ಸೋಮವಾರ, ಡಿಸೆಂಬರ್ 6, 2021
23 °C
ಜಯಂತ್‌ ಚೌಧರಿ ಪಕ್ಷಕ್ಕೆ 35 ಕ್ಷೇತ್ರ ಬಿಟ್ಟುಕೊಡಲು ಅಖಿಲೇಶ್‌ ಯಾದವ್‌ ಒಪ್ಪಿಗೆ

ಉತ್ತರ ಪ್ರದೇಶ: ಎಸ್‌ಪಿ–ಆರ್‌ಎಲ್‌ಡಿ ಮೈತ್ರಿ ಅಂತಿಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ: ಉತ್ತರ ಪ್ರದೇಶ ವಿಧಾನಸಭೆಗೆ ಮುಂದಿನ ವರ್ಷ ನಡೆಯಲಿರುವ ಚುನಾವಣೆಗಾಗಿ ಸಣ್ಣ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಳ್ಳುವ ಕಾರ್ಯತಂತ್ರವನ್ನು ಸಮಾಜವಾದಿ ಪಕ್ಷದ (ಎಸ್‌ಪಿ) ಅಖಿಲೇಶ್‌ ಯಾದವ್‌ ಅನುಸರಿಸುತ್ತಿದ್ದಾರೆ. ರಾಷ್ಟ್ರೀಯ ಲೋಕದಳದ (ಆರ್‌ಎಲ್‌ಡಿ) ಜತೆಗಿನ ಮೈತ್ರಿಯನ್ನು ಅವರು  ಅಂತಿಮಗೊಳಿಸಿದ್ದಾರೆ. ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಪ್ರಭಾವಿಯಾಗಿರುವ ಜಾಟ್‌ ಸಮುದಾಯದ ಬೆಂಬಲವನ್ನು ಆರ್‌ಎಲ್‌ಡಿ ಹೊಂದಿದೆ. 

ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್‌ ಚೌಧರಿ ಅವರು ಅಖಿಲೇಶ್‌ ಅವರನ್ನು ಮಂಗಳವಾರ ಸಂಜೆ ಭೇಟಿಯಾಗಿದ್ದಾರೆ. ಈ ಸಭೆಯಲ್ಲಿ ಸೀಟು ಹಂಚಿಕೆಯು ಅಂತಿಮಗೊಂಡಿದೆ ಎಂದು ಎಸ್‌ಪಿ ಮೂಲಗಳು ಹೇಳಿವೆ. 

ಆರ್‌ಎಲ್‌ಡಿ ಪಕ್ಷವು 35 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಈ ಎಲ್ಲವೂ ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿರುವ ಕ್ಷೇತ್ರಗಳು. ಎಸ್‌ಪಿಯ ಕೆಲವು ಅಭ್ಯರ್ಥಿಗಳು ಕೂಡ ಆರ್‌ಎಲ್‌ಡಿ ಟಿಕೆಟ್‌ನಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಎಸ್‌ಪಿಯ ಮುಖಂಡರೊಬ್ಬರು ಹೇಳಿದ್ದಾರೆ. 45 ಕ್ಷೇತ್ರಗಳನ್ನು ನೀಡಬೇಕು ಎಂದು ಆರ್‌ಎಲ್‌ಡಿ ಪಟ್ಟು ಹಿಡಿದ ಕಾರಣ ಮಾತುಕತೆಯು ಈ ಹಿಂದೆ ಸ್ಥಗಿತವಾಗಿತ್ತು. 

ಈ ಮೈತ್ರಿಯಿಂದಾಗಿ, ಜಾಟ್‌ ಸಮುದಾಯದ ಪ್ರಭಾವ ಇರುವ ರಾಜ್ಯದ ಪಶ್ಚಿಮ ಭಾಗದ ರಾಜಕೀಯ ಲೆಕ್ಕಾಚಾರ ಬದಲಾಗಲಿದೆ. 2017ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಈ ಪ್ರದೇಶದ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. ಎಸ್‌ಪಿ–ಆರ್‌ಎಲ್‌ಡಿ ಮೈತ್ರಿಯು ಬಿಜೆಪಿಯ ಗೆಲುವಿಗೆ ತೊಡಕಾಗಬಹುದು. 

ಇತ್ತೀಚಿನ ವರ್ಷಗಳಲ್ಲಿ, ಆರ್‌ಎಲ್‌ಡಿಯ ಸಾಧನೆ ಹೇಳಿಕೊಳ್ಳುವಂತೆ ಏನೂ ಇಲ್ಲ. 2017ರ ವಿಧಾನಸಭಾ ಚುನಾವಣೆಯಲ್ಲಿ 357 ಕ್ಷೇತ್ರಗಳಿಗೆ ಪಕ್ಷವು ಸ್ಪರ್ಧಿಸಿತ್ತು. ಗೆದ್ದದ್ದು ಎರಡು ಕ್ಷೇತ್ರಗಳಲ್ಲಿ ಮಾತ್ರ. ಮೂರು ಕ್ಷೇತ್ರಗಳನ್ನು ಬಿಟ್ಟರೆ ಉಳಿದೆಡೆ ಆರ್‌ಎಲ್‌ಡಿ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. ಪಕ್ಷಕ್ಕೆ ಒಟ್ಟಾರೆಯಾಗಿ ಸಿಕ್ಕಿದ್ದು ಶೇ 1.80ರಷ್ಟು ಮತಗಳು ಮಾತ್ರ. 

2019ರ ಲೋಕಸಭಾ ಚುನಾವಣೆಯ ಸ್ಥಿತಿಯೂ ಭಿನ್ನವಾಗಿ ಇರಲಿಲ್ಲ. ಪಕ್ಷದ ಅಧ್ಯಕ್ಷ ಅಜಿತ್‌ ಸಿಂಗ್‌, ಅವರ ಮಗ ಜಯಂತ್‌ ಚೌಧರಿ ಅವರೇ ತಮ್ಮ ‘ಭದ್ರಕೋಟೆ’ಗಳಲ್ಲಿ ಸೋತರು. ಪಕ್ಷಕ್ಕೆ ಒಂದು ಸ್ಥಾನವೂ ದಕ್ಕಲಿಲ್ಲ. ಜಾಟ್‌–ಮುಸ್ಲಿಂ ಮತಬ್ಯಾಂಕ್‌ನಲ್ಲಿ ಉಂಟಾದ ಬಿರುಕೇ ಈ ಹೀನಾಯ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ. 2013ರಲ್ಲಿ ಮುಝಫ್ಫರ್‌ನಗರದಲ್ಲಿ ನಡೆದ ಕೋಮು ಗಲಭೆಯಲ್ಲಿ 60 ಜನರು ಮೃತಪಟ್ಟಿದ್ದರು. ಸಾವಿರಾರು ಜನರು ನಿರ್ವಸಿತರಾಗಿದ್ದರು. ಇದು ಜಾಟ್‌–ಮುಸ್ಲಿಂ ಸಮುದಾಯಗಳ ನಡುವೆ ಅಪನಂಬಿಕೆಗೆ ಕಾರಣವಾಗಿತ್ತು. 

ಈಗ, ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯು ಆರ್‌ಎಲ್‌ಡಿಯ ಪುನಶ್ಚೇತನಕ್ಕೆ ಕಾರಣವಾಗಿದೆ. ರಾಜ್ಯದ ಪಶ್ಚಿಮ ಭಾಗದ ರೈತರನ್ನು ಕಾಯ್ದೆಗಳ ವಿರುದ್ಧ ಸಂಘಟಿಸುವಲ್ಲಿ ಜಯಂತ್‌ ಚೌಧರಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ನಡೆದ ರೈತರ ಮಹಾಪಂಚಾಯಿತಿಗಳಲ್ಲಿಯೂ ಅವರು ಭಾಗಿಯಾಗಿದ್ದಾರೆ. 

ಆರ್‌ಎಲ್‌ಡಿಯಿಂದ ನಿಷ್ಠೆ ಬದಲಾಯಿಸುವ ಮೂಲಕ ಜಾಟ್‌ ಸಮುದಾಯವು ಪ್ರಮಾದ ಎಸಗಿತು ಎಂದು ಭಾರತೀಯ ಕಿಸಾನ್‌ ಯೂನಿಯನ್‌ ಅಧ್ಯಕ್ಷ ನರೇಶ್‌ ಟಿಕಾಯತ್‌ ಅವರು ಇತ್ತೀಚೆಗೆ ಹೇಳಿದ್ದರು. 

ಪಕ್ಷದ ಬಗ್ಗೆ ಜಾಟ್‌ ಜನರಲ್ಲಿ ಈಗ ಅನುಕಂಪ ಮೂಡಿದೆ. ಜಾಟ್‌ ಸಮುದಾಯದ ಜನರು ಹೆಚ್ಚು ಇರುವಲ್ಲಿ ದೊಡ್ಡ ಮಟ್ಟದ ಬೆಂಬಲ ಪಕ್ಷಕ್ಕೆ ಸಿಗುತ್ತಿದೆ ಎಂದು ಆರ್‌ಎಲ್‌ಡಿಯ ನಾಯಕರೊಬ್ಬರು ಹೇಳಿದ್ದಾರೆ. 

ರೈತರ ಬೆಂಬಲವನ್ನು ಪಕ್ಷವು ನಿರೀಕ್ಷಿಸಬಹುದು ಎಂದು ಲಖನೌದ ರಾಜಕೀಯ ವಿಶ್ಲೇಷಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. 

‘ಮೃತ ರೈತರ ಕುಟುಂಬಕ್ಕೆ ₹‌25 ಲಕ್ಷ ಪರಿಹಾರ’

ಉತ್ತರ ಪ್ರದೇಶ ವಿಧಾನಸಭೆಗೆ 2022ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ತಮ್ಮ ಪಕ್ಷವು ಗೆದ್ದರೆ, ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆ ಸಂದರ್ಭದಲ್ಲಿ ಜೀವ ತೆತ್ತ ರೈತರ ಕುಟುಂಬಗಳಿಗೆ ತಲಾ ₹25 ಲಕ್ಷ ಪರಿಹಾರ ನೀಡಲಾಗುವುದು ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್‌ ಯಾದವ್‌ ಬುಧವಾರ ಹೇಳಿದ್ದಾರೆ.

‘ರೈತರ ಜೀವವು ಅಮೂಲ್ಯ. ಏಕೆಂದರೆ, ಅವರು ಇತರರಿಗಾಗಿ ಆಹಾರ ಧಾನ್ಯ ಬೆಳೆಯುವವರು’ ಎಂದು ಹಿಂದಿಯಲ್ಲಿ ಮಾಡಿದ ಟ್ವೀಟ್‌ನಲ್ಲಿ ಅಖಿಲೇಶ್‌ ಅಭಿಪ್ರಾಯಪಟ್ಟಿದ್ದಾರೆ. 

ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ಎಸ್‌ಪಿ ಬೆಂಬಲ ನೀಡಿದೆ. 

ಎಎಪಿ, ಅಪ್ನಾದಳ ಜತೆಗೂ ಮಾತುಕತೆ

ಆಮ್‌ ಆದ್ಮಿ ಪಕ್ಷದ ನಾಯಕ ಸಂಜಯ್‌ ಸಿಂಗ್‌ ಮತ್ತು ಅಪ್ನಾ ದಳ (ಕೆ) ಮುಖ್ಯಸ್ಥೆ ಕೃಷ್ಣಾ ಪಟೇಲ್‌ ಜೊತೆ ಅಖಿಲೇಶ್ ಯಾದವ್‌ ಅವರು ಬುಧವಾರ ಮಾತುಕತೆ ನಡೆಸಿದರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೃಷ್ಣಾ ಪಟೇಲ್‌, ‘ಎಸ್‌ಪಿ ಜೊತೆ ಮೈತ್ರಿ ಮಾಡಿಕೊಳ್ಳುವುದು ಖಚಿತ. ನಾವು ಸಮಾನ ಸಿದ್ಧಾಂತ ಹೊಂದಿರುವ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದ್ದೇವೆ’ ಎಂದಿದ್ದಾರೆ.

‘ಉತ್ತರ ಪ್ರದೇಶವನ್ನು ಭ್ರಷ್ಟಾಚಾರ ಮುಕ್ತಗೊಳಿಸುವುದು ಮತ್ತು ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿರುವ ಸರ್ಕಾರದಿಂದ ಮುಕ್ತಿ ಪಡೆಯುವುದು ಹೇಗೆ ಎಂಬ ವಿಷಯದ ಬಗ್ಗೆ ಚರ್ಚೆ ನಡೆಸಲಾಯಿತು. ಎಸ್‌ಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಕುರಿತು ಈಗಷ್ಟೇ ಚರ್ಚೆಗಳು ಆರಂಭವಾಗಿವೆ’ ಎಂದು ಸಂಜಯ್‌ ಸಿಂಗ್‌ ಹೇಳಿದ್ದಾರೆ.

ಬಿಜೆಪಿ ಎಸ್‌ಸಿ ಮೋರ್ಚಾದಿಂದ 20 ಬೃಹತ್‌ ಕಾರ್ಯಕ್ರಮ

ಸಂವಿಧಾನ ದಿನದ ಅಂಗವಾಗಿ ಉತ್ತರ ಪ್ರದೇಶದ 20 ಕಡೆಗಳಲ್ಲಿ ಬೃಹತ್‌ ಕಾರ್ಯಕ್ರಮಗಳನ್ನು ಬಿಜೆಪಿಯ ಎಸ್‌ಸಿ ಮೋರ್ಚಾ ಆಯೋಜಿಸಲಿದೆ.

‘ಇದೇ 26ರಂದು ದೇಶದಾದ್ಯಂತ ಸಂವಿಧಾನ ಗೌರವ ಯಾತ್ರೆಯನ್ನು ನಮ್ಮ ಪಕ್ಷದ ಕಾರ್ಯಕರ್ತರು ಆಯೋಜಿಸಲಿದ್ದಾರೆ. ಉತ್ತರ ಪ್ರದೇಶದಲ್ಲಿ 20 ಬೃಹತ್‌ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹೆಚ್ಚಿನ ಕಾರ್ಯಕ್ರಮಗಳಲ್ಲಿ ಭಾಷಣ ಮಾಡಲಿದ್ದಾರೆ’ ಎಂದು ಬಿಜೆಪಿ ಎಸ್‌ಸಿ ಘಟಕದ ಅಧ್ಯಕ್ಷ ಲಾಲ್‌ ಸಿಂಗ್‌ ಆರ್ಯ ಹೇಳಿದ್ದಾರೆ.

ಅಂಬೇಡ್ಕರ್‌ ಪುಣ್ಯತಿಥಿ ದಿನವಾದ ಡಿಸೆಂಬರ್‌ 6ರಂದು ಸಮಾರೋಪ ನಡೆಯಲಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು