ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿವೇಶನದ ಕೊನೆಯ ದಿನ ದೇವೇಗೌಡ, ಸಿದ್ದರಾಮಯ್ಯ ಹೊಗಳಿದ ಯಡಿಯೂರಪ್ಪ

Last Updated 24 ಫೆಬ್ರುವರಿ 2023, 22:00 IST
ಅಕ್ಷರ ಗಾತ್ರ

ಬೆಂಗಳೂರು: ತಮ್ಮ ರಾಜಕೀಯ ಜೀವನದ ಕೊನೆಯ ಅಧಿವೇಶನದ ಕೊನೆಯ ದಿನ ಬಿಜೆಪಿಯ ಬಿ.ಎಸ್‌.ಯಡಿಯೂರಪ್ಪ ಭಾವುಕರಾಗಿ ಮಾತನಾಡಿದರು. ‘ಸುದೀರ್ಘ ರಾಜಕಾರಣ, ಹೋರಾಟಗಾರನಾಗಿ, ಮುಖ್ಯಮಂತ್ರಿಯಾಗಿ ಮಾಡಿದ ಕೆಲಸ ತೃಪ್ತಿ ನೀಡಿದೆ’ ಎಂದು ಹೇಳಿದರು.

ರಾಜಕೀಯವನ್ನು ಬದಿಗಿಟ್ಟು ಮಾತನಾಡಿದ ಅವರು ಎಚ್‌.ಡಿ.ದೇವೇಗೌಡ, ಸಿದ್ದರಾಮಯ್ಯ ಮತ್ತು ಬಸವರಾಜ ಬೊಮ್ಮಾಯಿ ಅವರ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು.

2018ರಲ್ಲಿ ಮಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರೂ ಬಹುಮತ ಸಾಬೀತು ಮಾಡಲಾಗದೇ ರಾಜೀನಾಮೆ ನೀಡುವ ಪರಿಸ್ಥಿತಿ ಸೃಷ್ಟಿಯಾಗಿತ್ತು. ರಾಜೀನಾಮೆಗೆ ಮುನ್ನ ಸದನದಲ್ಲಿ ಮಾತನಾಡಿದ್ದ ಯಡಿಯೂರಪ್ಪ, ‘ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಮುಂದಿನ ದಿನಗಳನ್ನು ಮೀಸಲಿಡುತ್ತೇನೆ’ ಎಂದು ಅಬ್ಬರಿಸಿದ್ದರು.

ಕೊನೆಯ ದಿನದ ಕಲಾಪದಲ್ಲಿ ಮಾತನಾಡುವಾಗ ಆ ಸಿಟ್ಟನ್ನು ಮರೆತಿದ್ದ ಯಡಿಯೂರಪ್ಪ, ‘ಮಾಜಿ ಪ್ರಧಾನಿ ದೇವೇಗೌಡರು ಸದನದಲ್ಲಿರುವ ಪ್ರತಿಯೊಬ್ಬರಿಗೂ ಆದರ್ಶಪ್ರಾಯ ರಾಜಕಾರಣಿ. ಇಂತಹ ಇಳಿ ವಯಸ್ಸಿನಲ್ಲೂ ಅವರು ನಾಡಿನ ನೆಲ, ಜಲ, ಭಾಷೆ ಮತ್ತು ರೈತರ ಬಗ್ಗೆ ಚಿಂತನೆ ನಡೆಸುತ್ತಾ, ಮಾರ್ಗದರ್ಶನ ನೀಡುತ್ತಲೇ ಬಂದಿದ್ದಾರೆ' ಎಂದು ಬಣ್ಣಿಸಿದರು.

ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ಸಮರ್ಥವಾಗಿ ಮಾಡಿದ್ದಾರೆ ಎಂದರು.

‘ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಹೇಳಿದ್ದೇನೆ. ಆದರೆ, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ. ಇದಕ್ಕಾಗಿ ಒಂದು ಕ್ಷಣವೂ ವ್ಯರ್ಥ ಮಾಡದೇ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತೇನೆ. ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ’ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ‘ಬಸವರಾಜ ಬೊಮ್ಮಾಯಿ ಅವರೂ ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ’ ಎಂದು ಯಡಿಯೂರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT