ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಿಂದಲೇ ಕಚೇರಿ ಕೆಲಸ ಶಿಸ್ತಿದ್ದರೆ ನಿರ್ವಹಣೆ ಸಲೀಸು

Last Updated 22 ಮಾರ್ಚ್ 2020, 19:30 IST
ಅಕ್ಷರ ಗಾತ್ರ

‘ವರ್ಕ್‌ ಫ್ರಮ್ ಹೋಂ’ – ಮನೆಯಿಂದಲೇ ಕಚೇರಿ ಕೆಲಸ ಐಟಿ– ಬಿಟಿ, ಮ್ಯಾನೇಜ್‌ಮೆಂಟ್‌ ಕಂಪನಿಗಳ ಉದ್ಯೋಗಿಗಳಿಗೆ ಹೊಸತೇನಲ್ಲ. ಈಗಂತೂ ಕೊರೊನಾ ಸೋಂಕಿನ ಭೀತಿಯಿಂದಾಗಿ ಬಹುತೇಕ ಖಾಸಗಿ ಕಂಪನಿಗಳ ಉದ್ಯೋಗಿಗಳು ಮನೆಯಿಂದಲೇ ತಮ್ಮ ಕರ್ತವ್ಯ ನಿರ್ವಹಿಸುವುದು ಅನಿವಾರ್ಯವಾಗಿದೆ. ಆದರೆ ಇದು ಕಚೇರಿಯಲ್ಲಿ ಒಂದು ಶಿಸ್ತಿನ ವಾತಾವರಣದಲ್ಲಿ ಮಾಡುವುದಕ್ಕಿಂತ ವಿಭಿನ್ನ; ಅಲ್ಲಿಯಂತೆ ಕೆಲಸ ಮಾಡುವ ವಾತಾವರಣ ಕೆಲವರಿಗೆ ಮನೆಯಲ್ಲಿ ಸಿಗದಿರಬಹುದು. ಅದರಲ್ಲೂ ಮಹಿಳೆಯರಿಗೆ ಮನೆಯಿಂದಲೇ ಕೆಲಸ ನಿರ್ವಹಿಸಲು ಹಲವಾರು ಸವಾಲುಗಳು ಎದುರಾಗಬಹುದು, ಅಂತಹವರು ಕೆಲವು ಅಡೆತಡೆಗಳನ್ನು ನಿವಾರಿಸಿಕೊಳ್ಳಬೇಕಾಗುತ್ತದೆ.

ಮಕ್ಕಳು, ವಯಸ್ಸಾದ ಅತ್ತೆ– ಮಾವ, ಮನೆಗೆಲಸದವರು, ಅಡುಗೆ, ಬಟ್ಟೆ ತೊಳೆಯುವುದು.. ಹೀಗೇ ಗೃಹಿಣಿಯರಾಗಿ ಹತ್ತಾರು ಕರ್ತವ್ಯಗಳ ಮಧ್ಯೆ ಕಚೇರಿಯ ಕೆಲಸವನ್ನು ನಿರ್ವಹಿಸಬೇಕಾಗುತ್ತದೆ. ಕಚೇರಿಗೆ ಹೋಗಿ ಬರುವಾಗಲೂ ಇಂತಹ ಕೌಟುಂಬಿಕ ಕರ್ತವ್ಯಗಳಿಲ್ಲವೇ ಎಂದು ನೀವು ಪ್ರಶ್ನಿಸಬಹುದು. ಆದರೆ ಎಲ್ಲವನ್ನೂ ಒಂದು ರೀತಿಯ ಟೈಂ ಟೇಬಲ್‌ ಮಾಡಿಕೊಂಡು ಕಚೇರಿಗೆ ಹೋಗುವುದು ಒಂದು ಕಡೆಯಾದರೆ, ಈಗ ಕೊರೊನಾ ಸೋಂಕಿನಿಂದ ಪಾರಾಗಲು ಮಕ್ಕಳು, ಪತಿ ಎಲ್ಲರೂ 24 ಗಂಟೆ ಮನೆಯಲ್ಲಿ ಇರುವ ಸವಾಲನ್ನು ಎದುರಿಸುವುದು ಇನ್ನೊಂದು ಕಡೆ. ಹೀಗಾಗಿ ಕೆಲಸವನ್ನು ಸರಿಯಾಗಿ ಹೊಂದಿಸಿಕೊಂಡು ಮಾಡಲು ಒಂದೆರಡು ದಿನಗಳು ಬೇಕು.

ಪ್ರಯಾಣದ ಸಮಯ ಉಳಿತಾಯ

ಆದರೆ ಮನೆಯಿಂದಲೇ ಕಚೇರಿಯ ಕರ್ತವ್ಯ ನಿರ್ವಹಿಸುವಾಗ ಬೇಕಾದಷ್ಟು ಪ್ರಯೋಜನಗಳು ನಿಮಗಿವೆ ಎಂಬುದನ್ನು ಮರೆಯಬೇಡಿ. ಅದರಲ್ಲೂ ಮುಖ್ಯವಾಗಿ ಮನೆಯಿಂದ ಕಚೇರಿಗೆ ಪಯಣಿಸುವ ಸಮಯ ಉಳಿತಾಯವಾಗುತ್ತದೆ. ಇಂತಹ ಓಡಾಟದಲ್ಲಿ ಅನುಭವಿಸಬೇಕಿದ್ದ ಒತ್ತಡ ಕಡಿಮೆಯಾಗುತ್ತದೆ.

ನೀವು ಸದ್ಯ ಮನೆಯಿಂದಲೇ ಕೆಲಸ ಮಾಡುತ್ತಿದ್ದರೆ ಅಥವಾ ಮುಂದೆ ಮಾಡುವ ಉದ್ದೇಶವಿದ್ದರೆ ಇಲ್ಲೊಂದಿಷ್ಟು ಟಿಪ್ಸ್‌ ನಿಮಗೆ ನೆರವಾಗಬಹುದು.

ಮನೆಯಿಂದಲೆ ಕೆಲಸ ನಿರ್ವಹಿಸುವಾಗ ನಿಮಗೆ ನೀವೇ ಒಂದಿಷ್ಟು ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಕಚೇರಿಯ ಕರ್ತವ್ಯಕ್ಕೆ ಹೆಚ್ಚು ಆದ್ಯತೆ ನೀಡಬೇಕು. ನಿಮ್ಮ ಮುಖ್ಯಸ್ಥರ ನಿಗಾ ಇಲ್ಲವೆಂದರೆ ಹೆಚ್ಚು ಗಂಭೀರವಾಗಿ ಕೆಲಸ ಮಾಡದೆ, ಏಕಾಗ್ರತೆ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಸ್ವಯಂಶಿಸ್ತು ಅಳವಡಿಸಿಕೊಂಡರೆ ಭವಿಷ್ಯದಲ್ಲಿ ನಿಮಗೇ ಒಳಿತು.

ಕಚೇರಿಗೆ ತೆರಳುವಾಗ ಹೇಗೆ ಮನೆಯ, ಮಕ್ಕಳ ಕೆಲಸ ಮುಗಿಸಿ ಕೂರುತ್ತೀರೊ ಹಾಗೆಯೇ ಎಲ್ಲವನ್ನೂ ನಿಗದಿತ ಸಮಯದೊಳಗೆ ಮುಗಿಸಿ. ನಿಮ್ಮ ನಿತ್ಯ ಕಾರ್ಯಗಳಾದ ಸ್ನಾನ, ತಿಂಡಿ.. ಎಲ್ಲವನ್ನೂ ಮುಗಿಸಿಕೊಂಡು ಕೂರುವುದು ಲೇಸು. ಮನೆಯಿಂದಲೇ ಕಚೇರಿಯ ಕೆಲಸ, ನಡುವೆ ಯಾವಾಗಲೋ ಇದನ್ನು ತೀರಿಸಿದರಾಯಿತು ಎಂದು ಅಲಕ್ಷ್ಯ ಮಾಡಿದರೆ ಗಮನ ಬೇರೆ ಕಡೆ ಹೋಗಬಹುದು. ಕೆಲಸದ ಒತ್ತಡವಿದ್ದರೆ, ನಿತ್ಯ ಕೆಲಸಗಳಿಗೆ ಬರೆ ಬಿದ್ದು, ಕಿರಿಕಿರಿ ಆಗಬಹುದು.

ಹಾಗೆಯೇ ಮನೆಯಲ್ಲಿರುವುದು ಎಂದು ಹೇಗೆ ಬೇಕೊ ಹಾಗೆ ಡ್ರೆಸ್‌ ಮಾಡಿಕೊಂಡು, ಹಾಸಿಗೆಯ ಮೇಲೆಯೋ ಅಥವಾ ಸೋಫಾದಲ್ಲೋ ಒರಗಿಕೊಂಡು ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವುದೂ ಸರಿಯಲ್ಲ. ಇದು ಕೆಲಸದ ವಾತಾವರಣವನ್ನು ಸೃಷ್ಟಿಸುವುದಿಲ್ಲ, ಜೊತೆಗೆ ನೀವು ಕುಳಿತುಕೊಳ್ಳುವ ಭಂಗಿ ಹೆಚ್ಚು ಕಡಿಮೆಯಾಗಿ ಬೆನ್ನು, ಸೊಂಟ, ಭುಜದ ನೋವಿಗೆ ಕಾರಣವಾಗಬಹುದು. ಹೀಗಾಗಿ ಪ್ರತ್ಯೇಕ ಕುರ್ಚಿ, ಮೇಜನ್ನು ಜೋಡಿಸಿಕೊಂಡು, ಅವಕಾಶವಿದ್ದರೆ ಪ್ರತ್ಯೇಕ ಕೊಠಡಿಯಲ್ಲಿ ಸದ್ದುಗದ್ದಲವಿಲ್ಲದ ಜಾಗದಲ್ಲಿ ಕೂತರೆ ಕೆಲಸ ಮಾಡಲು ಹುಮ್ಮಸ್ಸು ಬರುತ್ತದೆ.

ಮನೆಯಲ್ಲಿ ಮಕ್ಕಳಿಗೆ, ಕೆಲಸದವರಿದ್ದರೆ ಅವರಿಗೆ ನೀವು ಮನೆಯಿಂದಲೇ ಕೆಲಸ ಮಾಡುವ ಬಗ್ಗೆ ತಿಳಿಸಿ ಹೇಳಿ. ಇದರಿಂದ ನಿಮಗೆ ಪದೆಪದೆ ತೊಂದರೆಯಾಗುವುದು, ಕೆಲಸದ ಮಧ್ಯೆ ತಡೆಯಾಗುವುದು ತಪ್ಪುತ್ತದೆ. ಅಕ್ಕಪಕ್ಕದ ಮನೆಯವರಿಗೆ, ಬಂಧುಗಳಿಗೆ, ಸ್ನೇಹಿತೆಯರಿಗೆ ಈ ಬಗ್ಗೆ ಮುಂಚಿತವಾಗಿ ತಿಳಿಸಿ.

ಮಧ್ಯೆ ಮಧ್ಯೆ ಕಚೇರಿಯಲ್ಲಿ ತೆಗೆದುಕೊಂಡಂತೆ, ಎರಡು ತಾಸುಗಳಿಗೊಮ್ಮೆ ವಿರಾಮ ತೆಗೆದುಕೊಳ್ಳಿ. ಅದು 5 ನಿಮಿಷವಿರಲಿ, ಹತ್ತು ನಿಮಿಷವಿರಲಿ, ಬಿಡುವು ಮಾಡಿಕೊಂಡು ಕಾಫಿ, ಊಟಕ್ಕೆ ಸಮಯ ವಿನಿಯೋಗಿಸಿ. ಕೆಲಸ ಮುಗಿಸಿಯೇ ಊಟ ಮಾಡುವ ಎಂದುಕೊಂಡರೆ ಅದು ನಿಮ್ಮ ಮೇಲೆ ಇನ್ನಷ್ಟು ಒತ್ತಡಕ್ಕೆ ಕಾರಣವಾಗುತ್ತದೆ. ವಿರಾಮ ತೆಗೆದುಕೊಂಡು ನಾಲ್ಕಾರು ಹೆಜ್ಜೆ ಓಡಾಡಿದರೆ, ಮನಸ್ಸು, ದೇಹ ಪ್ರಫುಲ್ಲವಾಗಿ ಕೆಲಸ ಮಾಡಲು ಉತ್ಸಾಹ ಮೂಡುತ್ತದೆ.

ಮನೆಯಿಂದ ಕಚೇರಿಯ ಕೆಲಸ ಮಾಡುವುದೆಂದರೆ ನಿಮ್ಮ ಸಹೋದ್ಯೋಗಿಗಳು, ಮುಖ್ಯಸ್ಥರ ಜೊತೆ ಸಂಪೂರ್ಣವಾಗಿ ಮಾತುಕತೆ ಕಡಿದುಕೊಳ್ಳುವುದು ಎಂದರ್ಥವಲ್ಲ. ನಿಮ್ಮ ಕೆಲಸಕ್ಕೆ ಸಂಬಂಧಿಸಿಯೋ ಅಥವಾ ಸೌಹಾರ್ದವಾಗಿಯೋ ಸಹೋದ್ಯೋಗಿಗಳು, ಕಚೇರಿಯಲ್ಲಿರುವ ಆತ್ಮೀಯ ಸ್ನೇಹಿತರ ಜೊತೆ ಬಿಡುವಿದ್ದಾಗ ಮಾತನಾಡಿ.

ಸಮಯದ ಬಗ್ಗೆ ಗಮನ ನೀಡಿ. ಇಡೀ ದಿನ ಕೆಲಸ ಮಾಡಿ, ಕೆಲಸದಲ್ಲಿ ಗುಣಮಟ್ಟ ಏರುಪೇರಾಗುವುದು ಅಥವಾ ಮನೆಯಲ್ಲಿ ಮಕ್ಕಳು, ಕುಟುಂಬದ ಇತರ ಸದಸ್ಯರ ಮೇಲೆ ರೇಗಾಡುವುದು ಸರಿಯಲ್ಲ. ಕಚೇರಿಯಲ್ಲಿ ಎಷ್ಟು ಗಂಟೆಗೆ ಕೆಲಸ ಆರಂಭಿಸುತ್ತೀರೋ ಅದೇ ಸಮಯಕ್ಕೆ ಲಾಗ್‌ಆನ್‌ ಆಗಿ, ಕಚೇರಿಯ ಊಟದ ವಿರಾಮದಲ್ಲಿ ನಿಮ್ಮ ಊಟವನ್ನೂ ಮುಗಿಸಿಕೊಳ್ಳಿ. ಕೆಲಸವನ್ನು ಮುಗಿಸುವುದೂ ಅಷ್ಟೆ, ಅಲ್ಲಿಯ ಸಮಯಕ್ಕೆ ಬದ್ಧರಾಗಿರಿ.

***

ಕಂಪ್ಯೂಟರ್‌ ಅಥವಾ ಡೆಸ್ಕ್‌ಟಾಪ್‌ಗೆ ಸಾಕಷ್ಟು ವೇಗದಿಂದ ಕೂಡಿದ ಅಂತರ್ಜಾಲ ಸೌಲಭ್ಯ ಇರುವಂತೆ ನೋಡಿಕೊಳ್ಳಿ.

ಕಚೇರಿಯ ಮುಖ್ಯಸ್ಥರು/ ಸಹೋದ್ಯೋಗಿಗಳ ಜೊತೆ ಕೆಲಸದ ಸಂಬಂಧ ಮಾತನಾಡಲು ಸ್ಕೈಪ್‌, ಕಾಲ್‌ ಕಾನ್ಫರೆನ್ಸ್‌ ಸೌಲಭ್ಯ ಇಟ್ಟುಕೊಳ್ಳಿ.

ವಿದ್ಯುತ್‌ ಕೈ ಕೊಡಬಹುದು. ಹೀಗಾಗಿ ಪರ್ಯಾಯ ವ್ಯವಸ್ಥೆಯನ್ನು ಮೊದಲೇ ಮಾಡಿಟ್ಟುಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT