ಭಾನುವಾರ, ಜನವರಿ 17, 2021
28 °C
ದೆಹಲಿಯ ಸಿಂಘು ಗಡಿಯಲ್ಲಿ ಸಭೆ

ಮಾತುಕತೆ ವಿಫಲವಾದರೆ ಕಠಿಣ ತೀರ್ಮಾನ; ರೈತ ನಾಯಕರಿಂದ ಸರ್ಕಾರಕ್ಕೆ ಎಚ್ಚರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಸರ್ಕಾರದ ಜತೆಗೆ ಸೋಮವಾರ (ಜ.4) ನಡೆಯಲಿರುವ ಸಭೆಯಲ್ಲಿ ನಮ್ಮ ಬೇಡಿಕೆಗಳು ಈಡೇರದೇ ಇದ್ದಲ್ಲಿ ಕಠಿಣ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ’ ಎಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಸರ್ಕಾರವನ್ನು ಎಚ್ಚರಿಸಿವೆ.

ದೆಹಲಿಯ ಸಿಂಘು ಗಡಿಯಲ್ಲಿ ಸಭೆ ನಡೆಸಿದ ರೈತ ನಾಯಕರು, ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ಬುಧವಾರದ ಮಾತುಕತೆಯಲ್ಲಿ ವಿದ್ಯುತ್ ಮಸೂದೆ ಹಾಗೂ ಕೃಷಿ ತ್ಯಾಜ್ಯ ದಹನ ವಿಚಾರದಲ್ಲಿ ಸಹಮತ ಮೂಡಿದ್ದರೂ, ಮುಖ್ಯ ಬೇಡಿಕೆಗಳು ಬಾಕಿ ಉಳಿದಿವೆ. ಕಾಯ್ದೆಗಳನ್ನು ರದ್ದುಪಡಿಸುವ ವಿಚಾರದಲ್ಲಿ ಸರ್ಕಾರ ಮೊಂಡುತನ ಪ್ರದರ್ಶಿಸಿದರೆ, ಹರಿಯಾಣದ ಎಲ್ಲ ಮಾಲ್‌ ಹಾಗೂ ಪೆಟ್ರೋಲ್ ಬಂಕ್‌ಗಳನ್ನು ಬಂದ್ ಮಾಡಲಾಗುವುದು’ ಎಂದು ರೈತ ನಾಯಕ ವಿಕಾಸ್ ತಿಳಿಸಿದರು.

ಬೇಡಿಕೆ ಈಡೇರದಿದ್ದರೆ, ಹರಿಯಾಣ– ರಾಜಸ್ಥಾನ ಗಡಿಯ ಶಹಜಹಾನ್‌ಪುರದಲ್ಲಿ ಧರಣಿ ಕುಳಿತಿರುವ ರೈತರ ಗುಂಪು ದೆಹಲಿಯತ್ತ ಬರಲಿದೆ ಎಂದು ಸ್ವರಾಜ್ ಇಂಡಿಯಾದ ನಾಯಕ ಯೋಗೇಂದ್ರ ಯಾದವ್ ತಿಳಿಸಿದರು.

ಮುಂದಿನ ಹಂತದ ಮಾತುಕತೆಯಲ್ಲಿ ಸಕಾರಾತ್ಮಕ ಫಲಿತಾಂಶ ಬರದಿದ್ದಲ್ಲಿ ಜ. 6ರಂದು ಟ್ರ್ಯಾಕ್ಟರ್ ರ‍್ಯಾಲಿ ಹಮ್ಮಿಕೊಳ್ಳಲಾಗುವುದು ಎಂದು ಮತ್ತೊಬ್ಬ ರೈತ ಮುಖಂಡ ಯದುವೀರ್ ಸಿಂಗ್ ಹೇಳಿದರು.

ಕಾಯ್ದೆಗೆ ಬೆಂಬಲ: ಕೃಷಿ ಕಾಯ್ದೆಗಳನ್ನು ಬೆಂಬಲಿಸಿ ದೇಶದ ವಿವಿಧ ಶೈಕ್ಷಣಿಕ ಸಂಸ್ಥೆಗಳ 850ಕ್ಕೂ ಹೆಚ್ಚು ಸದಸ್ಯರು ಸಹಿ ಸಂಗ್ರಹ ಅಭಿಯಾನ ನಡೆಸಿದ್ದಾರೆ. ದೆಹಲಿ ವಿಶ್ವವಿದ್ಯಾಲಯ, ಬನಾರಸ್ ಹಿಂದೂ ವಿಶ್ವವಿದ್ಯಾಲಯ, ಜೆಎನ್‌ಯು ಸೇರಿ
ದಂತೆ ಹಲವು ಶೈಕ್ಷಣಿಕ ಸಂಸ್ಥೆಗಳ ಸದಸ್ಯರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.

‘ರೈತರ ತಟ್ಟೆಯಲ್ಲಿರುವ ಅನ್ನವನ್ನು ಕಿತ್ತುಕೊಳ್ಳುವುದಿಲ್ಲ. ಅವರ ಬದುಕನ್ನು ರಕ್ಷಿಸುತ್ತೇವೆ’ ಎಂದು ಸರ್ಕಾರ ನೀಡಿರುವ ಭರವಸೆಯ ಮೇಲೆ ತಮಗೆ ನಂಬಿಕೆ ಇದೆ ಎಂದು ಬಹಿರಂಗ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

‘ಕೃಷಿ ವ್ಯಾಪಾರದ ಮೇಲಿನ ಈ ಮೂರು ಕಾಯ್ದೆಗಳಿಂದ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ರದ್ದಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ರೈತರಿಗೆ ಭರವಸೆ ನೀಡಿದೆ. ಸಣ್ಣ ಮತ್ತು ಅತಿಸಣ್ಣ ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟ ಮಾಡಲು ಅವಕಾಶ ಸಿಗುತ್ತದೆ’ ಎಂದು 866 ಮಂದಿಸಹಿ ಮಾಡಿರುವ ಪತ್ರದಲ್ಲಿ ಹೇಳಲಾಗಿದೆ.

ತಾಪಮಾನ ಭಾರಿ ಕುಸಿತ: ದೆಹಲಿಯಲ್ಲಿ ಚಳಿ ದಿನೇ ದಿನೇ ಏರುತ್ತಿದ್ದು, ಶುಕ್ರವಾರ ಕನಿಷ್ಠ ತಾಪಮಾನ1.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇಂಥ ಚಳಿಯಲ್ಲೂ ರೈತರು ಪ್ರತಿಭಟನಾ ಸ್ಥಳದಿಂದ ಕದಲಲಿಲ್ಲ.

ಚಳಿ, ಜನಪದ ಹಾಡು ಮತ್ತು ಖೀರು!
ನೊಯಿಡಾ ವರದಿ: ದೆಹಲಿ–ನೊಯಿಡಾ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಜನಪದ ಹಾಡುಗಳನ್ನು ಹಾಡುತ್ತಾ, ಬೆಂಕಿಗೆ ಮೈ ಕಾಯಿಸಿಕೊಳ್ಳುತ್ತಾರೆ, ಖೀರು ಸವಿಯುತ್ತಾ ಹೊಸ ವರ್ಷವನ್ನು ಸ್ವಾಗತಿಸಿರು.

ಭಾರತೀಯ ಕಿಸಾನ್ ಯೂನಿಯನ್ (ಭಾನು) ಸದಸ್ಯರು ಚಿಲ್ಲಾ ಗಡಿಯಲ್ಲಿ ಹಾಗೂ ಭಾರತೀಯ ಕಿಸಾನ್ ಯೂನಿಯನ್ (ಲೋಕಶಕ್ತಿ) ಸದಸ್ಯರು ದಲಿತ ಪ್ರೇರಣಾ ಸ್ಥಳದಲ್ಲಿ ಧರಣಿ ಹೂಡಿದ್ದಾರೆ. ಈ ಸಂಘಟನೆಗಳು ಸಂಯುಕ್ತ ಮೋರ್ಚಾದ ಭಾಗವಾಗದಿದ್ದರೂ, ಹೋರಾಟಕ್ಕೆ ಬೆಂಬಲ ನೀಡಿವೆ.

ಲೋಕಶಕ್ತಿ ಬಣದ ಸದಸ್ಯರು ಬೆಳಗಿನವರೆಗೆ ಕೊರೆಯುವ ಚಳಿಯನ್ನು ಎದುರಿಸಲು ಕಟ್ಟಿಗೆಗಳನ್ನು ಸುಡುತ್ತಾ, ಜನಪದೀಯ ಹಾಡುಗಳಿಗೆ ದನಿಯಾಗುತ್ತಾ ಹೊಸ ವರ್ಷ ಆಚರಿಸಿದರು. ಹೊಸ ವರ್ಷದ ನಿಮಿತ್ತ ಸಂಘಟನೆಯ ಸದಸ್ಯರಿಗೆ ಆರೋಗ್ಯ ಶಿಬಿರ ಏರ್ಡಪಡಿಸಲಾಗಿತ್ತು. ಹೊಸ ದಿನವನ್ನು ಖೀರು ಕುಡಿದು ಬರಮಾಡಿಕೊಳ್ಳಲಾಯಿತು ಎಂದು ಸಂಘಟನೆ ವಕ್ತಾರ ಶೈಲೇಶ್ ಕುಮಾರ್ ಗಿರಿ ಹೇಳಿದ್ದಾರೆ. ಅತ್ತ ಚಿಲ್ಲಾ ಗಡಿಯಲ್ಲಿ ಭಾನು ಬಣದ 11 ಸದಸ್ಯರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಉಪವಾಸ ಮಾಡಿದರು.

*
ಮಾತುಕತೆ ಬಗ್ಗೆ ಖಚಿತವಾಗಿ ಹೇಳಲಾರೆ. ನಾನು ಜ್ಯೋತಿಷಿ ಅಲ್ಲ. ಸಭೆಯ ನಿರ್ಧಾರಗಳು ದೇಶದ ಮತ್ತು ರೈತರ ಹಿತದೃಷ್ಟಿಯಿಂದ ಆಗಲಿವೆ.
–ನರೇಂದ್ರ ಸಿಂಗ್ ತೋಮರ್, ಕೃಷಿ ಸಚಿವ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು