ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಿಗಳಿಗೆ ಚಪಾತಿ ಮಾಡಿಕೊಡಲಿಲ್ಲವೆಂದು ತಂಗಿಯನ್ನು ಕೊಂದ ಅಣ್ಣ

Last Updated 15 ಡಿಸೆಂಬರ್ 2020, 14:39 IST
ಅಕ್ಷರ ಗಾತ್ರ

ಲಖನೌ: ಪ್ರೀತಿಯ ನಾಯಿಗಳಿಗೆ ಚಪಾತಿ ಮಾಡಿಕೊಡಲಿಲ್ಲವೆಂದು ಕೋಪಗೊಂಡ ಅಣ್ಣ, ಸ್ವಂತ ತಂಗಿಯನ್ನು ಗುಂಡಿಕ್ಕಿ ಕೊಂದ ಘಟನೆ ಉತ್ತರಪ್ರದೇಶದ ಮೀರತ್‌ನಲ್ಲಿ ಸೋಮವಾರ ರಾತ್ರಿ ನಡೆದಿದೆ.

ಆರೋಪಿಯನ್ನು ಆಶೀಶ್‌ಕುಮಾರ್‌ ಎಂದು ಗುರುತಿಸಲಾಗಿದೆ. ಈತ ಇಲ್ಲಿನ ಭವಾನ್‌ಪುರ ಪ್ರದೇಶದ ನಿವಾಸಿ. ಸಹೋದರಿಯನ್ನು ಗುಂಡಿಕ್ಕಿ ಕೊಂದ ಬಳಿಕ ಆರೋಪಿಯೇ ಪೊಲೀಸರಿಗೆ ಕರೆ ಮಾಡಿ, ಘಟನೆ ಬಗ್ಗೆ ತಿಳಿಸಿದ್ದಾನೆ. ಬಳಿಕ ಆತನನ್ನು ಬಂಧಿಸಲಾಗಿದೆ.

ಕಟ್ಟಡ ನಿರ್ಮಾಣ ವ್ಯವಹಾರ ನಡೆಸುತ್ತಿರುವ ಆಶೀಶ್‌, ಆ ಕಟ್ಟಡದ ಸಮೀಪದಲ್ಲಿದ್ದ 20ಕ್ಕೂ ಹೆಚ್ಚು ಬೀದಿನಾಯಿಗಳನ್ನು ಕಾಳಜಿ, ಆರೈಕೆ ಮಾಡುತ್ತಿದ್ದ. ಅವುಗಳಿಗೆ ಆಹಾರ ನೀಡುವುದರ ಜೊತೆಗೆ, ಉಳಿಯಲು ಜಾಗವನ್ನೂ ಮಾಡಿಕೊಟ್ಟಿದ್ದ.

ನಾಯಿಗಳಿಗೆ ಊಟ ಕೊಡುವ ವಿಚಾರದಲ್ಲಿ ತಂಗಿ ಜೊತೆ ಆಶೀಶ್‌ಗೆ ವಾಗ್ವಾದ ನಡೆಯುತ್ತಿತ್ತು.

ಸೋಮವಾರ ರಾತ್ರಿ ವಾಪಸ್‌ ನಾಯಿಗಳಿಗೆ ಚಪಾತಿ ನೀಡುವ ವಿಚಾರದಲ್ಲಿ ಅಣ್ಣ– ತಂಗಿಗೆ ಜಗಳವಾಗಿದೆ. ನಾಯಿಗಳಿಗೆ ಚಪಾತಿ ಮಾಡಿಕೊಡಬೇಕೆಂದು ಆತ ತಂಗಿಯನ್ನು ಒತ್ತಾಯಿಸಿದ್ದ. ಆಗ ಚಪಾತಿ ಮಾಡಲು ನಿರಾಕರಿಸಿದ ತಂಗಿಯ ಮೇಲೆ ಆವೇಶದಿಂದ ನಾಡಪಿಸ್ತೂಲ್‌ನಿಂದ ಗುಂಡು ಹೊಡೆದಿದ್ದಾನೆ. ತಲೆ ಹಾಗೂ ಎದೆಗೆ ಗುಂಡಿಕ್ಕಿದ್ದಾನೆ. ತೀವ್ರ ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ಯುವ ಮೊದಲೇ ಸಾವನ್ನಪ್ಪಿದ್ದಾಳೆ.

ಆಶೀಶ್‌ ತಾಯಿ ಈ ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದರು. ಈ ಸ್ಥಳದಿಂದ ಓಡಿ ತಪ್ಪಿಸಿಕೊಳ್ಳುವಂತೆ ತಾಯಿ ತಿಳಿಸಿದರೂ, ಆಶೀಶ್‌ ಪೊಲೀಸರಿಗೆ ತಾನೇ ಕರೆಮಾಡಿ, ಘಟನೆ ಬಗ್ಗೆ ತಿಳಿಸಿದ್ದಾನೆ. ’ನನ್ನನ್ನು ಬಂಧಿಸಿ, ನನ್ನ ತಂಗಿಯನ್ನು ಕೊಂದೆ‘ ಎಂದು ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ. ಮನೆಗೆ ಬಂದ ಪೊಲೀಸರು ಆತನನ್ನು ಬಂಧಿಸಿದರು.

ಆದರೆ ತಂಗಿಯನ್ನು ಕೊಂದ ಬಗ್ಗೆ ಆರೋಪಿಗೆ ಯಾವುದೇ ಪಶ್ಚಾತ್ತಾಪವಿಲ್ಲ. ’ನಾನು ಏನು ಮಾಡಿದ್ದೇನೋ ಅದು ಸರಿಯಾಗಿದೆ. ನಾಯಿಗಳು ಹಸಿದಿದ್ದವು, ನಾನು ಅನೇಕ ಬಾರಿ ಮನವಿ ಮಾಡಿದರೂ, ಆಕೆ ಚಪಾತಿ ಮಾಡಿಕೊಡಲು ನಿರಾಕರಿಸಿದಳು‘ ಎಂದು ಆಶೀಶ್‌ ಹೇಳಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT