ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ: ಆರೋಪ–ಪ್ರತ್ಯಾರೋಪ ತೀವ್ರ

ಪೌರತ್ವ ನಿರಾಕರಿಸಿದ ಮಮತಾ: ಶಾ ಆರೋಪ l ಕೋವಿಡ್‌ ಹಬ್ಬಲು ಬಿಜೆಪಿ ಕಾರಣ: ಮಮತಾ ಆಕ್ರೋಶ
Last Updated 16 ಏಪ್ರಿಲ್ 2021, 19:31 IST
ಅಕ್ಷರ ಗಾತ್ರ

ತೆಹಟ್ಟ (ಪಶ್ಚಿಮ ಬಂಗಾಳ): ವಿಧಾನಸಭೆ ಚುನಾವಣೆ ನಡೆಯುತ್ತಿರುವ ಪಶ್ಚಿಮ ಬಂಗಾಳದ ಪ್ರಚಾರ ಕಣ ದಲ್ಲಿ ಆರೋಪ–ಪ್ರತ್ಯಾರೋಪ ತೀವ್ರಗೊಂ ಡಿದೆ. ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಅವರು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಶುಕ್ರವಾರ ಪುನಃ ವಾಗ್ದಾಳಿ ನಡೆಸಿದ್ದಾರೆ.

‘ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಲು, ಬಿಜೆಪಿಯವರು ಚುನಾವಣಾ ಪ್ರಚಾರಕ್ಕಾಗಿ ಹೊರರಾಜ್ಯದಿಂದ ಜನರನ್ನು ಕರೆತಂದದ್ದೇ ಕಾರಣ’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ತೆಹಟ್ಟದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ರ್‍ಯಾಲಿಯಲ್ಲಿ ಮಾತನಾಡುತ್ತಾ, ‘ದಲಿತ ಮತು ಅ ಹಾಗೂ ನಾಮಸುದ್ರ ಸಮುದಾಯಗಳಿಗೆ ಮಮತಾ ಅವರು ಪೌರತ್ವವನ್ನು ನಿರಾಕರಿಸಿದ್ದಾರೆ’ ಎಂದು ಶಾ ಆರೋಪಿಸಿದರು.

ಈ ಎರಡು ಸಮುದಾಯಗಳು ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಸಂಖ್ಯಾಬಲವನ್ನು ಹೊಂದಿದ್ದು, ಕನಿಷ್ಠ 100 ಕ್ಷೇತ್ರಗಳಲ್ಲಿ ನಿರ್ಣಾಯಕ ಎನಿಸಲಿವೆ.

ನಾದಿಯಾ ಜಿಲ್ಲೆಯ ನವದ್ವೀಪ್‌ನಲ್ಲಿ ಮಮತಾ ಬ್ಯಾನರ್ಜಿ ಪ್ರಚಾರ ಸಭೆ-ಪಿಟಿಐ ಚಿತ್ರ
ನಾದಿಯಾ ಜಿಲ್ಲೆಯ ನವದ್ವೀಪ್‌ನಲ್ಲಿ ಮಮತಾ ಬ್ಯಾನರ್ಜಿ ಪ್ರಚಾರ ಸಭೆ
-ಪಿಟಿಐ ಚಿತ್ರ

‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಈ ಎರಡು ಸಮುದಾಯಗಳ ಅಭಿವೃದ್ಧಿಗಾಗಿ ಕನಿಷ್ಠ ₹100 ಕೋಟಿ ಮೀಸಲಿಡಲಾಗುವುದು. ಕನಿಷ್ಠ ಐದಾರು ದಶಕಗಳಿಂದ ಈ ಸಮುದಾಯಗಳು ಇಲ್ಲಿ ನೆಲೆಸಿವೆ. ಇಲ್ಲಿಯೇ ಮೂರು ತಲೆಮಾರುಗಳನ್ನು ಕಂಡಿವೆ. ಆದರೆ ಅವರು ಪೌರತ್ವ ಪಡೆಯಲಾರರು ಎಂದು ದೀದಿ ಹೇಳುತ್ತಾರೆ. ಇವರಿಗೆ ಪೌರತ್ವ ನೀಡುವುದನ್ನು ಮಮತಾ ಅವರ ವೋಟ್‌ಬ್ಯಾಂಕ್‌ ಸಹಿಸುವುದಿಲ್ಲ ಎಂಬುದೇ ಇದಕ್ಕೆ ಕಾರಣ’ ಎಂದರು.

ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ ಅವರನ್ನು ‘ಪ್ರವಾಸಿ ರಾಜಕಾರಣಿ’ ಎಂದು ಲೇವಡಿ ಮಾಡಿದ ಶಾ, ‘ಚುನಾವ
ಣೆಗಳು ಬಹುತೇಕ ಮುಗಿಯುತ್ತಿರುವ ಸಂದರ್ಭದಲ್ಲಿ ಒಬ್ಬ ಪ್ರವಾಸಿ ರಾಜಕಾ
ರಣಿ ರಾಜ್ಯವನ್ನು ಪ್ರವೇಶಿಸಿ, ನಮ್ಮ ಡಿಎನ್‌ಎ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅಭಿವೃದ್ಧಿ, ರಾಷ್ಟ್ರೀಯತೆ ಹಾಗೂ ಆತ್ಮನಿರ್ಭರ ಭಾರತವೇ ಬಿಜೆಪಿಯ ಡಿಎನ್‌ಎ’ ಎಂದರು.

ನಾದಿಯಾ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಶುಕ್ರವಾರ ಮಾತನಾಡಿದ ಮಮತಾ, ‘ಪ್ರಧಾನಿ ಮೋದಿ ಅವರ ಪ್ರಚಾರ ಸಭೆಗಳಿಗೆ ಪೆಂಡಾಲ್‌ ಹಾಕಲು, ವೇದಿಕೆ ನಿರ್ಮಿಸಲು ಗುಜರಾತ್‌ನಂಥ ರಾಜ್ಯಗಳಿಂದ ಬಿಜೆಪಿಯವರು ಜನರನ್ನು ಕರೆತಂದಿದ್ದರು. ಬಂಗಾಳದಲ್ಲಿ ಕೋವಿಡ್‌ ಪಸರಿಸಲು ಇವರೇ ಕಾರಣ. ಚುನಾ
ವಣಾ ಪ್ರಚಾರಕ್ಕಾಗಿ ಮೋದಿ ಅಥವಾ ಇತರ ನಾಯಕರು ರಾಜ್ಯಕ್ಕೆ ಬರುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಕೋವಿಡ್‌ ಪೀಡಿತ ರಾಜ್ಯಗಳಿಂದ ಜನರನ್ನೇಕೆ ಕರೆತರಬೇಕು’ ಎಂದು ಅವರು ಪ್ರಶ್ನಿಸಿದ್ದಾರೆ.

ಹೊರಗಿನಿಂದ ಜನರನ್ನು ಕರೆತರುವುದನ್ನು ನಿಲ್ಲಿಸುವಂತೆ ಬಿಜೆಪಿಗೆ ಸೂಚಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸುವುದಾಗಿ ಅವರು ಹೇಳಿದ್ದಾರೆ.

ಐವರು ಅಭ್ಯರ್ಥಿಗಳಿಗೆ ಕೋವಿಡ್‌

‘ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ವಿವಿಧ ಪಕ್ಷಗಳ ಕನಿಷ್ಠ ಐವರು ಅಭ್ಯರ್ಥಿಗಳಿಗೆ ಕೋವಿಡ್‌ ದೃಢಪಟ್ಟಿದೆ’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಕೋವಿಡ್‌ ದೃಢಪಟ್ಟ ಐವರಲ್ಲಿ ಮೂವರು ತೃಣಮೂಲ ಕಾಂಗ್ರೆಸ್‌ ಪಕ್ಷದವರು. ಬಿಜೆಪಿ ಹಾಗೂ ಆರ್‌ಎಸ್‌ಪಿಯ ತಲಾ ಒಬ್ಬ ಅಭ್ಯರ್ಥಿಗೆ ಸೋಂಕು ದೃಢಪಟ್ಟಿದೆ.

ಕೋವಿಡ್‌ ದೃಢಪಟ್ಟವರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುವಂತಿಲ್ಲ. ಅವರು ಕೂಡಲೇ ಮನೆಯಲ್ಲಿ ಪ್ರತ್ಯೇಕವಾಸ ಆರಂಭಿಸಬೇಕು ಅಥವಾ ಆಸ್ಪತ್ರೆಗೆ ದಾಖಲಾಗಬೇಕು ಎಂದು ಮುಖ್ಯ ಚುನಾವಣಾಧಿಕಾರಿ ಸೂಚಿಸಿದ್ದಾರೆ.

ಒಂದೇಹಂತದ ಮತದಾನಕ್ಕೆ ಆಕ್ಷೇಪ

ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವುದರಿಂದ, ಬಾಕಿ ಇರುವ ಕೊನೆಯ ಮೂರು ಹಂತದ ಚುನಾವಣೆಗಳನ್ನು ಒಂದೇ ಹಂತದಲ್ಲಿ ನಡೆಸಬೇಕು ಎಂಬ ಟಿಎಂಸಿಯ ಪ್ರಸ್ತಾವವನ್ನು ಬಿಜೆಪಿ ಹಾಗೂ ಎಡಪಕ್ಷಗಳು ವಿರೋಧಿಸಿವೆ.

ಕೆಲವು ದಿನಗಳ ಹಿಂದೆಯೇ ಮುಖ್ಯ ಚುನಾವಣಾ ಆಯೋಗವನ್ನು ಭೇಟಿಮಾಡಿದ್ದ ಟಿಎಂಸಿಯ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಅವರು ಬಾಕಿ ಇರುವ ಎಲ್ಲಾ ಚುನಾವಣೆಗಳನ್ನು ಒಂದೇ ಹಂತದಲ್ಲಿ ಮುಗಿಸಬೇಕು ಎಂದು ಮನವಿ ಮಾಡಿದ್ದರು. ಅಂಥ ಯಾವುದೇ ಯೋಚನೆ ಇಲ್ಲ ಎಂದು ಚುನಾವಣಾ ಆಯೋಗ ಗುರುವಾರ ಹೇಳಿತ್ತು.

ಆದರೆ, ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕೋವಿಡ್‌ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕಲ್ಕತ್ತಾ ಹೈ ಕೋರ್ಟ್‌ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವ ಕಾರಣಕ್ಕೆ ಚುನಾವಣಾ ಆಯೋಗವು ಶುಕ್ರವಾರ ವರ್ಚುವಲ್‌ ಮಾಧ್ಯಮದಲ್ಲಿ ಸರ್ವಪಕ್ಷ ಸಭೆ ಆಯೋಜಿಸಿತ್ತು.

ಬಿಜೆಪಿ ವಿರೋಧ: ಬಾಕಿ ಇರುವ ಮೂರು ಹಂತಗಳ ಮತದಾನವನ್ನು ಒಂದೇ ಹಂತದಲ್ಲಿ ನಡೆಸಿದರೆ ಮತದಾರರು, ಅಭ್ಯರ್ಥಿಗಳು ಸೇರಿದಂತೆ ಎಲ್ಲರಿಗೂ ತೊಂದರೆಯಾಗುತ್ತದೆ. ಆ ಕಾರಣಕ್ಕೆ ನಾವು ಇದನ್ನು ವಿರೋಧಿಸಿದ್ದೇವೆ ಎಂದು ಸಭೆಯಲ್ಲಿ ಬಿಜೆಪಿಯ ಪರವಾಗಿ ಹಾಜರಿದ್ದ ಸ್ವಪನ್‌ದಾಸ್‌ ಗುಪ್ತಾ ತಿಳಿಸಿದ್ದಾರೆ.

‘ಒಂದೇ ಹಂತದಲ್ಲಿ ಚುನಾವಣೆ ನಡೆಸುವ ವಿಚಾರವಾಗಿ ನಾವೇನೂ ಹೇಳಿಲ್ಲ. ಬದಲಿಗೆ, ಚುನಾವಣೆ ಎಂಟು ಹಂತಗಳಲ್ಲೇ ನಡೆಯಲಿದೆ, ನಾವು ಕೋವಿಡ್‌ ನಿಯಮಾವಳಿಗಳಿಗೆ ಬದ್ಧರಾಗಿರುತ್ತೇವೆ ಎಂಬ ಭರವಸೆ ನೀಡಿದ್ದೇವೆ’ ಎಂದು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡುತ್ತಾ ಅವರು ತಿಳಿಸಿದರು.

ವೇಳಾಪಟ್ಟಿ ಅನುಸರಿಸಿ: ಚುನಾವಣಾ ಪ್ರಕ್ರಿಯೆ ಈಗಾಗಲೇ ಜಾರಿಯಲ್ಲಿದೆ. ಇದರಲ್ಲಿ ಯಾವುದೇ ಬದಲಾವಣೆಗೆ ಈಗ ಅವಕಾಶ ಇಲ್ಲ. ವೇಳಾಪಟ್ಟಿಯಂತೆಯೇ ಎಲ್ಲವೂ ನಡೆಯಬೇಕು ಎಂದು ಎಡಪಕ್ಷಗಳು ಸಹ ಹೇಳಿವೆ.

‘ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕೋವಿಡ್‌ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಎಲ್ಲರೂ ಒಪ್ಪಿದ್ದೇವೆ’ ಎಂದು ಸಿಪಿಎಂ ಮುಖಂಡ ವಿಕಾಸ್‌ ಭಟ್ಟಾಚಾರ್ಯ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT