ಮೈಸೂರು–ಬೆಂಗಳೂರು ಎಕ್ಸ್‌ಪ್ರೆಸ್ ವೇನಲ್ಲಿ ಕ್ಯಾಮೆರಾ ಕಣ್ಣು!

ರಾಮನಗರ: ದಶಪಥಗಳ ಮೈಸೂರು–ಬೆಂಗಳೂರು ಎಕ್ಸ್‌ಪ್ರೆಸ್ ವೇನಲ್ಲಿ ಸದ್ಯದಲ್ಲಿಯೇ ಇಂಟಲಿಜೆನ್ಸ್ ಟ್ರಾನ್ಸ್‌ಪೋರ್ಟ್ ವ್ಯವಸ್ಥೆ ಜಾರಿಗೆ ಬರಲಿದ್ದು, ಇಡೀ ಸಂಚಾರ ವ್ಯವಸ್ಥೆ ಮೇಲೆ ಅತ್ಯಾಧುನಿಕ ಕ್ಯಾಮೆರಾಗಳು ಕಣ್ಣಿಡಲಿವೆ.
ಒಟ್ಟು 118 ಕಿ.ಮೀ. ಉದ್ದದ ಹೆದ್ದಾರಿಯಲ್ಲಿ ಪ್ರತಿ 500 ಮೀಟರ್‌ಗೆ ಒಂದರಂತೆ ಕ್ಯಾಮೆರಾ ಅಳವಡಿಕೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಈ ವ್ಯವಸ್ಥೆ ಹೊಂದಲಿರುವ ರಾಜ್ಯದ ಮೊದಲ ಹೆದ್ದಾರಿ ಎಂಬ ಕೀರ್ತಿ ಇದರದ್ದಾಗಲಿದೆ. ಈ ಕ್ಯಾಮೆರಾಗಳನ್ನು ಬಳಸಿ ಹೆದ್ದಾರಿಯಲ್ಲಿನ ಅಷ್ಟೂ ಚಟುವಟಿಕೆಗಳನ್ನು ಕುಳಿತಲ್ಲಿಯೇ ವೀಕ್ಷಿಸಲು ಸಾಧ್ಯವಾಗಲಿದೆ. ಅಪಘಾತಗಳ ಮಾಹಿತಿಯು ಕ್ಷಣಮಾತ್ರದಲ್ಲಿಯೇ ಸಿಗಲಿದ್ದು, ತುರ್ತು ಕಾರ್ಯಾಚರಣೆಯೂ ಸಾಧ್ಯವಾಗಲಿದೆ.
ಕೃತಕ ಬುದ್ಧಿಮತ್ತೆ ಸಾಮರ್ಥ್ಯ ಹೊಂದಿರುವ ಈ ಕ್ಯಾಮೆರಾಗಳು ಹೆದ್ದಾರಿಯಲ್ಲಿನ ಪ್ರತಿ ಚಟುವಟಿಕೆಯನ್ನು ಸೆರೆ ಹಿಡಿಯಲಿವೆ. ಎಲ್ಲಿಯೇ ಅಪಘಾತ ನಡೆದರೂ ಅವುಗಳ ಚಿತ್ರ, ವಿಡಿಯೊಗಳನ್ನು ಕ್ಷಣಮಾತ್ರದಲ್ಲಿ ಕಂಟ್ರೋಲ್ ರೂಂ, ಹೈವೆ ಪೆಟ್ರೋಲಿಂಗ್, ಸ್ಥಳೀಯ ಪೊಲೀಸ್ ಠಾಣೆಗೆ ರವಾನಿಸಲಿವೆ.
ಸವಾರರಿಗೆ ನೋಟಿಸ್: ಆಟೋಮೆಟಿಕ್ ಸೆನ್ಸಾರ್ ತಂತ್ರಜ್ಞಾನದ ಮೂಲಕ ವಾಹನಗಳ ನಂಬರ್ ಪ್ಲೇಟ್, ಅವುಗಳ ವೇಗ ಎಲ್ಲವನ್ನೂ ಈ ಕ್ಯಾಮೆರಾಗಳು ದಾಖಲಿಸಲಿವೆ. ಅತಿವೇಗದ ಚಾಲನೆ, ಪದೇ ಪದೇ ಲೇನ್ ಬದಲಾವಣೆ ಮೊದಲಾದ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ನೋಟಿಸ್ ಕೂಡ ಜಾರಿ ಆಗಲಿದೆ. ಅಪಘಾತದ ಸಂದರ್ಭ ಚಾಲಕನ ನಿರ್ಲಕ್ಷ್ಯ ಕಂಡುಬಂದಲ್ಲಿ ಅಂತಹ ವಾಹನಗಳ ವಿಮೆ ವಜಾಗೊಳ್ಳುವ ಸಾಧ್ಯತೆಯೂ ಇದೆ. ಇದರಿಂದ ಪೊಲೀಸರ ಮೇಲಿನ ಹೊರೆಯೂ ತಪ್ಪಲಿದೆ.
ಅಪಘಾತಕ್ಕೆ ಕಡಿವಾಣ: ಕಳೆದ ಮೂರು ತಿಂಗಳಲ್ಲಿ ಎಕ್ಸ್‌ಪ್ರೆಸ್ ವೇನಲ್ಲಿ 65 ಅಪಘಾತ ನಡೆದಿದ್ದು, ಇದರಿಂದಾಗಿ 22 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತಗಳ ನಿಯಂತ್ರಣ ಹಾಗೂ ಸಂಚಾರ ವ್ಯವಸ್ಥೆ ಸುಧಾರಣೆಗೂ ಈ ಕ್ಯಾಮೆರಾಗಳು ಸಹಕಾರಿ ಆಗಲಿವೆ ಎನ್ನುತ್ತಾರೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು.
ಇದರೊಟ್ಟಿಗೆ ಹೆದ್ದಾರಿಯುದ್ದಕ್ಕೂ ಹೈವೆ ಪೆಟ್ರೋಲಿಂಗ್ ಸಹ ಆರಂಭಿಸಲು ಪ್ರಾಧಿಕಾರವೂ ಉದ್ದೇಶಿಸಿದೆ. ಟೋಲ್ ಕಟ್ಟಲು ಈಗಿರುವ ಫಾಸ್ಟ್‌ಟ್ಯಾಗ್ ಜೊತೆಗೆ ಮೊಬೈಲ್ ಆ್ಯಪ್ ಮೂಲಕವೂ ಹಣ ಪಾವತಿಗೆ ಅನುಕೂಲ ಇರಲಿದೆ.
ಬ್ಯಾನರ್ ನಿಷೇಧ
ಹೆದ್ದಾರಿ ಉದ್ದಕ್ಕೂ ಸದ್ಯ ನಾನಾ ಪಕ್ಷಗಳ ಫ್ಲೆಕ್ಸ್, ಬ್ಯಾನರ್‌ಗಳು ರಾರಾಜಿಸುತ್ತಿದ್ದು, ಅವುಗಳ ತೆರವಿಗೆ ಪ್ರಾಧಿಕಾರ ಮುಂದಾಗಿದೆ.
ತಮಿಳುನಾಡಿನಲ್ಲಿ ಈಚೆಗೆ ಬ್ಯಾನರ್ ಬಿದ್ದು, ಪ್ರಯಾಣಿಕರೊಬ್ಬರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಈ ಕ್ರಮ ವಹಿಸಿದ್ದು, ಈಗಾಗಲೇ ಕಟ್ಟಿರುವ ಫಲಕಗಳನ್ನು ತೆರವುಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.