ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವು ದೇವರಿಗಿಂತ ಬೇರೆ ದೇವರಿಲ್ಲ! ಇದಕ್ಕಾಗಿ ನೀವು ಬೀದರ್ ಜಿಲ್ಲೆಗೆ ಬರಲೇಬೇಕು..

Last Updated 7 ಮೇ 2022, 21:30 IST
ಅಕ್ಷರ ಗಾತ್ರ

ಮಾವಿನ ಸೀಸನ್‌ ಬಂದ್ರ, ನೀವು ಬೀದರ್‌ ಜಿಲ್ಲೆಗೆ ಬರಬೇಕು. ಇಲ್ಲಿ ಮಾವಿನಹಣ್ಣು ತಿನ್ನುವ ಸೊಗಸೇ ಬ್ಯಾರೆ. ಇಲ್ಲಿ ಬೈಗನ್‌ಪಲ್ಲಿಯಿಂದ ಮಾವಿನ ಋತು ಶುರುವಾದ್ರ, ನೀಲಂನಿಂದ ಮುಗೀತದ.

ನಾವರೆ ನಾಮ್‌ ಮೆ ಕ್ಯಾ ರಕ್ಖಾ ಹೈ... ಆಮ್‌ ಹೈ... ಖಾನೆ ಕಾ ಕಾಮ್‌ ಹೈ ಅಂತಿದ್ವಿ (ಹೆಸರಿನೊಳಗೇನದ... ಮಾವದ, ತಿನ್ನುವ ಕೆಲಸದ). ಈ ಮಾವಿನ ಹಣ್ಣಿಗೂ ಹಿಂದಿ ಗಾದೆಗೂ ಅಗ್ದಿ ಆಳವಾದ ನಂಟದ ನೋಡ್ರಿ. ಆಮ್‌ ತು ಖಾ ಘುಟ್ಲಿ ನ ದೇಖ್‌ (ಮಾವು ಸವಿ ನೀ... ವಾಟೆ ನೋಡಬ್ಯಾಡ), ಆಮ್‌ ಸೆ ಮತ್ಲಬ್‌, ಘುಟ್ಲಿ ಸೆ ನಹಿ (ಮಾವಿನೊಂದಿಗೆ ನಂಟು, ವಾಟೆಯ ಜೊತೆಗಲ್ಲ), ಆಮ್‌ ಖಾಲೆ, ಘುಟ್ಲಿ ಕ್ಯೂಂ ಗಿನ್ತಾ ಹೈ (ಮಾವು ಸವೀರಿ, ವಾಟೆ ಯಾಕ ಎಣಸ್ತೀರಿ) ಹಿಂಗ ವಾಟೆಯನ್ನು ಕಡೆಗಣಿಸುವಂಥವೇ ಮಾತದಾವ. ಆದ್ರ ವಾಟೆನೆ ಇರಲಿಲ್ಲಂದ್ರ ಮಾವು ಎಲ್ಲಿಂದ ಬರ್ತದ?

ಬೆನಿಶಾನ್‌, ಇದು ಈಗ ಬೇನಿಸಾನ್‌ ಆಗೇದ. ಬೈಗನ್‌ಪಲ್ಲಿಗೇನೆ ಹಿಂಗ ಅನ್ನೂದು. ಇಲ್ಲಾಂದ್ರ ಸಫೇದಾ ಅಂತಲೂ ಕರೀತಾರ. ಪೂರ್ಣ ಬಿಸಿಲಾಗ ಮಾಗಿದ್ರ ಇದರ ಮಾಧುರ್ಯನೇ ಬೇರೆ. ಕಣ್ಣಿಕಣ್ಣಿ ರಸ, ತೆಳುವಾದ ಸಿಪ್ಪಿ. ಹೆಚ್ಚಿ ತಿನ್ನಾಕ ಅಗ್ದಿ ಹೇಳಿ ಮಾಡಿಸಿದ ಹಣ್ಣಿದು.

ಇಲ್ಲಿಂದ ಶುರುವಾಗ್ತದ ನಮ್ಮಲ್ಲಿ ಮಾವಿನ ಋತು. ಆಮೇಲೆ ಸೌಕಾಶ ನಮ್ಮ ಮಲ್ಲಿಕಾ ರಾಣಿ ಬರ್ತಾಳ. ಅಗ್ದಿ ಅಂಗಸೌಷ್ಠವ ತುಂಬಿಕೊಂಡ ರಸಭರಿತ ಗಂಧರ್ವ ಕನ್ನೆಯಂಥ ಹಣ್ಣಿದು. ಅದೇ ನಾವು ಪಾಟಿ ಮ್ಯಾಲೆ ಆ ಸೆ ಆಮ್‌ ಅಂತ ಬರಿಯೂದು ಕಲಿತಾಗ ಚಿತ್ರಾ ತಗೀತೀವೆಲ್ಲ, ಅಂಥದ್ದೇ ಅಂಥದ್ದೇ ಮಾವಿದು ಮಲ್ಲಿಕಾ. ಮಾವುಗಳ ರಾಣಿ. ಹುಳಿಯನ್ನೂದು ಗೊತ್ತೇ ಇಲ್ಲ. ಮಲ್ಲಿಕಾನ ಗಾತ್ರ, ರುಚಿ ಕಂಡು ಹೊಟ್ಟೆ ಉರುಕೊಂಡ ಬೇರೆ ಮಾವಿನೊಳಗ ಹುಳಿ ಕಾಣಬಹುದೇನೋ. ಇದರ ಕಾಯಿನೂ ಅಗ್ದಿ ರುಚಿ. ಹಾಂ, ಹೇಳೂದು ಮರತಿದ್ದೆ. ಮಲ್ಲಿಕಾ ಮಾವಿನ ರಾಣಿಯಾಗಿದ್ದು ಹೆಂಗಂದ್ರ, ದಶೇರಿ ಮತ್ತು ನೀಲಂಗಳ ಮಿಲನದಿಂದ. ಅಂದ್ರ ಇವೆರಡೂ ತಳಿಗಳ ಹೈಬ್ರಿಡ್‌ ತಳಿ ಮಲ್ಲಿಕಾ. ದಶೇರಿಯ ಸವಿ, ನೀಲಂನ ಗಾತ್ರ ಎರಡೂ ಕೂಡಿ, ಘಮ್‌ ಅನ್ನುವ ಘಮದೊಂದಿಗೆ ಕಿತ್ತಲೆಬಣ್ಣದ ತಿರುಳಿ ನೊಂದಿಗೆ ಅಗ್ದಿ ಸಿರಿವಂತ ಮಲ್ಲಿಕಾ ಇಕಿ.

ಇನ್ನ ನೀಲಂ ಮತ್ತು ದಶೇರಿ ಬಗ್ಗೆ ಹೇಳಬೇಕಲ್ಲ. ನೀಲಂ ನಮ್ಮ ಭಾರತದ ಎಲ್ಲ ಭಾಗದೊಳಗೂ ಬೆಳೆಯುವ ಹಣ್ಣು. ದಶೇರಿ ಹಂಗಲ್ಲ. ಉತ್ತರ ಭಾರತದೊಳಗ ಅಗ್ದಿ ಹೆಚ್ಚಿನ ಭರಾಟೆ. ದಶೇರಿಯ ವಿಶೇಷ ಏನಂದ್ರ ಕಾರ್ಬಾಯ್ಡ್‌ ಹಾಕಿದ್ರ ಹಣ್ಣಾಗೂದಿಲ್ಲಿದು. ಬಣ್ಣೂ ಇಲ್ಲ. ಗುಣಕ್ಕ ಯಾಕ ಬಣ್ಣದ ಹಂಗು ಅನ್ನೂಹಂಗ ತಿಳಿಹಸಿರು, ತಿಳಿ ಹಳದಿ ಬಣ್ಣದ ಸಣ್ಣಗಾತ್ರದ ಹಣ್ಣಿದು. ಅಗ್ದಿ ಅಂಗೈಯೊಳಗ ಮುಚ್ಚಿಟ್ಕೊಂಡು, ತೋರು ಬೆರಳು ಮತ್ತು ಹೆಬ್ಬೆರಳಿನ ನಡುವಿನ ಬಾವಿಯಿಂದಲೇ ಸೊರಕ್‌ ಅಂತ ರಸ ಹೀರಬಹುದು. ತಿಂದ ಮ್ಯಾಲೆ ನೀರು ಕುಡಿಬೇಕು ಅನಿಸುವಷ್ಟು ಸಿಹಿ. ದಶೇಹರಿ. ಅದಕ್ಕ ಮಿಶ್ರಿ (ಸಕ್ಕರಿ)ಗಿಂತ ಸಿಹಿ ಅನ್ನುವ ಬಿರುದೂ ಇದಕ್ಕದ.

ಇನ್ನ ರಸಪುರಿ ಬಗ್ಗೆ ಏನು ಹೇಳೂದು.. ಹೆಚ್ಚಿದ್ರೂ, ಹಿಂಡಿದ್ರೂ, ಎರಡಕ್ಕೂ ಸೈ ಅನ್ನುವಂಥ ತಿರುಳು ಇದಕ್ಕ. ಮನಿಯೊಳಗಿದ್ರ, ಸಣ್ಣಗೆ ತನ್ನ ಸುವಾಸನೆ ಬೀರಕೊಂತ ತನ್ನ ಅಸ್ಮಿತೆಯನ್ನ ಎಲ್ಲಾ ಕಡೆಗೆ ಹರಡುವ ಸುಂದರಿ ಈ ಮಾವು.

ಇನ್ನು ಲಂಗ್ಡಾ, ಗಧಾಮಾರ್‌ ಅಂತ ಕರೆಯುವ ದೊಡ್ಡಗಾತ್ರದ ಮಾವಿನ ಹಣ್ಣಿಗೆ ಹುಳಿಮಧುರ ವಾಸನಿ. ವಾರಾಣಸಿ ಮೂಲದ ಈ ಹಣ್ಣಿಗೆ ಈ ಹೆಸರು ಯಾಕ ಬಂದ್ವು ಅಂದ್ರ, ಒಂದು ಹಣ್ಣು ಮ್ಯಾಲಿಂದ ಉದುರಿದ್ರ, ಕೈ, ಕಾಲು ಮುರಿಯೂದು ಖಾತ್ರಿ ಅಂತ. ಮರದ ನೆರಳಿನಾಗ ಮಲಗಿದ್ದ ಕತ್ತಿ ತಲಿಮ್ಯಾಲೆ ಹಿಂಗೊಂದು ಹಣ್ಣು ಬಿದ್ದಾಗ ಕತ್ತಿ ಸತ್ತು ಹೋಗಿತ್ತಂತ. ಅದಕ್ಕೇ ಗಧಾಮಾರ್‌ ಅಂತಲೂ ಕರೀತಾರ ಇದಕ್ಕ. ಹೆಚ್ಚಾಕ ಚಾಕೂ ಸಾಕಾಗೂದಿಲ್ಲ. ಕತ್ತಿನೆ ಬೇಕು.

ಗುಜರಾತ್‌ ಮೂಲದ ಕೇಸರ್‌ ತಿನ್ಲಿಕ್ರ, ಮಾವಿನ ಋತುಮಾನ ಪೂರ್ಣ ಆಗೂದಿಲ್ಲ. ಕೇಸರಿ ಬಣ್ಣದ ತಿರುಳಿರುವ ಈ ಹಣ್ಣು ಅಗ್ದಿ ಮಧುರ, ಮಾಧುರ್ಯದ ಹಣ್ಣು. ಕೇಸರಿಯಾ... ಅಂತ ಏರು ಧ್ವನಿಯೊಳಗ ನಮ್ಮ ಮುಕ್ತಿಯಾರ್‌ ಅಲಿ ಸಾಹೇಬ್ರು ಹಾಡಿದ್ಹಂಗ.. ಹಾಡಬೇಕಂತನಿಸ್ತದ.

ನಮ್ಮ ಬಾಗಲಕೋಟೆಯ ತಳಿ, ಬಾದಾಮಿ ಅಂತ. ಬಾದಾಮ್‌ ಅಂತ ಕರೆಯುವ ಈ ಹಣ್ಣು ನಮ್ದಲ್ಲ ಅಂತ ಅನ್ಕೊಂಡಿದ್ದೆ. ಅಗ್ದಿ ಸಣ್ಣ ವಾಟೆ ದಪ್ಪ ಹಣ್ಣಿನ ಬಾದಾಮಿ ನಮ್ದೇ ತಳಿ ಅಂದಾಗ ರುಚಿ ಇಮ್ಮಡಿ ಅನಿಸಿತ್ತು. ಈ ಹಣ್ಣು ಹಿಂಡಿ, ತಿರುಳಿಗೆ ಬೆಲ್ಲ, ಏಲಕ್ಕಿ ಬೆರೆಸಿ, ಹೋಳಗಿ, ಚಪಾತಿ ಜೊತಿಗೆ ತಿನ್ನಾಕ ಕೊಟ್ರ... ಬಾದಾಮಿ ಮಂಗ್ಯಾನ್ಹಂಗ ಹಾರಾಡುವ ಮನಸು ಸಹ, ಅಷ್ಟೂ ಹೊತ್ತು ಮಾವಿನ ಜಿಜ್ಞಾಸೆಯೊಳಗ ತೊಡಗ್ತದ. ಇದನ್ನು ಸೃಷ್ಟಿಸಿದ ದೇವರಿಗೆ ಇಷ್ಟು ಬಣ್ಣಗಳು ಹೆಂಗ ಹೊಳದ್ವು, ಇಷ್ಟು ವೈವಿಧ್ಯಮಯವಾಗಿ ಹೆಂಗ ಸೃಷ್ಟಿಸಿದ? ರುಚಿಯೊಳಗೂ ಸಣ್ಣಸಣ್ಣ ಫರಕು ಹೆಂಗ ತಂದ? ಹಿಂಗ ಫರಕ್‌ ಮಾಡ್ಕೊಂತ ಒಂದು ಅತ್ಯುತ್ಕೃಷ್ಟ ಮಾವು ಸೃಷ್ಟಿಸಿದ್ನಲ್ಲ. ಅದು ಯಾವ ಮಾವು? ಆಪೂಸು ಇರಬಹುದಾ?

ಜೀರಗಿ ಮಾವು ಚೂರು ಹುಳಿ ಮಧುರ ಇರುವ ಚುಟ್ಕಿಲೆ ಮಾವು ಅದು. ಇಟೀಟೆ ಇದ್ರೂ ಜುಬ್ರ ಭಾಳ. ಹಲ್ಲಿನ ಸಂದಿಯೆಲ್ಲ ಸ್ವಚ್ಛೆ ಮಾಡುವ ಕೆಲಸ ತಾನೇ ಹೊತ್ತೇದೇನೋ ಅನ್ನೂಹಂಗ ನಾಟಕ ಮಾಡುವ ಮಾವಿದು.

ಹಣ್ಣು ತರಾಕ ಹೋದಾಗೆಲ್ಲ ನಮ್ಮ ಶಾರುಖ್‌ ಭಾಯ್‌ ಇಮಾಮ್‌ ಪಸಂದ್‌ ಆಯಾ.. ಆಪ್‌ಕೆ ಲಿಯೆ ಬಚಾಕೆ ರಖಾ (ಇಮಾಮ್‌ ಪಸಂದ್‌ ಹಣ್ಣು ಬಂದಾವ. ನಿಮಗಂತೇ ಉಳಿಸಿ ಇಟ್ಟೀನಿ) ಅಂತ ಅಗ್ದಿ ಗುಟ್ಟು ಹೇಳಿದ್ಹಂಗ ಹೇಳ್ತಾರ. ಇದು ತೆಲಂಗಾಣಾದ ತಳಿ. ಅಗ್ದಿ ತೆಳು ಚರ್ಮ. ನಮ್ಮ ಚರ್ಮದಷ್ಟೇ ತೆಳು. ಮತ್ತ ಅಗ್ದಿ ರುಚಿಕರ ರಸ. ಈ ರುಚಿಯೇ ವಿಭಿನ್ನ. ಹಣ್ಣು ಹೀರಿ, ಬಾಯಿ ತೊಳಕೊಂಡ್ರು, ಮಾವಿನ ಹಣ್ಣು ತಿಂದು ಬಂದಾರ ಇವರು ಅಂತ ಹೇಳುವಷ್ಟು ಗಾಢವಾದ ವಾಸನಿ ಇವಕ್ಕ.

ಹಣ್ಣುಗಳ ರಾಜ ಅಂತ್ಹೇಳೂದಾದ್ರ ಅದು ಇಮಾಮ್‌ ಪಸಂದ್‌ಗೆ ಅಂತ ಹೇಳ್ತಾರ. ನಮಗ ರಾಜಾ ಆದ್ರೇನು, ರಾಣಿ ಆದ್ರೇನು, ಪ್ಯಾದೆಗಳಾದ್ರೇನು, ಮಾವು ಅಂದ್ರ ಮಾವು ಅಷ್ಟ.

ಆಹಹಾ.. ಆಪೂಸು ಅಂದ್ಕೂಡಲೆ ಎಲ್ಲಾರಿಗೆ ರತ್ನಗಿರಿ ನೆನಪಾದ್ರ ನಮಗ ಧಾರವಾಡ ನೆನಪಾಗ್ತದ. ಧಾರವಾಡದ ಪ್ಯಾಟಿಯೊಳಗ ಆಪೂಸು, ಡಬ್ಬಿಯೊಳಗ ಶಿಸ್ತಗೆ ಕುಂತ್ರ, ಬಾಲವಾಡಿ ಮಕ್ಕಳು ಸಾಲಾಗಿ ಕೈ ಕಟ್ಕೊಂಡು ಶಿಸ್ತಿನಿಂದ ಕುಂತ್ಹಂಗ ಕಾಣ್ತಾವ. ಆಪೂಸು ಮತ್ತು ದಶೇರಿ ತಿನ್ನೂದೆ ಒಂದು ಕಲಾ.

ಹೆಬ್ಬೆರಳು ತೋರು ಬೆರಳಿನ ನಡುವೆ ಹಣ್ಣು ಹಿಡಿದು ಭೂಮಿ ಹಂಗ ತಿರಗಸ್ಕೊಂತ ನಿಧಾನಕ್ಕ ಹಣ್ಣು ಮಾಡಬೇಕು. ಇಷ್ಟಿಷ್ಟೇ ಹಿಚುಕಿಕೊಂಡು ಒಳಗಿನ ತಿರುಳು ಮಿದುಗೊಳಿಸಬೇಕು. ಆಮೇಲೆ ಹೀರಕೊಂತ ಕುಂದರಬೇಕು. ನಮ್ಮ ಸಿಂದಗಿ ಅಜ್ಜನ ಮನ್ಯಾಗ ಆಪೂಸಿನ ಶೀಕರಣಿ ಮಾಡಿದ್ರ, ವಾಟೆ ಸಹಿತ ತೊಳದು ಹಾಕ್ತಿದ್ರು. ಹಂಗ ತೊಳದಿಟ್ಟ ವಾಟೆ ಚೀಪಾಕೂ ಸ್ಪರ್ಧೆ ಇರ್ತಿತ್ತು. ಕಟುಕನ ಅಂಗಡಿ ಮುಂದ ಜೊಲ್ಲು ಸುರಸ್ಕೊಂಡು ಓಡಾಡುವ ನಾಯಿ ಹಂಗ ನಾವೂ ಠಳಾಯಿಸ್ತಿದ್ವಿ. ಅದ್ಯಾವಾಗ ಆ ವಾಟೆಗಳಿಟ್ಟ ಫರಾತ ಅಲ್ಲಿಂದ ಸರಸ್ತಾರಂತ. ಆಮೇಲೆ ಅಂಗೈ ಮುಷ್ಟಿಯೊಳಗ ವಾಟೆ ಹಿಡ್ಕೊಂಡು ತಿನ್ನಾಕತ್ರ... ಸ್ವರ್ಗ ಸುಖ ಅನ್ನೂದು ಅಲ್ಲೇ ಸಿಗ್ತಿತ್ತು.

ನನ್ನ ಸೋದರಮಾವ, ಬಸು ಮಾಮಾ, ನನಗ ಯಾವಾಗಲೂ ಕಾಡ್ತಿದ್ದ. ಬ್ಯಾರೆದೋರ ಮನಿಮುಂದ ಬಿದ್ದ ವಾಟೆ ತಿನ್ನಾಕ ಹಂದಿಗಳು ಬರ್ತಾವ. ನಮ್ಮನಿ ದಾಟ್ಕೊಂಡೆ ಹೋಗ್ತಾವ. ಆ ಹಂದಿಗೆ ಏನೇನೂ ಉಳಿಸಿರೂದಿಲ್ಲ ಅಂತ. ಹಂದಿಗೆ ಅನ್ಯಾಯ ಮಾಡಿದೋರ್‍ಹಂಗ ಮಾತಾಡ್ತಿದ್ದ. ಪಿಸ್ಸ... ಯಾರು ಏನಂದ್ರ ಏನು? ನಾವು ನಮ್ಮ ಮಾವಿನ ಹಣ್ಣಿಗೆ, ಸೃಷ್ಟಿಕರ್ತನ ಈ ಅದ್ಭುತ ಸೃಷ್ಟಿಯ ಒಂದೆಳಿಗೂ ಅನ್ಯಾಯ ಆಗದೇ ಇರುಹಂಗ ಹೀರ್ತಿದ್ದೆ, ಚೀಪ್ತಿದ್ದೆ, ನೆಕ್ತಿದ್ದೆ. ಅಗ್ದಿ ತಾಜ್‌ ಮಹಲ್ಲಿನ ಸಂಗಮರಿ ಕಲ್ಲಿನ್ಹಂಗ ಸಪಾಟು ಮಾಡಿ ಎಸೀತಿದ್ದೆ.

ಖರೇವಂದ್ರ ದೇವರು ಮಾವಿನ ಹಣ್ಣಿನಾಗ ಬದುಕಿನ ಸೂತ್ರನೇ ಮಾಡಿಟ್ಟಾನ. ಮಾಗದಾಗ ಉಪ್ಪುಖಾರ ಮೈ ಉಣಿಸಿ, ಭಾಳ ವರ್ಷಗಳ ತನ ಹುಳಿಯುಳಿಸುವ ಹಂಗ ನಮ್ಮ ಯೌವ್ವನ. ಹಿಂಡಿ ಹಿಪ್ಪಿ ಮಾಡಿ ರಸ ಹೀರೂದೆ ನಮ್ಮ ಜೀವನಪ್ರೀತಿ. ಹಂಗ ಹಿಂಡಿ ಹಿಪ್ಪಿಯಾದಾಗಲೇ ಜೀವನಾಮೃತ ಸಿಗೂದು ಮತ್ತ.

ಅವಾಗವಾಗ ಹಲ್ಲಿನ ನಡುವೆ ನುಸುಳುವ ಜುಬ್ರ, ಎಳಿಗಳೆಲ್ಲ ನಮ್ಮ ಬದುಕಿನೊಳಗಿನ ಅಡೆತಡೆಗಳು. ಕೆಲವನ್ನು ಅನುಭವಿಸಿ ಹೊರಗ ಎಸದು ಬಿಡಬೇಕು. ಕೆಲವೊಮ್ಮೆ ಹುಳಿ ಅಂತ ಗೊತ್ತಾದಾಗ ಬಿಟ್‌ಬಿಡಬೇಕು. ಪಾನಕ, ಶೀಕರಣಿ, ಉಪ್ಪಿನಕಾಯಿ ಏನರೆ ಮಾಡ್ರಿ ತನ್ನತನ ಬಿಟ್ಟುಕೊಡದ ಆ ಗುಣ ನಾವೂ ಕಲೀಬೇಕು. ಯಾವುದರೆ ಹೆಸರು ಇರಲಿ, ವಾಸನಿ, ರುಚಿ ಎಲ್ಲರೊಳಗೊಂದಾಗು, ಎಲ್ಲರ ಬೆಸೆಯುವ ಗೊಂದಾಗು ಅಂತ ಹೇಳ್ತದ ಈ ಹಣ್ಣು. ನನಗ ಮಾವು ದೇವರಿಗಿಂತ ಬ್ಯಾರೆ ದೇವರೇ ಗೊತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT