ಸೋಮವಾರ, ಜುಲೈ 4, 2022
21 °C
ಪ್ರಧಾನಿ ಮೋದಿ ಲೋಕಸಭಾ ಕ್ಷೇತ್ರದಲ್ಲಿ ಏಳನೇ ಹಂತದಲ್ಲಿ ಮತದಾನ

ಎಲ್ಲರ ಕಣ್ಣು ವಾರಾಣಸಿಯತ್ತ: ಪ್ರಧಾನಿ ಮೋದಿ ಲೋಕಸಭಾ ಕ್ಷೇತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾರಾಣಸಿ (ಪಿಟಿಐ): ಉತ್ತರ ಪ್ರದೇಶ ವಿಧಾನಸಭೆಯ ಮತದಾನವು ಕೊನೆಯ ಹಂತಕ್ಕೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿರುವ ವಾರಾಣಸಿಯತ್ತ ಈಗ ಎಲ್ಲರ ಕಣ್ಣು ನೆಟ್ಟಿದೆ. ಮೋದಿ ಮತ್ತು ಎಲ್ಲ ಪಕ್ಷಗಳ ಪ್ರಮುಖ ನಾಯಕರು ಅಲ್ಲಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ.

ಮತದಾನದ ಎಲ್ಲ ಹಂತಗಳಲ್ಲಿಯೂ ಮೋದಿ ಅವರು ಉತ್ತರ ಪ್ರದೇಶಕ್ಕೆ ಹಲವು ಬಾರಿ ಭೇಟಿ ಕೊಟ್ಟಿದ್ದಾರೆ. ಶುಕ್ರವಾರ ಮತ್ತು ಶನಿವಾರ ಅವರು ವಾರಾಣಸಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ವಾರಾಣಸಿ ಜಿಲ್ಲೆಯ ಎಂಟು ಕ್ಷೇತ್ರಗಳಿಗೆ ಇದೇ 7ರಂದು ಮತದಾನ ನಡೆಯಲಿದೆ. 

ಮೋದಿ ಅವರು ವಾರಾಣಸಿಯ ವಿವಿಧ ಸ್ಥಳಗಳಲ್ಲಿ ಶನಿವಾರ ರೋಡ್‌ಶೋ ನಡೆಸಲಿದ್ದಾರೆ. ಖಜುರಿ ಗ್ರಾಮದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಬಿಜೆಪಿ ವಾರಾಣಸಿ ಘಟಕದ ಅಧ್ಯಕ್ಷ ವಿದ್ಯಾಸಾಗರ್‌ ರಾಯ್‌ ಹೇಳಿದ್ದಾರೆ. 

ಕಂಟೋನ್ಮೆಂಟ್‌, ವಾರಾಣಸಿ ಉತ್ತರ ಮತ್ತು ವಾರಾಣಸಿ ದಕ್ಷಿಣ ಕ್ಷೇತ್ರಗಳಲ್ಲಿ ಮೋದಿ ಅವರು ರೋಡ್‌ಶೋ ನಡೆಸಲಿದ್ದಾರೆ. ಕಾಶಿ ವಿಶ್ವನಾಥ ದೇವಾಲಯಕ್ಕೂ ಅವರು ಭೇಟಿ ನೀಡಲಿದ್ದಾರೆ. 

ಬಿಜೆಪಿಯೇತರ ಪಕ್ಷಗಳ ಪ್ರಮುಖ ನಾಯಕರು ಕೂಡ ಜಿಲ್ಲೆಯಲ್ಲಿ ಪ್ರಚಾರ ನಡೆಸಲಿದ್ದಾರೆ. ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಯಾದವ್‌ ಮತ್ತು ಎಸ್‌ಪಿಯ ಮಿತ್ರ ಪಕ್ಷ ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್‌ ಚೌಧರಿ ಅವರು ಜಂಟಿ ರ‍್ಯಾಲಿ ನಡೆಸಲಿದ್ದಾರೆ. ಎಸ್‌ಪಿ ನೇತೃತ್ವದ ಮೈತ್ರಿಕೂಟದಲ್ಲಿ ಇರುವ ಎಲ್ಲ ಪಕ್ಷಗಳ ಮುಖಂಡರು ರ‍್ಯಾಲಿಯಲ್ಲಿ ಭಾಗಿಯಾಗಲಿದ್ದಾರೆ. 

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯನ್ನು ಭಾರಿ ಅಂತರದಿಂದ ಸೋಲಿಸಿರುವ ಮಮತಾ ಅವರು ಲೋಕಸಭೆಯ ಮುಂದಿನ ಚುನಾವಣೆಯ ಹೊತ್ತಿಗೆ ಬಿಜೆಪಿ ವಿರೋಧಿ ಪಕ್ಷಗಳ ಮೈತ್ರಿಕೂಟದ ನಾಯಕತ್ವ ವಹಿಸಿಕೊಳ್ಳುವ ಹುರುಪಿನಲ್ಲಿ ಇದ್ದಾರೆ. ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ವಾರಾಣಸಿ ಮತ್ತು ಸಮೀಪದ ಪ್ರದೇಶಗಳಲ್ಲಿ ಈಗಾಗಲೇ ಪ್ರಚಾರ ನಡೆಸಿದ್ದಾರೆ. 

ಎಎಪಿ ನಾಯಕ ಅರವಿಂದ ಕೇಜ್ರಿವಾಲ್‌ ಅವರು ವಾರಾಣಸಿಗೆ ಭೇಟಿ ನೀಡಲಿದ್ದಾರೆಯೇ ಎಂಬುದು ತಿಳಿದುಬಂದಿಲ್ಲ. ಎಎಪಿ ಸಂಸದ ಸಂಜಯ್‌ ಸಿಂಗ್‌ ಅವರು ವಾರಾಣಸಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಕೆಲವು ದಿನಗಳಿಂದ ಪ್ರಚಾರ ನಡೆಸುತ್ತಿದ್ದಾರೆ. ಬಹಿರಂಗ ಪ್ರಚಾರಕ್ಕೆ ಶನಿವಾರ ಕೊನೆಯ ದಿನವಾಗಿದೆ. 

ಬಿಜೆಪಿ ಮತ್ತು ಎಸ್‌ಪಿ ನಡುವೆ ತೀವ್ರ ಸ್ಪರ್ಧೆ ಇದೆ ಎಂದು ಹೇಳಲಾಗುತ್ತಿದೆ. ಕೊನೆಯ ಸುತ್ತಿನಲ್ಲಿ 54 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. 2017ರ ವಿಧಾನಸಭಾ ಚುನಾವಣೆಯಲ್ಲಿ ‘ಮೋದಿ ಅಲೆ’ಯ ಬೆನ್ನೇರಿ ಇಲ್ಲಿನ ಎಲ್ಲ ಎಂಟು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳೂ ಗೆದ್ದಿದ್ದವು. ನೆರೆಯ ಜಿಲ್ಲೆಗಳಲ್ಲಿಯೂ ಹೆಚ್ಚಿನ ಕ್ಷೇತ್ರಗಳು ಬಿಜೆಪಿಗೆ ಸಿಕ್ಕಿದ್ದವು. 

ಈ ಬಾರಿ ಚಿತ್ರಣ ಬದಲಾದಂತೆ ಕಾಣಿಸುತ್ತಿದೆ. ಮುಸ್ಲಿಮರು ಎಸ್‌ಪಿ ಪ‍ರವಾಗಿ ಧ್ರುವೀಕರಣಗೊಂಡಿದ್ದಾರೆ. ಜಾತಿ ಸಮೀಕರಣದಲ್ಲಿ ಬದಲಾವಣೆ ಕಾಣಿಸಿದೆ. ಹಾಗಾಗಿ ಈ ಬಾರಿಯ ಫಲಿತಾಂಶ ಏಕಪಕ್ಷೀಯವಾಗಿರಬಹುದು ಎಂದು ಹೇಳಲು ಸಾಧ್ಯವಿಲ್ಲ.

ಬಿಜೆಪಿಯ ಮಿತ್ರ ಪಕ್ಷಗಳಾದ ಅಪ್ನಾ ದಳ (ಸೋನೆಲಾಲ್‌) ಮತ್ತು ನಿಷಾದ್‌ ಪಕ್ಷ, ಎಸ್‌ಪಿಯ ಮಿತ್ರ ಪಕ್ಷಗಳಾದ ಅಪ್ನಾ ದಳ (ಕೆ) ಮತ್ತು ಓಂಪ್ರಕಾಶ್‌ ರಾಜ್‌ಭರ್‌ ಅವರ ಸುಹೇಲ್‌ದೇವ್‌ ಭಾರತೀಯ ಸಮಾಜ ಪಕ್ಷ (ಎಸ್‌ಬಿಎಸ್‌ಪಿ) ಈ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರ ವಹಿಸಲಿವೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಜತೆಗಿದ್ದ ಎಸ್‌ಬಿಎಸ್‌ಪಿ, ಈ ಬಾರಿ ಅಖಿಲೇಶ್‌ ಅವರ ಜತೆಗಿದೆ. ಹಿಂದುಳಿದ ವರ್ಗಗಳ ನಾಯಕರಾದ ಸ್ವಾಮಿ ಪ್ರಸಾದ್‌ ಮೌರ್ಯ, ದಾರಾ ಸಿಂಗ್‌ ಚೌಹಾನ್‌ ಮತ್ತು ಬಿಜೆಪಿಯಿಂದ ಎಸ್‌ಪಿ ಸೇರಿರುವ ಇತರ ಮುಖಂಡರು ಈ ಪ್ರದೇಶದಲ್ಲಿ ಪ್ರಭಾವಿಗಳೇ ಆಗಿದ್ದಾರೆ. 

ಇಲ್ಲಿನ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಿದೆ. ಒಂದನ್ನು ಅಪ್ನಾ ದಳ (ಎಸ್‌)ಗೆ ಬಿಟ್ಟು ಕೊಟ್ಟಿದೆ. ಎಸ್‌ಪಿ ನಾಲ್ಕರಲ್ಲಿ ಸ್ಪರ್ಧಿಸಿದ್ದರೆ, ಅಪ್ನಾ ದಳ (ಕೆ) ಮತ್ತು ಎಸ್‌ಬಿಎಸ್‌ಪಿಗೆ ತಲಾ ಎರಡು ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ.

ಮತದಾರರ ಸಂಖ್ಯೆ

3.25 ಲಕ್ಷ

ವೈಶ್ಯರು

3 ಲಕ್ಷ

ಮುಸ್ಲಿಮರು

2.5 ಲಕ್ಷ

ಬ್ರಾಹ್ಮಣರು

2 ಲಕ್ಷ

ಕುರ್ಮಿ

1.5 ಲಕ್ಷ

ಯಾದವ

1 ಲಕ್ಷ

80,000

ದಲಿತ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು