ಪಕ್ಷವು ನಿರ್ಧರಿಸಿದರೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವೆ: ಯೋಗಿ ಆದಿತ್ಯನಾಥ್

ಗೋರಖ್‌ಪುರ: ತಮ್ಮ ಪಕ್ಷವು ನಿರ್ಧರಿಸಿದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಶುಕ್ರವಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೇಳಿದ್ದಾರೆ.
ಯೋಗಿ ಆದಿತ್ಯನಾಥ್ ಅವರು ಸದ್ಯ ಉತ್ತರ ಪ್ರದೇಶದ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.
ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ನೀವು ಸ್ಪರ್ಧಿಸುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, 'ನಾನು ಯಾವಾಗಲೂ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಮತ್ತು ಪಕ್ಷ ಹೇಳುವುದಾದರೆ ನಾನು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ' ಎಂದು ಹೇಳಿದರು.
ಪಕ್ಷವು ಸಂಸದೀಯ ಮಂಡಳಿಯನ್ನು ಹೊಂದಿದ್ದು, ಯಾರು ಎಲ್ಲಿಂದ ಸ್ಪರ್ಧಿಸಬೇಕು ಎಂಬುದನ್ನು ಅದು ನಿರ್ಧರಿಸುತ್ತದೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.
ಕಳೆದ 2017ರ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಬಿಜೆಪಿ ಸರ್ಕಾರ ಏನೆಲ್ಲ ಭರವಸೆಗಳನ್ನು ನೀಡಿತ್ತೋ ಅವುಗಳನ್ನೆಲ್ಲ ಪೂರೈಸಿದೆ. ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ರಾಜ್ಯ ಮಾದರಿಯಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಗಲಭೆ ನಡೆಯದೆ ದೀಪಾವಳಿ ಸೇರಿದಂತೆ ಎಲ್ಲ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಲಾಗಿದೆ ಎಂದು ಆದಿತ್ಯನಾಥ್ ಹೇಳಿದರು.
'ಉತ್ತರ ಪ್ರದೇಶವು ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿತ್ತು ಮತ್ತು 2017 ರ ನಂತರ ರಾಜ್ಯವು ಇಂತಹ ಪರಿಸ್ಥಿತಿಯಿಂದ ಹೊರಬಂದಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ವಿವಿಧ ಯೋಜನೆಗಳ ಪ್ರಯೋಜನಗಳು ತಲುಪಿವೆ' ಎಂದು ಅವರು ಹೇಳಿದರು.
'ಉತ್ತಮ ರಸ್ತೆ ಸಂಪರ್ಕ ಮತ್ತು ಭದ್ರತೆಯ ಖಾತರಿಯಿಂದಾಗಿ ವಿದೇಶದಿಂದ ಹೂಡಿಕೆ ಮಾಡಲು ರಾಜ್ಯವು ಈಗ ದೇಶದ ಅತ್ಯುತ್ತಮ ತಾಣವಾಗಿದೆ. ಮೊದಲು ವಿದೇಶಗಳು ಹೂಡಿಕೆ ಮಾಡುತ್ತಿರಲಿಲ್ಲ. ಆದರೆ ಈಗ ದೇಶಕ್ಕೆ ಹೊರಗಿನಿಂದ ಹೂಡಿಕೆ ಬರುತ್ತಿದೆ. ಮೊದಲು ಜನರು ಉತ್ತರ ಪ್ರದೇಶವು ಗುಂಡಿಗಳು ಮತ್ತು ಹಳ್ಳಗಳಿಂದ ಕೂಡಿದೆ ಎನ್ನುತ್ತಿದ್ದರು. ಈಗ ಎಕ್ಸ್‌ಪ್ರೆಸ್ ವೇಗಳು ಮತ್ತು ಚತುಷ್ಪಥ ರಸ್ತೆಗಳ ಸಂಪರ್ಕಕ್ಕೆ ಉತ್ತರ ಪ್ರದೇಶ ಹೆಸರುವಾಸಿಯಾಗಿದೆ' ಎಂದು ಅವರು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.