ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15ನೇ ವಿಧಾನಸಭೆ: ಮುಗಿದ ಅಧ್ಯಾಯ, 3 ಮುಖ್ಯಮಂತ್ರಿಗಳನ್ನು ಕಂಡ ರಾಜ್ಯ

Last Updated 24 ಫೆಬ್ರವರಿ 2023, 22:00 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಹಲವು ನಾಟಕೀಯ ಏಳುಬೀಳುಗಳನ್ನು ಕಂಡ 15ನೇ ವಿಧಾನಸಭೆಯ ಕೊನೆಯ ಅಧಿವೇಶನಕ್ಕೆ ಶುಕ್ರವಾರ ತೆರೆಬಿದ್ದಿತು.‌

ವಿಧಾನಸಭೆಯ ಸಾರ್ವತ್ರಿಕ ಚುನಾವಣೆಗೆ ಇನ್ನು ಒಂದು ತಿಂಗಳಲ್ಲಿ ಮುಹೂರ್ತ ನಿಗದಿಯಾಗಲಿದ್ದು, ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಕೊನೆಯ ಅಧಿವೇಶನ ಇದಾಗಿದೆ. ಚುನಾವಣೆ ನಡೆದು, ಹೊಸ ಶಾಸಕರು ಚುನಾಯಿತರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ 16ನೇ ವಿಧಾನಸಭೆ ಅಸ್ತಿತ್ವಕ್ಕೆ ಬರಲಿದೆ. ಅಲ್ಲಿಯವರೆಗೆ ಕಲಾಪ ನಡೆಯುವುದಿಲ್ಲ. ಅಂತಿಮ ದಿನದ ಕಲಾಪವು ನಾಲ್ಕು ಮುಕ್ಕಾಲು ವರ್ಷಗಳ ಇತಿಹಾಸವನ್ನು ಮೆಲುಕು ಹಾಕಲು ವೇದಿಕೆಯಾಯಿತು. ಹಲವರಿಗೆ ಇದು ಕೊನೆಯ ಕಲಾಪವಾಗಿದ್ದು, ಭಾವುಕ ಕ್ಷಣಗಳಿಗೂ ಸಾಕ್ಷಿಯಾಯಿತು.

ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಬಿಜೆಪಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ, ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್‌, ಜೆಡಿಎಸ್‌ ಉಪ ನಾಯಕ ಬಂಡೆಪ್ಪ ಕಾಶೆಂಪೂರ ಸೇರಿ ಹಲವರು ಮಾತನಾಡುತ್ತಲೇ, ಭಾವುಕತೆಗೆ ಒಳಗಾಗಿ ಕೆಲಹೊತ್ತು ಮೌನಕ್ಕೆ ಶರಣಾದದ್ದು ನಡೆಯಿತು.

ಬಿಜೆಪಿ ಶಾಸಕರಾದ ಬಿ.ಎಸ್‌.ಯಡಿಯೂರಪ್ಪ ಮತ್ತು ಮಾಡಾಳು ವಿರೂಪಾಕ್ಷಪ್ಪ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಅವರು ಈಗಾಗಲೇ ಪ್ರಕಟಿಸಿದ್ದಾರೆ.

2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ಬಹುಮತಕ್ಕೆ ಕೊರತೆ ಆಗಿತ್ತು. ಆದರೆ, ತಾವು ಬಹುಮತ ಸಾಬೀತುಪಡಿಸುವುದಾಗಿ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಆದರೆ, ಬಹುಮತ ಸಾಬೀತು ಮಾಡಲಾಗದೇ ಮೂರೇ ದಿನಗಳಲ್ಲಿ ನಿರ್ಗಮಿಸಬೇಕಾಯಿತು.

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದಾಗಿ ಹೇಳಿಕೊಂಡ ಕಾಂಗ್ರೆಸ್‌, ಜೆಡಿಎಸ್‌ಗೆ ಬೇಷರತ್ ಬೆಂಬಲ ಘೋಷಿಸಿ, ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಒಪ್ಪಿಕೊಂಡಿತು. ಇದರ ಫಲವಾಗಿ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿತು. ಮುಖ್ಯಮಂತ್ರಿ ಪದಗ್ರಹಣ ಕಾರ್ಯಕ್ರಮಕ್ಕೆ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿದ್ದ ರಾಜ್ಯಗಳ ಹಲವು ಮುಖ್ಯಮಂತ್ರಿಗಳು ಮತ್ತು ವಿವಿಧ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.

ಆರಂಭದಿಂದಲೇ ಎರಡೂ ಪಕ್ಷಗಳ ಮಧ್ಯೆ ಸಾಮರಸ್ಯ ಇರಲಿಲ್ಲ. ಎಚ್‌.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರ ಮಧ್ಯೆ ಮುಸುಕಿನ ಗುದ್ದಾಟ ತೀವ್ರವಾಗಿತ್ತು. ಅಂತಿಮವಾಗಿ ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ 17 ಶಾಸಕರು ಬಂಡೆದ್ದು, ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿ, ಬಿಜೆಪಿಯನ್ನು ಸೇರಿದರು. ಮೈತ್ರಿ ಸರ್ಕಾರ ಒಂದು ವರ್ಷ ಎರಡು ತಿಂಗಳು ಮಾತ್ರ ಅಧಿಕಾರದಲ್ಲಿತ್ತು. ‘ಆಪರೇಷನ್ ಕಮಲ’ದಿಂದಾಗಿ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡು, ಮುಖ್ಯಮಂತ್ರಿ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ ನೀಡಿದರು. ರಾಜೀನಾಮೆ ಕೊಟ್ಟ ಶಾಸಕರನ್ನು ಅಂದಿನ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್ ಅನರ್ಹಗೊಳಿಸಿದರು. ಅದು ನ್ಯಾಯಾಲಯದ ಮೆಟ್ಟಿಲೇರಿತು.

ಶಾಸಕರ ರಾಜೀನಾಮೆಯಿಂದಾಗಿ ಸದನ ಸದಸ್ಯರ ಒಟ್ಟು ಸಂಖ್ಯೆ ಇಳಿಕೆಯಾಗಿದ್ದರಿಂದ, ಅಂದು ಅತಿ ಹೆಚ್ಚು ಸದಸ್ಯರನ್ನು ಹೊಂದಿದ್ದ ಬಿಜೆಪಿಗೆ ಬಹುಮತ ದೊರೆಯಿತು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದರು. ಸಂಪುಟ ವಿಸ್ತರಣೆಗೆ ಬಿಜೆಪಿ ವರಿಷ್ಠರು ಒಂದು ತಿಂಗಳು ಒಪ್ಪಿಗೆ ಸೂಚಿಸಲಿಲ್ಲ. ಭಾರಿ ಪ್ರವಾಹ ಉಂಟಾಗಿ ಜನ ಸಂಕಷ್ಟಕ್ಕೆ ಸಿಲುಕಿದ್ದರು. ಯಡಿಯೂರಪ್ಪ ಒಬ್ಬರೇ ಓಡಾಡಿ ಪರಿಹಾರದ ಕ್ರಮಗಳನ್ನು ಕೈಗೊಂಡರು.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಒಂದು ವರ್ಷ ಮುಗಿಸುತ್ತಿದ್ದಂತೆ ಮುಖ್ಯಮಂತ್ರಿ ಬದಲಾವಣೆ ವಿಚಾರ ಮುನ್ನೆಲೆಗೆ ಬಂದಿತು. ಅಷ್ಟರಲ್ಲೇ ಕೋವಿಡ್ ಆಕ್ರಮಣ ಎದುರಾಯಿತು. ಎರಡು ವರ್ಷ ಹಾಗೂ ವರಿಷ್ಠರನ್ನು ಸಂಭಾಳಿಸಿದ ಯಡಿಯೂರಪ್ಪ, ಎರಡು ವರ್ಷ ಪೂರ್ಣಗೊಂಡ ದಿನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಆ ಬಳಿಕ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಇವರ ಅವಧಿಯಲ್ಲೂ ಸಂಪುಟ ವಿಸ್ತರಣೆ ತಡವಾಯಿತು. ಐದು ಸಚಿವ ಸ್ಥಾನಗಳನ್ನು ಕೊನೆಗೂ ಭರ್ತಿ ಮಾಡಲು ಸಾಧ್ಯವಾಗಲಿಲ್ಲ. ಮುಖ್ಯಮಂತ್ರಿಯಾಗಿ ಆರು ತಿಂಗಳಲ್ಲೇ ಬೊಮ್ಮಾಯಿ ಬದಲಾವಣೆಯ ವದಂತಿಗಳು ಜೋರಾಗಿಯೇ ಹಬ್ಬಿದವು.

ಹೀಗೆ ಮೂವರು ಮುಖ್ಯಮಂತ್ರಿಗಳನ್ನು ಈ ಅವಧಿಯಲ್ಲಿ ನಾಡು ಕಂಡಿತು. ಮುಖ್ಯಮಂತ್ರಿಯಾಗಿ ಬೊಮ್ಮಾಯಿ, ಸಭಾಧ್ಯಕ್ಷರಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ವಿರೋಧ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಅವರಿಗೆ ಇದು ಕೊನೆಯ
ಕಲಾಪವಾಗಿದೆ.


167 ದಿನ, 760 ಗಂಟೆ ಕಲಾಪ

ಕಳೆದ ಐದು ವರ್ಷಗಳಲ್ಲಿ 167 ದಿನಗಳು, 760 ಗಂಟೆಗಳು ಕಲಾಪ ನಡೆದಿದೆ. 200 ಮಸೂದೆಗಳು ಮಂಡನೆಯಾಗಿದ್ದು, ಬಹುತೇಕ ಅಂಗೀಕಾರವಾಗಿವೆ. 6,000 ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ. 25,924 ಪ್ರಶ್ನೆಗಳಿಗೆ ಲಿಖಿತವಾಗಿ ಉತ್ತರ ನೀಡಲಾಗಿದೆ. ಜೆಡಿಎಸ್‌ನ ಕೆ.ಎಸ್‌. ಲಿಂಗೇಶ್‌ ಮತ್ತು ಬಿಜೆಪಿ ಸಿ.ಎಂ.ನಿಂಬಣ್ಣನವರ ಅವರು 167 ದಿನಗಳೂ ತಪ್ಪದೇ ಕಲಾಪಕ್ಕೆ ಹಾಜರಾಗಿದ್ದರು.

ಗದ್ಗದಿತರಾದ ಸಭಾಧ್ಯಕ್ಷ ಕಾಗೇರಿ

ಕಲಾಪದ ಕೊನೆಯಲ್ಲಿ ತಮ್ಮ ನಾಲ್ಕು ವರ್ಷಗಳ ಅವಧಿಯ ಸಿಂಹಾವಲೋಕನ ಮಾಡಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಗದ್ಗದಿತರಾದರು. ಮಾತು ಹೊರಡದಂತಾಯಿತು. ನೀರು ಕುಡಿದು ಮತ್ತೆ ಸಾವರಿಸಿಕೊಂಡರು. ಹೆಚ್ಚು ಮಾತನಾಡಲಾಗದೇ ಕಲಾಪಕ್ಕೆ ತೆರೆ ಎಳೆದರು.

‘ದೇಶದಲ್ಲಿ ಜನ ಭಾಷೆ, ಜಾತಿ, ರಾಜ್ಯ ಎಂಬ ಸೀಮಿತವಾಗಿ ಯೋಚನೆ ಮಾಡುವ ಸ್ಥಿತಿ ಇದೆ. ಎಲ್ಲಕ್ಕಿಂತ ದೇಶವೇ ಮೊದಲು ಎಂಬ ಭಾವನೆ ಬಂದಾಗ ದೇಶ ಇನ್ನಷ್ಟು ಸುಭದ್ರವಾಗಿ ಎಲ್ಲ ರೀತಿಯಿಂದಲೂ ಪ್ರಗತಿ ಸಾಧ್ಯವಿದೆ. ಜನರ ಅಭ್ಯುದಯವೂ ಆಗಲಿದೆ. ಆದರೆ, ಜಾತಿ,ಭಾಷೆ ಇತ್ಯಾದಿಗಳ ವಿಚಾರದಲ್ಲಿ ಜನರನ್ನು ಒಡೆಯುವ ಹಿತಾಸಕ್ತಿಗಳು ನಿರಂತರವಾಗಿ ಕೆಲಸ ಮಾಡುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಅಧ್ಯಾತ್ಮ ಜ್ಞಾನದ ಕಾರಣಕ್ಕೆ ಭಾರತ ವಿಶ್ವದಲ್ಲಿ ಗೌರವಿಸಲ್ಪಡುತ್ತಿದೆ. ಅದರ ಪುನರುತ್ಥಾನವಾಗಬೇಕು. ಮುಂದಿನ ದಿನಗಳಲ್ಲಿ ಸದನಕ್ಕೆ ಒಳ್ಳೆಯವರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿ ಬರಬೇಕು ಮತ್ತು ಒಳ್ಳೆಯ ತಂಡ ಸರ್ಕಾರವನ್ನು ಮುನ್ನಡೆಸಬೇಕು’ ಎಂದು ಕಾಗೇರಿ ಹೇಳಿದರು.

****

15ನೇ ವಿಧಾನಸಭೆಯಲ್ಲಿ ವಿರೋಧಾಭಾಸವಿರುವ ಪಕ್ಷಗಳು ಒಂದಾಗಿ ಅಧಿಕಾರ ಹಿಡಿದವು. ಬಳಿಕ ನಮ್ಮ ಸರ್ಕಾರ ಬಂದಿತು. ಶತಮಾನದ ಭೀಕರ ಮಳೆ, ಪ್ರವಾಹ ಬಂದಿತು. ಕೋವಿಡ್‌ ಸಾಂಕ್ರಾಮಿಕ ಮತ್ತು ಆರ್ಥಿಕ ಸಂಕಷ್ಟದಿಂದ ತತ್ತರಿಸಿತು

-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

****

ದ್ವೇಷ ರಹಿತ ಸಮಾಜ ಕಟ್ಟೋಣ. ದ್ವೇಷ ಮತ್ತು ದುಶ್ಚಟ ಮುಕ್ತ ಸಮಾಜ ನಿರ್ಮಿಸಬೇಕು ಹಾಗೂ ದ್ವೇಷ ಮುಕ್ತ ಚುನಾವಣೆ ನಡೆಯಬೇಕು

-ಯು.ಟಿ.ಖಾದರ್‌, ವಿರೋಧ ಪಕ್ಷದ ಉಪ ನಾಯಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT