ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 45ರಷ್ಟು ನೀರಷ್ಟೇ ಸಂಸ್ಕರಣೆ; ತ್ಯಾಜ್ಯ ನೀರು ಸಂಸ್ಕರಣೆಯಲ್ಲಿ ಕರ್ನಾಟಕ ಹಿಂದೆ

Last Updated 28 ಫೆಬ್ರುವರಿ 2021, 21:13 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದ ವಿವಿಧ ಭಾಗಗಳಲ್ಲಿ ವ್ಯಾಪಕವಾಗಿ ನಗರೀಕರಣ ಪ್ರಕ್ರಿಯೆ ನಡೆಯುತ್ತಿರುವುರಿಂದ ಪ್ರತಿನಿತ್ಯ 335.65 ಕೋಟಿ ಲೀಟರ್‌ನಷ್ಟು ಕೊಳಚೆ ನೀರು ಉತ್ಪಾದನೆಯಾಗುತ್ತಿದ್ದು, ಅದರಲ್ಲಿ 151.35 ಕೋಟಿ ಲೀಟರ್‌ನಷ್ಟು (ಶೇ 45) ಮಾತ್ರ ಸಂಸ್ಕರಣೆಯಾಗುತ್ತಿದೆ.

‘224.2 ಕೋಟಿ ಲೀಟರ್‌ ಕೊಳಚೆ ನೀರನ್ನು ಸಂಸ್ಕರಿಸುವ ಉದ್ದೇಶದಿಂದ ರಾಜ್ಯದಲ್ಲಿ 125 ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗಿದ್ದರೂ, ಪ್ರತಿದಿನ 151.35 ಕೋಟಿ ಲೀಟರ್‌ನಷ್ಟು ನೀರು ಮಾತ್ರ ಸಂಸ್ಕರಣೆಯಾಗುತ್ತಿದೆ. ಉಳಿದ 184.3 ಕೋಟಿ ಲೀಟರ್‌ ನೀರು ಸಂಸ್ಕರಣೆಯಾಗುತ್ತಿಲ್ಲ’ ಎಂದು‘ಕೇಂದ್ರ ಮೇಲ್ವಿಚಾರಣಾ ಸಮಿತಿ’ಯು ವರದಿ ನೀಡಿದೆ. ನದಿಗಳ ಮಾಲಿನ್ಯದ ಕುರಿತು ಅಧ್ಯಯನ ನಡೆಸಿ ಪರಿಹಾರ ಸೂಚಿಸಲು ರಾಷ್ಟ್ರೀಯ ಹಸಿರು ಪೀಠವು ಈ ಸಮಿತಿಯನ್ನು ಸ್ಥಾಪಿಸಿದೆ.

ಬೆಂಗಳೂರಿನಲ್ಲಿ ಪ್ರತಿನಿತ್ಯ ಒಳಚರಂಡಿಯ 42.75 ಕೋಟಿ ಲೀಟರ್‌ ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡಲಾಗುತ್ತಿದೆ. ಉಳಿದ ನಗರಗಳಲ್ಲಿ 10.65 ಕೋಟಿ ಲೀಟರ್‌ ನೀರು ಮರುಬಳಕೆಯಾಗುತ್ತಿದೆ. ಸಂಸ್ಕರಿತ ನೀರನ್ನು ಕೆರೆ ತುಂಬಿಸಲು, ಕೈಗಾರಿಕಾ ಅಗತ್ಯಗಳು, ತೋಟಗಾರಿಕೆ ವಿಭಾಗ ಹಾಗೂ ಉದ್ಯಾನಗಳಲ್ಲಿ ಬಳಸಲಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ರಾಜ್ಯದಲ್ಲಿ 3,503 ಕೈಗಾರಿಕೆಗಳಿಂದ 133.9 ಕೋಟಿ ಲೀಟರ್‌ನಷ್ಟು ನೀರು ಕಲುಷಿತವಾಗುತ್ತಿದೆ. ಇವುಗಳಲ್ಲಿ 3,289 ಕೈಗಾರಿಕೆಗಳು ಮಲಿನ ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿವೆ. ಇವುಗಳ ಸಂಸ್ಕರಣಾ ಸಾಮರ್ಥ್ಯ 453.2 ಕೋಟಿ ಲೀಟರ್‌ನಷ್ಟಿದೆ.

ರಾಜ್ಯದ 17 ನದಿ ಪ್ರದೇಶಗಳನ್ನು ‘ಕಲುಷಿತ’ ಎಂದು ಪರಿಗಣಿಸಲಾಗಿದೆ. ಇವುಗಳಲ್ಲಿ ತುಂಗಭದ್ರಾ ನದಿಯನ್ನು ಪುನರುಜ್ಜೀವನಕ್ಕೆ ಮಾದರಿಯಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.

ಕಲುಷಿತ ನೀರು ಸಂಸ್ಕರಣಾ ಘಟಕಗಳ ಗರಿಷ್ಠ ಸಾಮರ್ಥ್ಯ ಬಳಕೆಯಲ್ಲಿ ಆಂಧ್ರಪ್ರದೇಶ ಹಾಗೂ ದೆಹಲಿ (ಶೇ 90) ಮೊದಲ ಸ್ಥಾನದಲ್ಲಿವೆ. ನಂತರದ ಸ್ಥಾನದಲ್ಲಿ ಕ್ರಮವಾಗಿ ತೆಲಂಗಾಣ (ಶೇ 82) ಹಾಗೂ ಪಂಜಾಬ್‌ (ಶೇ 80) ಇವೆ.

ಈಗ ಇರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳು ಪರಿಸರ ನಿಯಮಗಳಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂಬುದನ್ನು ಖಾತರಿಪಡಿಸುವುದರ ಜತೆಗೆ, ಅವುಗಳ ಗರಿಷ್ಠ ಸಾಮರ್ಥ್ಯವನ್ನು ಬಳಸುವ ಕಡೆಗೆ ಗಮನ ಹರಿಸಬೇಕು. ಘಟಕಗಳ ಗರಿಷ್ಠ ಸಾಮರ್ಥ್ಯದ ಬಳಕೆ ಏಕೆ ಆಗುತ್ತಿಲ್ಲ ಅಥವಾ ಏಕೆ ನಿಷ್ಕ್ರಿಯವಾಗಿವೆ ಎಂಬುದನ್ನು ಸುಮಾರು ಮೂರು ತಿಂಗಳ ಕಾಲಮಿತಿಯೊಳಗೆ ತಿಳಿದುಕೊಳ್ಳಬೇಕು. ಇದರಿಂದ ಘಟಕಗಳನ್ನು ಮೇಲ್ದರ್ಜೆಗೆ ಏರಿಸುವ ಯೋಜನೆ ರೂಪಿಸಲು ಸಹಾಯಕವಾಗುತ್ತದೆ’ ಎಂದು ವರದಿಯಲ್ಲಿ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT