ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಜಗತ್ತಿನಾದ್ಯಂತ ಕೋವಿಡ್‌ 4ನೇ ಅಲೆ: ದೇಶದಲ್ಲಿ 358 ಓಮೈಕ್ರಾನ್‌ ಪ್ರಕರಣ'

Last Updated 24 ಡಿಸೆಂಬರ್ 2021, 12:27 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್‌ ಸೋಂಕು ಜಾಗತಿಕವಾಗಿ ಸಾಂಕ್ರಾಮಿಕವಾಗುತ್ತಿರುವ ಬೆನ್ನಲ್ಲೇ ದೇಶದಲ್ಲಿ ತೀವ್ರ ಮುನ್ನೆಚ್ಚರಿಕೆ ವಹಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಡಿಸೆಂಬರ್‌ 23ರಂದು (ಗುರುವಾರ) ಜಗತ್ತಿನಾದ್ಯಂತ ಕೋವಿಡ್‌–19 ದೃಢಪಟ್ಟ ಸುಮಾರು 9 ಲಕ್ಷ ಪ್ರಕರಣಗಳು ದಾಖಲಾಗಿದ್ದು, ಇದು ಸೋಂಕು ಮತ್ತೆ ಸಾಂಕ್ರಾಮಿಕವಾಗಿರುವುದನ್ನು ಸೂಚಿಸುತ್ತಿದೆ ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಅಭಿಪ್ರಾಯ ಪಟ್ಟಿದ್ದಾರೆ.

ಆರೋಗ್ಯ ಸಚಿವಾಲಯದ ಪ್ರಕಟಣೆಯಲ್ಲಿನ ಪ್ರಮುಖಾಂಶಗಳು:

* ವಿಶ್ವದಾದ್ಯಂತ ನಾಲ್ಕನೇ ಅಲೆ ಕಾಣಿಸಿಕೊಂಡಿದೆ. 24 ಗಂಟೆಗಳ ಅಂತರದಲ್ಲಿ 9 ಲಕ್ಷ ಹೊಸ ಪ್ರಕರಣಗಳು ದಾಖಲಾಗಿವೆ.

* 108 ರಾಷ್ಟ್ರಗಳಲ್ಲಿ ಒಟ್ಟು ಸುಮಾರು 1 ಲಕ್ಷ ಓಮೈಕ್ರಾನ್‌ ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ 26 ಮಂದಿ ಮೃತಪಟ್ಟಿದ್ದಾರೆ. ಭಾರತದ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 358 ಓಮೈಕ್ರಾನ್‌ ಪ್ರಕರಣಗಳಿವೆ. ಈವರೆಗೂ 114 ಮಂದಿ ಗುಣಮುಖರಾಗಿದ್ದಾರೆ.

* ಭಾರತದಲ್ಲಿ 183 ಓಮೈಕ್ರಾನ್‌ ಪ್ರಕರಣಗಳನ್ನು ವಿಶ್ಲೇಷಿಸಲಾಗಿದ್ದು, ಆ ಪೈಕಿ 121 ಜನರು ವಿದೇಶಕ್ಕೆ ಪ್ರಯಾಣಿಸಿದ್ದವರು, 44 ಜನರು ವಿದೇಶ ಪ್ರಯಾಣ ಕೈಗೊಂಡಿರಲಿಲ್ಲ, ಆದರೆ ವಿದೇಶದಿಂದ ಬಂದವರೊಂದಿಗೆ ಸಂಪರ್ಕದಲ್ಲಿದ್ದರು. 183 ಜನರ ಪೈಕಿ 87 ಜನರು ಎರಡೂ ಡೋಸ್‌ ಲಸಿಕೆ ಹಾಕಿಸಿಕೊಂಡಿದ್ದಾರೆ ಹಾಗೂ ಅವರಲ್ಲಿ ಮೂವರು 3 ಡೋಸ್‌ ಲಸಿಕೆ ಪಡೆದಿದ್ದಾರೆ.

* ಯುರೋಪ್‌ಗೆ ಹೋಲಿಸಿದರೆ ಉತ್ತರ ಅಮೆರಿಕ, ಆಫ್ರಿಕಾ ಹಾಗೂ ಏಷ್ಯಾದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ.

* ಭಾರತದಲ್ಲಿ ನಿತ್ಯ ಕೋವಿಡ್‌ ದೃಢಪಟ್ಟ ಸುಮಾರು 7,000 ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಕಳೆದ 4 ವಾರಗಳಿಂದ ದೇಶದಲ್ಲಿ ನಿತ್ಯ ಪ್ರಕರಣಗಳ ಸಂಖ್ಯೆ 10,000ಕ್ಕಿಂತ ಕಡಿಮೆ ಇದೆ.

* ಜಾಗತಿಕವಾಗಿ ಕೋವಿಡ್‌ ದೃಢ ಪ್ರಕರಣಗಳ ಪ್ರಮಾಣ ಶೇಕಡ 6ರಷ್ಟಿದೆ. ಭಾರತದಲ್ಲಿ ಕೋವಿಡ್‌ ದೃಢ ಪ್ರಮಾಣ ಶೇಕಡ 5.3ರಷ್ಟಿದೆ. ಕೇರಳ ಮತ್ತು ಮಿಜೋರಾಂನಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದೆ.

* ದೇಶದ ಸುಮಾರು 20 ಜಿಲ್ಲೆಗಳಲ್ಲಿ ವಾರದಲ್ಲಿ ದಾಖಲಾಗಿರುವ ಕೋವಿಡ್‌ ದೃಢ ಪ್ರಮಾಣ ಶೇಕಡ 5ರಿಂದ 10ರಷ್ಟಿದೆ.

* ಭಾರತದಲ್ಲಿ ಡೆಲ್ಟಾ ತಳಿಯ ಸೋಂಕು ಪ್ರಕರಣಗಳು ಹೆಚ್ಚಿವೆ ಎಂದು ಐಸಿಎಂಆರ್‌ನ ಡಿಜಿ ಡಾ.ಬಲರಾಮ್‌ ಭಾರ್ಗವ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT