ಶುಕ್ರವಾರ, ಜನವರಿ 27, 2023
27 °C

ಪ್ರತಿಭಟನೆ ವಾರ್ಷಿಕೋತ್ಸವದೊಳಗೆ ಉಕ್ರೇನ್‌ ವಿಜಯೋತ್ಸವ: ಝೆಲೆನ್‌ಸ್ಕಿ ಭರವಸೆ

ರಾಯಿಟರ್ಸ್‌/ಪಿಟಿಐ Updated:

ಅಕ್ಷರ ಗಾತ್ರ : | |

ಕೀವ್‌/ಮಾಸ್ಕೊ: ರಷ್ಯಾ ಆಕ್ರಮಣದ ನಂತರ ಉಕ್ರೇನ್‌ ಜನರು ಮಾಡಿರುವ ತ್ಯಾಗಗಳನ್ನು ಸ್ಮರಿಸುವ ಮೂಲಕ ಉಕ್ರೇನ್‌ನ ಸ್ವಾತಂತ್ರ್ಯ ದಿನವನ್ನು ಸೋಮವಾರ ಆಚರಿಸಲಾಯಿತು.

‘ಆಕ್ರಮಣಕಾರರ ದಾಳಿಯನ್ನು ದೇಶವು ಮೆಟ್ಟಿನಿಲ್ಲುತ್ತಿದೆ ಮತ್ತು ಮೇಲುಗೈ ಸಾಧಿಸಿದೆ. ದೇಶದ ಪ್ರತಿಭಟನಾ ದಿನದ ವೇಳೆಗೆ ರಷ್ಯಾ ವಿರುದ್ಧದ ಯುದ್ಧದಲ್ಲಿ ವಿಜಯೋತ್ಸವ ಆಚರಿಸಲಾಗುವುದು’ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹೇಳಿದರು.

ದೇಶದ ಜನತೆ ಉದ್ದೇಶಿಸಿ ಭಾಷಣ ಮಾಡಿದ ಅವರು, ಯೋಧರು, ರೈತರು, ವೈದ್ಯರು, ಶಿಕ್ಷಕರು, ಹಳ್ಳಿಯವರು ಮಾಡಿರುವ ತ್ಯಾಗ ಮತ್ತು ನೀಡಿದ ಕೊಡುಗೆಗಳನ್ನು ಶ್ಲಾಘಿಸಿದರು.

2004ರಲ್ಲಿ ನಡೆದಿದ್ದ ಕಿತ್ತಳೆ ಕ್ರಾಂತಿ, ಯುರೋಪ್‌ ಒಕ್ಕೂಟ ಸೇರುವುದರ ಪರವಾಗಿ 2013, 2014ರಲ್ಲಿ ಪ್ರತಿಭಟನೆಗಳು ನಡೆದಿದ್ದವು. ಇವುಗಳ ನೆನಪಿನಾರ್ಥ ಘನತೆ ಮತ್ತು ಸ್ವಾತಂತ್ರ್ಯ ದಿನವಾಗಿ ಉಕ್ರೇನ್‌ ಆಚರಿಸುತ್ತದೆ. ಈ ಎರಡು ಕ್ರಾಂತಿಗಳು ಉಕ್ರೇನಿನ ನಾಯಕತ್ವವನ್ನು ಉರುಳಿಸಿದ್ದವು.

‘2013–14 ಮತ್ತು 2004ರ ಘಟನೆಗಳಿಗೆ ಕೇಂದ್ರವಾಗಿದ್ದ ರಾಜಧಾನಿ ಕೀವ್‌ನ ಸ್ವಾತಂತ್ರ್ಯ ಚೌಕದಲ್ಲಿ ಉಕ್ರೇನಿಯರು ಭವಿಷ್ಯದಲ್ಲಿ ಒಟ್ಟುಗೂಡುತ್ತಾರೆ. ಶಾಂತಿಯುತ ಉಕ್ರೇನ್‌, ಶಾಂತಿಯುತ ಕೀವ್‌ನಲ್ಲಿ ನಾವು ದೇಶದ ವಿಜಯ ದಿನ ಆಚರಿಸುತ್ತೇವೆ’ ಎಂದು ಝೆಲೆನ್‌ಸ್ಕಿ ವಿಶ್ವಾಸ ವ್ಯಕ್ತಪಡಿಸಿದರು.

ಚಳಿಯಿಂದಾಗಿ ಸುರಕ್ಷಿತ ನೆಲೆಗಳಿಗೆ ನಾಗರಿಕರ ಸ್ಥಳಾಂತರ:   

ರಷ್ಯಾ ಪಡೆಗಳ ನಿಯಂತ್ರಣದಿಂದ ಇತ್ತೀಚೆಗೆ ವಿಮೋಚನೆಗೊಳಿಸಲಾದ ಕೆರ್ಸಾನ್‌ ಪ್ರದೇಶ ಮತ್ತು ಮೈಕೋಲೈವ್ ನಗರದಿಂದ ನಾಗರಿಕರನ್ನು ಉಕ್ರೇನ್‌ ಸರ್ಕಾರ ಸ್ಥಳಾಂತರಿಸುತ್ತಿದೆ. 

ಚಳಿ ಸಹಿಸಿಕೊಳ್ಳಲು ಜನರಿಗೆ ಅಗತ್ಯವಿದ್ದ ಮೂಲಸೌಕರ್ಯಗಳಿಗೆ ರಷ್ಯಾದ ಕ್ಷಿಪಣಿ, ಡ್ರೋನ್‌ ಹಾಗೂ ಶೆಲ್‌ ದಾಳಿಗಳಿಂದ ತೀವ್ರ ಹಾನಿಯಾಗಿದ್ದು, ವಿದ್ಯುತ್‌ ಮತ್ತು ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಹಾಗಾಗಿ ನಾಗರಿಕರನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ರಷ್ಯಾ ಪಡೆಗಳಿಂದ ನಿರಂತರ ಶೆಲ್ ದಾಳಿ ನಡೆಯುತ್ತಿರುವುದರಿಂದ ದಕ್ಷಿಣದ ಎರಡು ಪ್ರದೇಶಗಳ ನಿವಾಸಿಗಳಿಗೆ ದೇಶದ ಕೇಂದ್ರ ಮತ್ತು ಪಶ್ಚಿಮ ಭಾಗಗಳ ಸುರಕ್ಷಿತ ಪ್ರದೇಶಗಳಿಗೆ ತೆರಳಲು ಸೂಚಿಸಲಾಗಿದೆ ಎಂದು ಉಕ್ರೇನ್ ಉಪ ಪ್ರಧಾನಿ ಇರಿನಾ ವೆರೆಶ್‌ಚುಕ್‌ ಹೇಳಿದರು.‌

 

ಬಾಕ್ಸ್‌

ಯೋಧರನ್ನು ಶಿಕ್ಷಿಸಿದವರ ವಿರುದ್ಧ ಕ್ರಮ:  

ಉಕ್ರೇನ್‌ನಲ್ಲಿ ರಷ್ಯಾದ ಯೋಧರ ಮೇಲೆ ಅಕ್ರಮವಾಗಿ ಯುದ್ಧಾಪರಾಧ ಹೊರಿಸಿ ಶಿಕ್ಷಿಸಿದವರನ್ನು ನ್ಯಾಯದ ಕಟಕಟೆಗೆ ತರಲಿದ್ದೇವೆ ಎಂದು ಪುಟಿನ್‌ ಆಡಳಿತ ಕಚೇರಿ ಕ್ರೆಮ್ಲಿನ್‌ ಸೋಮವಾರ ಹೇಳಿದೆ.

‘ಈ ಕೃತ್ಯವನ್ನು ಯುದ್ಧ ಅಪರಾಧವಾಗಿ ಪರಿಗಣಿಸಿ ವಿಶ್ವದ ಗಮನ ಸೆಳೆಯಲು ಸಾಧ್ಯವಿರುವ ಎಲ್ಲವನ್ನೂ ಮಾಡಲಿದೆ’ ಎಂದು ಅದು ಹೇಳಿದೆ.

‌ಉಕ್ರೇನ್‌ ಸೈನಿಕರು ಕಳೆದ ವಾರ ರಷ್ಯಾದ 10ಕ್ಕೂ ಹೆಚ್ಚು ಯುದ್ಧಕೈದಿಗಳನ್ನು ಗಲ್ಲಿಗೇರಿಸಿದ್ದಾರೆ. ಉಕ್ರೇನ್‌ ಸೇನಾಪಡೆ ಯುದ್ಧ ಅಪರಾಧಗಳನ್ನು ನಡೆಸಿದೆ. ಇದನ್ನು ಪಶ್ಚಿಮದ ರಾಷ್ಟ್ರಗಳು ನಿರ್ಲಕ್ಷಿಸಿವೆ ಎಂದು ರಷ್ಯಾ ಆರೋಪಿಸಿದೆ.

 ಇದಕ್ಕೆ ಉಕ್ರೇನ್‌ನಿಂದ ತಕ್ಷಣದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಆದರೆ, ಈ ಹಿಂದೆ ಉಕ್ರೇನ್‌ ಸಶಸ್ತ್ರ ಪಡೆಗಳ ಯಾವುದೇ ದುರುಪಯೋಗದ ಬಗ್ಗೆ ತನಿಖೆ ನಡೆಸಲಿದೆ ಎಂದು ಹೇಳಿತ್ತು.

 

ಪ್ರಮುಖಾಂಶಗಳು

* ಉಕ್ರೇನ್‌ ಪಡೆಗಳ ಪ್ರತಿ ದಾಳಿಯ ಭೀತಿಯಿಂದ ರಷ್ಯಾ ನೀಪರ್‌ ನದಿಯ ಪೂರ್ವ ದಂಡೆಯಲ್ಲಿ ರಕ್ಷಣಾ ಕೋಟೆ ನಿರ್ಮಿಸಿದೆ

* ಝಪೊರಿಝಿಯಾ ಅಣು ವಿದ್ಯುತ್ ಸ್ಥಾವರದಲ್ಲಿ ಅಣು ದುರಂತದ ಅಪಾಯ ಎದುರಾಗಿರುವುದನ್ನು ರಷ್ಯಾದ ಅಣು ಸ್ಥಾವರದ ನಿರ್ವಾಹಕ ರೊಸಾಟಮ್ ಸೋಮವಾರ ಒಪ್ಪಿಕೊಂಡಿದೆ

* ಕಳೆದ 24 ತಾಸುಗಳಲ್ಲಿ ರಷ್ಯಾದ ದಾಳಿಗೆ ನಾಲ್ವರು ನಾಗರಿಕರು ಹತರಾಗಿದ್ದು, ಎಂಟು ಜನರು ಗಾಯಗೊಂಡಿರುವುದಾಗಿ ಉಕ್ರೇನ್‌ ಅಧ್ಯಕ್ಷರ ಕಚೇರಿಯ ಉಪ ಮುಖ್ಯಸ್ಥ ಕಿರಿಲೊ ಟಿಮೊಶೆಂಕೊ ತಿಳಿಸಿದ್ದಾರೆ

* ಉಕ್ರೇನ್‌ನ ಬಖ್‌ಮಟ್‌ ನಗರದಲ್ಲಿ ಯುದ್ಧ ತೀವ್ರಗೊಂಡಿದೆ. ಶೆಲ್‌ ದಾಳಿಯಿಂದ ಮಕೀವ್ಕಾದಲ್ಲಿ ಶಾಲೆಗೆ ಹಾನಿಯಾಗಿದೆ

* ಗಡಿ ಪ್ರದೇಶದಲ್ಲಿ ಉಕ್ರೇನ್‌ ಕಾಲುಕೆರೆದು ಯುದ್ಧಕ್ಕೆ ಪ್ರಚೋದಿಸುತ್ತಿರುವುದಾಗಿ ರಷ್ಯಾದ ಮಿತ್ರ ರಾಷ್ಟ್ರ ಬೆಲರೂಸ್‌ ಆರೋಪಿಸಿದೆ

* ಉಕ್ರೇನ್‌ಗೆ ನ್ಯಾಟೊ ಸದಸ್ಯ ರಾಷ್ಟ್ರಗಳು ಶಸ್ತ್ರಾಸ್ತ್ರ ಪೂರೈಕೆ ನೆರವು ಮುಂದುವರಿಸುವಂತೆ ನ್ಯಾಟೊ ಮುಖ್ಯಸ್ಥ ಸ್ಟೋಲ್ಟೆನ್‌ಬರ್ಗ್‌ ಕರೆ ಕೊಟ್ಟಿದ್ದಾರೆ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು