ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ವಿರುದ್ಧದ ಲಸಿಕೆ ಕವಚವಲ್ಲ: ತಜ್ಞರ ಅಭಿಮತ

ಸೋಂಕಿನ ತೀವ್ರತೆ ಮತ್ತು ಸಾವಿಗೀಡಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ
Last Updated 16 ಏಪ್ರಿಲ್ 2021, 11:10 IST
ಅಕ್ಷರ ಗಾತ್ರ

ನವದೆಹಲಿ: ‘ಕೋವಿಡ್‌–19 ವಿರುದ್ಧದ ಲಸಿಕೆಯು ಕವಚವಲ್ಲ. ಆದರೆ, ಸೋಂಕಿನ ತೀವ್ರತೆ ಮತ್ತು ಸಾವಿಗೀಡಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ’ ಎಂದು ತಜ್ಞರು ತಿಳಿಸಿದ್ದಾರೆ.

‘ಎರಡು ಡೋಸ್‌ ಲಸಿಕೆ ಪಡೆದ ಬಳಿಕವೂ ಸೋಂಕಿಗೆ ಒಳಗಾದ ಹಲವು ಪ್ರಕರಣಗಳಿವೆ. ಆದರೆ, ಈ ಪ್ರಕರಣಗಳಲ್ಲಿ ಲಕ್ಷಣಗಳ ತೀವ್ರತೆಯು ಅತಿ ಕಡಿಮೆ ಪ್ರಮಾಣದಲ್ಲಿವೆ’ ಎಂದು ಅಪೊಲೊ ಆಸ್ಪತ್ರೆಯ ತಜ್ಞ ವೈದ್ಯ ಡಾ. ಅವಧೇಶ್‌ ಬನ್ಸಾಲ್‌ ತಿಳಿಸಿದ್ದಾರೆ.

’ಲಸಿಕೆಯು ಸಂಪೂರ್ಣ ಸುರಕ್ಷತಾ ಕವಚವಲ್ಲ. ಮಾಸ್ಕ್‌ ಧರಿಸುವ ಮೂಲಕ ವೈರಸ್‌ ಹಬ್ಬುವುದನ್ನು ನಿಯಂತ್ರಿಸಬಹುದು. ಲಸಿಕೆ ಹಾಕಿಸಿಕೊಂಡ ಬಳಿಕ ಹಲವು ಮಂದಿ ಮಾಸ್ಕ್‌ ಹಾಕಿಕೊಳ್ಳಲು ನಿರ್ಲಕ್ಷ್ಯ ವಹಿಸುತ್ತಾರೆ. ಸದ್ಯಕ್ಕೆ ಮಾಸ್ಕ್‌ ಧರಿಸುವುದೇ ಅತ್ಯುತ್ತಮ ಲಸಿಕೆ’ ಎಂದು ದೆಲಿಯ ಸರ್ಕಾರಿ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ಹೇಳಿದ್ದಾರೆ.

’ಎರಡು ಡೋಸ್‌ ಪಡೆದ ಬಳಿಕವಷ್ಟೇ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹೀಗಾಗಿ, ಮೊದಲ ಡೋಸ್‌ ಪಡೆದ ಬಳಿಕ ಸೋಂಕಿಗೆ ಒಳಗಾಗುವ ಸಾಧ್ಯತೆಗಳಿವೆ’ ಎಂದು ಫೋರ್ಟಿಸ್‌ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ರಿಚಾ ಸರೀನ್‌ ವಿವರಿಸಿದ್ದಾರೆ.

ಕೋವಿಶಿಲ್ಡ್‌ ಮತ್ತು ಕೊವ್ಯಾಕ್ಸಿನ್‌ ಲಸಿಕೆಗಳು ಸುರಕ್ಷಿತ ಎಂದು ಕೇಂದ್ರ ಸರ್ಕಾರ ಹೇಳಿದೆ. ಯಾವುದೇ ರೀತಿಯ ವದಂತಿಗಳಿಗೆ ಜನರು ಕಿವಿಗೊಡಬಾರದು ಎಂದು ಕೋರಿದೆ.

‘ಎರಡು ಡೋಸ್‌ ಲಸಿಕೆ ಪಡೆದ ಬಳಿಕ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಸೋಂಕಿನ ತೀವ್ರತೆ ಮತ್ತು ಸಾವು ಸಂಭವಿಸುವ ಸಾಧ್ಯತೆ ಕಡಿಮೆಯಾಗುತ್ತದೆ. ಜತೆಗೆ, ಲಸಿಕೆ ಪಡೆದ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಾಧ್ಯತೆಯೂ ಶೇಕಡ 85ರಷ್ಟು ಕಡಿಮೆಯಾಗುತ್ತದೆ. ಆದರೆ, ನಿಮ್ಮ ದೇಹದ ಒಳಗೆ ವೈರಸ್‌ ಪ್ರವೇಶವನ್ನು ಲಸಿಕೆಯಿಂದ ತಡೆಯಲು ಸಾಧ್ಯವಿಲ್ಲ. ಮಾಸ್ಕ್‌ನಿಂದ ಮಾತ್ರ ವೈರಸ್‌ ಪ್ರವೇಶವನ್ನು ತಡೆಯಬಹುದು’ ಎಂದು ಹೈದರಾಬಾದ್‌ನ ವೈದ್ಯರಾದ ಲಕ್ಷ್ಮಿ ಲಾವಣ್ಯ ಅಲಾಪತಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT