಳಿಗೆ ಬೆಂಬಲವಾಗಿ ಪೋಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದೆ. ಅಲ್ಲಿನ ಸಬ್‌ ಇನ್‌ಸ್ಪೆಕ್ಟರ್, ದೈಹಿಕ ದೌರ್ಜನ್ಯಕ್ಕೆ ಒಳಗಾದ ವಿಡಿಯೊ ನೋಡಿದ ಮೇಲೆ, ಹೆಣ್ಣು ಹೇಗೆ ಪತಿಯನ್ನು ಒಲಿಸಿಕೊಳ್ಳಬೇಕು ಮತ್ತು ತಾನು ಹೇಗೆಲ್ಲಾ ಒಲಿಸಿಕೊಳ್ಳುತ್ತೇನೆ ಎನ್ನುವುದರ ಬಗ್ಗೆ ಅಸಹ್ಯವಾದ ಸುದೀರ್ಘ ಭಾಷಣ ಮಾಡಿದ್ದರು.

ಪೊಲೀಸ್ ಠಾಣೆಗೆ ದೂರು ನೀಡಲು ಹೋಗುವ ಮಹಿಳೆಯರಿಗೆ ಸೂಕ್ತ ವಾತಾವರಣಕಲ್ಪಿಸಲಾಗಿದೆಯೇ ಎಂದು ಪ್ರಶ್ನಿಸಿಕೊಳ್ಳಬೇಕಿದೆ.ಈ ದಿಸೆಯಲ್ಲಿ ಬದಲಾವಣೆ ಆಗಬೇಕಿದೆ. ಮಹಿಳಾ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಈ ಕುರಿತು ಕಡ್ಡಾಯ ತರಬೇತಿ ಮತ್ತು ಸ್ಪಷ್ಟ ನಿರ್ದೇಶನ ನೀಡಬೇಕಿದೆ. ದೌರ್ಜನ್ಯದಿಂದ ರಕ್ಷಣೆ ನೀಡಬೇಕಾದ ಠಾಣೆಗಳಿಂದಲೇ ಈ ಪರಿವರ್ತನೆ ಆರಂಭವಾಗಬೇಕು.

ಆಯಿಶಾ ಫರ್ಝಾನ ಯು.ಟಿ,ನಾಗರಿಕ ಸೇವಾ ಪರೀಕ್ಷೆಗಳ ತರಬೇತುದಾರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT