ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಲಸಿಗರಿಂದ ಬಿಜೆಪಿಯಲ್ಲಿ ಅತೃಪ್ತಿ: ಮಮತಾ

ಪಕ್ಷಾಂತರಿಗಳಿಗೆ ಮಮತಾ ತರಾಟೆ: ಮತಯಂತ್ರಗಳ ಮೇಲೆ ನಿಗಾ ಇರಿಸಲು ಜನರಿಗೆ ಸೂಚನೆ
Last Updated 19 ಮಾರ್ಚ್ 2021, 21:51 IST
ಅಕ್ಷರ ಗಾತ್ರ

ಎಗ್ರಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಮುಖಂಡರ ಪಕ್ಷಾಂತರವು ಕುತೂಹಲಕರವಾಗಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯ ಹಲವು ಮುಖಂಡರು ಬಿಜೆಪಿಗೆ ಹೋಗಿದ್ದಾರೆ.

ಪಕ್ಷ ಬಿಟ್ಟು ಹೋದವರೆಲ್ಲರೂ ವಂಚಕರು, ಅವರು ಹೋಗಿದ್ದೇ ಒಳ್ಳೆಯದಾಗಿದೆ ಎಂದು ಮಮತಾ ಹೇಳಿದ್ದಾರೆ. ಆದರೆ, ಇವರೆಲ್ಲರೂ ಹೋಗಿ ಸೇರಿರುವ ಬಿಜೆಪಿಯಲ್ಲಿ, ಅಲ್ಲಿ ಮೊದಲೇ ಇದ್ದವರಿಗೆ ಭಾರಿ ಅಸಮಾಧಾನ ಉಂಟಾಗಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.

ಮಮತಾ ಅವರು ಪಕ್ಷಾಂತರವನ್ನೇ ಚುನಾವಣಾ ವಿಷಯ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ. ‘ಮೀರ್‌ ಜಾಫರ್‌ಗಳು ಬಿಜೆಪಿಯ ಅಭ್ಯರ್ಥಿಗಳಾಗಿದ್ದಾರೆ. ಪಕ್ಷದಲ್ಲಿ ಮೊದಲೇ ಇದ್ದವರಿಗೆ ಇದರಿಂದ ಹತಾಶೆಯಾಗಿದೆ’ ಎಂದು ಪುರ್ಬ ಮೇದಿನಿಪುರದ ಎಗ್ರಾದಲ್ಲಿ ಚುನಾವಣಾ ಪ್ರಚಾರ ಭಾಷಣಾ ಮಾಡುತ್ತಾ ಮಮತಾ ಹೇಳಿದ್ದಾರೆ. ಟಿಎಂಸಿ ಬಿಟ್ಟು ಹೋದ ಸುವೇಂದು ಅಧಿಕಾರಿ, ರಾಜೀವ್‌ ಬ್ಯಾನರ್ಜಿ, ಮುಕುಲ್‌ ರಾಯ್ ಮುಂತಾದವರನ್ನು ಪರೋಕ್ಷವಾಗಿ ಅವರು ಉಲ್ಲೇಖಿಸಿದ್ದಾರೆ.

‘ಬಂಗಾಳದ ಹೆಮ್ಮೆ’ ಎಂಬುದು ಮಮತಾ ಅವರು ನೆಚ್ಚಿಕೊಂಡಿರುವ ಇನ್ನೊಂದು ವಿಚಾರ. ಬಿಜೆಪಿ ‘ಹೊರಗಿನವರ ಪಕ್ಷ’ ಎಂದು ಅವರು ಪದೇ ಪದೇ ಹೇಳುತ್ತಿದ್ದಾರೆ. ಆ ಪಕ್ಷದ ಎಲ್ಲ ಉನ್ನತ ನಾಯಕರೂ ರಾಜ್ಯದ ಹೊರಗಿನವರು ಎಂಬುದು ಅವರ ಪ್ರತಿಪಾದನೆ.

ಪಕ್ಷಾಂತರ ಮಾಡಿದವರಿಗೆ ಈ ಹಿಂದೆ ಹಲವು ಜವಾಬ್ದಾರಿಗಳನ್ನು ವಹಿಸಲಾಗಿತ್ತು. ‘ಪ್ರತಿ ಯೋಜನೆಯ ಮೇಲೆಯೂ ನಾನು ನಿಗಾ ಇರಿಸಿದ್ದರಿಂದ ಪ್ರಯೋಜನ ಎಲ್ಲರಿಗೂ ತಲುಪುತ್ತಿತ್ತು’ ಎಂದು ಅವರು ಹೇಳಿದ್ದಾರೆ.

ಮತದಾನದ ಬಳಿಕ, ಮತಯಂತ್ರಗಳನ್ನು ಇರಿಸಿರುವ ಕೇಂದ್ರಗಳ ಮೇಲೆ ಜನರು ನಿಗಾ ಇರಿಸಬೇಕು. ಅಲ್ಲಿಂದ ಹೋಗುವಂತೆಕೇಂದ್ರದ ಭದ್ರತಾ ಪಡೆಗಳು ಅಥವಾ ರಾಜ್ಯ ಪೊಲೀಸರು ಹೇಳಿದರೂ ಹೋಗಬಾರದು ಎಂದು ಮಮತಾ ಜನರಿಗೆ ತಿಳಿಸಿದರು.

ಬಿಜೆಪಿ ಆಳ್ವಿಕೆ ಇರುವ ರಾಜ್ಯಗಳಲ್ಲಿ ಮಹಿಳೆಯರು ಸುರಕ್ಷಿತರಲ್ಲ ಎಂದು ಅವರು ಆರೋಪಿಸಿದ್ದಾರೆ. ‘ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗುತ್ತದೆ. ಅತ್ಯಾಚಾರ ಸಂತ್ರಸ್ತೆಯ ತಂದೆಯನ್ನು ಕೊಲೆ ಮಾಡಲಾಗುತ್ತದೆ’ ಎಂದು ಅವರು ಹೇಳಿದ್ದಾರೆ.

‘ಬಡವನೊಬ್ಬ ₹500 ಕದ್ದರೆ ಅವನ ಮುಖಕ್ಕೆ ಬಾರಿಸುತ್ತೇವೆ. ಬಿಜೆಪಿ ಲಕ್ಷಾಂತರ ರೂಪಾಯಿ ಕದ್ದಿದೆ. ಸಾರ್ವಜನಿಕ ವಲಯದ ಉದ್ಯಮಗಳನ್ನು ಮಾರುವ ಮೂಲಕ ಲಕ್ಷಾಂತರ ರೂಪಾಯಿ ಕೊಳ್ಳೆ ಹೊಡೆಯಲಾಗಿದೆ. ಬಿಜೆಪಿ ನಾಯಕರ ಈ ಕಳ್ಳತನ ಹೊರಗೆ ಬರುವುದೇ ಇಲ್ಲ’ ಎಂದು ಮಮತಾ ಆಪಾದಿಸಿದ್ದಾರೆ.

ಕೇಂದ್ರ ಸರ್ಕಾರವನ್ನು ಉರುಳಿಸುವ ವಿಚಾರವನ್ನು ಅವರು ಪುನರುಚ್ಚರಿಸಿದ್ದಾರೆ. ‘ದೆಹಲಿಯಲ್ಲಿರುವ ಬಿಜೆಪಿ ಸರ್ಕಾರವನ್ನು ಕೆಳಗಿಳಿಸಲು ಪಶ್ಚಿಮ ಬಂಗಾಳದ ಗೆಲುವು ಪೀಠಿಕೆ. ನಾನು ಮತ್ತೆ ಕೇಂದ್ರ ಸ್ಥಾನಕ್ಕೆ ಬರುವುದನ್ನು ನೀವು ಬಯಸುವುದಿದ್ದರೆ ಟಿಎಂಸಿಯ ಪ್ರತಿಯೊಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಿ’ ಎಂದು ಅವರು ಮನವಿ ಮಾಡಿದ್ದಾರೆ.

ಭಾಷಣದ ಮುಕ್ತಾಯದಲ್ಲಿ ಚಂಡಿ ಶ್ಲೋಕವನ್ನು ಅವರು ಮತ್ತೆ ಪಠಿಸಿದರು. ಮುಸ್ಲಿಮರು, ಕ್ರೈಸ್ತರು ಮತ್ತು ವಿವಿಧ ಬುಡಕಟ್ಟು ಜನರಿಗೂ ಅವರು ಶುಭಾಶಯ ಹೇಳಿದರು.

* ಪಾನ್‌ಪರಾಗ್‌ ಜಗಿದುಕೊಂಡು ಹಣೆಗೆ ತಿಲಕವನ್ನೂ ಇರಿಸಿದ ಬಿಜೆಪಿಯವರು ಜನರ ಮೇಲೆ ದಾಳಿ ನಡೆಸುತ್ತಿದ್ದಾರೆ. ಮೇಲೆ ಹರಿ ಹರಿ ಎನ್ನುತ್ತಾ ಹಿಂದಿನಿಂದ ಇರಿಯುತ್ತಾರೆ.

-ಮಮತಾ ಬ್ಯಾನರ್ಜಿ, ಟಿಎಂಸಿ ಮುಖ್ಯಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT