ಬುಧವಾರ, ಸೆಪ್ಟೆಂಬರ್ 29, 2021
20 °C
ಪ್ರತಿಭಟನೆ ವೇಳೆ ಬಿಜೆಪಿ ಮುಖಂಡ ದೇವೇಂದ್ರ ಫಡಣವೀಸ್‌ ಹೇಳಿಕೆ

ಒಬಿಸಿಗೆ ಮೀಸಲಾತಿ ನೀಡಲು ಬಿಜೆಪಿ ವಿಫಲವಾದರೆ ರಾಜಕೀಯ ನಿವೃತ್ತಿ: ಫಡಣವೀಸ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನಾಗಪುರ : ‘ಬಿಜೆಪಿ ಅಧಿಕಾರಕ್ಕೆ ಬಂದರೆ, ಇತರೆ ಹಿಂದುಳಿದ ವರ್ಗದವರಿಗೆ  ಸ್ಥಳೀಯ ಸಂಸ್ಥೆಗಳಲ್ಲಿ ಮತ್ತೆ ಮೀಸಲಾತಿಯನ್ನು ನೀಡುವುದು. ಒಂದು ವೇಳೆ ಈ ದಿಸೆಯಲ್ಲಿ ಪಕ್ಷವು ವಿಫಲವಾದರೆ ನಾನು ರಾಜಕೀಯದಿಂದ ನಿವೃತ್ತಿಯಾಗುವೆ’ ಎಂದು ಬಿಜೆಪಿಯ ಹಿರಿಯ ಮುಖಂಡ ದೇವೇಂದ್ರ ಫಡಣವೀಸ್‌ ಶನಿವಾರ ಹೇಳಿದರು.

ಇತರೆ ಹಿಂದುಳಿದ ವರ್ಗದವರಿಗೆ ಮೀಸಲಾತಿಯನ್ನು ನೀಡುವಂತೆ ಒತ್ತಾಯಿಸಿ ಇಲ್ಲಿನ ವೆರೈಟಿ ಸ್ಕ್ವೇರ್‌ ಚೌಕ್‌ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ರಾಜ್ಯದ ಹಲವೆಡೆ ಪಕ್ಷದ ವತಿಯಿಂದ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಪೊಲೀಸರು ಫಡಣವೀಸ್‌ ಹಾಗೂ ಇತರ ಪ್ರತಿಭಟನಕಾರರನ್ನು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು.

‘ಮೀಸಲಾತಿ ವಿಷಯವನ್ನು ಸಂಸತ್‌ನಲ್ಲಿ ಪ್ರಸ್ತಾಪಿಸುವುದಾಗಿ ಭರವಸೆ ನೀಡುವ ಮೂಲಕ ಮಹಾ ವಿಕಾಸ್‌ ಆಘಾಡಿ (ಎಂವಿಎ) ಸರ್ಕಾರ ಜನರ ದಾರಿ ತಪ್ಪಿಸುತ್ತಿದೆ’ ಎಂದು ಅವರು ಟೀಕಿಸಿದರು.

‘ಮೀಸಲಾತಿ ಮರುಸ್ಥಾಪನೆ ವಿಷಯವನ್ನು ರಾಜ್ಯ ಸರ್ಕಾರದ ಮಟ್ಟದಲ್ಲಿಯೇ ಬಗೆಹರಿಸಬಹುದು. ಹೊಸ ಕಾಯ್ದೆಯನ್ನು ತರುವ ಮೂಲಕ ಇದು ಸಾಧ್ಯವಿದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವ ಅಗತ್ಯವೇ ಇಲ್ಲ. ಹೀಗಾಗಿಯೇ ಮಹಾರಾಷ್ಟ್ರ ಹೊರತುಪಡಿಸಿ ಇತರ ರಾಜ್ಯಗಳಲ್ಲಿ ಒಬಿಸಿಗಳಿಗೆ ಮೀಸಲಾತಿ ಇದೆ’ ಎಂದು ಹೇಳಿದರು.

‘ಮಹಾ ವಿಕಾಸ್‌ ಆಘಾಡಿ ಸರ್ಕಾರ ಈ ವಿಷಯವಾಗಿ ನೂತನ ಕಾಯ್ದೆಯನ್ನು ಜಾರಿಗೊಳಿಸಲೇಬೇಕು. ಈ ಸರ್ಕಾರದ ಮುಖವಾಡ ಕಳಚುವವರೆಗೆ ಈ ಹೋರಾಟವನ್ನು ಮುಂದುವರಿಸುತ್ತೇವೆ’ ಎಂದು ಹೇಳಿದರು.

ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿಗಳಿಗೆ ಹಿಂದಿನ ಸರ್ಕಾರ ಮೀಸಲಾತಿ ನೀಡಿತ್ತು. ಇದನ್ನು ಪ್ರಶ್ನಿಸಿ ಕೆಲವರು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು.

ಮಾರ್ಚ್‌ 4ರಂದು ತೀರ್ಪು ನೀಡಿದ ಸುಪ್ರೀಂಕೋರ್ಟ್‌, ‘ಪರಿಶಿಷ್ಟ ಜಾತಿ ಮತ್ತು ವರ್ಗ ಹಾಗೂ ಒಬಿಸಿಗಳಿಗೆ ನೀಡುವ ಮೀಸಲಾತಿ, ಒಟ್ಟು ಸ್ಥಾನಗಳ ಶೇ 50ರಷ್ಟನ್ನು ಮೀರಬಾರದು’ ಎಂದು ಆದೇಶಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು