ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತೀಶ್‌ರನ್ನು ಹೊರದಬ್ಬಿ ಬಿಜೆಪಿ–ಎಲ್‌ಜೆಪಿ ಸರ್ಕಾರ ರಚನೆ ಮಾಡುತ್ತೇವೆ: ಚಿರಾಗ್‌

Last Updated 16 ಅಕ್ಟೋಬರ್ 2020, 10:06 IST
ಅಕ್ಷರ ಗಾತ್ರ

ಪಟ್ನ: ಬಿಜೆಪಿಯೊಂದಿಗೆ ರಾಷ್ಟ್ರೀಯ ಲೋಕ ದಳದ (ಎಲ್‌ಜೆಪಿ) ಮೈತ್ರಿ ದೃಢವಾಗಿದ್ದು, ಚುನಾವಣೆಯಲ್ಲಿ ನಿತೀಶ್‌ ಸೋಲು ಖಚಿತ ಎಂದು ಚಿರಾಗ್‌ ಪಾಸ್ವಾನ್‌ ಹೇಳಿದ್ದಾರೆ.

ಬಿಹಾರ ಚುನಾವಣೆಯಲ್ಲಿ ಜೆಡಿಯು–ಬಿಜೆಪಿ ಮೈತ್ರಿಯಿಂದಾಗಿ ಕ್ಷೇತ್ರ ಕಳೆದುಕೊಂಡು, ಎಲ್‌ಜೆಪಿ ಟಿಕೆಟ್‌ ಪಡೆದು ಸ್ಪರ್ಧಿಸುತ್ತಿರುವ 9 ಹಿರಿಯ ನಾಯಕರನ್ನು ಬಿಜೆಪಿ ಎರಡು ದಿನಗಳ ಹಿಂದಷ್ಟೇ ಪಕ್ಷದಿಂದ ಅಮಾನತು ಮಾಡಿದೆ. ಹೀಗಿರುವಾಗಲೇ ಎಲ್‌ಜೆಪಿ ವರಿಷ್ಠ ಚಿರಾಗ್‌ ಪಾಸ್ವಾನ್‌ ನೀಡಿರುವ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಚಿರಾಗ್‌ ಸದ್ಯ ತಮ್ಮ ತಂದೆಯ ಅಂತಿಮ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದೇ 21ರಿಂದ ಅವರು ಚುನಾವಣೆ ಪ್ರಚಾರವನ್ನು ಆರಂಭಿಸಲಿದ್ದಾರೆ. ಈ ಮಧ್ಯೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಚಿರಾಗ್‌, ‘ನಿತೀಶ್‌ ಜೊತೆಗಿನ ಮೈತ್ರಿಯನ್ನು ಮುರಿದು, ಹೊಸ ಮೈತ್ರಿ ರಚಿಸಬೇಕು ಎಂಬುದು ರಾಮ್‌ ವಿಲಾಸ್‌ ಪಾಸ್ವಾನ್‌ ಅವರ ಬಯಕೆಯಾಗಿತ್ತು. ಸಾವಿಗೂ ಮುನ್ನ ಅವರು ನನಗೆ ಈ ಮಾತು ಹೇಳಿದ್ದರು,’ ಎಂದು ಚಿರಾಗ್‌ ಬಹಿರಂಗಪಡಿಸಿದ್ದಾರೆ.

‘ಜೆಡಿಯು ಜೊತೆಗಿನ ಮೈತ್ರಿ ಮುರಿಯುವ ನನ್ನ ಅಭಿಪ್ರಾಯವನ್ನು ನಾನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರೊಂದಿಗೆ ಹಂಚಿಕೊಂಡಿದ್ದೇನೆ. ಅವರು ತಾಳ್ಮೆಯಿಂದ ಎಲ್ಲವನ್ನೂ ಕೇಳಿಸಿಕೊಂಡಿದ್ದಾರೆ. ಆದರೆ, ನನ್ನ ತೀರ್ಮಾನದಿಂದ ಹಿಂದೆ ಸರಿಯುವಂತೆ ಅವರು ನನಗೆ ಹೇಳಿಲ್ಲ. ಅವರು ಮೌನವಾಗಿದ್ದರು,’ ಎಂದು ಚಿರಾಗ್‌ ಆಯ್ದ ಕೆಲವೇ ಮಾಧ್ಯಮ ಪ್ರತಿನಿಧಿಗಳೊಂದಿಗೆ ಹೇಳಿಕೊಂಡರು.

ನಿತೀಶ್‌ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದು, ಬಿಜೆಪಿ–ಎಲ್‌ಜೆಪಿ ಸರ್ಕಾರವನ್ನು ಸ್ಥಾಪಿಸುವುದಷ್ಟೇ ನನ್ನ ಏಕೈಕ ಗುರಿ ಎಂದು ಚಿರಾಗ್‌ ಸ್ಪಷ್ಟಪಡಿಸಿದ್ದಾರೆ.

‘ಎಲ್‌ಜೆಪಿಯೊಂದಿಗೆ ಸಂಬಂಧ ಹೊಂದಿಲ್ಲ, ನಿತೀಶ್‌ ಅವರೇ ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ,’ ಎಂಬ ಬಿಜೆಪಿಯ ಸ್ಪಷ್ಟನೆಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿದ ಚಿರಾಗ್‌, ‘ ಬಿಜೆಪಿ ನಮ್ಮೊಂದಿಗೆ ಇತ್ತು. ಈಗಲೂ ನಮ್ಮೊಂದಿಗೇ ಇದೆ. ಮುಂದೆಯೂ ನಮ್ಮೊಂದಿಗೇ ಇರಲಿದೆ. ಬಿಜೆಪಿ ಬಿಡುಗಡೆ ಮಾಡಿರುವ ಸ್ಪಷ್ಟನೆ ಬಿಜೆಪಿಯದ್ದಲ್ಲ. ನಿತೀಶ್‌ ಅವರ ಒತ್ತಡಕ್ಕೆ ಮಣಿದು ಬಿಜೆಪಿ ಈ ಮಾತು ಹೇಳಿದೆ,’ ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಸ್ವತಃ ನಿತೀಶ್ ಅವರನ್ನು ಹೊಗಳಿದ್ದಾರೆ ಮತ್ತು ಅವರನ್ನು ಎನ್‌ಡಿಎ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚಿರಾಗ್‌, ‘ಈ ಚರ್ಚೆಗಳೆಲ್ಲ ಬೇಡ. ನಾನು ಹೇಳಲು ಬಯಸುವುದೇನೆಂದರೆ, ನಾನು ಜೆಪಿ ನಡ್ಡಾ ಅವರನ್ನು ಆರು ಬಾರಿ ಮತ್ತು ಅಮಿತ್ ಶಾ ಅವರನ್ನು ಎರಡು ಬಾರಿ ಭೇಟಿಯಾಗಿದ್ದೆ. ನಿತೀಶ್ ಅವರೊಂದಿಗಿನ ಸಂಬಂಧ ಕಡಿದುಕೊಳ್ಳುತ್ತೇವೆ ಎಂದಾಗ ಅವರು ನನ್ನನ್ನು ತಡೆಯಲಿಲ್ಲ. ಈ ವರೆಗೆ ಯಾವುದೇ ಸಂದರ್ಭದಲ್ಲೂ ಎಲ್‌ಜೆಪಿ ಜೆಡಿಯು ಜೊತೆಗೆ ಚುನಾವಣೆ ಎದುರಿಸಿಲ್ಲ. 2019 ರ ಲೋಕಸಭಾ ಚುನಾವಣೆಯಲ್ಲಿ ಮಾತ್ರ ಒಟ್ಟಿಗೆ ಕೆಲಸ ಮಾಡಿದ್ದೆವು. ಆದರೆ ಅದಕ್ಕೆ ಪ್ರತಿಯಾಗಿ ನಮಗೆ ಏನು ಸಿಕ್ಕಿತು. ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ನನ್ನ ತಂದೆಯನ್ನು ನಿತೀಶ್ ಅವಮಾನಿಸಿದರು. ನಿತೀಶ್ ನನ್ನ ತಂದೆಯನ್ನು ಕುರಿತು ‘ಕೇವಲ ಇಬ್ಬರು ಶಾಸಕರನ್ನು ಹೊಂದಿರುವವರು ರಾಜ್ಯಸಭಾ ಚುನಾವಣೆಯನ್ನು ಗೆಲ್ಲಲು ಸಾಧ್ಯವೇ’ ಎಂದು ಹೇಳಿದ್ದರು. ತಮ್ಮ ಮೊದಲ ಲೋಕಸಭಾ ಚುನಾವಣೆಯನ್ನು ದಾಖಲೆಯ ಅಂತರದಿಂದ ಗೆದ್ದ ಪಾಸ್ವಾನ್‌ ಅವರನ್ನು ನಿತೀಶ್‌ ಗೇಲಿ ಮಾಡಿದರು. ಒಬ್ಬ ಮಗನಾಗಿ, ನನ್ನ ತಂದೆಯ ಅವಮಾನವನ್ನು ನಾನು ಸಹಿಸಲಾರೆ. ರಾಮ್ ವಿಲಾಸ್ ಪಾಸ್ವಾನ್ ಅವರನ್ನು ಗೇಲಿ ಮಾಡಿದ ಜನರನ್ನು ಕ್ಷಮಿಸಲು ಸಾಧ್ಯವಿಲ್ಲ,’ ಎಂದು ಅವರು ಹೇಳಿದರು.

ಬಿಜೆಪಿ ಜೊತೆಗೆ ಎಲ್‌ಜೆಪಿ ಒಳ ಒಪ್ಪಂದವಾಗಿದೆಯೇ ಎಂದು ಕೇಳಲಾದ ಪ್ರಶ್ನೆಗೆ, ‘ನೀವು ಏನು ಬೇಕಾದರೂ ಅಂದುಕೊಳ್ಳಿ. ಆದರೆ, ನಿಜ ಹೇಳಬೇಕೇಂದರೆ ನಾನು ಬಿಜೆಪಿ ಜೊತೆಗಿದ್ದೇನೆ,’ ಎಂದರು.

ಚಿರಾಗ್‌ ಪಾಸ್ವಾನ್‌ ಅವರು 2019 ರ ನವೆಂಬರ್‌ನಲ್ಲಿ ತಮ್ಮ ತಂದೆಯಿಂದ ಪಕ್ಷದ ಆಡಳಿತವನ್ನು ವಹಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT