ಸೋಮವಾರ, ಸೆಪ್ಟೆಂಬರ್ 26, 2022
24 °C

ಲೈಂಗಿಕ ಕಿರುಕುಳಕ್ಕೆ ಮಹಿಳೆ ವಿರೋಧ: ಚಲಿಸುತ್ತಿದ್ದ ಟ್ರಕ್‌ನಿಂದ ಹೊರದಬ್ಬಿದ ಚಾಲಕ

ಪಿಟಿಐ Updated:

ಅಕ್ಷರ ಗಾತ್ರ : | |

ಮಥುರಾ: ಲೈಂಗಿಕ ಕಿರುಕುಳವನ್ನು ವಿರೋಧಿಸಿದ ಮಹಿಳೆಯನ್ನು ಟ್ರಕ್‌ನಿಂದ ಹೊರದಬ್ಬಿರುವ ಕ್ರೂರ ಘಟನೆ ಉತ್ತರ ಪ್ರದೇಶದ ಮಥುರಾ ಬಳಿಯ ದೆಹಲಿ–ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಘಟನೆ ಸಂಬಂಧ ಟ್ರಕ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಶನಿವಾರ ಈ ಘಟನೆ ನಡೆದಿದೆ. ಹೆದ್ದಾರಿ ಬಳಿ ನಿಂತಿದ್ದ 27 ವರ್ಷದ ಮಹಿಳೆಯನ್ನು ಲಿಫ್ಟ್ ಕೊಡುವುದಾಗಿ ಕಂಟೇನರ್ ಟ್ರಕ್ ಹತ್ತಿಸಿಕೊಂಡ ಚಾಲಕ, ದಾರಿ ಮಧ್ಯೆ ಆಕೆಗೆ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದಾನೆ. ಅದಕ್ಕೆ ಮಹಿಳೆ ಪ್ರತಿರೋಧ ಒಡ್ಡಿದಾಗ ಕಬ್ಬಿಣದ ಸರಳಿನಿಂದ ಹಲ್ಲೆ ನಡೆಸಿ, ಟ್ರಕ್‌ನಿಂದ ಹೊರಗೆ ದಬ್ಬಿದ್ದಾನೆ ಎಂದು ಎಸ್‌ಪಿ ಶ್ರೀಷ್ ಚಂದ್ರ ಹೇಳಿದ್ದಾರೆ.

ಟ್ರಕ್ ಹತ್ತಿಸಿಕೊಂಡ ಕೆಲವೇ ನಿಮಿಷಗಳಲ್ಲಿ ಚಾಲಕ ಕಿರುಕುಳ ನೀಡಲು ಆರಂಭಿಸಿದ್ದಾನೆ. ಅದನ್ನು ವಿರೋಧಿಸಿದ ಮಹಿಳೆ ನೆರವಿಗಾಗಿ ಕೂಗಿಕೊಂಡಿದ್ದಾಳೆ. ಇದನ್ನು ಗಮನಿಸಿದ ಇತರ ವಾಹನಗಳ ಚಾಲಕರು ಟ್ರಕ್ ಅನ್ನು ಹಿಂಬಾಲಿಸಿದ್ದಾರೆ. ಇದರಿಂದ ವಿಚಲಿತನಾದ ಟ್ರಕ್ ಚಾಲಕ, ಮಹಿಳೆಯ ತಲೆಗೆ ರಾಡ್‌ನಿಂದ ಹೊಡೆದು,ಚಲಿಸುತ್ತಿದ್ದ ಟ್ರಕ್‌ನಿಂದ ಹೊರದಬ್ಬಿದ್ದಾನೆ ಎಂದೂ ಎಸ್‌ಪಿ ಹೇಳಿದ್ದಾರೆ.

ಸ್ಥಳೀಯ ಜನರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ, ಟ್ರಕ್ ಅನ್ನು ಪತ್ತೆ ಮಾಡಿ, ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.

ಸಂತ್ರಸ್ತೆ ತಂದೆಯ ದೂರಿನ ಮೇರೆಗೆ ಟ್ರಕ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮಹಿಳೆಯು ಫಾರ್ಮಾಸಿಟಿಕಲ್ ಕಂಪನಿಯನ್ನು ಕೆಲಸ ಮಾಡುತ್ತಿದ್ದು, ಔಷಧಿ ಡೆಲಿವರಿ ಮಾಡಿದ ಬಳಿಕ ವಾಪಸ್ ತೆರಳಲು ವಾಹನಕ್ಕಾಗಿ ಕಾಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಂಟೇನರ್ ಟ್ರಕ್, ನೋಯ್ಡಾದಿಂದ ತಮಿಳುನಾಡಿಗೆ ಮೋಟಾರ್‌ಸೈಕಲ್ ಕೊಂಡೊಯ್ಯುತ್ತಿತ್ತು ಎಂದೂ ಅವರು ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು