ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಸಮ್ಮೇಳನದಲ್ಲಿ 13 ಮುಸ್ಲಿಮರಿಗೆ ಅವಕಾಶ: ಮಹೇಶ ಜೋಶಿ

ಅಲ್ಪಸಂಖ್ಯಾತರ ಕಡೆಗಣನೆ: ಪೂರ್ವನಿಯೋಜಿತ ಕುತಂತ್ರ
Last Updated 29 ಡಿಸೆಂಬರ್ 2022, 8:58 IST
ಅಕ್ಷರ ಗಾತ್ರ

ಹಾವೇರಿ: ‘86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಸಮುದಾಯದ 13 ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ಹಿಂದಿನ ಏಳು ಕನ್ನಡ ಸಾಹಿತ್ಯ ಸಮ್ಮೇಳನಗಳಿಗಿಂತ ಈ ಸಮ್ಮೇಳನದಲ್ಲೇ ಮುಸ್ಲಿಮರಿಗೆ ಅತಿ ಹೆಚ್ಚು ಪ್ರಾಧಾನ್ಯತೆ ನೀಡಿದ್ದೇವೆ. ಮುಸ್ಲಿಂ ಸಮುದಾಯವನ್ನು ಕಡೆಗಣಿಸಿದ್ದಾರೆ ಎಂದು ಆರೋಪವು ಪೂರ್ವನಿಯೋಜಿತ ಕುತಂತ್ರ’ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಆಮಂತ್ರಣ ಪತ್ರಿಕೆಯ ಮುಖಪುಟದಲ್ಲಿಯೇ ಕನ್ನಡ ಸಾಹಿತ್ಯ ಪರಿಷತ್ತಿನ ಆಧಾರ ಸ್ತಂಭಗಳಲ್ಲಿ ಒಬ್ಬರಾದ ಸರ್‌ ಮಿರ್ಜಾ ಇಸ್ಮಾಯಿಲ್‌ ಅವರ ಭಾವಚಿತ್ರವನ್ನು ಪ್ರಕಟಿಸಿದ್ದೇವೆ. ಸಮ್ಮೇಳನದ ಪ್ರಧಾನ ವೇದಿಕೆಗೆ ಶಿಶುನಾಳ ಷರೀಫರ ಹೆಸರಿಟ್ಟಿದ್ದೇವೆ. ಅಷ್ಟೇ ಏಕೆ ‘ಕನ್ನಡ ರಥ’ವನ್ನು ಸಿದ್ಧಪಡಿಸಿದವರು ಷಹಜಹಾನ್‌ ಮುದಕವಿ ಮತ್ತು ರಾಜ್ಯದಾದ್ಯಂತ ರಥವನ್ನು ಮುನ್ನಡೆಸುತ್ತಿರುವವರು ನಭಿಸಾಬ್‌ ಕುಷ್ಟಗಿ. ಇವರೆಲ್ಲ ಮುಸ್ಲಿಮರಲ್ಲವೇ? ಎಂದು ಖಾರವಾಗಿ ಪ್ರಶ್ನಿಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಸಲೀಂ ಅಹಮದ್‌, ಕವಿಗೋಷ್ಠಿ ನಿರ್ವಹಣೆಗೆ ಮೆಹಬೂಬ್‌ ಹುಸೇನ್‌, ಸ್ಪರ್ಧಾತ್ಮಕ ಪರೀಕ್ಷೆಯ ಗೋಷ್ಠಿಯಲ್ಲಿ ಮಹಮ್ಮದ್‌ ರಫಿ ಪಾಶಾ ಇದ್ದಾರೆ. ನಿರ್ವಹಣೆ, ನಿರೂಪಣೆ, ಸ್ವಾಗತ, ವಂದನಾರ್ಪಣೆಗಳಲ್ಲಿ ಮಹೆಬೂಬ್‌ ಹುಸೇನ್‌, ಹಾಸಿಂಪೀರ್‌ ವಾಲೀಕಾರ್‌, ರಂಜಾನ್‌ ಕಿಲ್ಲೇದಾರ, ನಬೀಸಾಬ್‌ ಕುಷ್ಟಗಿ, ಎಂ.ಖಾಸಿಂ ಮುಂತಾದವರು ಇದ್ದಾರೆ ಎಂದು ವಿವರ ನೀಡಿದರು.

ಪೂರ್ವಗ್ರಹ ಪೀಡಿತರು...

ಪುರುಷೋತ್ತಮ ಬಿಳಿಮಲೆ, ಬಿ.ಎಂ.ಹನೀಫ್‌, ಆರ್‌.ಜಿ.ಹಳ್ಳಿ ನಾಗರಾಜ್‌ ಈ ಮೂವರು ಜನಸಾಹಿತ್ಯ ಸಮ್ಮೇಳನದ ಮುಂದಾಳತ್ವ ವಹಿಸಿದ್ದಾರೆ. ಇವರು ವಾಸ್ತವ ಸಂಗತಿ ತಿಳಿದುಕೊಳ್ಳದೆ, ಪೂರ್ವಗ್ರಹ ಪೀಡಿತರಾಗಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಕಲೆ ಮತ್ತು ಪ್ರತಿಭೆಯನ್ನು ಜಾತಿ–ಧರ್ಮದ ದುರ್ಬೀನುನಿಂದ ನೋಡಬಾರದು. ಮನೋರೋಗದಿಂದ ನರಳುತ್ತಿರುವ ಪ್ರಗತಿಪರ ಚಿಂತಕರು ಅದರಿಂದ ಹೊರಬರಬೇಕು ಎಂದು ಸಲಹೆ ನೀಡಿದರು.

ದ್ವೇಷ ಹುಟ್ಟಿಸುವ ಕೃತ್ಯ...

ಅಲ್ಪಸಂಖ್ಯಾತರನ್ನು ಕಡೆಗಣಿಸಲಾಗಿದೆ ಎಂಬ ಕಪೋಲಕಲ್ಪಿತ ಸಂಗತಿಯನ್ನು ಹರಡಿ, ಸಮಾಜದಲ್ಲಿ ದ್ವೇಷ ಹುಟ್ಟಿಸುವ ಕೃತ್ಯ ನಡೆಯುತ್ತಿದೆ. ಉದ್ದೇಶಪೂರ್ವಕವಾಗಿ ಕನ್ನಡದ ಹಬ್ಬದಲ್ಲಿ ಧರ್ಮ–ಧರ್ಮಗಳ ನಡುವೆ ಕಿಚ್ಚು ಹಚ್ಚುವ ಕಾರ್ಯ ಮಾಡಲಾಗುತ್ತಿದೆ. ಸಾಹಿತ್ಯ ಸಮ್ಮೇಳನ ಜಾತಿ ಮತ್ತು ಧರ್ಮಗಳನ್ನು ಮೀರಿದ ಸಮ್ಮೇಳನವಾಗಿದ್ದು, ಕನ್ನಡವೇ ಇಲ್ಲಿ ಮಾನದಂಡವಾಗಿದೆ ಎಂದು ತಿಳಿಸಿದರು.

ನಾನು ಗುರುಗೋವಿಂದ ಭಟ್ಟರ ಮರಿಮೊಮ್ಮಗ. ನನಗಿಂತ ಜಾತ್ಯತೀತ ವ್ಯಕ್ತಿ ಬೇಕಾ? ಯಾರೂ ದ್ವೇಷ ಬಿತ್ತುವ ಕೆಲಸ ಮಾಡಬೇಡಿ. ಕನ್ನಡ ಹಬ್ಬವನ್ನು ಹಾಳು ಮಾಡಬೇಡಿ. ಕನ್ನಡದ ಅಸ್ಮಿತೆಯನ್ನು ಧ್ವಂಸ ಮಾಡುವವರನ್ನು ಕನ್ನಡಿಗರು ದೂರವಿಡಬೇಕು ಎಂದು ಜೋಶಿ ಮನವಿ ಮಾಡಿದರು.

10 ಸಾವಿರಕ್ಕೆ ನಿರ್ಬಂಧ...

ಶೇ 50ರಷ್ಟು ಮಾತ್ರ ಪ್ರತಿನಿಧಿಗಳ ನೋಂದಣಿಯಾಗಿದ್ದಕ್ಕೆ ಪ್ರತಿಕ್ರಿಯಿಸಿ, ಅಕ್ಕಪಕ್ಕದ ಜಿಲ್ಲೆಯವರು ನಮಗೆ ವಸತಿ ಸೌಲಭ್ಯ ಬೇಡ ಎಂದು ಹೇಳಿದ್ದಾರೆ. ಗುಣಮಟ್ಟದ ವಸತಿ ಸೌಲಭ್ಯ ನೀಡುವ ಉದ್ದೇಶದಿಂದ 10 ಸಾವಿರ ನೋಂದಣಿಗೆ ನಾವೇ ನಿರ್ಬಂಧ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು.

ಕೋವಿಡ್‌ಗೆ ಮುನ್ನೆಚ್ಚರಿಕಾ ಕ್ರಮ...

ಕೋವಿಡ್‌ ಅಲೆ ಮತ್ತೆ ಕಾಣಿಸಿಕೊಂಡಿರುವ ಕಾರಣ ಸಾಹಿತ್ಯ ಸಮ್ಮೇಳನದಲ್ಲಿ ಮಾಸ್ಕ್‌ ಧರಿಸುವುದು, ಸಮ್ಮೇಳನ ಸ್ಥಳವನ್ನು ಸ್ಯಾನಿಟೈಸ್‌ ಮಾಡುವುದು ಹಾಗೂ ಅಂತರ ಕಾಪಾಡಿಕೊಳ್ಳುವ ಮೂಲಕ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಲಾಗುವುದು ಎಂದು ಮಹೇಶ ಜೋಶಿ ಹೇಳಿದರು.

‘ಶಾಮಿಯಾನ ಆರ್ಡರ್‌ ಕೊಡಿಸದಿದ್ದಕ್ಕೆ ಆರೋಪ’

ಲೇಖಕ ಪುರುಷೋತ್ತಮ ಬಿಳಿಮಲೆ ಅವರು ದೂರವಾಣಿ ಕರೆ ಮಾಡಿ, ‘ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ಪೆಂಡಾಲ್‌ ಹಾಕಲು ಪರಿಚಿತರಾದ ಮುಸ್ಲಿಂ ವ್ಯಾಪಾರಿಯೊಬ್ಬರಿಗೆ ಕೊಡಿಸಿ’ ಎಂದು ಕೇಳಿದ್ದರು. ಅದಕ್ಕೆ ನಾನು ‘ಅದು ಜಿಲ್ಲಾಡಳಿತದ ವ್ಯಾಪ್ತಿಗೆ ಬರುತ್ತದೆ. ಅದು ನನ್ನ ಕ್ಷೇತ್ರವಲ್ಲ’ ಎಂದು ಹೇಳಿದ್ದೆ. ಇದನ್ನೇ ನೆಪವಾಗಿಟ್ಟುಕೊಂಡು ನನ್ನ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಮಹೇಶ ಜೋಶಿ ಆರೋಪಿಸಿದರು.

ಹಾವೇರಿ ಸಾಹಿತ್ಯ ಸಮ್ಮೇಳನಕ್ಕೆ ಬರುತ್ತೇನೆ ಎಂದು ಒಪ್ಪಿಕೊಂಡಿದ್ದ ಬಿಳಿಮಲೆ ಅವರು ಕೊನೇ ಕ್ಷಣದಲ್ಲಿ ಅನಾರೋಗ್ಯದ ಕಾರಣ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಸಂದೇಶ ಕಳುಹಿಸಿದ್ದಾರೆ. ಹಾಗಾದರೆ, ಜ.8ರಂದು ನಡೆಯುವ ಜನಸಾಹಿತ್ಯ ಸಮ್ಮೇಳನ ನಡೆಸಲು ಆರೋಗ್ಯ ಬಂತಾ? ಸ್ವಂತಲಾಭ, ಸ್ವಹಿತಕ್ಕಾಗಿ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಬಿಳಿಮಲೆಯವರು ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದರೂ ಎದುರಿಸಲು ಸಿದ್ಧವಿದ್ದೇನೆ ಎಂದು ಜೋಶಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT