ಸೋಮವಾರ, ಸೆಪ್ಟೆಂಬರ್ 27, 2021
23 °C

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸ್ಥಾನ ಸಿಗಲಿ: ಉಜ್ಬೇಕಿಸ್ತಾನ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್‌ಎಸ್‌ಸಿ) ಭಾರತಕ್ಕೆ ಖಾಯಂ ಸದಸ್ಯತ್ವ ಸಿಗಬೇಕು ಎಂದು ಉಜ್ಬೇಕಿಸ್ತಾನದ ಭಾರತ ರಾಯಭಾರಿ ದಿಲ್‌ಶಾದ್ ಅಖಾಟೊವ್ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ಅಖಾಟೊವ್‌, ʼಭಾರತವು ವಿಶ್ವಸಂಸ್ಥೆಯ ಅತಿದೊಡ್ಡ ಸದಸ್ಯ ರಾಷ್ಟ್ರಗಳಲ್ಲಿ ಒಂದಾಗಿದೆ. ದಕ್ಷಿಣ ಆಗ್ನೇಯ ಏಷ್ಯಾ ಭಾಗದಲ್ಲಿ ಖಂಡಿತಾ ಪ್ರಮುಖ ಪಾತ್ರವನ್ನು ನಿಭಾಯಿಸುತ್ತಿದೆ. ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್‌ಎಸ್‌ಸಿ) ಖಾಯಂ ಸದಸ್ಯತ್ವ ಹೊಂದುವುದು ವಿಶ್ವ ಸಮುದಾಯದ ಪಾಲಿಗೆ ಮುಖ್ಯವಾಗಲಿದೆʼ ಎಂದು ಅಭಿಪ್ರಾಯಪಟ್ಟಿದ್ದಾರೆ.

ʼಖಾಯಂ ಸದಸ್ಯತ್ವ ಸ್ಥಾನಮಾನಕ್ಕಾಗಿನ ಭಾರತದ ಉಮೇದುವಾರಿಕೆಯನ್ನು ಉಜ್ಬೇಕಿಸ್ತಾನ ಸಾಮಾನ್ಯವಾಗಿ ಬೆಂಬಲಿಸುತ್ತದೆ. ಹಾಗೆಯೇ, ಖಾಯಂ ಸದಸ್ಯತ್ವ ಹೊಂದಿಲ್ಲದ ಯಾವುದೇ ರಾಷ್ಟ್ರದ ಉಮೇದುವಾರಿಕೆಯನ್ನು ನಾವು ಖಂಡಿತಾ ಬೆಂಬಲಿಸುತ್ತೇವೆʼ ಎಂದೂ ತಿಳಿಸಿದ್ದಾರೆ.

ಇದನ್ನೂ ಓದಿ: 

ಸದ್ಯ ಅಫ್ಗಾನಿಸ್ತಾನದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಭಯೋತ್ಪಾದನೆಯನ್ನು ನಿಗ್ರಹಿಸಲು ಭಾರತವು ಶ್ರಮಿಸುತ್ತಿದೆ ಎಂದು ಉಜ್ಬೇಕಿಸ್ತಾನದ ರಾಯಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾರತವು ಆಗಸ್ಟ್‌ 1ರಿಂದ ಒಂದು ತಿಂಗಳ ಅವಧಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆ ವಹಿಸಿಕೊಂಡಿದೆ. ಈ ಅವಧಿಯಲ್ಲಿ ಕಡಲ ಭದ್ರತೆ, ಶಾಂತಿ ಪಾಲನೆ ಮತ್ತು ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲು ಸಿದ್ಧತೆ ನಡೆಸಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯ ರಾಷ್ಟ್ರವಾಗಿರುವ ಭಾರತದ ಎರಡು ವರ್ಷಗಳ ಅಧಿಕಾರಾವಧಿಯು 2021ರ ಜನವರಿ 1ರಿಂದ ಆರಂಭವಾಗಿದೆ. ಮುಂದಿನ ವರ್ಷ ಡಿಸೆಂಬರ್‌ನಲ್ಲಿ ಮತ್ತೆ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನ ಭಾರತಕ್ಕೆ ಸಿಗಲಿದೆ.

ಭದ್ರತಾ ಮಂಡಳಿಗೆ ಜುಲೈ ತಿಂಗಳಲ್ಲಿ ಫ್ರಾನ್ಸ್ ಅಧ್ಯಕ್ಷತೆ ವಹಿಸಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು