ಮಂಗಳವಾರ, ಡಿಸೆಂಬರ್ 7, 2021
27 °C
ಅಪ್ನಾ ದಳ, ಆರ್‌ಎಲ್‌ಡಿ ಬಳಿಕ ಜನವಾದಿ ಸೋಷಿಯಲಿಸ್ಟ್‌ ಪಕ್ಷದ ಜತೆಗೂ ಮೈತ್ರಿ ಮಾಡಿಕೊಂಡ ಅಖಿಲೇಶ್‌

Election 2021 | ಜಾತಿ ಆಧಾರಿತ ಸಣ್ಣ ಪಕ್ಷಗಳ ಜತೆ ಎಸ್‌ಪಿ ನಂಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ: ಜಾತಿ ಆಧಾರಿತವಾಗಿರುವ ಸಣ್ಣ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳುವ ಕಾರ್ಯತಂತ್ರವನ್ನು ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್‌ ಯಾದವ್‌ ಇನ್ನಷ್ಟು ವಿಸ್ತರಿಸಿಕೊಂಡಿದ್ದಾರೆ. ಜನವಾದಿ ಸೋಷಿಯಲಿಸ್ಟ್‌ ಪಕ್ಷದ (ಜೆಎಸ್‌ಪಿ) ಅಧ್ಯಕ್ಷ ಸಂಜಯ್‌ ಚೌಹಾಣ್‌ ಜತೆಗೆ ಅಖಿಲೇಶ್‌ ಅವರು ಗುರುವಾರ ವೇದಿಕೆ ಹಂಚಿಕೊಂಡಿದ್ದಾರೆ. ಜೆಎಸ್‌ಪಿಗೆ ಚೌಹಾಣ್‌ ಸಮುದಾಯದ (ಇತರ ಹಿಂದುಳಿದ ವರ್ಗಗಳಲ್ಲಿ ಬರುವ ಜಾತಿ) ಬೆಂಬಲ ಇದೆ. ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ಈ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 

ಹಿಂದುಳಿದ ವರ್ಗದ ಜಾತಿಗಳೆಲ್ಲವೂ ಒಂದಾಗಿ ಬಿಜೆಪಿಯನ್ನು ಅಧಿಕಾರದಿಂದ ಉಚ್ಚಾಟಿಸಬೇಕು ಎಂದು ಅಖಿಲೇಶ್‌ ಅವರು ಎಸ್‌ಪಿ–ಜೆಎಸ್‌ಪಿ ಜಂಟಿ ಸಭೆಯನ್ನು ಉದ್ದೇಶಿಸಿ ಹೇಳಿದರು. 

ವಿಮಾನ ನಿಲ್ದಾಣ ನಿರ್ಮಾಣದ ಹೊಸ ಯೋಜನೆ ಕೈಗೆತ್ತಿಕೊಂಡ ಕೇಂದ್ರ ಸರ್ಕಾರವನ್ನು ಅಖಿಲೇಶ್‌ ಟೀಕಿಸಿದ್ದಾರೆ. ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಿ ಅದನ್ನು ಖಾಸಗಿ ಸಂಸ್ಥೆಗಳಿಗೆ ಮಾರುವುದೇ ಸರ್ಕಾರದ ಉದ್ದೇಶ ಎಂದು ಅವರು ಹೇಳಿದರು. 

‘ಓಂ ಪ್ರಕಾಶ್‌ ರಾಜ್‌ಭರ್‌ ಅವರ ಸುಹೇಲ್‌ದೇವ್‌ ಭಾರತೀಯ ಸಮಾಜ ಪಕ್ಷ ಮತ್ತು ಕೃಷ್ಣಾ ಪಟೇಲ್‌ ಅವರ ಅಪ್ನಾ ದಳದ ಜತೆಗೆ ಈಗಾಗಲೇ ಮೈತ್ರಿ ಮಾಡಿಕೊಳ್ಳಲಾಗಿದೆ. ಈಗ, ಚೌಹಾಣ್‌ ಸಮುದಾಯವೂ ನಮ್ಮ ಜತೆಗೆ ಬಂದಿದೆ. ಇಷ್ಟೊಂದು ಪಕ್ಷಗಳ ಮೈತ್ರಿಕೂಟವನ್ನು ಯಾರೂ ಸೋಲಿಸಲಾಗದು’ ಎಂದು ಅಖಿಲೇಶ್‌ ಹೇಳಿದರು. 

‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ನಮ್ಮ ಸಮುದಾಯವು ನಿರ್ಧಾರ ಮಾಡಿದೆ. ಬಿಜೆಪಿಗೆ ನಾವು ಪಾಠ ಕಲಿಸಲೇಬೇಕು. ನಮ್ಮ ಸಮುದಾಯದ ಅಭಿವೃದ್ಧಿಯು ಬಿಜೆಪಿಗೆ ಬೇಕಾಗಿಲ್ಲ’ ಎಂದು ಸಂಜಯ್‌ ಚೌಹಾಣ್‌ ಹೇಳಿದರು. 

ಉತ್ತರ ಪ್ರದೇಶದ ಪೂರ್ವ ಭಾಗದ 10ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಚೌಹಾಣ್‌ ಸಮುದಾಯದ ಮತಗಳ ಪ್ರಮಾಣ ಗಣನೀಯವಾಗಿದೆ. 

ಮೌರ್ಯ ಮತ್ತು ಸೈನಿ ಸಮುದಾಯಗಳ ಬೆಂಬಲ ಹೊಂದಿರುವ ಮಹಾನ್‌ ದಳದ ಜತೆಗೂ ಅಖಿಲೇಶ್‌ ಮಾತುಕತೆ ಆರಂಭಿಸಿದ್ದಾರೆ. 

ಈ ಮಧ್ಯೆ, ರಘುರಾಜ್‌ ಪ್ರತಾಪ್‌ ಸಿಂಗ್‌ ಅಲಿಯಾಸ್‌ ರಾಜಾ ಭಯ್ಯಾ ಅವರು ಎಸ್‌ಪಿ ನಾಯಕ ಮುಲಾಯಂ ಸಿಂಗ್‌ ಯಾದವ್‌ ಅವರನ್ನು ಗುರುವಾರ ಭೇಟಿಯಾದರು. ಸುಮಾರು 30 ನಿಮಿಷ ಅವರಿಬ್ಬರು ಚರ್ಚಿಸಿದ್ದಾರೆ. ಇದೊಂದು ಸೌಜನ್ಯದ ಭೇಟಿ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ರಾಜಾ ಭಯ್ಯಾ ಅವರು ತಿಳಿಸಿದರು. ಇಬ್ಬರು ನಾಯಕರು ಮೈತ್ರಿಯ ಬಗ್ಗೆ ಚರ್ಚಿಸಿದ್ದಾರೆ ಎಂದು ಮೂಲಗಳು ಹೇಳಿವೆ. 

ರಾಜಾ ಭಯ್ಯಾ ಅವರು ಠಾಕೂರ್‌ ಸಮುದಾಯದ ಪ್ರಭಾವಿ ನಾಯಕ. ಉತ್ತರ ಪ್ರದೇಶದ ಪೂರ್ವ ಭಾಗದ ಹಲವು ಜಿಲ್ಲೆಗಳಲ್ಲಿ ಈ ಸಮುದಾಯದ ಜನಸಂಖ್ಯೆ ಗಣನೀಯವಾಗಿದೆ. ಎಸ್‌ಪಿ ಜತೆಗೆ ಮೈತ್ರಿ ಮಾಡಿಕೊಳ್ಳಲು ತಮಗೆ ಅಭ್ಯಂತರ ಇಲ್ಲ ಎಂದು ರಾಯಾ ಭಯ್ಯಾ ಅವರು ಈ ಹಿಂದೆಯೇ ಹೇಳಿದ್ದರು. 
 

ಬಿಎಸ್‌ಪಿ ತೊರೆದ ಶಾಸಕಾಂಗ ಪಕ್ಷದ ನಾಯಕ

ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬಿಎಸ್‌ಪಿ ಶಾಸಕಾಂಗ ‍ಪಕ್ಷದ ನಾಯಕ ಶಾ ಆಲಂ ಅವರು ಶಾಸಕ ಸ್ಥಾನ ಮತ್ತು ಪಕ್ಷದ ಸದಸ್ಯತ್ವಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ. ‍ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರಿಗೆ ತಮ್ಮ ಮೇಲೆ ವಿಶ್ವಾಸ ಇಲ್ಲದ ಕಾರಣ ರಾಜೀನಾಮೆ ನೀಡಿದ್ದಾಗಿ ಹೇಳಿದ್ದಾರೆ. ಮುಂದೆ ಯಾವ ಪಕ್ಷಕ್ಕೆ ಸೇರಲಿದ್ದಾರೆ ಎಂಬುದನ್ನು ಅವರು ಬಹಿರಂಗಪಡಿಸಿಲ್ಲ. ಆಲಂ ಅವರು 2012 ಮತ್ತು 2017ರ ವಿಧಾನಸಭಾ ಚುನಾವಣೆಯಲ್ಲಿ ಮುಬಾರಕ್‌ಪುರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. 

ಬಿಎಸ್‌ಪಿ ಮುಖಂಡ ಲಾಲ್‌ಜಿ ವರ್ಮಾ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದಲ್ಲಿ ಈ ವರ್ಷದ ಆರಂಭದಲ್ಲಿ ಪಕ್ಷದಿಂದ ಉಚ್ಚಾಟಿಸಲಾಗಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು