ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ ಚುನಾವಣೆ: ಒಬಿಸಿ, ಎಸ್‌ಸಿ ಮತ ಸೆಳೆಯಲು ಬಿಜೆಪಿ ಕಾರ್ಯತಂತ್ರ

ಚುನಾವಣೆ ಗುಂಗಿನಲ್ಲಿ ಬಿಜೆಪಿ, 202 ರ‍್ಯಾಲಿ ಆಯೋಜನೆಗೆ ಸಿದ್ಧತೆ
Last Updated 3 ಅಕ್ಟೋಬರ್ 2021, 15:22 IST
ಅಕ್ಷರ ಗಾತ್ರ

ನವದೆಹಲಿ: ಉತ್ತರ ಪ್ರದೇಶ ರಾಜ್ಯ ವಿಧಾನಸಭೆಗೆಮುಂದಿನ ವರ್ಷ ನಡೆಯಲಿರುವ ಚುನಾವಣೆಗೆ ಭರದಿಂದ ಸಿದ್ಧತೆ ಆರಂಭಿಸಿರುವ ಬಿಜೆಪಿಯು ಅಲ್ಲಿನ ಪರಿಶಿಷ್ಟ ಜಾತಿ, ಇತರೆ ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯಲು ಒತ್ತು ನೀಡಿದೆ.

ಜಾತಿ ಕೇಂದ್ರಿತ ರ‍್ಯಾಲಿಗಳ ಆಯೋಜನೆ, ಜಾತಿ ಆಧರಿಸಿ ಕಾರ್ಯಕರ್ತರ ತಂಡಗಳ ರಚನೆ ಮೂಲಕ ಆಯಾ ಜಾತಿಗಳನ್ನು ಸೆಳೆಯಲು ಯೋಜನೆ ರೂಪಿಸಿದೆ. ಒಬಿಸಿಯ 202 ರ‍್ಯಾಲಿಗಳು, ಪರಿಶಿಷ್ಟರ ಸಮ್ಮೇಳನ ನಡೆಸಲು ಉದ್ದೇಶಿಸಿದೆ.

ಅಲ್ಲದೆ, ಮುಸಲ್ಮಾನರ ಪ್ರಾಬಲ್ಯವುಳ್ಳ ಮತಗಟ್ಟೆಗಳನ್ನು ಕೇಂದ್ರಿಕರಿಸಿ 21 ಸದಸ್ಯರ ತಂಡ ರಚಿಸಲು ಪಕ್ಷ ತೀರ್ಮಾನಿಸಿದೆ. ಈಗಾಗಲೇ ಧರ್ಮೇಂದ್ರ ಪ್ರಧಾನ್‌ ಒಳಗೊಂಡು ವಿವಿಧ ಜಾತಿಗಳ ಮುಖಂಡರನ್ನು ಚುನಾವಣಾ ಉಸ್ತುವಾರಿಗಳಾಗಿ ನೇಮಿಸಿದೆ.

ಅತ್ಯಧಿಕ ಸಂಖ್ಯೆಯಲ್ಲಿ ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶವು ರಾಜಕೀಯವಾಗಿ ನಿರ್ಣಾಯಕವಾಗಿದೆ. ರಾಜ್ಯದ ವಿವಿಧ ಜಾತಿಗಳ ಪ್ರಾಬಲ್ಯವನ್ನು ಆಧರಿಸಿ ಪೂರಕವಾಗಿ ಸಿದ್ಧತೆ ನಡೆಸಿದೆ.

ಒಬಿಸಿ ವಿವಿಧ ಜಾತಿಗಳನ್ನು ಗುರಿಯಾಗಿಸಿ ರ‍್ಯಾಲಿಗಳ ಆಯೋಜನೆ ಸೇರಿದಂತೆ ಮೂರು ಹಂತದ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥ ನರೇಂದ್ರ ಕುಮಾರ್ ಕಶ್ಯಪ್‌ ಅವರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್‌, ಭೂಪೇಂದರ್ ಯಾದವ್‌ ಅವರು ಮಾತನಾಡುವರು. ಕಶ್ಯಪ್, ರಾಜ್‌ಭರ್, ಪಾಲ್, ಪ್ರಜಾಪತಿ, ಜೋಗಿ, ತೇಲಿ, ಯಾದವ್, ಗುಜ್ಜಾರ್, ಸೈನಿ, ಚೌರಾಸಿಯ, ಕುರ್ಮಿ, ಜಾಟ್‌ ಸೇರಿದಂತೆ ವಿವಿಧ ಜಾತಿಗಳ ಆಧರಿತ ಸಮ್ಮೇಳನ ನಡೆಯಲಿವೆ.

ಜಾಟ್‌ ಸಮುದಾಯ ಬಹುತೇಕ ರೈತರನ್ನು ಪ್ರತಿನಿಧಿಸಲಿದೆ. ಇದು, ಉತ್ತರ ಪ್ರದೇಶದಲ್ಲಿ ಒಬಿಸಿ ವ್ಯಾಪ್ತಿಗೆ ಬರುವುದಿಲ್ಲ. ರಾಜ್ಯದಲ್ಲಿ ಜಾಟ್‌ ಪಾತ್ರ ನಿರ್ಣಾಯಕವಾಗಿದೆ. ಉತ್ತರ ಪ್ರದೇಶವು ಪ್ರಸ್ತುತ ರೈತರ ಪ್ರತಿಭಟನೆಯ ಕೇಂದ್ರಸ್ಥಾನವೂ ಆಗಿದೆ.

ಮೊದಲ ಹಂತದಲ್ಲಿ 20 ಸಾಮಾಜಿಕ ಸಮ್ಮೇಳನ ನಡೆಯಲಿವೆ. ಎರಡನೇ ಹಂತದಲ್ಲಿ ಪಕ್ಷದ ಕಾರ್ಯಕರ್ತರು ಜಾತಿಗಳ ಮುಖಂಡರನ್ನು ಭೇಟಿ ಮಾಡಲಿದ್ದು, ಪಕ್ಷದ ಸಾಧನೆ ವಿವರಿಸುವರು. ಮೂರನೇ ಮತ್ತು ಅಂತಿಮ ಹಂತದಲ್ಲಿ ಎರಡು ಕ್ಷೇತ್ರಗಳಿಗೆ ಒಂದರಂತೆ 202 ಒಬಿಸಿ ರ‍್ಯಾಲಿಗಳನ್ನು ಆಯೋಜಿಸಲಾಗುತ್ತದೆ. ಆಯಾ ಜಾತಿ ಮುಖಂಡರು ಮಾತನಾಡುವರು.

ಅಂತೆಯೇ, ಪಕ್ಷದ ಎಸ್‌ಸಿ ಮೋರ್ಚಾವು ಅನುಸೂಚಿತ ಜಾತಿ ಸಮ್ಮೇಳನಗಳನ್ನು 75 ಜಿಲ್ಲೆಗಳಲ್ಲಿ ಆಯೋಜಿಸಲು ಉದ್ದೇಶಿಸಿದೆ ಎಂದು ಕಶ್ಯಪ್‌ ಅವರು ತಿಳಿಸಿದರು.

ಬಿಜೆಪಿಯ ನೂತನ ಉಪಾಧ್ಯಕ್ಷೆ ಬೇಬಿ ರಾಣಿ ಮೌರ್ಯ ಅವರಿಗೆ ವಿವಿಧೆಡೆ ಸನ್ಮಾನ ಆಯೋಜಿಸಲಾಗುತ್ತದೆ. ಆಗ್ರಾ ಮೂಲದ ರಾಣಿ ಮೌರ್ಯ, ಜಟಾವ್‌ ಸಮುದಾಯಕ್ಕೆ ಸೇರಿದ್ದು, ಈಚೆಗೆ ಉತ್ತರಾಖಂಡ ರಾಜ್ಯಪಾಲರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರಾದ ವಿಜಯ್‌ ಬಹಾದ್ದೂರ್‌ ಪಾಠಕ್ ಅವರು, ಪಕ್ಷ ಈಗಾಗಲೇ ಚುನಾವಣೆ ಗುಂಗಿನಲ್ಲಿದೆ. ಜನರನ್ನು ತಲುಪುವ ನಿಟ್ಟಿನಲ್ಲಿ ಸಿದ್ಧತೆಗಳು ನಡೆದಿವೆ ಎಂದು ತಿಳಿಸಿದರು.

ಬಿಜೆಪಿಯು ರಾಜ್ಯದಲ್ಲಿ ಕಳೆದ ಮೂರು ಚುನಾವಣೆಗಳು ಅಂದರೆ 2014, 2017 ವಿಧಾನಸಭೆ ಚುನಾವಣೆ, 2019ರ ಲೋಕಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳನ್ನು ಹಿಂದಿಕ್ಕಿದ್ದು, ಉತ್ತಮ ಸಾಧನೆ ತೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT