ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಐಆರ್‌ ಎಲ್ಲಿದೆ, ನೀವು ಕಾನೂನಿಗಿಂತ ದೊಡ್ಡವರೇ?: ಪರಮ್‌ ಬೀರ್‌ಗೆ ಹೈಕೋರ್ಟ್‌

ಪೊಲೀಸ್‌ ಅಧಿಕಾರಿ ಪರಮ್‌ ಬೀರ್‌ ಸಿಂಗ್‌ಗೆ ಬಾಂಬೆ ಹೈಕೋರ್ಟ್‌ ಪ್ರಶ್ನೆ
Last Updated 31 ಮಾರ್ಚ್ 2021, 14:31 IST
ಅಕ್ಷರ ಗಾತ್ರ

ಮುಂಬೈ: ‘ಗೃಹ ಸಚಿವ ಅನಿಲ್‌ ದೇಶಮುಖ್‌ ವಿರುದ್ಧದ ಭ್ರಷ್ಟಾಚಾರ ಆರೋಪ ಕುರಿತಂತೆ ಎಫ್‌ಐಆರ್ ಎಲ್ಲಿದೆ? ಎಫ್‌ಐಆರ್‌ ಇಲ್ಲದೇ ತನಿಖೆಗೆ ಹೇಗೆ ಸಾಧ್ಯ’ ಎಂದ ಬಾಂಬೆ ಹೈಕೋರ್ಟ್‌, ‘ನೀವು ಕಾನೂನಿಗಿಂತ ದೊಡ್ಡವರೇ’ ಎಂದು ಪೊಲೀಸ್‌ ಅಧಿಕಾರಿ ಪರಮ್‌ಬೀರ್‌ ಸಿಂಗ್‌ ಅವರನ್ನು ಬುಧವಾರ ತರಾಟೆಗೆ ತೆಗೆದುಕೊಂಡಿತು.

‘ದೇಶಮುಖ್‌ ಅವರು ಮಾಡಿದ್ದರು ಎನ್ನಲಾದ ತಪ್ಪು ನಿಮ್ಮ ಅರಿವಿಗೆ ಬಂದ ಮೇಲೆ ನೀವು ಅವರ ವಿರುದ್ಧ ಪೊಲೀಸರಿಗೆ ಏಕೆ ದೂರು ನೀಡಲಿಲ್ಲ’ ಎಂದೂ ಪ್ರಶ್ನಿಸಿತು.

‘ಸಚಿವ ದೇಶಮುಖ್‌ ಅವರು ಮುಂಬೈನಲ್ಲಿರುವ ಬಾರ್‌ ಮತ್ತು ರೆಸ್ಟೋರಂಟ್‌ಗಳಿಂದ ಪ್ರತಿ ತಿಂಗಳು ₹ 100 ಕೋಟಿ ಸಂಗ್ರಹಿಸುವಂತೆ ಪೊಲೀಸ್‌ ಅಧಿಕಾರಿ ಸಚಿನ್‌ ವಾಜೆ ಅವರಿಗೆ ಸೂಚಿಸಿದ್ದರು’ ಎಂಬುದಾಗಿ ಸಿಂಗ್‌ ಇತ್ತೀಚೆಗೆ ಆರೋಪ ಮಾಡಿದ್ದರು.

ಈ ಸಂಬಂಧ ದೇಶಮುಖ್‌ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸುವಂತೆ ಸಿಂಗ್‌ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ದೀಪಂಕರ್‌ ದತ್ತಾ ಹಾಗೂ ನ್ಯಾಯಮೂರ್ತಿ ಜಿ.ಎಸ್‌.ಕುಲಕರ್ಣಿ ಅವರಿರುವ ನ್ಯಾಯಪೀಠ ಮೇಲಿನಂತೆ ಪ್ರಶ್ನಿಸಿತು.

'ನೀವು ಮಾಡಿರುವ ಆರೋಪ ಕುರಿತು ಮೊದಲು ಯಾಕೆ ಪೊಲೀಸರ ಬಳಿ ದೂರು ದಾಖಲಿಸಲಿಲ್ಲ. ಈ ದೂರಿಗೆ ಸಂಬಂಧಿಸಿದಂತೆ ಎಫ್‌ಐಆರ್‌ ಕೂಡ ದಾಖಲಾಗದಿರುವಾಗ ಹೈಕೋರ್ಟ್‌ ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ಆಗುವುದಿಲ್ಲ. ಸಿಬಿಐ ಸೇರಿದಂತೆ ಯಾವುದೇ ಸಂಸ್ಥೆಯಿಂದ ತನಿಖೆಗೆ ಆದೇಶಿಸಲು ಸಾಧ್ಯ ಇಲ್ಲ’ ಎಂದು ನ್ಯಾಯಪೀಠ ಹೇಳಿತು.

‘ನೀವೊಬ್ಬ ಹಿರಿಯ ಪೊಲೀಸ್‌ ಅಧಿಕಾರಿ. ಹೀಗಾಗಿ ಯಾವುದೇ ತಪ್ಪು ಕಂಡು ಬಂದರೂ ಕೂಡಲೇ ದೂರು ದಾಖಲಿಸಬೇಕಾದ್ದು ನಿಮ್ಮ ಕರ್ತವ್ಯ. ನಿಮ್ಮ ಇಲಾಖೆಗೆ ಸಂಬಂಧಿಸಿದ ಸಚಿವರು ತಪ್ಪು ಮಾಡಿದ್ದಾರೆ ಎಂಬುದು ಗೊತ್ತಾದ ಮೇಲೂ ನೀವು ಮೌನವಾಗಿದ್ದಿರಿ’ ಎಂದು ಮುಖ್ಯನ್ಯಾಯಮೂರ್ತಿ ದತ್ತಾ ಹೇಳಿದರು.

‘ಮೊದಲು ಪೊಲೀಸರ ಬಳಿ ದೂರು ದಾಖಲಿಸಿ. ಒಂದು ವೇಳೆ ಅವರು ನಿರಾಕರಿಸಿದರೆ, ನೀವು ಸಂಬಂಧಪಟ್ಟ ನ್ಯಾಯಾಲಯದಲ್ಲಿ ದೂರು ನೀಡಿ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT