ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಪರೇಷನ್ ಥಿಯೇಟರ್‌ನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: ಆರೋಪ

Last Updated 3 ಜೂನ್ 2021, 15:16 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಸರ್ಕಾರಿ ವೈದ್ಯಕೀಯ ಕಾಲೇಜಿನ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ (ಆಪರೇಷನ್ ಥಿಯೇಟರ್‌) ಮಹಿಳಾ ರೋಗಿಯೊಬ್ಬರ ಮೇಲೆ ನಾಲ್ವರು ವೈದ್ಯರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಈ ಸಂಬಂಧ ಸಂತ್ರಸ್ತೆಯ ಸಹೋದರ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ಉದರ ಸಂಬಂಧಿ ರೋಗದಿಂದ ಬಳಲುತ್ತಿದ್ದ ಮಹಿಳಾ ರೋಗಿಯು ಪ್ರಯಾಗ್‌ರಾಜ್‌ನ ಎಂಎಲ್‌ಎನ್ ವೈದ್ಯಕೀಯ ಕಾಲೇಜಿನ ಭಾಗವಾಗಿರುವ ಸ್ವರೂಪ್ ರಾಣಿ ನೆಹರೂ ಆಸ್ಪತ್ರೆಯಲ್ಲಿ ಶನಿವಾರ ದಾಖಲಾಗಿದ್ದರು. ಅದೇ ದಿನ ರಾತ್ರಿ ಮಹಿಳೆಗೆ ದೊಡ್ಡ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಲಾಗಿತ್ತು. ಮೂರು ಗಂಟೆಯ ಶಸ್ತ್ರಚಿಕಿತ್ಸೆಯ ಬಳಿಕ ಶಸ್ತ್ರಚಿಕಿತ್ಸಾ ಕೊಠಡಿಯಿಂದ (ಒಟಿ) ಮಹಿಳೆಯನ್ನು ಹೊರಗೆ ತರಲಾಯಿತು.

ನಂತರ ಸಹೋದರನ ಬಳಿ ಮಹಿಳೆ ಮಾತನಾಡಲು ಬಯಸಿದ್ದಳು. ಆದರೆ, ತೀವ್ರ ನೋವಿದ್ದ ಕಾರಣ ಆಕೆಗೆ ಮಾತನಾಡಲು ಆಗಲಿಲ್ಲ. ಆಗ ಆಕೆ ಕಾಗದದ ತುಂಡಿನ ಮೇಲೆ ‘ಶಸ್ತ್ರಚಿಕಿತ್ಸಾ ಕೊಠಡಿಯೊಳಗೆ ನನ್ನ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ’ ಎಂದು ಬರೆದು ಕೊಟ್ಟಿದ್ದಾಳೆ ಎಂದು ಸಂತ್ರಸ್ತೆಯ ಸಹೋದರ ತಿಳಿಸಿದ್ದಾನೆ.

ಅತ್ಯಾಚಾರ ಆರೋಪವನ್ನು ಅಲ್ಲಗಳೆದಿರುವ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಎಸ್‌.ಪಿ ಸಿಂಗ್ ಅವರು ‘ಒ.ಟಿ.ಯಲ್ಲಿ ಅಂದು ಇಬ್ಬರು ಮಹಿಳಾ ವೈದ್ಯರೂ ಇದ್ದರು. ನಮ್ಮ ಕಾಲೇಜಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಈ ರೀತಿಯ ಆರೋಪ ಮಾಡಲಾಗಿದೆ’ ಎಂದಿದ್ದಾರೆ.

‘ಈ ಬಗ್ಗೆ ತನಿಖೆ ನಡೆಸಲು ಹಿರಿಯ ವೈದ್ಯರು ಸೇರಿದಂತೆ ಐವರು ಸದಸ್ಯರ ಸಮಿತಿಯೊಂದನ್ನು ರಚಿಸಲಾಗಿದೆ. ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲು ತೀರ್ಮಾನಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT