ಶನಿವಾರ, ಅಕ್ಟೋಬರ್ 16, 2021
29 °C

ಲೆಹ್‌ನಲ್ಲಿ 1,000 ಕೆ.ಜಿ ತೂಕದ ಬೃಹತ್ ಖಾದಿ ರಾಷ್ಟ್ರ ಧ್ವಜ ಅನಾವರಣ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Prajavani

ಲೆಹ್: ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಜಯಂತಿ ಪ್ರಯುಕ್ತ ಲಡಾಖ್ ರಾಜಧಾನಿ ಲೆಹ್‌ನಲ್ಲಿ ಭಾರತೀಯ ಸೇನೆಯು ಖಾದಿಯಿಂದ ತಯಾರಿಸಿದ ಬೃಹತ್ ಗಾತ್ರದ ರಾಷ್ಟ್ರ ಧ್ವಜವನ್ನು ಅನಾವರಣಗೊಳಿಸಿದೆ. ಇದನ್ನು ವಿಶ್ವದ ಅತಿದೊಡ್ಡ ಖಾದಿ ರಾಷ್ಟ್ರೀಯ ಧ್ವಜವೆಂದು ಪರಿಗಣಿಸಲಾಗಿದೆ.

ಸಂಪೂರ್ಣವಾಗಿ ಖಾದಿಯಿಂದ ತಯಾರಿಸಲಾದ ಈ ಧ್ವಜದ ಗಾತ್ರ 225 × 150 ಅಡಿಯಾಗಿದ್ದು, ಇದನ್ನು ತಯಾರಿಸಲು ಸುಮಾರು 1.5 ತಿಂಗಳು ಸಮಯ ತೆಗೆದುಕೊಂಡಿದೆ ಎಂದು ಧ್ವಜದ ಸೃಷ್ಟಿಕರ್ತರಾದ ಮುಂಬೈನ ಖಾದಿ ಡೈಯರ್ಸ್ ಮತ್ತು ಪ್ರಿಂಟರ್ಸ್‌ನ ಡಿ.ಎನ್. ಭಟ್ ಹೇಳಿದ್ದಾರೆ.

225 ಅಡಿ ಉದ್ದ ಮತ್ತು 150 ಅಡಿ ಅಗಲದ ತ್ರಿವರ್ಣ ಧ್ವಜವು ಸುಮಾರು 1,000 ಕೆಜಿ ತೂಗುತ್ತದೆ. ಭಾರತೀಯ ಸೇನೆಯ 57 ಎಂಜಿನಿಯರ್ ರೆಜಿಮೆಂಟ್ ಇದನ್ನು ಸಿದ್ಧಪಡಿಸಿದೆ ಎಂದು ಉದ್ಘಾಟನಾ ಸಮಾರಂಭವನ್ನು ಪ್ರಸಾರ ಮಾಡಿದ ದೂರದರ್ಶನ ವರದಿ ಮಾಡಿದೆ.

‘ನಮ್ಮ ರಾಷ್ಟ್ರ ಧ್ವಜವು ಏಕತೆ, ಮಾನವೀಯತೆಯ ಸಂಕೇತವಾಗಿದೆ ಮತ್ತು ದೇಶದ ಪ್ರತಿಯೊಬ್ಬರೂ ಸ್ವೀಕರಿಸಿದ ಚಿಹ್ನೆ ಎಂದು ಗಾಂಧಿ ಜೀ ಹೇಳಿದ್ದರು. ಇದು ದೇಶದ ಶ್ರೇಷ್ಠತೆಯ ಸಂಕೇತವಾಗಿದೆ. ಮುಂಬರುವ ವರ್ಷಗಳಲ್ಲಿ ಈ ಧ್ವಜವು (ಲೇಹ್‌ನಲ್ಲಿ) ನಮ್ಮ ಸೈನಿಕರಿಗೆ ಉತ್ಸಾಹದ ಸಂಕೇತ ’ಎಂದು ಲಡಾಖ್‌ನ ಲೆಫ್ಟಿನೆಂಟ್ ಗವರ್ನರ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್‌ಐ ಟ್ವೀಟ್ ಮಾಡಿದೆ.

ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ಸಹ ಟ್ವಿಟರ್‌ನಲ್ಲಿ ವಿಡಿಯೊ ಹಂಚಿಕೊಂಡಿದ್ದು, ‘ಗಾಂಧೀಜಿಯವರ ಜಯಂತಿಯಂದು, ವಿಶ್ವದ ಅತಿದೊಡ್ಡ ಖಾದಿ ತಿರಂಗ ಲಡಾಖ್‌ನ ಲೆಹ್‌ನಲ್ಲಿ ಅನಾವರಣಗೊಂಡಿರುವುದು ಭಾರತಕ್ಕೆ ಹೆಮ್ಮೆಯ ಕ್ಷಣವಾಗಿದೆ. ಬಾಪು ಅವರನ್ನು ನೆನಪಿಸುವ ಈ ಕೆಲಸಕ್ಕೆ ನಾನು ಸಲ್ಯೂಟ್ ಮಾಡುತ್ತೇನೆ. ಇದು ಭಾರತೀಯ ಕುಶಲಕರ್ಮಿಗಳನ್ನು ಉತ್ತೇಜಿಸುತ್ತದೆ ಮತ್ತು ರಾಷ್ಟ್ರವನ್ನು ಗೌರವಿಸುತ್ತದೆ. ಜೈ ಹಿಂದ್, ಜೈ ಭಾರತ್!’ಎಂದು ಹೇಳಿದ್ದಾರೆ.

ಎಎನ್‌ಐ ಹಂಚಿಕೊಂಡಿರುವ ವಿಡಿಯೊದಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳು ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಲು ಲೆಹ್‌ನ ಕಾರ್ಯಕ್ರಮದ ಸ್ಥಳದಲ್ಲಿ ಹಾರಾಟ ನಡೆಸುತ್ತಿರುವುದನ್ನು ಕಾಣಬಹುದು.

ಭಾರತೀಯ ಸೇನೆಯ 57 ಎಂಜಿನಿಯರ್ ರೆಜಿಮೆಂಟ್‌ನ ಕನಿಷ್ಠ 150 ತುಕಡಿಗಳು ಲೆಹ್‌ನಲ್ಲಿ ನೆಲಮಟ್ಟದಿಂದ 2,000 ಅಡಿಗಳಿಗಿಂತಲೂ ಎತ್ತರದ ಪರ್ವತದ ಮೇಲೆ ಧ್ವಜವನ್ನು ಹೊತ್ತೊಯ್ದವು. ಸೇನೆ ಪರ್ವತದ ಮೇಲ್ಭಾಗವನ್ನು ತಲುಪಲು ಎರಡು ಗಂಟೆಗಳ ಕಾಲ ತೆಗೆದುಕೊಂಡಿತು. ಎಎನ್‌ಐ ಹಂಚಿಕೊಂಡಿರುವ ವಿಡಿಯೊದಲ್ಲಿ ಹೆಚ್ಚಿನ ಸಂಖ್ಯೆಯ ಸೈನಿಕರು ಬೆಟ್ಟದ ಮೇಲೆ ಧ್ವಜವನ್ನು ಹೊತ್ತಿರುವುದನ್ನು ಕಾಣಬಹುದು.

ಈ ಧ್ವಜವನ್ನು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ತಯಾರಿಸಿದ್ದು, ಲೆಹ್‌ನಲ್ಲಿ ಸೇನೆಯು ಇದನ್ನು ಅನಾವರಣಗೊಳಿಸಿದೆ. ಲಡಾಖ್‌ಗೆ ಎರಡು ದಿನಗಳ ಪ್ರವಾಸದಲ್ಲಿರುವ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರು ಧ್ವಜದ ಉದ್ಘಾಟನೆಯ ಸಮಯದಲ್ಲಿ ಇತರ ಸೇನಾ ಅಧಿಕಾರಿಗಳೊಂದಿಗೆ ಹಾಜರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು