ಮಂಗಳವಾರ, ಅಕ್ಟೋಬರ್ 20, 2020
23 °C
ಅಮಾನತು ಸಂಸದರ ಕ್ಷಮೆಗೆ ಸರ್ಕಾರ ಒತ್ತಾಯ

ಸದನ ಕದನದ ಏಟು ಎದುರೇಟು: ಕಲಾಪ ಬಹಿಷ್ಕರಿಸಿದ ವಿರೋಧ ಪಕ್ಷಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಮಸೂದೆಗಳ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ಸೃಷ್ಟಿಯಾದ ಜಟಾಪಟಿಯು ಮಂಗಳವಾರವೂ ಮುಂದುವರಿದಿದೆ.

ರಾಜ್ಯಸಭೆ ಮತ್ತು ಲೋಕಸಭೆಯ ಕಲಾಪಗಳನ್ನು ವಿರೋಧ ಪಕ್ಷಗಳು ಬಹಿಷ್ಕರಿಸಿವೆ. ರಾಜ್ಯಸಭೆಯ ವಿರೋಧ ಪಕ್ಷ ನಾಯಕ ಗುಲಾಂ ನಬಿ ಆಜಾದ್‌ ಮತ್ತು ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಅಧಿರ್‌ ರಂಜನ್‌ ಚೌಧರಿ ಅವರು ಆಯಾ ಸದನದಲ್ಲಿ ಈ ವಿಚಾರ ಪ್ರಕಟಿಸಿದರು.

ಆಡಳಿತಾರೂಢ ಬಿಜೆಪಿ ಮತ್ತು ವಿ‍ರೋಧ ಪಕ್ಷಗಳ ನಡುವೆ ಪಟ್ಟು–ಪ್ರತಿಪಟ್ಟಿನ ರಾಜಕಾರಣ ನಡೆದಿದೆ. ಕಲಾಪಕ್ಕೆ ಹಾಜರಾಗಬೇಕಿದ್ದರೆ ಮೂರು ಷರತ್ತುಗಳನ್ನು ಈಡೇರಿಸಬೇಕು ಎಂಬುದು ವಿರೋಧ ಪಕ್ಷಗಳ ಆಗ್ರಹ. ಆದರೆ, ರಾಜ್ಯಸಭೆಯಲ್ಲಿ ಭಾನುವಾರ ‘ಅಸಂಸದೀಯ’ವಾಗಿ ವರ್ತಿಸಿದ ಎಂಟು ಸಂಸದರು ವಿಷಾದ ವ್ಯಕ್ತಪಡಿಸಿದರೆ ಅವರ ಅಮಾನತು ರದ್ದು ಮಾಡಲಾಗುವುದು ಎಂದು ಸರ್ಕಾರ ಹೇಳಿದೆ.

ವಿರೋಧ ಪಕ್ಷಗಳು ಮುಂದಿಟ್ಟಿರುವ ಮೂರೂ ಬೇಡಿಕೆಗಳನ್ನು ಸರ್ಕಾರ ಅಂಗೀಕರಿಸುವವರೆಗೆ ಅಧಿವೇಶನಕ್ಕೆ ಹೋಗುವುದಿಲ್ಲ ಎಂದು ರಾಜ್ಯಸಭೆಯಿಂದ ಸಭಾತ್ಯಾಗ ಮಾಡಿದ ಬಳಿಕ ಆಜಾದ್‌ ಅವರು ಹೇಳಿದ್ದಾರೆ.

ಸಮಯದ ಕೊರತೆಯು ವಿರೋಧ ಪಕ್ಷಗಳ ಅತೃಪ್ತಿಗೆ ಕಾರಣವಾಗಿದೆ. ಸದನ ಎಂದರೆ ಸಂಖ್ಯೆಯ ಲೆಕ್ಕಾಚಾರ ಮಾತ್ರ ಅಲ್ಲ. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮಸೂದೆಗಳ ಅಂಗೀಕಾರವನ್ನು ಒಂದು ದಿನ ಮುಂದೂಡಬೇಕು ಎಂಬ ವಿರೋಧ ಪಕ್ಷಗಳ ಮನವಿಗೆ ಸರ್ಕಾರ ಸ್ಪಂದಿಸಲಿಲ್ಲ ಎಂದು ಅವರು ವಿವರಿಸಿದ್ದಾರೆ. 

ಸರ್ಕಾರ ಮತ್ತು ಪ್ರತಿಪಕ್ಷಗಳು ಜತೆಗೆ ಕುಳಿತು ಚರ್ಚಿಸಿ, ಸದನವು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ರಾಜ್ಯಸಭಾ ಸದಸ್ಯ ಎಚ್‌.ಡಿ. ದೇವೇಗೌಡ ಹೇಳಿದ್ದಾರೆ. 

ಸಭಾಪತಿ ಸ್ಥಾನದಲ್ಲಿ ಇದ್ದವರನ್ನು ವಿವಾದದ ಕೇಂದ್ರಕ್ಕೆ ಎಳೆದು ತರಲಾಗಿದೆ. ಸಭಾಪತಿ ಸ್ಥಾನದಲ್ಲಿ ಇರುವವರ ಮೇಲೆ ಸದಸ್ಯರು ದೋಷ ಹೊರಿಸಬಾರದು ಎಂದು ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಅಮಾನತಾದ ಸದಸ್ಯರು ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಕ್ಕೆ ನಾಯ್ಡು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಮೈಕ್‌ಗಳನ್ನು ಮುರಿದದ್ದು, ಮೇಜಿನ ಮೇಲೆ ಕುಳಿತದ್ದು, ಮೇಜು ಹತ್ತಿದ್ದು, ಹರಿವಂಶಜಿ (ಉಪಸಭಾಪತಿ) ಅವರಿಗೆ ಕೈತೋರಿದ್ದು, ರೂಲ್‌ ಬುಕ್‌ ಹರಿದದ್ದು ಎಲ್ಲವೂ ಖಂಡನಾರ್ಹ’ ಎಂದು ಬಿಜೆಪಿಯ ಸದನ ನಾಯಕ ತಾವರಚಂದ್‌ ಗೆಹ್ಲೋಟ್‌ ಹೇಳಿದ್ದಾರೆ.

ರಾಜ್ಯಸಭೆಯ ಕೋಲಾಹಲವು ಲೋಕಸಭೆಯಲ್ಲಿಯೂ ಪ್ರತಿಧ್ವನಿಸಿದೆ.ರಾಜ್ಯಸಭೆಯ ಎಂಟು ಸದಸ್ಯರ ಅಮಾನತು ವಿಚಾರ ಎತ್ತಲು ಅಧಿರ್‌ ರಂಜನ್‌ ಚೌಧರಿ ಅವರು ಮುಂದಾದರು. ಆದರೆ, ಸ್ಪೀಕರ್‌ ಓಂ ಬಿರ್ಲಾ ಅದಕ್ಕೆ ಅವಕಾಶ ಕೊಡಲಿಲ್ಲ. ಬೇರೊಂದು ಸದನದ ವಿಚಾರ ಚರ್ಚಿಸಲು ಸಾಧ್ಯವಿಲ್ಲ ಎಂದರು.

ರಾಜ್ಯಸಭೆಯ ಸಂಸದರಿಗೆ ಬೆಂಬಲ ನೀಡುವುದಕ್ಕಾಗಿ ವಿರೋಧ ಪಕ್ಷಗಳ ಎಲ್ಲ ಸದಸ್ಯರು ಕಲಾಪ ಬಹಿಷ್ಕರಿಸುತ್ತಾರೆ ಎಂದು ಅಧಿರ್‌ ಹೇಳಿದರು. ತೃಣಮೂಲ ಕಾಂಗ್ರೆಸ್‌ ಮತ್ತು ಟಿಆರ್‌ಎಸ್‌ ಕೂಡ ಅವರಿಗೆ ಬೆಂಬಲ ನೀಡಿದವು. 

ಅಧಿವೇಶನ ಇಂದೇ ಕೊನೆ?
ಇದೇ 14ರಂದು ಆರಂಭವಾದ ಅಧಿವೇಶನವು ಅಕ್ಟೋಬರ್‌ 1ರವರೆಗೆ ನಿಗದಿ ಆಗಿತ್ತು. ಆದರೆ, ಹಲವು ಸಂಸದರು ಮತ್ತು ಸಚಿವರಿಗೆ ಕೋವಿಡ್‌ ದೃಢಪಟ್ಟಿದೆ. ಹಾಗಾಗಿ, ಅಧಿವೇಶನದ ಅವಧಿ ಮೊಟಕು ಮಾಡುವ ಒತ್ತಡ ಸರ್ಕಾರದ ಮೇಲೆ ಇದೆ.  ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಅವರು ಸದನ ನಾಯಕರ ಜತೆಗೆ ಮಂಗಳವಾರ ಸಂಜೆ ನಡೆಸಿದ ಸಭೆಯಲ್ಲಿ ಅಧಿವೇಶನವನ್ನು ಮುಂದೂಡುವ ನಿರ್ಧಾರಕ್ಕೆ ಬರಲಾಗಿದೆ.

ಮೂರು ಬೇಡಿಕೆಗಳು

1) ಅಮಾನತು ಶಿಕ್ಷೆಗೆ ಒಳಗಾಗಿರುವ ಸಂಸದರ ಅಮಾನತು ರದ್ದು ಮಾಡಬೇಕು

2) ಸರ್ಕಾರ ನಿಗದಿ ಮಾಡಿದ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ರೈತರಿಂದ ವರ್ತಕರು ಅಥವಾ ಸಂಸ್ಥೆಗಳು ಆಹಾರ ಧಾನ್ಯ ಖರೀದಿಸುವಂತಿಲ್ಲ ಎಂಬ ಮಸೂದೆಯನ್ನು ಸರ್ಕಾರ ತರಬೇಕು

3) ಸ್ವಾಮಿನಾಥನ್‌ ಸಮಿತಿ ಶಿಫಾರಸು ಮಾಡಿದ ಬೆಂಬಲ ಬೆಲೆ ಜಾರಿಯ ಖಾತರಿಯನ್ನು ಸರ್ಕಾರ ನೀಡಬೇಕು. ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ಭಾರತೀಯ ಆಹಾರ ನಿಗಮವು ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ರೈತರಿಂದ ಧಾನ್ಯ ಖರೀದಿಸಬಾರದು

ಬಿಹಾರ ಚುನಾವಣಾ ಅಸ್ತ್ರ
ಹರಿವಂಶ ಸಿಂಗ್‌ ಅವರು ವಿರೋಧ ಪಕ್ಷಗಳ ಸದಸ್ಯರ ‘ಅವಮಾನಕಾರಿ ವರ್ತನೆ’ ಖಂಡಿಸಿ 24 ತಾಸು ಉಪವಾಸ ಕೈಗೊಂಡಿದ್ದಾರೆ. ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನಿಗೆ ಬರೆದ ಪತ್ರದಲ್ಲಿ ಉಪವಾಸದ ವಿಚಾರವನ್ನು ಅವರು ತಿಳಿಸಿದ್ದಾರೆ.

ಆಡಳಿತಾರೂಢ ಎನ್‌ಡಿಎ ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿದೆ. ಬಿಹಾರದಲ್ಲಿ ಈ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಹಾಗಾಗಿ, ಬಿಹಾರದ ನಾಯಕ ಹರಿವಂಶ ಅವರಿಗೆ ‘ಅವಮಾನ’ ಮಾಡಲಾಗಿದೆ ಎಂಬುದು ಚುನಾವಣಾ ವಿಚಾರವಾಗುವ ಎಲ್ಲ ಲಕ್ಷಣಗಳೂ ಕಾಣಿಸಿಕೊಂಡಿವೆ. ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸೇರಿ ಎನ್‌ಡಿಎಯ ಎಲ್ಲ ನಾಯಕರು ಹರಿವಂಶ ಅವರಿಗಾದ ‘ಅವಮಾನ’ಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ ಜನರು ವಿರೋಧ ಪಕ್ಷಗಳಿಗೆ ಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ. 

ಚಹಾ ತಂದ ಹರಿವಂಶ
ಸಂಸತ್‌ ಆವರಣದಲ್ಲಿ ಧರಣಿ ನಡೆಸುತ್ತಿದ್ದ ರಾಜ್ಯಸಭೆಯ ಎಂಟು ಸದಸ್ಯರಿಗೆ ಉಪಸಭಾಪತಿ ಹರಿವಂಶ ಸಿಂಗ್‌ ಅವರು ಮಂಗಳವಾರ ಬೆಳಗ್ಗೆ ಚಹಾ ನೀಡಿದರು. ಹರಿವಂಶ ಅವರ ಈ ನಡೆಯು ಅವರ ದೊಡ್ಡತನಕ್ಕೆ ಪುರಾವೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. 

‘ತಮ್ಮ ಮೇಲೆ ಏರಿ ಬಂದ ಮತ್ತು ಅವಮಾನಿಸಿದವರಿಗೆ ವೈಯಕ್ತಿಕವಾಗಿ ಚಹಾ ನೀಡಿರುವುದು ಹರಿವಂಶ ಅವರ ವಿನಯ ಮತ್ತು ದೊಡ್ಡ ಹೃದಯವನ್ನು ತೋರಿಸುತ್ತದೆ’ ಎಂದು ಪ‍್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ. 

ಉಪಸಭಾ‍ಪತಿಯವರು ಮಾಧ್ಯಮ ಪ್ರತಿನಿಧಿಗಳ ಜತೆಗೆ ಬೆಳಗ್ಗೆ ಬಂದರು. ಆದರೆ, ಮಾಧ್ಯಮ ಛಾಯಾಗ್ರಾಹಕರನ್ನು ಹೊರಗೆ ಬಿಟ್ಟು ತಮ್ಮ ಬಳಿಗೆ ಬರುವಂತೆ ಹಿರಿಯ ಸಂಸದರೊಬ್ಬರು ಸಲಹೆ ಕೊಟ್ಟರು ಎಂದು ಧರಣಿನಿರತ ಮುಖಂಡರೊಬ್ಬರು ಹೇಳಿದ್ದಾರೆ.‘ಚಹಾ ತಂದು ಕೊಟ್ಟದ್ದು ಒಳ್ಳೆಯ ನಡೆ. ಆದರೆ, ಅವರು ಮಾಡಿದ ತಪ್ಪು ಈಗಲೂ ಹಾಗೆಯೇ ಇದೆ. ನಿಯಮ ಮೀರಿ ನಡೆದುಕೊಂಡದ್ದು ಉಪಸಭಾಪತಿಯವರೇ ಎಂಬುದನ್ನು ಅವರಿಗೆ ಹೇಳಿದ್ದೇವೆ’ ಎಂದು ಧರಣಿನಿರತರೊಬ್ಬರು ತಿಳಿಸಿದ್ದಾರೆ. ಸಂಸದರು ಧರಣಿಯನ್ನು ಕೊನೆಗೊಳಿಸಿದ್ದಾರೆ. ಆದರೆ, ಹೋರಾಟ ಮುಂದುವರಿಯಲಿದೆ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು