ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು: ಬಾಣಸಿಗ, ಬಟ್ಟೆ ತೊಳೆಯುವವ, ಮಿಮಿಕ್ರಿ ಕಲಾವಿದರಾದ ಅಭ್ಯರ್ಥಿಗಳು

ರಂಗೇರುತ್ತಿರುವ ಚುನಾವಣಾ ಪ್ರಚಾರ
Last Updated 25 ಮಾರ್ಚ್ 2021, 7:20 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರ ದಿನೇ ದಿನೇ ರಂಗೇರುತ್ತಿದ್ದು, ವಿವಿಧ ಪಕ್ಷಗಳ ಅಭ್ಯರ್ಥಿಗಳು ಮತದಾರರನ್ನು ಓಲೈಸಲು ವೈವಿಧ್ಯಮಯ ಕಸರತ್ತು ನಡೆಸುತ್ತಿದ್ದಾರೆ.

ಕೆಲವರು ಹೋಟೆಲ್‌ನಲ್ಲಿ ಅಡುಗೆ ಮಾಡಿದರೆ, ಇನ್ನೂ ಕೆಲವರು ತೆಂಗಿನ ಕಾಯಿ ಒಡೆದರು. ಒಬ್ಬರು ಬೋರ್‌ವೆಲ್‌ ಒತ್ತಿ ನೀರು ಹಿಡಿದುಕೊಟ್ಟರೆ, ಇನ್ನೊಬ್ಬರು ಎಂಜಿಆರ್‌ ಶೈಲಿಯಲ್ಲಿ ವೇಷಭೂಷಣ ಧರಿಸಿಕೊಂಡು ಸೈಕಲ್ ಮೇಲೆ ಒಬ್ಬೊಂಟಿಯಾಗಿ ಪ್ರಚಾರ ಮಾಡುತ್ತಾ, ಮತದಾರರನ್ನು ಸೆಳೆಯಲು ಪ್ರಯತ್ನಿಸಿದರು.

ರಾಯಪುರಂನ ಎಐಎಡಿಎಂಕೆ ಅಭ್ಯರ್ಥಿ ಡಿ. ಜಯಕುಮಾರ್ ಅವರು, ರಸ್ತೆ ಬದಿಯಲ್ಲಿದ್ದ ಕೊಳವೆಬಾವಿಯ ಕೈಪಂಪ್‌ ಒತ್ತಿ, ಮಹಿಳೆಯೊಬ್ಬರಿಗೆ ನೀರು ಹಿಡಿದುಕೊಡಲು ನೆರವಾದರು. ಮೀನುಗಾರಿಕೆ ಸಚಿವರೂ ಆಗಿರುವ ಜಯಕುಮಾರ್ ಅವರು, ನಟ, ಮಾಜಿ ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್ ಅವರು ಧರಿಸುತ್ತಿದ್ದಂತಹ ಟೋಪಿಯನ್ನು ಧರಿಸಿ, ಸೈಕಲ್ ರಿಕ್ಷಾದಲ್ಲಿ ಕುಳಿತು ಕ್ಷೇತ್ರದಲ್ಲಿ ಮತಯಾಚಿಸಿದರು.

ವಿರುಗಮ್‌ಬಾಕಮ್‌ ಕ್ಷೇತ್ರದ ಡಿಎಂಕೆ ಅಭ್ಯರ್ಥಿ ಎವಿಎಂ ಪ್ರಭಾಕರ್ ರಾಜಾ ಅವರು ಚುನಾವಣಾ ಪ್ರಚಾರದ ವೇಳೆ ಪಾಕಶಾಲಾ ಕೌಶಲವನ್ನು ಪ್ರದರ್ಶಿಸಿದರು. ಹೋಟೆಲ್‌ವೊಂದರಲ್ಲಿ ತವಾ ಮೇಲೆ ದೋಸೆ ಹಿಟ್ಟನ್ನು ಸುರಿದು ಬಿಸಿ ಬಿಸಿ ದೋಸೆ ತಯಾರಿಸಿ, ಮತದಾರರನ್ನು ಆಕರ್ಷಿಸಲು ಪ್ರಯತ್ನಿಸಿದರು. ಎಗ್‌ಮೋರ್‌ನ ಮಕ್ಕಳ್ ನೀಧಿ ಮಯಂ ಅಭ್ಯರ್ಥಿ ಪ್ರಿಯದರ್ಶಿನಿ, ರಸ್ತೆ ಬದಿಯ ಉಪಾಹಾರ ಗೃಹದಲ್ಲಿ ಮಸಾಲೆಯೊಂದಿಗೆ ಕರಿದ ಮೀನಿನ ಖಾದ್ಯಗಳನ್ನು ತಯಾರಿಸುತ್ತಾ ಮತಯಾಚಿಸಿದರು.

ಜನಪ್ರಿಯ ನಟ, ಪಕ್ಷೇತರ ಅಭ್ಯರ್ಥಿ ಮನ್ಸೂರ್ ಅಲಿಖಾನ್ ಅವರು ಸ್ಕೂಟರ್‌ ಮೇಲೆ ಕುಳಿತು ಕ್ಷೇತ್ರದಲ್ಲಿ ಏಕಾಂಗಿಯಾಗಿ ಸುತ್ತಾಡುತ್ತಾ ಪ್ರಚಾರ ನಡೆಸಿದರು. ಕೊಯಮತ್ತೂರು ವಲಯದ ತೊಂಡಮತ್ತೂರ್ ಕ್ಷೇತ್ರದಿಂದ ಸ್ಪರ್ಧಿಸಿರುವ ಖಾನ್‌ ರಸ್ತೆ ಬದಿಯಲ್ಲಿ ಎಳನೀರು ವ್ಯಾಪಾರಿ ಜತೆ ನಿಂತು, ಎಳನೀರು ಕೊಚ್ಚುವ ಮೂಲಕ ಪ್ರಚಾರಕ್ಕೆ ಮುಂದಾದರು. ದುರಾದೃಷ್ಟವಶಾತ್, ಖಾನ್ ಕೊಚ್ಚಿದ ಎಳನೀರನ್ನು ಯಾರೂ ಖರೀದಿಸದಿದ್ದಾಗ, ತಾವೇ ಕುಡಿದು, ವ್ಯಾಪಾರಿಗೆ ಹಣ ನೀಡಿದರು.

ಉತ್ತರ ಭಾರತ ರಾಜ್ಯಗಳ ನಿವಾಸಿಗಳೇ ಹೆಚ್ಚಾಗಿರುವ ಸೌಕಾರ್‌ಪೇಟ್‌ನಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಹಾರ್ಬರ್‌ ಕ್ಷೇತ್ರದ ಡಿಎಂಕೆ ಅಭ್ಯರ್ಥಿ ಪಿ.ಕೆ.ಶೇಖರ್ ಬಾಬು ಮತ್ತು ಲೋಕಸಭಾ ಸದಸ್ಯ ದಯಾನಿಧಿ ಮಾರನ್ ಅವರು ರಾಜಸ್ಥಾನದ ಕೆಂಪು ಬಣ್ಣದ ಪೇಟ ಧರಿಸಿ ಮತ ಯಾಚಿಸಿದರು. ಈ ಹಿಂದಿನ ಚುನಾವಣೆಗಳಲ್ಲಿ ಈ ಸೌಕಾರ್‌ಪೇಟ್‌ನಲ್ಲಿ ಡಿಎಂಕೆ ಪಕ್ಷದ ಅಭ್ಯರ್ಥಿಗಳು ಹಿಂದಿಯಲ್ಲಿ ಪ್ರಚಾರದ ಪೋಸ್ಟರ್‌ಗಳನ್ನು ತಯಾರಿಸಿ ಅಂಟಿಸಲಾಗುತ್ತಿತ್ತು.

ಚುನಾವಣಾ ಪ್ರಚಾರದಲ್ಲಿ ಇವರೆಲ್ಲರಿಗಿಂತ ಒಂದು ಹೆಜ್ಜೆ ಮುಂದಿಟ್ಟವರು ನಾಗಪಟ್ಟಣಂ ವಿಭಾಗದಿಂದ ಕಣಕ್ಕಿಳಿದಿರುವ ಎಐಎಡಿಎಂಕೆ ಪಕ್ಷದ ಅಭ್ಯರ್ಥಿ ತಂಗಾ ಕತಿರಾವನ್‌. ಇವರು ಪ್ರಚಾರ ನಡೆಸುತ್ತಿರುವಾಗ ನಾಗೋರ್‌ನಲ್ಲಿ ಮಹಿಳೆಯೊಬ್ಬಳು ತನ್ನ ಮನೆಯ ಮುಂದೆ ಬಟ್ಟೆ ಒಗೆಯುವುದನ್ನು ಗಮನಿಸಿದರು. ತೊಳೆದ ಬಟ್ಟೆಗಳನ್ನು ಒಣಗಿ ಹಾಕುತ್ತಾ, ‘ಡಿಎಂಕೆ ಪಕ್ಷ ಅಧಿಕಾರಕ್ಕೆ ಬಂದರೆ, ಪ್ರತಿ ಮನೆಗೆ ವಾಷಿಂಗ್‌ ಮಷಿನ್ ನೀಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದೆ. ಮುಂದೆ ನೀವು ಇಷ್ಟೆಲ್ಲ ಕಷ್ಟಪಡುವ ಅಗತ್ಯವಿಲ್ಲ. ನೀವು ಮಾಡಬೇಕಿರುವುದು ಇಷ್ಟೆ, ಎರಡು ಎಲೆಯ ಗುರುತಿಗೆ ಮತ ಹಾಕಿ, ಡಿಎಂಕೆ ಅಭ್ಯರ್ಥಿ ಗೆಲ್ಲಿಸಿದರೆ ಸಾಕು‘ ಎಂದು ಆ ಮಹಿಳೆಗೆ ತಿಳಿಸಿದರು.

ಎಐಎಡಿಎಂಕೆ ಪ್ರತಿಸ್ಪರ್ಧಿ ಮತ್ತು ಅಮ್ಮ ಮಕ್ಕಲ್ ಮುನ್ನೇತ್ರ ಕಜಗಂ ಪಕ್ಷದ ಮುಖ್ಯಸ್ಥ ಟಿಟಿವಿ ದಿನಕರನ್ ಪ್ರಚಾರದ ವೇಳೆ ಡಿಎಂಕೆ ನಾಯಕ ದಿವಂಗತ ಎಂ ಕರುಣಾನಿಧಿ ಅವರ ಧ್ವನಿಯನ್ನು ಮಿಮಿಕ್ರಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT