ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ನಲ್ಲಿ ಎಎಪಿ ಹವಾ ಇಲ್ಲ, ಟಿಆರ್‌ಎಸ್‌ ಜೊತೆ ಸೇರಲ್ಲ: ರಾಹುಲ್‌ ಗಾಂಧಿ

Last Updated 31 ಅಕ್ಟೋಬರ್ 2022, 12:50 IST
ಅಕ್ಷರ ಗಾತ್ರ

ಹೈದರಾಬಾದ್‌: ಆಮ್ ಆದ್ಮಿ ಪಕ್ಷವು (ಎಎಪಿ) ಕೇವಲ ಜಾಹೀರಾತಿನ ಆಧಾರದ ಮೇಲೆ ಗುಜರಾತ್‌ನಲ್ಲಿ ಸಂಚಲನ ಸೃಷ್ಟಿಸಿದೆ. ವಾಸ್ತವವಾಗಿ ಅದಕ್ಕೆ ಯಾವ ಬೆಂಬಲವೂ ಇಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ.

ಅಲ್ಲದೇ, ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ತೆಲಂಗಾಣದ ಕೊತ್ತೂರಿನಲ್ಲಿ ಸೋಮವಾರ ಮಾತನಾಡಿರುವ ರಾಹುಲ್‌, ‘ಗುಜರಾತ್‌ನಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಭಾರಿ ದೊಡ್ಡ ಪ್ರಮಾಣದಲ್ಲಿದೆ’ ಎಂದು ಹೇಳಿದರು.

'ಗುಜರಾತ್ ಚುನಾವಣೆಯನ್ನು ಕಾಂಗ್ರೆಸ್ ಸಮರ್ಥವಾಗಿ ಎದುರಿಸುತ್ತಿದೆ. ಎಎಪಿ ಗಾಳಿಯಲ್ಲಷ್ಟೇ ಇದೆ. ನೆಲದ ಮೇಲೆ ಏನೂ ಇಲ್ಲ. ಗುಜರಾತ್‌ನಲ್ಲಿ ಕಾಂಗ್ರೆಸ್ ಗಟ್ಟಿಯಾಗಿದೆ’ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯದಲ್ಲಿ ಕಾಂಗ್ರೆಸ್‌ ಭವಿಷ್ಯದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ರಾಹುಲ್‌ ಉತ್ತರಿಸಿದರು.

ಮೊರ್ಬಿಯಲ್ಲಿ ತೂಗು ಸೇತುವೆ ಕುಸಿದು 130 ಕ್ಕೂ ಹೆಚ್ಚು ಜನರು ಮೃತಪಟ್ಟ ದುರಂತದ ಬಗ್ಗೆ ಪ್ರತಿಕ್ರಿಯಿಸಲು ಗಾಂಧಿ ನಿರಾಕರಿಸಿದರು. ಘಟನೆಯನ್ನು ರಾಜಕೀಯಗೊಳಿಸಲು ನಾನು ಬಯಸುವುದಿಲ್ಲ ಎಂದು ಅವರು ಹೇಳಿದರು.

‘ತೆಲಂಗಾಣ ರಾಷ್ಟ್ರ ಸಮಿತಿ’ಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಗಳನ್ನು ಅವರು ಇದೇ ವೇಳೆ ತಳ್ಳಿಹಾಕಿದ್ದಾರೆ. ಟಿಆರ್‌ಎಸ್ ಮತ್ತು ಕಾಂಗ್ರೆಸ್ ನಡುವೆ ಯಾವುದೇ ಸಂಬಂಧ ಇಲ್ಲ ಎಂದು ಅವರು ಹೇಳಿದರು.

ಕಾಂಗ್ರೆಸ್ ಯಾವುದರ ವಿರುದ್ಧ ನಿಂತಿದೆಯೋ, ಅದರ ಪರವಾಗಿ ಟಿಆರ್‌ಎಸ್‌ ಕೆಲಸ ಮಾಡುತ್ತದೆ. ಹೀಗಾಗಿ ಕಾಂಗ್ರೆಸ್‌ಗೆ ಟಿಆರ್‌ಎಸ್‌ ತದ್ವಿರುದ್ಧ ಎಂದು ಅವರು ತಿಳಿಸಿದರು.

‘ಟಿಆರ್‌ಎಸ್‌ನ ಭ್ರಷ್ಟಾಚಾರ ಮತ್ತು ಅದರ ಧೋರಣೆ ನಮಗೆ ಒಪ್ಪಿತವಲ್ಲ. ಅವರು ಮಾಡುತ್ತಿರುವುದಕ್ಕೆ ನಾವು ಸಂಪೂರ್ಣವಾಗಿ ವಿರುದ್ಧವಾಗಿದ್ದೇವೆ’ ಎಂದು ಅವರು ಹೇಳಿದರು.

ಟಿಆರ್‌ಎಸ್ ಸಂಸ್ಥಾಪಕ ಕೆ ಚಂದ್ರಶೇಖರ್ ರಾವ್ ಅವರು ತಮ್ಮ ಪಕ್ಷವನ್ನು ‘ಭಾರತ ರಾಷ್ಟ್ರ ಸಮಿತಿ’ ಎಂದು ಮರುನಾಮಕರಣ ಮಾಡಿರುವ ನಿರ್ಧಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಹುಲ್‌ ಗಾಂಧಿ, ‘ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಪಕ್ಷವನ್ನು ಮುನ್ನಡೆಸುವ ಕನಸು ಕಾಣಲು ತೆಲಂಗಾಣ ಮುಖ್ಯಮಂತ್ರಿ ಸರ್ವ ಸ್ವತಂತ್ರರು’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT