ಬುಧವಾರ, ಅಕ್ಟೋಬರ್ 20, 2021
29 °C
ಕೇಂದ್ರ ಸರ್ಕಾರದ ಮನವಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್‌

ಎನ್‌ಡಿಎಗೆ ಮಹಿಳೆಯರ ಪ್ರವೇಶವನ್ನು ಮುಂದೂಡಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ (ಎನ್‌ಡಿಎ) ಮಹಿಳೆಯರ ಪ್ರವೇಶವನ್ನು ಒಂದು ವರ್ಷ ಮುಂದೂಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ. ನವೆಂಬರ್‌ನಲ್ಲಿ ನಡೆಯಲಿರುವ ಪ್ರವೇಶ ಪರೀಕ್ಷೆಯನ್ನು ಬರೆಯಲು ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಿದೆ.

ಎನ್‌ಡಿಎಗೆ ಮಹಿಳೆಯರ ಪ್ರವೇಶದ ಅಧಿಸೂಚನೆಯನ್ನು 2022ರ ಮೇಯಲ್ಲಿ ಹೊರಡಿಸಲಾಗುವುದು ಎಂದು ಕೇಂದ್ರ ಸರ್ಕಾರವು ಕೋರ್ಟ್‌ಗೆ ತಿಳಿಸಿತ್ತು. ಆದರೆ, ಇದನ್ನು ಕೋರ್ಟ್‌ ಒಪ್ಪಿಕೊಂಡಿಲ್ಲ. ಮಹಿಳೆಯರ ಹಕ್ಕನ್ನು ಮೊಟಕು ಮಾಡುವುದು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಎಸ್‌.ಕೆ.ಕೌಲ್‌ ನೇತೃತ್ವದ ಪೀಠವು ಹೇಳಿದೆ. 

ಎನ್‌ಡಿಎ ಪ್ರವೇಶಕ್ಕಾಗಿ ಪ್ರತಿ ವರ್ಷ ಎರಡು ಪರೀಕ್ಷೆಗಳು–ಎನ್‌ಡಿಎ–1 ಮತ್ತು ಎನ್‌ಡಿಎ–2 ನಡೆಯುತ್ತವೆ. ಮೊದಲ ಪರೀಕ್ಷೆಗೆ ಯುಪಿಎಸ್‌ಸಿ ಜನವರಿಯಲ್ಲಿ ಅಧಿಸೂಚನೆ ಹೊರಡಿಸುತ್ತದೆ. ಎರಡನೇ ಪರೀಕ್ಷೆಯ ಅಧಿಸೂಚನೆಯನ್ನು ಮೇ–ಜೂನ್‌ನಲ್ಲಿ ಹೊರಡಿಸಲಾಗುತ್ತದೆ. ಜನವರಿಯಲ್ಲಿ ಅಧಿಸೂಚನೆ ಹೊರಡಿಸಿದ ಪರೀಕ್ಷೆಯು ಏಪ್ರಿಲ್‌ನಲ್ಲಿ ಮತ್ತು ಜೂನ್‌ನಲ್ಲಿ ಅಧಿಸೂಚನೆ ಹೊರಡಿಸಿದ ಪರೀಕ್ಷೆಯು ಸೆಪ್ಟೆಂಬರ್‌ನಲ್ಲಿ ನಡೆಯುತ್ತದೆ. ಆಯ್ಕೆಯಾದ ಅಭ್ಯರ್ಥಿಗಳ ಸೇರ್ಪಡೆಯು ಮರುವರ್ಷ ನಡೆಯುತ್ತದೆ. ಹಾಗಾಗಿ, ಸರ್ಕಾರವು 2022ರ ಮೇಯಲ್ಲಿ ಅಧಿಸೂಚನೆ ಹೊರಡಿಸಿದರೆ ಪ್ರವೇಶ ಅವಕಾಶವು 2023ರ ಜೂನ್‌ನಲ್ಲಷ್ಟೇ ಲಭ್ಯವಾಗುತ್ತದೆ ಎಂದು ‍ಹಿರಿಯ ವಕೀಲ ಚಿನ್ಮಯ್‌ ಪ್ರದೀಪ್‌ ಶರ್ಮಾ ಪೀಠಕ್ಕೆ ವಿವರಿಸಿದರು. 

ಕೋವಿಡ್‌ನಿಂದಾಗಿ ಮುಂದೂಡಿಕೆಯಾಗಿ ಈ ವರ್ಷದ ನವೆಂಬರ್‌ನಲ್ಲಿ ನಡೆಯಲಿರುವ ಎನ್‌ಡಿಎ ಪ್ರವೇಶ ಪರೀಕ್ಷೆಗೆ ಮಹಿಳೆಯರಿಗೆ ಅವಕಾಶ ಇರಬೇಕು ಎಂದು ಕೋರ್ಟ್‌ ನೀಡಿದ ಮಧ್ಯಂತರ ಆದೇಶದಲ್ಲಿ ಸ್ಪಷ್ಟವಾಗಿದೆ ಎಂದು ಅವರು ತಿಳಿಸಿದರು.

ಅತ್ಯಗತ್ಯವಾದ ಮೂಲಸೌಕರ್ಯ ಸೃಷ್ಟಿಸಲು ಸರ್ಕಾರಕ್ಕೆ ಸ್ವಲ್ಪ ಸಮಯ ಬೇಕು ಎಂಬುದು ನಿಜ. ಆದರೆ, ಅದಕ್ಕಾಗಿ ಮಹಿಳೆಯರ ಪ್ರವೇಶವನ್ನು ಒಂದು ವರ್ಷ ಮುಂದಕ್ಕೆ ಹಾಕಲಾಗದು ಎಂದು ಪೀಠವು ತಿಳಿಸಿತು. 

ಪಠ್ಯಕ್ರಮ, ಮೂಲಸೌಕರ್ಯ, ದೈಹಿಕ ಸಾಮರ್ಥ್ಯ ತರಬೇತಿ, ವಸತಿ ಸೌಲಭ್ಯ ಮುಂತಾದವುಗಳಲ್ಲಿ ಮಾಡಬೇಕಾದ ಬದಲಾವಣೆಗಳ ಪರಿಶೀಲನೆಗೆ ಅಧ್ಯಯನ ತಂಡವನ್ನು ರಚಿಸಲಾಗಿದೆ. ಸಿದ್ಧತೆಗಳನ್ನು ಮಾಡಲು ಕನಿಷ್ಠ ಆರು ತಿಂಗಳು ಸಮಯ ಬೇಕು ಎಂದು ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಐಶ್ವರ್ಯಾ ಬಾಟಿ ಹೇಳಿದರು. 

ಆದರೆ, ಪ್ರವೇಶ ಪ್ರಕ್ರಿಯೆ ಆರಂಭವಾಗಬೇಕು. ಇತರ ವಿಷಯಗಳನ್ನು ಹಂತ ಹಂತವಾಗಿ ಸರಿಪಡಿಸಬಹುದು ಎಂದು ಪೀಠವು ತಿಳಿಸಿತು.  ‘ನಿಮ್ಮ ಮುಂದೆ ಇರುವ ಸಮಸ್ಯೆಗಳ ಬಗ್ಗೆ ಅರಿವಿದೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ ನಿಮಗೆ ಇದೆ. ಹಾಗಾಗಿ, ಒಂದು ತಂಡಕ್ಕೆ ಅವಕಾಶ ನಿರಾಕರಣೆ ಮಾಡುವುದು ಬೇಡ. ಪರೀಕ್ಷೆ ಬರೆಯಲು ಅವಕಾಶ ಕೊಡಬೇಕು ಎಂಬುದು ಮಧ್ಯಂತರ ಆದೇಶದಲ್ಲಿ ಸ್ಪಷ್ಟವಾಗಿಯೇ ಇದೆ. ಎಷ್ಟು ಮಹಿಳೆಯರು ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ ನೋಡೋಣ’ ಎಂದು ಪೀಠವು ಹೇಳಿದೆ.

*

ಇದು ಪರಿವರ್ತನೆಯ ಹಂತ. ಪರಿವರ್ತನೆಯನ್ನು ಮುಂದೂಡಲು ಬಯಸುವುದಿಲ್ಲ. ಈ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಬಾರದಿರಬಹುದು. ಆದರೆ, ಭವಿಷ್ಯದತ್ತ ನೋಡಬೇಕು.
-ಸುಪ್ರೀಂ ಕೋರ್ಟ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು